ಅನಿಸಿಕೆ
ಮಲೆನಾಡಿಗರ ತುಮುಲ
ಗಣೇಶಭಟ್ ಶಿರಸಿ
ಪಶ್ಚಿಮ ಘಟ್ಟಗಳ ಹಾಗೂ ಅಲ್ಲಿನ ಜೀವವೈವಿದ್ಯ ರಕ್ಷಣೆಯ ಉದ್ದೇಶದಿಂದ ೨೦೧೧ರಲ್ಲಿ ಡಾ. ಮಾಧವ ಗಾಡ್ಗೀಲ್ ಸಮಿತಿ ನೀಡಿದ ವರದಿಯನ್ನು ತಿರಸ್ಕರಿಸಿದನಂತರ ವಿಜ್ಞಾನಿ ಕಸ್ತೂರಿರಂಗನ್ ನೇತೃತ್ವ ಸಮಿತಿ ರಚಿಸಲಾಗಿತ್ತು. ಪಶ್ಚಿಮ ಘಟ್ಟದಲ್ಲಿ ಮಾನವನ ಹಸ್ತಕ್ಷೇಪವನ್ನು ಸೀಮಿತಗೊಳಿಸಬೇಕೆಂದು ಸೂಚಿಸಿರುವ ಎರಡನೇ ವರದಿಯ ಅನುಷ್ಠಾನಕ್ಕೂ ಹಿಂಜರಿಯುತ್ತಿರುವ ಕರ್ನಾಟಕದ ಸರ್ಕಾರ ಹಸಿರು ನ್ಯಾಯಾಲಯದ ಮೆಟ್ತಲೇರುವ ಪ್ರಯತ್ನ ನಡೆಸಿದೆ. ಈ ಎರಡೂ ವರದಿಗಳು ಪರಿಸರ ಪೂರಕ ಅಭಿವೃದ್ಧಿಯನ್ನು ಪ್ರತಿಪಾದಿಸುತ್ತವೆಯಾದರೂ, ಡಾ. ಮಾಧವ ಗಾಡ್ಗೀಳ್ ವರದಿ ಹೆಚ್ಚು ಜನಪರವಾಗಿದೆ. ಪ್ರತಿಯೊಂದು ಅಭಿವೃದ್ಧಿ ಯೋಜನೆಯಲ್ಲೂ ಜನರ ಸಹಭಾಗಿತ್ವವನ್ನ ಕಡ್ಡಾಯಗೊಳಿಸಬೇಕೆಂಬ ಗಾಡ್ಗೀಳ ವರದಿ, ಗುತ್ತಿಗೆದಾರರ, ಉದ್ಯಮಿಗಳ, ಅಧಿಕಾರಿಗಳ ರಾಜಕಾರಣಿಗಳ ಕಣ್ಣುರಿಗೆ ಕಾರಣವಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಹಾಗೂ ಸರ್ಕಾರದ ಖಜಾನೆಯನ್ನು ಲೂಟಿಹೊಡೆಯುತ್ತಿರುವ ಗುಂಪಿಗೆ, ಜನಸಾಮಾನ್ಯರಿಗೆ ಆರ್ಥಿಕ ಅಧಿಕಾರ ಸಿಗುವುದು ಬೇಕಾಗಿಲ್ಲ. ಜನಸಾಮಾನ್ಯರು ಈ ಗುಂಪಿನ ಗುಲಾಮರಾಗಿ ಸದಾ ಇರಬೇಕು, ಸಂಪತ್ತನ್ನು ತಾವು ಕೊಳ್ಳೆಹೊಡೆಯುತ್ತಿರಬೇಕೆಂದು ಬಯಸುವವರು ಈ ವರದಿಯ ಕುರಿತು ಜನರಲ್ಲಿ ಅಪನಂಬಿಕೆ, ಭೀತಿಯನ್ನು ಹುಟ್ಟಿಸುತ್ತಿದ್ದಾರೆ.
