ಗಜಲ್
ಸಿದ್ಧರಾಮ ಕೂಡ್ಲಿಗಿ
ಪರಿಶ್ರಮದಿಂದ ನೆಲಕೆ ಉದುರಿದ ಬೆವರ ಮುತ್ತುಗಳನ್ನು ಮತ್ತೆ ಪಡೆಯಲಾಗುವುದಿಲ್ಲ
ಕಾಲಗರ್ಭದಲ್ಲಿ ಕರಗಿಹೋಗುವ ಬದುಕಿನ ಚಿತ್ರಗಳನ್ನು ಮತ್ತೆ ಪಡೆಯಲಾಗುವುದಿಲ್ಲ
–
ನಗರಗಳ ತುಂಬಾ ಇರುಳಾದರೆ ಸಾಕು ಬಗೆ ಬಗೆಯ ಭಾವಗಳ ವೇಷಗಳ ಕುಣಿತ ಮಣಿತ
ಬೆಳಕಿನಲಿ ವಿನಾಕಾರಣ ಸೋರಿಹೋಗುವ ಕ್ಷಣಗಳನ್ನು ಮತ್ತೆ ಪಡೆಯಲಾಗುವುದಿಲ್ಲ
–
ಬೀದಿಯ ಬದಿಯಲ್ಲಿ ಖಾಲಿ ಪಾತ್ರೆಯಂಥ ಹೊಟ್ಟೆ ಖಾಲಿ ತಟ್ಟೆಯಂಥ ಕಣ್ಣುಗಳು
ಸಿರಿತನದ ಸೊಕ್ಕಿನಲಿ ಚೆಲ್ಲಿದ ಅನ್ನದ ಅಗುಳುಗಳನ್ನು ಮತ್ತೆ ಪಡೆಯಲಾಗುವುದಿಲ್ಲ
–
ಮಸಣದಂತಹ ಖಾಲಿ ಎದೆಯಲಿ ಮಿಡಿತವೊಂದನ್ನು ಬಿಟ್ಟು ಏನನ್ನೂಗುರುತಿಸಲಾಗದು
ಯಾರೂ ಗುರುತಿಸದೆ ಬಾಡುವ ಹೂಗಳ ಅರಳುವಿಕೆಗಳನ್ನು ಮತ್ತೆ ಪಡೆಯಲಾಗುವುದಿಲ್ಲ
ನೇರ ದಾರಿ ಎಂದೇ ತಿಳಿದ ಬದುಕಿನ ಪಯಣದಲಿ ಎಷ್ಟೋ ತಿರುವುಗಳನ್ನು ಕಂಡಿಹನು ಸಿದ್ಧ
ನಡೆದ ದಾರಿಯಲ್ಲಿ ಅಳಿಸಿಹೋದ ಹೆಜ್ಜೆ ಗುರುತುಗಳನ್ನು ಮತ್ತೆ ಪಡೆಯಲಾಗುವುದಿಲ್ಲ
********************************************************