ಲಂಕೇಶ್ ವಿಶೇಷ
ಲಂಕೇಶ್ ಪತ್ರಿಕೆಯ ಪ್ರಭಾವ
ಚಂದ್ರಪ್ರಭ
ಎಂಭತ್ತರ ದಶಕದ ದಿನಗಳವು. ನಾವೆಲ್ಲ ಮಾಧ್ಯಮಿಕ ಶಾಲಾ ಶಿಕ್ಷಣದ ಹಂತದಲ್ಲಿದ್ದ ಸಮಯ. ಅಪ್ಪನ ಪುಸ್ತಕ ಪ್ರೇಮದಿಂದಾಗಿ ಸಹಜವಾಗಿ ನಾವೆಲ್ಲ ಮಕ್ಕಳು ಆ ಪ್ರಭಾವಕ್ಕೆ ಒಳಗಾಗಿದ್ದ ಸಂದರ್ಭ. ಚಂದಮಾಮ, ಸುಧಾ ಪತ್ರಿಕೆಗಳು ನಿಯಮಿತವಾಗಿ ಓದಿಗೆ ಸಿಗ್ತಿದ್ದುವು. ಜೊತೆಗೆ ನಿತ್ಯ ಸಂಗಾತಿ ಪ್ರಜಾವಾಣಿ. ಲಂಕೇಶ್ ಪತ್ರಿಕೆ ಎಂಬ ಹೊಸ ಪತ್ರಿಕೆಯೊಂದು ಮನೆ ಪ್ರವೇಶಿಸಿತು. ಅಷ್ಟೇ ಸಲೀಸಾಗಿ ಮನಸ್ಸನ್ನೂ ಪ್ರವೇಶಿಸಿತು. ಮುಖ್ಯವಾಗಿ ಜಾಹೀರಾತುಗಳೇ ಇಲ್ಲದ ಹೊಸ ವಿನ್ಯಾಸ, ಆಕರ್ಷಕ ಶೀರ್ಷಿಕೆಗಳು ಪತ್ರಿಕೆಯ ವೈಶಿಷ್ಟ್ಯವಾಗಿದ್ದವು.
ಪುಂಡಲೀಕ ಸೇರ ರ ಹುಬ್ಬಳ್ಳೀಯಾಂವ ನಮ್ಮ ಅಚ್ಚುಮೆಚ್ಚಿನ ಅಂಕಣ. ಅದೇ ರೀತಿ ಚಿತ್ರವಿಚಿತ್ರ ರೇಖಾಚಿತ್ರಗಳೊಂದಿಗೆ ಬರುತ್ತಿದ್ದ ನೀಲು ಕವಿತೆಗಳು ಅರ್ಥವಾಗದಿದ್ದರೂ ಮಜವಾಗಿ ತೋರುತ್ತಿದ್ದವು. ಯಾವಾಗಲೂ ಪತ್ರಿಕೆಯ ಸಂಪಾದಕೀಯ ಓದಬೇಕು ಅಂತ ಹೇಳ್ತಿದ್ದ ಅಪ್ಪ ಟೀಕೆ ಟಿಪ್ಪಣಿ ಓದಲು ಹೇಳ್ತಿದ್ದರು. ರಾಜಕೀಯ ಸುದ್ದಿ, ವಿಮರ್ಶೆ, ವೈವಿಧ್ಯಮಯ ಅಂಕಣಗಳ ಪತ್ರಿಕೆ ಬಲು ಜನಪ್ರಿಯವಾಗಿ ಎಲ್ಲೆಲ್ಲೂ ಓದುಗ ವಲಯ ಸೃಷ್ಟಿಸಿಕೊಂಡಿತ್ತು. ತಮ್ಮ ವೈಶಿಷ್ಟ್ಯಪೂರ್ಣ ಲೇಖನಗಳಿಂದ ಪರಿಚಿತರಾದ ಲೇಖಕರಲ್ಲಿ ಪ್ರಮುಖವಾಗಿ ಪೂರ್ಣಚಂದ್ರ ತೇಜಸ್ವಿ, ಸಿ. ಎಸ್. ದ್ವಾರಕಾನಾಥ್, ಕೋಟಗಾನಹಳ್ಳಿ ರಾಮಯ್ಯ, ಶ್ರೀಕೃಷ್ಣ ಆಲನಹಳ್ಳಿ, ನಟರಾಜ್ ಹುಳಿಯಾರ್, ರವಿ ಬೆಳಗೆರೆ, ಅಬ್ದುಲ್ ರಶೀದ್, ವೈದೇಹಿ, ಬಾನು ಮುಷ್ತಾಕ, ಸಾರಾ ಅಬೂಬಕರ ಅಲ್ಲದೆ ಇನ್ನೂ ಅನೇಕರು.
