ಕವಿತೆ
ಮೌನದಲಿ ಕವಿತೆಯಾದವಳು
ವಿದ್ಯಾಶ್ರೀ ಅಡೂರ್
ಕವಿತೆಯಾದಳು ಆಕೆ ತಿಳಿದವರು ತಿಳಿದ ತರ
ಹುಡುಕ ಹೋಗಲು ಬಗೆಯ ಬೇಗೆ ಬೆಂಬತ್ತಿ
ತುಟಿತುದಿಯ ಕಿರುನಗೆಯ ಅರಿತವನ ಮನದ ಸ್ಥರ
ಜಿಗಿವ ಜಿಂಕೆಯಂತೆ ಕವನವನ್ನು ಬಿತ್ತಿ
ಹಣೆ ಮೇಲೆ ಆಕೆಯ ಗೆರೆಗಳನು ಕಂಡಾತ
ಬರೆದಿಹನು ಪುಟಪುಟದ ಸಾಲುಗಳ ಹೆಚ್ಚಿ
ತನ್ನನ್ನೇ ಬಣ್ಣಿಪನು, ಬಂದಿಹೆನು ತಾನೆಂದು
ಆಕೆಯ ಮನದೊಳಗೆ ದೀಪವನು ಹಚ್ಚಿ
ಕಣ್ಣಂಚ ಹನಿಗಳನು ಮುತ್ತಂತೆ ಪೋಣಿಸುತ
ರಂಗುಬಳಿದು ಅದಕೆ ಕಟ್ಟಿಹನು ಬೆಲೆಯ
ಹಾದಿಬೀದಿಯ ಜನರು ಕೊಳ್ಳುವ ಸರಕಾಯ್ತು
ಅಳಿಸದೇ ಹೋಯ್ತವಳ ಕಣ್ಣೀರ ಸೆಲೆಯ
ಮಾತಿನ ಪೇಟೆಯಲಿ ಬೆಲೆಯಿಲ್ಲ ಮೌನಕ್ಕೆ
ಕುಗ್ಗಿಹಳು ಸಾಗರದ ಬಿಂದುವಾಗಿ
ಮಾತಿರದ ಮೌನದಲಿ ಕವಿತೆಯಾದಳು ಅವಳು
ಕ್ಷಣಕೊಮ್ಮೆ ಕಣಕಣದಿ ಸಿಂಧುವಾಗಿ
*******
Wow… super
ಸೊಗಸಾಗಿದೆ ಕವಿತೆ
ಕವಿತೆ ಸೊಗಸಾಗಿ ಮೂಡಿಬಂದಿದೆ
ಅಭಿನಂದನೆಗಳು