ಕಾವ್ಯಯಾನ

ಗಜಲ್

Green Leaf Plant on Focus Photo

ದೀಪಾಜಿ

ಎದೆಯ ಮೇಲಿನ ಹಚ್ಚೆಗೆ ಅಗ್ಗಿಷ್ಟಿಕೆಯ ಕೆಂಡಹಚ್ಚಿ ಉಜ್ಜಿಕೊಂಡವನಲ್ಲವೇ ನೀನು
ಎದೆ ಒಳಗಿನ ಇವಳನ್ನ ತೆಗೆದು ಹಾಕಲೆತ್ನಿಸಿ ಸೋತವನಲ್ಲವೇ ನೀನು

ಹಿಡಿದು ತಂದ ಕೆಂಗುಲಾಬಿ ಕೆಳಗಿನ ಮುಳ್ಳ ಎಣಸ ತೊಡಗಿದ್ದ ಕುಸುಮಪ್ರೇಮಿ
ಅಂತದೆ ಸುಮದ ಪರಿಮಳಕ್ಕೆ ಸೋತು ಬಿಗಿದಪ್ಪಿದ ದಿನಗಳ ಮರೆತವನಲ್ಲವೆ ನೀನು..

ಅಂಗೈಲಿ ಹಿಡಿದ ಮಧು ಪಾತ್ರೆಯೊಳಗಿನ ಬಿಂಬ ಕಲಕಿತೆಂದು ರೋಧಿಸಿದೆ ಏನು
ಮಧುಹೀರಿ ಮಲಗಿದ ನಲ್ಲೆಯ ತುಟಿಗಳನೆ ಕಚ್ಚಿ
ಕಡೆಗಣಿಸಿದವನಲ್ಲವೇ ನೀನು

ಬಲವಂತಕ್ಕೆ ಪ್ರೀತಿಸಕೂಡದೆಂದು ಪಾಠಮಾಡುತ್ತಿದ್ದೆ ನೋಡು
ಮರೆತು ಬಿಡು ಇನ್ನೂ ಜತೆಯಾಗಿ ನಡೆದುಬಂದ ದಿನಗಳನು ಎಂದು ನಶೆಯೊಳಗೂ ಪೀಡಿಸುತ್ತಿದ್ದವನಲ್ಲವೇ ನೀನು

ಆಳವಿಲ್ಲದ್ದು-ಸೆಳೆತವಿಲ್ಲದ್ದು ಏನನ್ನೂ ಉಳಿಸಿಕೊಳ್ಳಲಾರದೆನ್ನುತ್ತಿದ್ದೆ‌ ನೋಡು
ಬೆಳಗಿಸಿದ-ಬಾಳಿಸಿದ *ದೀಪಕ್ಕೆ ಆಳ ಹುಡುಕಿ ಸಿಗದೊಡನೆ‌ ಬೆನ್ನ ತೋರಿಸಿ ಹೊರಟನಲ್ಲವೇ ನೀನು..


Leave a Reply

Back To Top