ಸಮಾಜ ಕಟ್ಟುವಲ್ಲಿ ಸಾಹಿತ್ಯದ ಪಾತ್ರ

ಲೇಖನ

ಸಮಾಜ ಕಟ್ಟುವಲ್ಲಿ ಸಾಹಿತ್ಯದ ಪಾತ್ರ

Openend book on purple background. Openend book on purple grungy background, good copy space stock photography

ಶಿವರಾಜ್ ಮೋತಿ

ಸಮಾಜವೆಂದರೆ ಜನ,ಗುಂಪು ಎಂದರ್ಥವಾಗುತ್ತದೆ. ವಿಧವಿಧವಾದ ಜನ,ಅನೇಕ ಗುಂಪುಗಳು ಇರುತ್ತವೆ. ಆದರೆ ಇಂದಿನ ಸಮಾಜ ಮೂಲಭೂತವಾದಿ,ಡೊಂಗಿ ರಾಜಕಾರಣಿಗಳ ಕೈಗೆ ಸಿಕ್ಕು ವಿಲ-ವಿಲವಾಗಿ ಬಿದ್ದು ನರಳಾಡುತ್ತಿದೆ.

ಸಮಾಜದಲ್ಲಿದ್ದ ನೂನ್ಯತೆಗಳನ್ನು ಸರಿಪಡಿಸಲು,ಸಮ ಸಮಾಜದ ಕನಸನ್ನು ಕಟ್ಟಲು ಹಲವಾರು ಮಾರ್ಗಗಳಿವೆ. ಅದರಲ್ಲೂ ವಿಶೇಷವಾಗಿ ಸಾಹಿತ್ಯವೂ ಒಂದು.ಸಾಹಿತ್ಯದಲ್ಲಿ ಹಲವಾರು ಪ್ರಕಾರಗಳು ಜನಪದ, ಜಾನಪದ,ಪುರಾಣ,ನಾಟಕ,ಕಲೆ, ಸಂಗೀತ ಮುಂತಾದವೆಲ್ಲವೂ ಒಂದಕ್ಕೊಂದು ಸಂಬಂಧವಿದ್ದೆ ಇದೆ.

ಸಾಹಿತ್ಯದ ಮೂಲಕ ಸಮಾಜವನ್ನು ಕಟ್ಟಲು ಅನೇಕ ಮಹನೀಯರು,ಶ್ರಮಿಸಿದ್ದಾರೆ,ಶ್ರಮಿಸುತ್ತಿದ್ದಾರೆ ಕೂಡ ಹೌದು.ಸಾಹಿತ್ಯವು ಒಡೆದ ಮನಸ್ಸುಗಳನ್ನು ಕೂಡಿಸಬೇಕೇ ವಿನಹ ಛಿದ್ರ-ಛಿದ್ರ ಮಾಡಬಾರದು. ಜಾತಿ ಅಸ್ಪೃಶ್ಯತೆಯ ತೆಕ್ಕೆಗೆ ಸಿಲುಕಿ ನರಳಾಡಿದ ಜನಕ್ಕೆ,ಧ್ವನಿಯಿಲ್ಲದ ಸಮುದಾಯಕ್ಕೆ ಧ್ವನಿಯಾಗಲು,ತಬ್ಬಲಿಗಳ ಪರ, ಅಲೆಮಾರಿ, ಆದಿವಾಸಿ,ಬುಡಕಟ್ಟು ಜನರಿಗಾಗಿ ಹೋರಾಡಲು, ಶೋಷಣೆಗೆ ಒಳಪಟ್ಟವರನ್ನು ಕಿಚ್ಚೆಬ್ಬಿಸಿ,ಅವರಿಗಾಗುವ ಅನ್ಯಾಯದ ವಿರುದ್ಧ ಸಿಡಿದೇಳಲು ಎಬ್ಬಿಸಿ,ಅವರ ಜೊತೆಗೂಡಲು ಸಾಹಿತ್ಯದ ಮೂಲಕ ಸಾಧ್ಯ.ಇಂತಹ ಕೆಲಸ ಮಾಡುತ್ತಿರುವ ದೊಡ್ಡ ದೊಡ್ಡ ಕೆಲವೇ ಸಾಹಿತಿಗಳನ್ನೂ ಹಾಗೂ ಪ್ರಚಾರ ಪಡೆಯದೇ ಮಾಡುತ್ತಿರುವ ಸಣ್ಣ-ಸಣ್ಣ ಸಾಹಿತಿಗಳನ್ನನ್ನೂ, ಹೋರಾಟಗಾರರನ್ನು ನಾವು ಇಂದು ನೋಡಬಹುದು..

