ಮಾರುವೇಷ

ಕವಿತೆ

ಮಾರುವೇಷ

ಪ್ರೊ.  ಚಂದ್ರಶೇಖರ ಹೆಗಡೆ

Human face mask and curtains. High resolution 3D illustration human face mask and curtains vector illustration

ಪಾತಾಳದಿಂದೆದ್ದು ಭೋಂಕನೆ
ಬೇಟೆಯಾಡುವ ವಿಧಿಯೇ
ಶ್ವಾನದಲ್ಲಡಗಿ ಹೊಟ್ಟೆ ಹೊರೆವ
ಹಂಗಿನರಮನೆಯ ವಾಸವೇಕೆ ?
ವಾಹನದೊಳಗಿಳಿದು ಬಲಿ ಬೇಡುವ
ಭಿಕ್ಷಾಟನೆಯ ಡಾಂಭಿಕತೆಯೇಕೆ ?
ಹೃದಯದೊಳಪೊಕ್ಕು ನಿಲ್ಲಿಸುವ
ಮೋಸದ ಮಾರುವೇಷವೇಕೆ ?

ಹೊರಬಂದು ಎದುರಾಗಿಬಿಡು ಒಮ್ಮೆ
ನಿಜರೂಪ ಸತ್ಯ ನಾಮವ ತಳೆದು
ಕಣ್ತುಂಬಿಕೊಳ್ಳಲಿ ಜಗವು ಮೊರೆದು
ಪ್ರಾರ್ಥಿಸಿ
ದಣಿವಿಲ್ಲದ ಕಾಯಕಕೆ ಶರಣು
ಶರಣೆಂದೆನುತ!
ಎದೆಯೊಳಗಿನ ದಯೆ ಕರುಣೆಗಳ
ಹುಡುಕಿ ಕೊರಗುತ

ಯಾರಿಗೂ ಜಗ್ಗದ ಭೀಮಬಲವೆಲ್ಲಿಯದು ?
ವಶ ಮಾಡಿಕೊಳ್ಳುವ ಅವಲೋಕಿನಿಯೆಲ್ಲಿಯದು ?
ಬಿಡುವ ಬಾಣದ ತುದಿಗೆ
ಎಂದೂ ನೀಗದ ಹಸಿವಿನೊಡಲು
ಎಲ್ಲಿ ಬರಿದಾಗುವುದೋ ಇಂದು
ಯಾವ ತಾಯಿಯ ಮಡಿಲು

ಪಯಣ ಹೊರಟವರ ಮನದಲ್ಲೊಂದು
ನಿತ್ಯ ಅಳುಕು
ಯಾರಿಗೆ ಗೊತ್ತು ನಿನ್ನೊಳಗಿನ
ವಂಚನೆಯ ಹುಳುಕು
ಕಾಣದ ಲೋಕದೊಳಗೇಕೆ ಬಯಲಾಟ
ತೊರೆದುಬಿಡಬಾರದೇ ಹೇಗಾದರೂ
ಕೊಂಡೊಯ್ಯುವೆನೆಂಬ ಹಠ

ಜೀವನ ಪ್ರೀತಿಯೊಂದಿಗೆ ನಿನ್ನದೆಂದಿಗೂ ವ್ಯರ್ಥ ಕದನ
ಅಸುರರೆಂಬುವರಿಲ್ಲ; ಕಾಣುವುದೆಲ್ಲೆಡೆಗೆ
ನಿನ್ನದೇ ಅಟ್ಟಹಾಸದ ವದನ
ಲೋಕವೆಲ್ಲವೂ ವಿರೋಧಿ ಬಣ
ಹೀಗಳೆಯಬಾರದೆಂದರೂ ನಿನ್ನ
ಬಿಡದು ಹೆಣೆದ ಚಕ್ರವ್ಯೂಹದ ದರ್ಶನ

************************

Leave a Reply

Back To Top