ಕವಿತೆ
ಕೊಡವಿ ( ಕನ್ಯೆ ) ಭಾಮಿನಿ ಷಟ್ಪದಿ
ಅಭಿಜ್ಞಾ ಪಿ ಎಮ್ ಗೌಡ
ಕೊಡವಿ ಕಂಗಳ ಕಾಂತಿ ಹೆಚ್ಟುತ
ಬಡವಿ ಹೆಣ್ಣಲಿ ಕಾಶ ತುಂಬಿದೆ
ನಡುವೆ ನೊಸಲದ ನಲಿವ ಹೆರಳದು ನಿತ್ಯ ಜೀಕುತಿದೆ
ಕೊಡುಗೆ ನೀಡುವ ಮನದ ಬಿಂಬದಿ
ಗಡನೆ ಹೊಳೆಯುವ ಹೃದಯ ಸಾಕ್ಷಿಯು
ಜಡಿಪ ಕೂಜನ ಕಂಪಿನಲೆಯಲಿ ಕುಣಿದು ಜಿಗಿಯುತಿದೆ||
ಮೊಗದ ಭಾಷೆಯು ಕೂಗಿ ಹೇಳಿದೆ
ನಗುವ ಮನಸಿನ ನೂರು ಭಾವವ
ಮಗುವ ಮುಗ್ದತೆ ಮೀರಿ ನಿಂತಿದ ಭವ್ಯ ಕೌಮಾರಿ
ಜಗದ ಚೆಲುವದು ತುಂಬಿ ಕೊಂಡಿದೆ
ಗಗನ ಚುಂಬಿತ ವೃಕ್ಷ ರಾಶಿಯು
ಸುಗುಣ ಸದ್ಗುಣಿ ನಿತ್ಯ ಶೋಭಿತ ಚೆಲ್ವಿ ಮದನಾರಿ||
ಹೆಣ್ಣು ರೂಪವು ಚಂದ ಮೆರೆದಿದೆ
ಮಣ್ಣು ಹೊನ್ನಿನ ನಡುವೆ ಬಂಧದಿ
ಬೆಣ್ಣೆ ಮಾತಿನ ಮೃದುಲ ನಡೆಯಲಿ ಸಾಗಿ ನಿಂತಿಹಳು
ಸುಣ್ಣ ಬಣ್ಣದ ರಂಗು ಚೆಲ್ಲುತ
ಸಣ್ಣತನವನು ಬಿಟ್ಟು ನಡೆಯುವ
ಕಣ್ಣ ಮುಂದಿನ ದಿಟ್ಟ ಬೆಡಗಿಯ ತಥ್ಯ ಮಾರ್ಗವಿದು||
ರಿಗ್ಗವಣೆಯನು ನಿತ್ಯ ಬಾರಿಸಿ
ನುಗ್ಗಿ ಬಂದಿಹ ಹೆಣ್ಣ ಭಾವದಿ
ಸುಗ್ಗಿ ಸಿರಿಯಲಿ ಕಾವ್ಯ ಬಿತ್ತುತ ನಿತ್ಯ ಮೆರೆದಿಹಳು
ಬಗ್ಗಿ ನಡೆಯುವ ಲಲನ ಮಣಿಯೂ
ಜಗ್ಗಿ ಕೂತಿಹ ಮೌನದಾತೆಯು
ತಗ್ಗಿ ನಡೆಯಲಿ ತಥ್ಯ ಮಾರ್ಗದಿ ಗೆದ್ದು ಬರುತಿಹಳು||
ಚೆಲುವೆ ಡಂಕಿಸಿ ಕುಣಿದು ನಲಿಯುತ
ಬಲುಮೆ ಗೆಳೆತಿಯು ಕಾದು ಕುಳಿತಳು
ನಲುಮೆ ನಲ್ಲನ ಮಾತು ಕೇಳುತ ದಿವ್ಯ ಹಾಸದಲಿ
ಒಲವ ಹೂವಿನ ಮಳೆಯ ಕರೆಯುತ
ಗೆಲುವು ಸಾಧಿಸಿ ಮೆಟ್ಟಿ ನಿಂತಳು
ಕಲೆಯ ಸೃಷ್ಠಿಸಿ ಬಲವ ತೋರಿಸಿ ಮೆಚ್ಚಿ ನಡೆದಿಹಳು||
********************************************