ಸಣ್ಣ ಕಥೆ
ಮರಳಿ ತವರಿಗೆ
ನಾಗರಾಜ್ ಹರಪನಹಳ್ಳಿ
ಕರೋನಾ ಕಾರಣವಾಗಿ ತವರು ಮನೆಗೆ ಕೊಲ್ಲಾಪುರ ದಿಂದ ಬಂದಿದ್ದ ರೋಶನಿ ತನ್ನೆರಡು ಮಕ್ಕಳೊಂದಿಗೆ ಹೈಸ್ಕೂಲ್ ಗೆಳತಿ ಶರ್ಮಿತಾಳನ್ನು ಕಾಣಲು ಹೊರಟಳು.ಮಲೆ ನಾಡಿನ ಒಂಟಿ ಮನೆಗಳು ಅಡಿಕೆ ತೆಂಗು ಹಾಗೂ ಕಾಡಿನ ಮರಗಳ ಮಧ್ಯೆ ಅಡಗಿರುವುದೇ ಹೆಚ್ಚು. ಶರ್ಮಿತಾಳ ತಾಯಿ ಮನೆ ಎದುರು ದನಗಳಿಗೆ ಕರಡ ಬೆಳೆಯಲು ಬಿಟ್ಟಿದ್ದ ಬಯಲು ಭೂಮಿ , ಜೂನ್ ತಿಂಗಳು ಎರಡು ವಾರ ಸುರಿದ ಮಳೆಯ ಕಾರಣ , ಅದಾಗಲೇ ಹಸಿರಾಗಿ ಇತ್ತು. ಮೊದಲ ಮಹಡಿಯ ಮೇಲಿನ ಕಾರಿಡಾರ್ ನಿಂದ ತನ್ನ ಮನೆಯತ್ತ ಹೆಣ್ಮಗಳೊಬ್ಬಳು ಮಕ್ಕಳೊಂದಿಗೆ ಬರುತ್ತಿರುವುದ ಗಮನಿಸಿ, ‘ ಆಯಿ , ಯಾರೋ ನೆಂಟರು ಬಂದ್ರೆ’ ಅಂತ ಕೂಗಿ ಸೂಚನೆ ಕೊಟ್ಟಳು. ಮನೆಯಿಂದ ಹೊರ ಬಂದ ಆಯಿ , ದೂರದಿಂದಲೇ ಭಟ್ಟರ ಮನೆ ಮಗು ಅಂಬಂಗೆ ಕಾಣ್ತದೆ. ಅವಳು ಈಚೆಗೆ ನಾಲ್ಕು ವರ್ಷ ಆಯಿತು ; ಈಕಡೆ ಬಂದಿರಲಿಲ್ಲ. ಈಗ ಬಂದಿರಬೇಕು ಎಂದ ಆಯಿ ,ಬಳ್ಳಿಯಲ್ಲಿ ಅರಳಿದ ಮಲ್ಲಿಗೆ ಹೂ ಬಿಡಿಸಿತೊಡಗಿದಳು.
ಪುಟಾಣಿ ಮಕ್ಕಳೊಂದಿಗೆ ಮನೆ ಹತ್ತಿರ ಬಂದಂತೆ ಆಕೆ ರೋಶನಿ ! , ತನ್ನ ಹೈಸ್ಕೂಲ್ ಗೆಳತಿ ಎಂದು ಶರ್ಮಿತಾಳಿಗೆ ಮನದಟ್ಟಾಗುತ್ತಿದ್ದಂತೆ , ಕಣ್ಣುಗಳು ಅರಳಿದವು.
ಮನೆಯಂಗಳಕ್ಕೆ ಬಂದದ್ದೇ ನಗುವಿನ ವಿನಿಮಯ, ಆತ್ಮೀಯ ಅಪ್ಪುಗೆಯ ನಂತರ ಇಬ್ಬರೂ ಮಾತಿಗಿಳಿದರು . ಗಂಟೆಗಟ್ಟಲೆ ಮಾತು. ಅಪರೂಪಕ್ಕೆ ಹತ್ತು ವರ್ಷಗಳ ನಂತರದ ಭೇಟಿ. ಕೇಳಬೇಕೆ? ಉತ್ಸಾಹ , ಕುತೂಹಲಗಳು ಮರದ ಕವಲುಗಳು ಮುಗಿಲ ಕಡೆ ಮುಖ ಮಾಡಿದಂತೆ , ಮನಸು ದೂರ ಕಾಣುವ ದಿಗಂತ ನೋಡುತ್ತಲೇ ಗೆಳತಿರ ಕಣ್ಣೋಟಗಳು ಬೆರೆತಿದ್ದವು. ಶರ್ಮಿತಾ ಈಗ ಕವಯಿತ್ರಿಯಾಗಿದ್ದಳು. ರೋಶನಿಯ ‘ಆಯಿ’ ಈ ಸುದ್ದಿಯನ್ನು ಕೊಲ್ಲಾಪುರದಿಂದ ಬಂದ ಮೊದಲ ದಿನವೇ ಶರ್ಮಿತಾಳ ಸುದ್ದಿ ಮಾತಾಡಿ ಕುತೂಹಲ ನೂರ್ಮಡಿಸಿದ್ದಳು .