ಆಳುವ ಸರ್ಕಾರದ ಧೋರಣೆಗಳನ್ನು ನಿರ್ಭಿಡೆಯಿಂದ ಕಟು ವಿಮರ್ಶೆಗೆ ಒಳಪಡಿಸುತ್ತಿದ್ದ ಪತ್ರಿಕೆ ನಿಜ ಅರ್ಥದಲ್ಲಿ ವಿರೋಧ ಪಕ್ಷದಂತೆ ಕೆಲಸ ಮಾಡತಿತ್ತು ಅಂತ ಈಗ ಸ್ಪಷ್ಟವಾಗಿ ಅರ್ಥವಾಗ್ತದೆ. ಆಗ ಗುಂಡೂರಾವ್, ಎಸ್. ಬಂಗಾರಪ್ಪ ಅಧಿಕಾರದಲ್ಲಿದ್ದ ಕಾಲ. ಗುಂ ಬಂ ಎಂಬ ಹೃಸ್ವಗಳಿಂದ ಅವರನ್ನು ಸಂಭೋಧಿಸುತ್ತಿದ್ದುದು ಜನಮಾನಸದಲ್ಲಿ ಅಪಾರ ಮೆಚ್ಚುಗೆಗೂ ಸಂಚಲನಕ್ಕೂ ಪಾತ್ರವಾದ ಸಂಗತಿಯಾಗಿತ್ತು.
ಪಿ. ಲಂಕೇಶ್ ತಮ್ಮ ಪ್ರಖರ ಚಿಂತನ ಹಾಗೂ ನಿಷ್ಠುರ ನೋಟದಿಂದ ಸಾಹಿತ್ಯ, ರಾಜಕಾರಣ ಹಾಗೂ ಸಾಂಸ್ಕೃತಿಕ ಲೋಕವನ್ನು ಪ್ರಭಾವಿಸಿದವರು. ಯಾವುದೇ ಸಂಗತಿ, ಸನ್ನಿವೇಶಗಳೊಂದಿಗೆ ರಾಜಿಯಾಗದೆ ಹಲವರ ಕೆಂಗಣ್ಣಿಗೆ ಗುರಿಯಾದವರು. ಮುಲಾಜಿಲ್ಲದ ಖಡಾಖಂಡಿತ ತಮ್ಮ ಬರಹಗಳು ಹಾಗೂ ಖಚಿತ ನಿಲುವಿನಿಂದಾಗಿ ತಮ್ಮ ವಿರುದ್ಧ ದಾಖಲಾದ ಕಾನೂನು ಕ್ರಮಗಳಿಂದಾಗಿ ಊರೂರು ಸುತ್ತಿದವರು.
ಹತ್ತಾರು ಯುವ ಬರಹಗಾರರ ಲೇಖನಿಗೆ ವೇದಿಕೆಯಾಗಿದ್ದು ಲಂಕೇಶ್ ಪತ್ರಿಕೆ. ಅವರೆಲ್ಲ ಈಗ ಕನ್ನಡ ಸಾಹಿತ್ಯದ ಮೇರುವಾಗಿರುವುದು ಕಣ್ಣೆದುರಿನ ಸತ್ಯ. ಪತ್ರಿಕೆಯ ಜೀವಾಳವಾಗಿದ್ದಂಥವು ಚಿಕ್ಕ ಚಿಕ್ಕ ವಾಕ್ಯಗಳ ಪರಿಣಾಮಕಾರಿ ಬರಹಗಳು. ಆಡಂಬರದ ವಿಲಾಸವಿಲ್ಲದ ವಸ್ತುನಿಷ್ಠ ಬರವಣಿಗೆ ಹಾಗೂ ದಮನಿತರ, ಶೋಷಿತರ ದನಿಯೂ ಆಗಿ ಸಾವಧಾನವಾಗಿ ಹೊರಹೊಮ್ಮಿದ್ದು ಲಂಕೇಶ್ ಪತ್ರಿಕೆ. ಯಾವುದನ್ನು ವಿರೋಧಿಸಿ ಯಾರನ್ನು ಕುರಿತಾಗಿ ಪತ್ರಿಕೆ ಬರೆಯುತ್ತಿತ್ತೊ ಅವರೇ ಪತ್ರಿಕೆಗಾಗಿ ಅತಿ ಹೆಚ್ಚು ದಾರಿ ಕಾಯುತ್ತ ಇರತಿದ್ದರು ಎನ್ನುವುದು ಲಂಕೇಶ್ ಪತ್ರಿಕೆಯ ಹೆಗ್ಗಳಿಕೆ.