ಪರಿಸರ ಪೂರಕ ಅಭಿವೃದ್ಧಿಯ ಪಥದಿಂದಲೇ ಮಾನವ ಸಮಾಜದ ಏಳ್ಗೆ , ಉನ್ನತಿ, ಮತ್ತು ಪ್ರಗತಿಯ ನಿರಂತರತೆ ಸಾಧ್ಯ. ನಿಸರ್ಗ ವಿರೋಧಿ ಚಟುವಟಿಕೆಗಳಿಂದ ಎಷ್ಟೋ ನಾಗರಿಕತೆಗಳು ನಶಿಸಿಹೋಗಿದ್ದನ್ನು ಇತಿಹಾಸ ದಾಖಲಿಸಿದೆ. ಆರ್ಥಿಕ ವಿಕೇಂದ್ರೀಕರಣದತ್ತ ಅಡಿ ಇಡುವ ಗಾಡ್ಗೀಳ ವರದಿಯ ಅನುಷ್ಠಾನ ಉತ್ತಮ ಆಯ್ಕೆ. ಈ ವರದಿಯನ್ನು ಈಗಾಗಲೇ ಮೂಲೆಗುಂಪು ಮಾಡಿರುವದರಿಂದ ಕನಿಷ್ಠ ಪಕ್ಷ ಕಸ್ತೂರಿರಂಗನ್ ವರದಿಯನ್ನಾದರೂ ಅನುಷ್ಠಾನಕ್ಕೆ ತಂದು , ಮಾನವ ಮತ್ತು ಪರಿಸರದ ನಡುವಿನ ಸಂಘರ್ಷಕ್ಕೆ ತಡೆ ಒಡ್ಡಲೇ ಬೇಕು. ಸ್ವಾರ್ಥಿಗಳ ಹುನ್ನಾರಕ್ಕೆ ಒತ್ತು ನೀಡಿದರೆ, ರಾಜ್ಯದ ಪರಿಸ್ಥಿತಿ ಅದರಲ್ಲೂ ವಿಷೇಶವಾಗಿ ಮಲೆನಾಡ ನಿವಾಸಿಗಳ ಬದುಕು ಅಪಾಯಕ್ಕೆ ಸಿಲುಕುವುದು ನಿಶ್ಚಿತ. ಪಶ್ಚಿಮ ಘಟ್ಟಗಳ ಅರಣ್ಯ ಮತ್ತು ಜೀವ ವೈವಿಧ್ಯತೆಯ ನಾಶದಿಂದ ಭಾರತ ಮಾತ್ರವಲ್ಲ ಪಾಶ್ಚ್ಯಾತ್ಯ ರಾಷ್ಟ್ರಗಳೂ ಹವಾಮಾನ ವೈಪರೀತ್ಯ ಅನುಭವಿಸ ಬೇಕಾಗುತ್ತದೆಂಬುದನ್ನು ಅಧ್ಯಯನಗಳು ದೃಢಪಡಿಸಿವೆ.
ಮಾನವ ಮತ್ತು ಪರಿಸರದ ನಡುವೆ ಅನಗತ್ಯ ಸಂಘರ್ಷಕ್ಕೆ ಎಡೆ ಮಾಡಿಕೊಡದಂತೆ ಜನರ ಸಹಭಾಗಿತ್ವದೊಂದಿಗೆ ಈ ವರದಿಯನ್ನು ಅನುಷ್ಠಾನ ಮಾಡಲು ಸಾಧ್ಯ; ಸ್ವ ಹಿತಾಸಕ್ತ ಗುಂಪುಗಳ ಹಿಡಿತದಿಂದ ಹೊರಬಂದು ನೇತಾರರು ನಿರ್ಣಯ ತೆಗೆದುಕೊಳ್ಳಬೇಕು ಅಷ್ಟೇ.
********************************************