ವಾರದ ಕಥೆ
ಸ್ನೇಹ
ಜ್ಯೋತಿ ಡಿ ಭೊಮ್ಮಾ
ಮದುವೆಯಾಗಿ ಮುವತೈದು ವಸಂತಗಳನ್ನು ಜೊತೆಯಲ್ಲಿ ಕಳೆದ ನಿರ್ಮಲಾ ಮತ್ತು ಮೂರ್ತಿ ದಂಪತಿಗಳಿಗೆ ಈಗ ಬದುಕಿನ ಎಲ್ಲಾ ಜವಾಬ್ದಾರಿ ಮುಗಿಸಿ ನಿರಮ್ಮಳವಾಗಿ ಬದುಕು ಸಾಗಿಸುವ ಸಮಯ.ಮಗನ ಮತ್ತು ಮಗಳ ಮದುವೆ ಮಾಡಿ ಅವರನ್ನು ಒಂದು ದಡಕ್ಕೆಸೇರಿಸಬೇಕಾದರೆ ಜೀವನದ ಸಮಯವೆಲ್ಲ ಮುಡುಪಾಗಿಡಬೇಕಾಯಿತು.
ಈಗ ನಿವೃತ್ತಿ ಜೀವನ ನಡೆಸುತ್ತಿರುವ ಅವರಿಗೆ ಎಲ್ಲವೂ ಒಮ್ಮೆಲೆ ಖಾಲಿಯಾದ ಅನುಭವ,ಯಾವದರಲ್ಲೂ ಉತ್ಸಾಹವಿಲ್ಲ.ಇಷ್ಟು ದಿನ ನೌಕರಿ ಹಣಗಳಿಕೆ ಪ್ರತಿಷ್ಠೆ ಮಕ್ಕಳ ವಿದ್ಯಾಭ್ಯಾಸ ಮದುವೆಗಳ ಜವಾಬ್ದಾರಿಗಳೆಲ್ಲ ಒಂದೋಂದಾಗಿ ಮುಗಿಯುತ್ತಿದ್ದಂತೆ ಜೀವನದಲ್ಲಿ ನಿರಾಶೆ ಕಾಡತೊಡಗಿತು.ಸಮಕಾಲಿನ ಗೆಳೆಯರಿದ್ದರು ಎಲ್ಲರೂ ಸಮಯ ಮತ್ತು ವಯಸ್ಸಿನ ಹೊಡೆತಕ್ಕೆ ಸಿಲುಕಿದವರೆ ಹೆಚ್ಚು ಕಡಿಮೆ ಎಲ್ಲರ ಪರಿಸ್ಥಿತಿಯು ಇದೆ. ಆದರೆ ನಿರ್ಮಲಾರ ವಿಷಯ ಹಾಗಲ್ಲ ಅವಳು ಯಾವಾಗಲೂ ಚೈತನ್ಯದ ಚಿಲುಮೆಯೆ.ಮಕ್ಕಳು ದೂರ ಇದ್ದರೂ ಕೊರಗದೆ ತನಗಾಗೆ ದೊರೆತ ಸಮಯವನ್ನು ಆನಂದದಿಂದ ಕಳೆಯುವರು.ಇಬ್ಬರೆ ಇರುವ ಮನೆಯಲ್ಲೂ ಕೆಲಸಗಳಿಗೆನು ಕೊರತೆಯೆ ,ಕಸ ಮುಸುರೆ ಪೂಜೆ ಹಬ್ಬಗಳು ವ್ರತ ,ಕಾಲೋನಿಯ ಗೆಳತಿಯರೊಂದಿಗೆ ಕಿಇಟಿ ಪಾರ್ಟಿ ಗಳಲ್ಲೆ ಕಾಲದ ಪರಿವಿಲ್ಲದೆ ಬದುಕುವವರು.ಅವರದು ಉತ್ಸಾಹ ಭರಿತ ಜೀವನ.ಚೈತನ್ಯದ ಇನ್ನೊಂದು ಹೆಸರೆ ಹೆಣ್ಣಲ್ಲವೆ.ಇತ್ತೀಚೆಗೆ ಪತಿ ಮಂಕಾಗುತ್ತಿರುವದನ್ನ ಗಮನಿಸಿದ ನಿರ್ಮಲಾ ,ಅವರನ್ನೂ ಚೇತೋಹಾರಿಯನ್ನಾಗಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಲೆ ಇದ್ದರು .ಯೌವನದಲ್ಲಿ ಅವರ ರಸಿಕತೆಯ ಅನುಭವವಿದ್ದ ನಿರ್ಮಲಾಗೆ ಪತಿ ಈಗ ಮಂಕಾಗಿರುವದು ಸಹಿಸಲಾಗುತ್ತಿಲ್ಲ.