ಇನ್ನೂ ಕೆಲ ಸಾಹಿತಿಗಳಿದ್ದಾರೆ,ಹೆಣ್ಣು ಸಬಲೆಯಲ್ಲ, ಅಬಲೆಯೆನ್ನುವ ಹೆಣ್ಣನ್ನು ಶೋಷಿಸುವ ಕೀಳು ಮನಸ್ಥಿತಿಗಳು,ಶೋಷಿತರನ್ನು ಶೋಷಿತರನ್ನಾಗೆ ನೋಡಬಯಸುವ,ಜಾತಿಧರ್ಮಗಳ ನಡುವೆ ಜಗಳ ಹಚ್ಚುವ ಸಾಹಿತ್ಯ ಸೃಷ್ಟಿ ಮಾಡುವುದು, ಅನ್ಯಧರ್ಮೀಯರನ್ನು ಅನುಮಾನಸ್ಥವಾಗಿ ನೋಡುವ, ಇಲ್ಲ-ಸಲ್ಲದ ಇತಿಹಾಸ ಸೃಷ್ಟಿ ಮಾಡುವುದು, ಅದು ನಿಜವಾದರೂ ಇಂದಿನ ಪರಿಸ್ಥಿತಿಗೆ ಒಗ್ಗೂಡಿಸಿಕೊಂಡು ಬದಲಾವಣೆಯನ್ನು ತರಬಯಸದೇ, ಕೋಮುಸೌಹಾರ್ದತೆಯನ್ನು ಕಾಪಾಡಿಕೊಳ್ಳದೆ ಶಾಂತಿಗೆಡುವ ಕೆಲಸವೂ ನಡೆದಿದೆ.ಅದೂ ನಿಲ್ಲಲ್ಲಿ..

ಇಂದಿನ ಉದಯೋನ್ಮುಖ ಸಾಹಿತಿಗಳು,ಕವಿಗಳು ಅವನು,ಅವಳು ಎನ್ನದೇ ಅರ್ಥಾತ್ ಪ್ರೀತಿ-ಪ್ರೇಮದ ಬಗ್ಗೆ ಬರೆಯುವುದು ಅದರಲ್ಲೂ ಭಗ್ನಪ್ರೇಮಿಯಂತೆ ಕಲ್ಪಿಸಿ ಬರೆಯುವುದು ನೋಡಿದರೆ,ಇವರಿಗೆ ಅನ್ಯ ವಿಷಯಗಳೇ ಇಲ್ಲವೇ ಎನ್ನಿಸದೇ ಇರದು.ಆದರೂ ಇವರು ಅನ್ಯವಿಷಯಗಳು ನನಗ್ಯಾಕೆ,ನಾನು ಬರೆದರೆ ಏನಾದರೂ ಬದಲಾದಿತೇ ಎಂದು ಕೀಳು ಮನಸ್ಥಿತಿಯಿಂದಲೇ ಇದಾರೆ ವಿನಹ ದೊಡ್ಡತನದಿಂದಲ್ಲ.

ಸಮಾಜದಲ್ಲಿ ಅನ್ಯಾಯವಾಗುತ್ತಿದ್ದರೂ ದೈಹಿಕವಾಗಿ ಎದುರಿಸದೇ ಆಗದಿರಬಹುದು,ಕಣ್ಣುಮುಂದೆ ಅನ್ಯಾಯ ನಡೆಯದೇ, ನಡೆದೂ ಇರಬಹುದು, ದೂರದೆಲ್ಲೋ ಅನ್ಯಾಯ ನಡೆದಿರಬಹುದು ನಮಗ್ಯಾಕೆನ್ನದೇ ಅದನ್ನು ಪ್ರತ್ಯಕ್ಷವಾಗಿ ವಿರೋಧಿಸದಾಗದಿದ್ರೂ ಸಾಹಿತ್ಯದ ಮೂಲಕ ವಿರೋಧಿಸುವುದು, ಪ್ರತಿರೋಧಿಸಬೇಕೇ ವಿನಹ ಮಂಕಾಗಿ ಕುರುಡಾಗುವುದಲ್ಲ,ಅನ್ಯಾಯವನ್ನು ವಿರೋಧಿಸುವ ಕೆಲಸವಾಗಬೇಕಿದೆ.

ಪರಿಸರದ ಹಾನಿಯನ್ನು ತಡೆಗಟ್ಟಲು, ಪರಿಸರಾತ್ಮಕ, ಪ್ರಾಣಿ-ಪಕ್ಷಿಗಳ ರಕ್ಷಣೆ,ಅತ್ಯಾಚಾರದ ವಿರುದ್ಧ, ಜೀವವಿರೋಧಿ, ಮಹಿಳಾ ವಿರೋಧಿ,ಮಾನವ ವಿರೋಧಿ ಮುಂತಾದವುಗಳ ಕೆಲಸ ಸಾಹಿತಿಗಳಿಂದ ತಡೆಗಟ್ಟಲು ಆಗುತ್ತಿಲ್ಲ.ನಮ್ಮ ದೇಶ ಮಹಾನ್ ಧೀಮಂತ ಪುರುಷ-ಮಹಿಳೆ ಸಾಧಕ ಮಹಾತ್ಮರನ್ನು ನೀಡಿದೆ.ಅವರು ಸಮಾಜ ಕಟ್ಟಿದ ಪರಿಯನ್ನು ನಾವು ಅಳವಡಿಸಿಕೊಂಡು ಸಾಗಬೇಕಾಗಿದೆ.ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜವನ್ನು ಕಟ್ಟಲು ಸಾಹಿತ್ಯದ ಮೂಲಕ ಕೆಲಸಗಳು ಆಗುತ್ತಿಲ್ಲ,ಆಗಬೇಕಾಗಿದೆ.

