ಕವಿತೆ
ಯಾರು ಬಂದರು
ಡಾಲಿ ವಿಜಯ ಕುಮಾರ್.ಕೆ.ವಿ.
ಯಾರು ಬಂದರು ಸಖಿಯೇ
ಎಲ್ಲಿ ಹೋದರು….
ಬೆಳ್ಳಿ ಬೆಳಕು ಬರುವ ಮುನ್ನ
ಮಲ್ಲೆ ಮುಡಿಸ ಬಂದರು.
ರಾಶಿ ಹಿಮದ ತಂಪು ಸುರಿದು
ಮುತ್ತ ಎರಚಿ ಹೋದರು.
ಪಚ್ಚೆ ಹಸಿರ ಸೀರೆಯುಡಿಸಿ
ಬೆಟ್ಟಬಯಲೆ ಕುಚ್ಚವೂ
ಶರಧಿಯಗಲ ಸೆರಗ ಹೊದಿಸಿ
ಮೈಯಮುಚ್ಚಿ ಹೋದರು.
ಅಡವಿಯೊಳಗೆ ತೊಟ್ಟಿಲಿಟ್ಟು
ಒಲವ ತೂಗ ಬಂದರು.
ನಭದ ನೂಲು ಇಳೆಗೆ ಇಳಿಸಿ
ನಲ್ಲೆ ಮುಟ್ಟಿ ಹೋದರು.
ಅಲ್ಲಿ ಯಾರೋ ಕಂಡ ಹಾಗೆ
ಕರಗಿ ನದಿಯ ತಂದರು.
ಇಲ್ಲಿ ಯಾರೋ ಕೂಗಿದಾಗೆ
ಜಲಧಿಯೊಳಗೆ ಹೋದರು.
ಬಿದಿರಕೊಳಲ ಶ್ಯಾಮನೇನೆ
ರಾಧೆ ನಿದಿರೆ ಕದ್ದವ.
ಗರಿಯ ಮುಡಿದ ಗೊಲ್ಲನೇನೆ
ನಿನ್ನ ಕಂಡು ಹೋದವ…
***************************************************