ಒಂದು ದಿನ ಬೆಳಗಿನ ವಾಯುವಿಹಾರ ಮುಗಿಸಿ ಮನೆಗೆ ಬಂದ ದಂಪತಿಗಳಿಗೆ ಮೂರ್ತಿಯ ಮೊಬೈಲ್ ಕರೆ ಬರಮಾಡಿಕೊಂಡಿತು.ಒಳಗಿನ ಫೋನ್ ತಂದು ಪತಿಗೆ ಕೊಟ್ಟ ನಿರ್ಮಾಲರು ಒಳಗಿನ ಉಳಿದ ಕೆಲಸಗಳ ಕಡೆ ಗಮನ ಹರಿಸಿದರು.ಮೊಬೈಲ್ ಮೇಲಿನ ಅನ್ ನೋನ್ ನಂಬರ್ ನೋಡಿ ಹಲೋ ಎಂದ ಮೂರ್ತಿಯವರಿಗೆ ಆ ಕಡೆಯಿಂದ ಹಲೋ ಎಂಬ ಹೆಣ್ಣಿನ ದನಿ ಕೇಳಿಸಿತು. ಗುರುತು ಸಿಗದೆ ಯಾರು..! ಎಂಬ ದನಿಗೆ ಆ ಕಡೆಯಿಂದ ಮೌನವೆ ಉತ್ತರವಾಯಿತು.ಕೇಳಿಸಲಿಕ್ಕಿಲ್ಲ ಎಂದು ಮೂರ್ತಿ ಯವರು ಯಾರು ಎಂದು ಜೋರಾಗಿ ಕೇಳಿದರು. ನಾನು ರೇವತಿ. ಯಾರು ಎಂಬುದು ನೆನಪಿಗೆ ಬಾರದೆ ಮೂರ್ತಿ ಕ್ಷಣಕಾಲ ಮೌನವಾದರು.ಮತ್ತೆ ಅತ್ತಲಿಂದ ದ್ವನಿ ,ನೆನಪಾಗಲಿಲ್ಲವೆ..ಇಲ್ವಲ್ಲ , ಆ ಹೆಸರಿನವರಾರು ನೆನಪಿಗೆ ಬರುತ್ತಿಲ್ಲ ಎಂಬ ಮೂರ್ತಿ ಯ ಉತ್ತರಕ್ಕೆ ಅತ್ತಲಿಂದ ನಿಟ್ಟುಸಿರೆ ದ್ವನಿಯಾಯುತು.ಸ್ನೇಹ ಚಿರಾಯು ಅಲ್ವೆ ,ಮರೆಯುವದುಂಟೆ ಎಂಬ ದ್ವನಿಯಲ್ಲಿನ ಆರ್ದ್ರತೆ ಗುರುತಿಸಿದ ಮೂರ್ತಿಯವರು ಆಶ್ಚರ್ಯ ಸಂತೋಷದಿಂದ ರೇವತಿನಾ ..ಎಂಬ ಉದ್ಗಾರ ತೆಗೆದರು. ತಮ್ಮ ಕಾಲೇಜಿನ ದಿನಗಳ ಸಹಪಾಠಿ.ಇಬ್ಬರು ಒಂದೇ ಕಾಲೇಜಿನಲ್ಲಿ ಓದಿದವರು , ಆಕರ್ಷಣೆ ಯು ಪ್ರೇಮವೆಂದೆ ನಂಬುವ ವಯಸ್ಸದು.ಇಬ್ಬರ ಮದ್ಯ ಒಂದು ಆತ್ಮೀಯ ಬಾಂದ್ಯವ್ಯ ಬೆಸೆದಿರುವದು ಇಬ್ಬರು ಅರಿತಿದ್ದರು.ತಮ್ಮ ತಮ್ಮ ಮನೆಯ ಕಟ್ಟುಪಾಡುಗಳ ಅರಿವಿದ್ದ ಇಬ್ಬರೂ ಯಾವದೇ ರೀತಿಯಲ್ಲಿ ಮುಂದುವರೆಯುವ ಧೈರ್ಯ ಮಾಡದೆ ಒಂದು ಮಧುರ ಸ್ನೇಹ ಬಾಂದವ್ಯ ಮುಂದುವರೆಸಿಕೊಂಡು ಹೋಗಿದ್ದರು.ಮನಸ್ಸುಗಳು ಒಂದಾಗಿದ್ದರು ಕುಟುಂಬದ ತೀರ್ಮಾನ ಮೀರುವ ಧೈರ್ಯ ಇಬ್ಬರಿಗೂ ಇರಲಿಲ್ಲ. ಕಾಲೇಜಿನ ದಿನಗಳು ಮುಗಿದು ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಕೆಲಸ ಹುಡುಕಿಕೊಂಡು ಮನೆಯವರು ನಿರ್ದರಿಸಿದವರೊಡನೆ ಮದುವೆಯಾಗಿ ತಮ್ಮ ತಮ್ಮ ಜವಾಬ್ದಾರಿಗಳಿಗೆ ಹೆಗಲು ಕೊಟ್ಟರು.ಜೀವನದ ಜಂಜಡಗಳಲ್ಲಿ ಹಿಂದಿನ ಮಧುರ ಸ್ನೇಹದ ನೆನಪು ಕ್ರಮೇಣವಾಗಿ ಮಾಸಿತ್ತು.