ಸರ್ಕಾರದ ನಡೆನುಡಿಗಳು,ಕಾಯ್ದೆಗಳು ಎಲ್ಲ ಕಾಲಕ್ಕೂ ಪ್ರಜಾಸತ್ತಾತ್ಮಕವಾಗಿ,ಪ್ರಜೆಗಳ ಹಿತರಕ್ಷಣೆಗಾಗಿಯೇ ಇರುತ್ತವೆ ಎಂದು ಹೇಳಲಾಗದು,ಕೆಲವೊಮ್ಮೆ ಸರಕಾರಗಳು ಗೊತ್ತಿದ್ದೂ,ಗೊತ್ತಿಲ್ಲದೆಯೂ ಪ್ರಜೆಗಳ ವಿರೋಧಿ ಕಾಯ್ದೆಯೂ ತರಬಹುದು.ಅವಾಗ ಸಾಹಿತಿಗಳಾದವರು ಖಡಾಖಂಡಿತವಾಗಿ ವಿರೋಧಿಸಬೇಕು. ರಾಜಕೀಯದ ಬಗ್ಗೆ ಬೇಡವೆಂದು ತಮ್ಮ ಅಭಿಪ್ರಾಯವನ್ನು ದಾಖಲಿಸದೇ ಹೋದರೆ ಎಲ್ಲ ಕಾಲಕ್ಕೂ ಬಾಯಿಮುಚ್ಚಿ ಮೂಕಪ್ರೇಕ್ಷರಾದರೆ ಅದೆಂತಹ ದೊಡ್ಡ ಬರಹಗಾರನಾದರೂ,ಅವರು ಸಾಹಿತಿಗಳಲ್ಲ,ಅವಕಾಶವಾದಿಗಳಾಗುತ್ತಾರೆ.

ಮತ್ತೊಂದೆಡೆ ಓದದೇ ಬರೆಯಬಹುದು,ಆದರೂ ಓದಬೇಕು.ಸ್ವತಃ ತಾನೇ ಮತ್ತೊಬ್ಬರದನ್ನು ಓದದೇ, ನಮ್ಮ ಭವ್ಯ ಸಾಹಿತ್ಯದ ಇತಿಹಾಸವನ್ನೋದದೇ, ಹಿಂದಿನಿಂದ ನಡೆದುಕೊಂಡು ಬಂದ ಸಮಾಜದ ಬಗ್ಗೆ ಅವಲೋಕಿಸದೆ ನನ್ನದೇ ಓದಲಿ ಅಂತ ಅನ್ನಿಸಿದ್ದನ್ನು ಗೀಚುವವರನ್ನು ಹಾಗೂ ಖುಷಿಗಾಗಿ, ಆತ್ಮಸಂತೋಷಕ್ಕಾಗಿ ಬರೆಯುತ್ತೇನೆಂದರೆ ಅಭ್ಯಂತರವಿಲ್ಲ ಆದರೆ ಅದು ಸಾಹಿತ್ಯವಾಗಲಾರದು. ಅಂತ ಬರಹಗಳಿದ್ದರೆ ನಿಮಗೂ ನಿಮ್ಮ ಬರಹಕ್ಕೂ ನೆಲೆಯಿಲ್ಲದಾಗುತ್ತದೆ..

ಒಟ್ಟಾರೆಯಾಗಿ ಏನೇ ಆಗಲಿ,ಸಾಹಿತ್ಯದ ಮೂಲಕ ಸಮಾಜವನ್ನು ಕಟ್ಟುವ ಕೆಲಸಗಳು ಆಗಲಿ, ಸಾಹಿತ್ಯವನ್ನು ಉದ್ಯೋಗ ಮಾಡಿಕೊಂಡವರಿದ್ದಾರೆ, ಜೀವನಕ್ಕಾಗಿ ಸಾಹಿತ್ಯವನ್ನು ನೆಚ್ಚಿಕೊಂಡವರಿದ್ದಾರೆ. ಉದಯೋನ್ಮುಖರಾದ ನಾವುಗಳು ಸಮಾಜದ ಸಮಸ್ಯೆ,ರೋಧನೆಗಳಿಗೆ ಸ್ಪಂದಿಸಿ ಬರಹ, ಹೋರಾಟ, ಚಳುವಳಿಗಳ ಮೂಲಕ ಇನ್ನಾದರೂ ನಮ್ಮ ಲೇಖನಿಯ ವರಸೆ ಬದಲಿಸಿಕೊಂಡು ಸಾಧ್ಯವಾದಷ್ಟು ಜೀವವಿರೋಧಿಗೆ ಪ್ರತಿಧ್ವನಿಗಳಾಗೋಣ..!!!

******************************************************

Leave a Reply

Back To Top