ಆ ಕುತೂಹಲ ತಣಿಸಿಕೊಳ್ಳಲು, ಅವಳ ಕವನ ಸಂಕಲನ ಪಡೆಯಲು ಹಾಗೂ ಗೆಳತಿಯ ಪ್ರಸಿದ್ಧಿ ಅರಿತು ಖುಷಿಪಡಲು ರೋಶನಿ ಬಂದದ್ದಾಗಿತ್ತು. ಅಂತೂ ಕವಯಿತ್ರಿಯ ಸುದ್ದಿ ಕೇಳಿದ ಮೇಲೆ ; ತನ್ನ ಲಂಡನ್ ಪ್ರವಾಸ, ಅಲ್ಲಿನ ಜನ ,ಜೀವನ, ಯುವ ಜನರ ಬದುಕು, ಪ್ರೀತಿ, ಮುಕ್ತವಾದ ಜೀವನೋತ್ಸಾಹ ,
ಪ್ರಾಜೆಕ್ಟ್ ವರ್ಕ ಬಗ್ಗೆ ಮಾತು ಹೊರಳಿ ಕೊಂಡವು ಹಾಗೂ ಕೊಲ್ಲಾಪುರದಿಂದ ಮರಳಿ ತವರಿಗೆ ಬಂದ ಕಾರಣದ ವಿವರಗಳು ಒಂದೊಂದೆ ಎಳೆ ಎಳೆಯಾಗಿ ಮಾತಲ್ಲಿ ನಡೆಯುತ್ತಾ ಹೋದವು.
ಸಮಾಜಶಾಸ್ತ್ರ ಅಧ್ಯಯನ, ಪಿಎಚ್ಡಿ ಮಾಡಿದ್ದು …ಎಲ್ಲಾ ಹೇಳಿದ ನಂತರ ; ಗಂಡನ ಕಡೆ ಮಾತು ಹೊರಳಿತು. ‘ ಹೇಗೆ ನಿಮ್ಮ ಮನೆಯವರು ಅಂತ ‘ ಪ್ರಶ್ನೆ ಎಸೆದಳು ಶರ್ಮಿತಾ . ಹಾಗೆ ನೋಡಿದರೆ ಶರ್ಮಿತಾಳ ಊರಿನವನೇ ಆಗಿದ್ದ ವಿನಾಯಕ ಎಂಜಿನಿಯರಿಂಗ್ ಮಾಡಿ, ದೇಶ ಅಲೆದು, ಮುಂಬಯಿ, ಪುಣೆ ಸುತ್ತಿ ಕೊಲ್ಲಾಪುರದಲ್ಲಿ ನೆಲೆ ನಿಂತಿದ್ದ. ಕರೋನಾ ಕಾರಣವಾಗಿ ಅವನು ತನ್ನ ಮೂಲ ಮನೆಗೆ ಮರಳಿದ್ದ. ಪಕ್ಕದ ವಾಟಗಾರ ಗ್ರಾಮದ ಹೈಸ್ಕೂಲ್ ಸಹಪಾಠಿ ರೋಶನಿಯನ್ನೇ ಮದುವೆಯಾಗಿದ್ದ. ಸಹಜವಾಗಿ ಕೇಳಿದ ಪ್ರಶ್ನೆ ಅದಾಗಿತ್ತು. ಒಂದು ನಿಟ್ಟುಸಿರು ಬಿಟ್ಟ ರೋಶನಿ “ದೇಶ ವಿದೇಶ ಸುತ್ತಿದರೂ ಗಂಡಸರ ಅನುಮಾನ ಹೋಗಲ್ಲ ಬಿಡು.ಅದೇ ಮೊಬೈಲ್ ಹಿಡಿದರೆ ತಕರಾರು. ಕಾಣದ ಸಂಶಯಗಳು ಇದ್ದದ್ದೆ. ಗಂಡಸರಿಗೆ ಎಷ್ಟು ಪ್ರೀತಿ ಕೊಟ್ಟರೂ ,ಸಂಶಯಿಸುವುದ ಬಿಡಲ್ಲ ಎಂದು” ಮೌನವಾದಳು.
ತನ್ನ ಸಮಸ್ಯೆಯೂ ಅದೇ ಎಂದು ಹೇಳಬೇಕೆಂದ ಶರ್ಮಿತಾಳ ತುಟಿತನಕ ಬಂದ ಮಾತು ತಡೆದು,ಮಾತು ಬದಲಿಸಿದಳು. ಹಾಗೂ ನೀನು ಬರೆ ಏನಾದ್ರೂ ಅಂದ್ಲು. “ಹು, ಇನ್ನು ಬರೆಯಬೇಕು. ನೀನು ನಮ್ಮೂರಿಗೆ ಹೆಸರು ತಂದಿದಿಯಾ” .ಅದೇ ಸಂಭ್ರಮ. ನೀ ಕೊಟ್ಟ ಕಾವ್ಯದ ಪುಸ್ತಕ ನನ್ನತ್ತೆ ಇಟ್ಟುಕೊಂಡರು. ಅವರ ಮಗಳಿಗೆ ಕೊಡಲು. ನನಗೆ ಮತ್ತೊಂದು ‘ಮಲ್ಲಿಗೆ ದಂಡೆ’ ಕೊಡು ಎಂದು ನಸುನಕ್ಕಳು….ರೋಶನಿ. ಅವಳ ಮಾತಿನ ಕಣ್ ಮಿಂಚು ಶರ್ಮಿತಾಳ ಎದೆಯೊಳಗೆ ಬೆಳಕು ಹಚ್ಚಿದಂತಾಯಿತು.
*********************************