ಇಷ್ಟು ವರ್ಷಗಳ ನಂತರ ಹೀಗೆ ಹಠಾತ್ ಅಗಿ ರೇವತಿಯ ಕರೆ ಮೂರ್ತಿಯವರಲ್ಲಿ ಒಂದು ಪುಳುಕ ಮೂಡಿಸದೆ ಇರಲಿಲ್ಲ.ಇಬ್ಬರು ಮಾತಾಡಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಭೆಟಿಯಾಗುವ ತಿರ್ಮಾನದಿಂದ ಪೋನ್ ಡಿಸ್ ಕನೆಕ್ಟ್ ಮಾಡಿದ್ದರು. ಪತಿಗಾಗಿ ಕಾಫಿ ತಂದ ನಿರ್ಮಲಾ ಗಂಡನ ನಗುಮೊಗ ನೋಡಿ ಯಾರೆಂದು ಕೇಳಲು ,ಮೂರ್ತ ಯವರು ತಮ್ಮ ಸಹಪಾಠಿ ರೇವತಿ ಮತ್ತು ಅವಳ ಪ್ರತಿ ಆವಾಗ ತಮಗಿದ್ದ ಆಕರ್ಷಣೆ ಮತ್ತು ಎರಡು ಕುಟುಂಬಗಳ ಸಂಪದ್ರಾಯಗಳ ಬಗ್ಗೆ ಬಹಳ ಹೊತ್ತು ಮಾತಾಡಿದರು.ತಾವು ಭೆಟಿಯಾಗುವ ವಿಷಯವು ತಿಳಿಸದೆ ಇರಲಿಲ್ಲ. ಜಡತ್ವ ಕಳೆದು ಪತಿಯಲ್ಲಿ ಮೂಡಿದ ಉತ್ಸಾಹ ಕಂಡು ಬೆರಗಾದ ನಿರ್ಮಲಾ ಪತಿಯ ಸಂತೋಷದಲ್ಲಿ ತಾವು ಭಾಗಿಯಾಗುತ್ತ ಕೀಟಲೆ ಮಾಡದೆ ಇರಲಿಲ್ಲ.ಪತಿಯನ್ನು ಎಂದೂ ಅನುಮಾನದ ದೃಷ್ಟಿಯಿಂದ ನೋಡಿದ್ದೆ ಇಲ್ಲ.ಪ್ರೀತಿಯ ಭದ್ರ ಬುನಾದಿಯೆ ನಂಬಿಕೆಯಲ್ಲವೆ..ಆ ನಂಬಿಕೆಯೆ ಅವರಿಬ್ಬರ ಅನ್ಯೋನ್ಯತೆ ಗೆ ಕಾರಣ.