ಅಧ್ಯಾಪಕ, ಕತೆಗಾರ, ಕವಿ, ಸಿನಿಮಾ ನಿರ್ಮಾಣ, ನಟನೆ – ಹೀಗೆ ಬಹುಮುಖ ಆಯಾಮಗಳ ಲಂಕೇಶ್ ವ್ಯಕ್ತಿಯಾಗಿ ಬಹುಜನರ ಆದರ್ಶವಾದವರು. ಲಂಕೇಶ್ ತರಹ ಬರೆಯಬೇಕು ಎಂಬ ಹಂಬಲ ಇರಿಸಿಕೊಂಡ ಒಂದು ತಲೆಮಾರನ್ನೇ ಗುರುತಿಸಬಹುದು. ದೃಢ ತಾತ್ವಿಕ ನಿಲುವು, ತಾನು ಪ್ರತಿಪಾದಿಸುವ ತತ್ವ ಸಿದ್ಧಾಂತ ಕುರಿತು ಬದ್ಧತೆ, ಒಂದು ಬಗೆಯ ಆಕ್ರಮಣಕಾರಿ ನಡೆ ಇವೆಲ್ಲವೂ ಲಂಕೇಶ್ ವ್ಯಕ್ತಿತ್ವದ ಹೆಗ್ಗುರುತು. ಲಂಕೇಶ್ ತರಹ ಬರೆಯುವುದು ಸಾಧ್ಯವಾಗಬಹುದು ಆದರೆ ಆ ತರಹ ಬದುಕುವುದು ಕರಕಷ್ಟ. ಎದುರು ಹಾಕಿಕೊಳ್ಳುವುದು ಎದೆಗಾರಿಕೆ, ತಾನು ನಡೆದದ್ದೇ ದಾರಿ ಎಂಬ ನಿರಂಕುಶತ್ವ, ಪ್ರತಿಯೊಂದು ಕ್ಷಣವನ್ನು ಸಂಪೂರ್ಣವಾಗಿ ಬದುಕುವುದು, ಗಡಿಯಾರವೇ ಸುಸ್ತಾಗುವಂತೆ ದೈತ್ಯವಾಗಿ ಕೆಲಸ ಮಾಡುವುದು ಇವೆಲ್ಲ ಒಟ್ಟಿಗೇ ದಕ್ಕುವ ಸಂಗತಿಗಳಲ್ಲ.
ಇನ್ನೂ ಬಹುಕಾಲ ಬಾಳಿ ಬದುಕಿ ತಲೆಮಾರುಗಳನ್ನು ರೂಪಿಸಬೇಕಿದ್ದ, ಪ್ರಭಾವಿಸಬೇಕಿದ್ದ ಲಂಕೇಶ್ ಹೇಳದೇ ಕೇಳದೇ ಹೊರಟು ಹೋಗಿದ್ದು ಕನ್ನಡ ನಾಡು ನುಡಿಗೆ ಅಷ್ಟೇ ಅಲ್ಲ ಇಡೀ ಸಮುದಾಯದ ನಷ್ಟ. ಕೆಲವರು ಹಾಗಿರುತ್ತಾರೆ, ಈಗ ಅವರು ಬದುಕಿರಬೇಕಿತ್ತು ಎಂದು ನೆನಪಿಸಿಕೊಳ್ಳುವಂಥ ಧೀರರು. ಹಾಗೆ ಹೆಜ್ಜೆ ಹೆಜ್ಜೆಗೂ ನೆನಪಾಗುವ ವ್ಯಕ್ತಿ ಮತ್ತು ಶಕ್ತಿ ಲಂಕೇಶ್. ವರ್ಷಗಳುರುಳಿದರೂ ಮತ್ತೆ ಮತ್ತೆ ಕಾಡುವ, ಕಾಯುವ ನೆನಪಾಗಿ ನಮ್ಮೊಟ್ಟಿಗಿರುವ ಲಂಕೇಶ್ ನೆನಪಿಗೊಂದು ಪುಟ್ಟ ಸಲಾಮು.