ಮನೆಯಿಂದ ಸ್ವಲ್ಪ ದೂರವಿರುವ ಒಂದು ರೆಸ್ಟೋರೆಂಟ್ ನಲ್ಲಿ ಕಾಯುತ್ತ ಕುಳಿತರು ಮೂರ್ತಿ ಯವರು.ದೂರದಲ್ಲಿ ಒಂದು ಸ್ತ್ರೀ ಆಕ್ರತಿ ನಿಧಾನವಾಗಿ ಬರುತ್ತಿರುವದು ಕಾಣಿಸಿತು. ಅವಳು ಅದೆ ರೆಸ್ಟೋರೆಂಟ್ ಗೆ ಬಂದು ಆ ಕಡೆ ಈ ಕಡೆ ನೋಡುವ ನೋಟದಿಂದ ಅವಳೆ ರೇವತಿ ಎಂದರಿತ ಮೂರ್ತಿ ಅವಳನ್ನು ಸಮೀಪಿಸಿದರು. ಎನು! ಇಷ್ಟು ದಪ್ಪ ಆಗಿದ್ದಿಯಾ.ಗುರುತೆ ಸಿಗಲಿಲ್ಲ ಎಂದರು ,ಮುಖದ ತುಂಬಾ ನಗು ತುಂಬಿಕೊಂಡು. ನೀನೆನು ಕಡಿಮೆಯೆ..ಮೂರು ಸುತ್ತು ದಪ್ಪಗಾಗಿದ್ದಿಯಾ..ಆಗದೆ ಎನು ಬಿಸಿ ಬಿಸಿ ಮಾಡಿ ಹಾಕುವ ಹೆಂಡತಿ ಇರುವಾಗ ,ಎಂಬ ಮಾತಿಗೆ ಇಬ್ಬರೂ ಮನದುಂಬಿ ನಕ್ಕರು.
ಇಷ್ಟು ವರ್ಷಗಳ ನಂತರ ಅದೇಗೆ ನೆನಪು ಬಂತು ಎಂಬ ಮೂರ್ತಿ ಯ ಮಾತಿಗೆ ,ಮನಸ್ಸು ಮುದಗೊಳಿಸುವ ನೆನಪುಗಳು ಬೆಚ್ಚಗೆ ಎದೆಯಲ್ಲಿ ಕಾಪಿಟ್ಟುಕೊಂಡರೆ ಮಾತ್ರ ಜೀವನ ಹಗುರ. ಎಂದಳು ರೇವತಿ.
ನಂತರದ ಮಾತುಕತೆಯಲ್ಲ ಅವಳ ಗಂಡ ಮಕ್ಕಳು ಮನೆ ಎಡೆಗೆ ಹೊರಟಿತು.ಮಕ್ಕಳು ದೊಡ್ಡವರಾಗಿ ಬೇರೆ ದೇಶಗಳಲ್ಲಿ ತಮ್ಮ ನೆಲೆ ಕಂಡುಕೊಂಡ ಮೇಲೆ ತಂದೆ ತಾಯಿಗಳಿಗೆ ಒಂಟಿತನವಲ್ಲದೆ ಮತ್ತೆನು ಕಾಡಲು ಸಾದ್ಯ..ಜೀವನದ ಜಂಜಡಗಳೆಲ್ಲ ಮುಗಿದು ಮೂರ್ತಿ ಯವರು ಅನುಭವಿಸಿದ ಶೂನ್ಯವನ್ನೆ ರೇವತಿಯು ಅನುಭವಿಸಿರುವಳು.ಮೊದಲಿನಿಂದಲೂ ಯಾರೋಂದಿಗೂ ಬೆರೆಯದ ಎಕಾಂತ ಪ್ರೀಯಳವಳು. ಪತಿ ತನ್ನ ಸ್ನೇಹಿತರ ವಲಯದಲ್ಲಿ ಪಾರ್ಟಿ ಟೂರ್ ಗಳಲ್ಲಿ ನಿವ್ರತ್ತಿ ಜೀವನ ಎಂಜಾಯ್ ಮಾಡುವವರು. ಹೀಗಾಗಿ ರೇವತಿ ತನ್ನ ವಲಯದಲ್ಲಿ ಎಕಾಂಗಿಯಾಗಿದ್ದಳು.
ಪ್ರತಿಯೊಬ್ಬ ವ್ಯಕ್ತಿಯೂ ಬದುಕಿನ ಜವಾಬ್ದಾರಿಗಳು ಯಾವಾಗ ಮುಗಿಯುವವೊ ಎಂದು ಹಂಬಲಿಸುವನು.ಮುಗಿದ ಮೇಲೆ ಮತ್ತದೆ ಶೂನ್ಯ. ನಮ್ಮ ಅವಶ್ಯಕತೆ ಯಾರಿಗೂ ಇಲ್ಲ ಎಂಬ ಕೊರಗು.ಇಳಿವಯಸ್ಸಿನಲ್ಲಿ ಗಂಡ ಹೆಂಡತಿಗೆ ಹೆಂಡತಿ ಗಂಡನಿಗೆ
ಅನಿವಾರ್ಯ. ಯಾರೆ ಒಬ್ಬರು ಮುಂದಾದರೂ ಮತ್ತದದೇ ಒಂಟಿತನ.ಮತ್ತು ಮಕ್ಕಳು ಸೊಸೆಯಂದಿರೊಡನೆ ಹೊಂದಾಣಿಕೆ ಬದುಕು.ಜೀವನ ಇಷ್ಟೆ.
ಪ್ರತಿಯೊಬ್ಬರೂ ಜೀವನದ ಒಂದಿಲ್ಲೊಂದು ಕಾಲಘಟ್ಟದಲ್ಲಿ ಒಂಟಿತನ ಅನುಭವಿಸುವವರೆ.ಕಳೆದ ಸವಿ ನೆನಪುಗಳು ಮಾತ್ರ ಎಂದುಗೂ ಅಮರ.
ಮೂರ್ತಿ ತಮಗರಿವಿಲ್ಲದೆ ಹಿತವಾಗಿ ರೇವತಿಯ ಕೈ ಅದುಮಿದರು.ಸ್ನೇಹದ ಅಭಯ ಹಸ್ತ ಚಾಚುತ್ತ ,ಸವೆಸಬೇಕಾದ ದಾರಿ ಎಲ್ಲಿವರೆಗಿದೆಯೋ ಯಾರಿಗೆ ಗೊತ್ತು.ಬದುಕು ಇರುವವರೆಗೂ ಜಡವಾಗಿ ಬದುಕದೆ ಉತ್ಸಾಹ ಭರಿತವಾಗಿ ಬದುಕೋಣ ಎಂದರು.ಮಂಕು ಸರಿದು ರೇವತಿಯ ಕಣ್ಣಲ್ಲೂ ಹೊಸ ಮಿಂಚು ಮೂಡಿತು.ಮರೆಯಾದ ಸ್ನೇಹ ಮತ್ತೆ ದೊರಕಿದ್ದಕ್ಕೆ ಮನ ಹಗುರವಾಯಿತು.ತನ್ನ ಭಾವನೆಯೊಂದಿಗೆ ಬೆಸೆದಿರುವ ಒಂದು ಜೀವವೂ ತನ್ನಂತೆ ನಿಷ್ಕಲ್ಮಷ ಸ್ನೇಹ ಬಯಸುತ್ತದೆ ಎಂದು ತಿಳಿದು ಮನ ಹಗುರಾಯಿತು.
ಅವರು ಎಷ್ಟೋ ಹೊತ್ತು ತಮ್ಮ ಸಂಸಾರದ ಮಾರಾಡಿದರು.ಮೂವತೈದು ವರ್ಷ ಹಿಂದೆ ಹೋಗಿ ಮತ್ತೊಮ್ಮೆ ಕಾಲೇಜಿನ ಸಹಪಾಠಿಗಳಾದರು.ಅಷ್ಟರಲ್ಲಿ ರೇವತಿಯ ಮೊಬೈಲ್ ರಿಂಗಾಯಿತು.ಸ್ಕ್ರೀನ್ ಮೇಲಿನ ಪತಿಯ ಹೆಸರು ನೋಡಿ ಮುಗುಳು ನಗುತ್ತ ,ಇವತ್ತು ನನಗೆ ಬರುವದು ಹೊತ್ತಾಗುತ್ತೆ ,ನೀವು ಊಟ ಮಾಡಿಬಿಡಿ.ಕಾಲೇಜಿನ ಗೆಳೆಯರೊಬ್ಬರು ಸಿಕ್ಕಿದ್ದಾರೆ ಬಹಳ ಮಾಡುವದಿದೆ ಎಂದಳು ನಗುತ್ತ.ಆ ಕಡೆಯಿಂದ ಮಾತುಗಳು ಮುಗಿದ ಮೇಲಾದರೂ ನನ್ನ ನೆನಪಿಸಿಕೋ ನಿನಗಾಗೆ ಕಾಯುತ್ತಿರುವ ಅನಾಥ ಒಬ್ಬನಿದ್ದಾನೆಂದು ಎಂದರು ನಗು ಬೆರೆತ ದನಿಯಲ್ಲಿ.
ಸ್ನೇಹದ ಕಡಲು ಮತ್ತೆ ಹರಿಯಿತು.ಜಡತ್ವದ ಬದುಕಲ್ಲಿ ಉತ್ಸಾಹ ಮೂಡಿತು.
*********************************************