ರೆಕ್ಕೆ ಮುರಿದ ಹಕ್ಕಿ ಕನಸು
ಬಿದಲೋಟಿ ರಂಗನಾಥ್
ದುಃಖ ಬಚ್ಚಿಟ್ಟುಕೊಂಡು ನಗುವ ಸೂಸುವ
ನಿನ್ನ ಅಂತರಂಗದ ನುಡಿಯೇ
ನೋವುಗಳು ಜಾರುತ್ತಿವೆ ನಿನ್ನ ತುಟಿ ಸೀಳುಗಳ ಮೇಲೆ…
ಕಣ್ಣಪದರುಗಳಲ್ಲಿ ತೇಲುವ ಕಣ್ಣೀರು
ನಿಜಕ್ಕೂ ಎದೆಯಲ್ಲಡಗಿದ ಕಥೆ ಬಿಚ್ಚುತಿದೆ
ಕುಂತ ನೆಲದ ಜೊಳ್ಳು ಮಾತುಗಳೋ
ಸೀರೆ ಸುಟ್ಟ ನೋವೋ
ಅಂತು ಸುಡುತ್ತಿದೆ ಎದೆಯ ಮೇಲೆ ಬಿದ್ದು
ಉಕ್ಕಲಾರದೆ ರತಿ ಉಕ್ಕಿ ಗರಿಬಿಚ್ಚದೆ
ಒಳಗೇ ಸುತ್ತಿ ಸುತ್ತಿ ಭಾವನೆಗಳ ಕೊಲ್ಲುತ..
ರತಿ ತಿಲೋತಮೆಯಂತಿದ್ದರೂ
ಒಡೆದ ಒಳಮನಸಿನ ಕನ್ನಡಿಯ ಚೂರು ತಿವಿಯುತ್ತಿದೆ ಮೆತ್ತಗೆ ಮೆತ್ತಗೆ..
ಹಬೆಯಾಡದ ನಂಜು ಸುತ್ತಿ ಸುತ್ತಿ
ಉಸಿರಾಡದಂತೆ ಮಾಡಿದೆ
ಹೊತ್ತಿಗೊತ್ತಿಗೆ ಬಿಚ್ಚಿಕೊಳ್ಳದ ಮಾಯದ ನೋವು
ಹೆಪ್ಪುಗಟ್ಟಿ ಬಿರಿಯುತ್ತಿದೆ ಕಣ್ಣೊಡಲ
ಸುಖದಿಂದ ಅರಳಿ ಬೆವರಲು ಅದ್ಯಾವುದೋ
ರೆಕ್ಕೆ ಮುರಿದ ಹಕ್ಕಿ ಕನಸೇ ಬೀಳುತ್ತಿದೆ..!
ಹಾರಿದರೂ ಸಿಗದ ಹಕ್ಕಿಯ ಹೆಜ್ಜೆ ಗುರುತೊಂದು
ಹಾಸಿಗೆಯ ಮೇಲೆ ಬಿದ್ದು ದುಃಖಿಸುವುದು
ಕೇಳಿಸುತ್ತಲೇ ಇದೆ.
ಈ ದೇಹದ ಮೇಲೆ ಸನ್ನದ್ದು ಪಡೆದವನ
ತೋಳುಗಳು ಬಳಲಿ ಬಳಲಿ
ಕಾಮಕ್ಕಾಗಿ ಕಾತರಿಸುವ ಪರಿಗೆ
ಬಿತ್ತಿ ಬೆಳೆವ ಆಸೆಯು ಎದೆಯ ತುಂಬಿದರು
ಒಪ್ಪಿತವಲ್ಲದ ಮನಸು ಬಂಜರು ನೆಲವಾಗಿದೆ
ಸುಡುವ ನೆಲವನ್ನ ಅಪ್ಪಲು ಒಪ್ಪದ ಮನಸು
ಬಿಡುಗಡೆಗೊಳ್ಳದ ಉಸಿರ ಶಪಿಸುತ್ತಿದ್ದರೂ
ನಾಟಕೀಯ ನಗು ಎಂದೂ ಬಣ್ಣ ಮುಚ್ಚುವುದಿಲ್ಲ
ಒಳಗೆ ನೆನಗುದಿಗೆ ಬಿದ್ದ ಭಾವದ ಕಾಲುಗಳಿಗೆ
ಚಲಿಸುವ ಹವಣಿಕೆ ಇದ್ದರೂ
ಪರದೆ ಎಳೆದು ನಗುತ್ತಿದ್ದೀಯಲ್ಲ.
ಇದನ್ನೆಲ್ಲಾ ಕೇಳಿಸಿಕೊಂಡ ನನ್ನ ಮನಸು
ಒಳಗಿನ ನೋವು ಪರಚಿ
ಸೋತು ಶಬ್ಧಗಳಿಗೆ ಬಲೆ ಬೀಸಿ
ಕವಿತೆ ಕಟ್ಟಿದ್ದೇನೆ
ಇದರೊಂದಿಗೆ ಉಸಿರು ಬಿಡುವ
ಶಕ್ತಿಯಿದ್ದರೆ ,
ಒಮ್ಮೆ ನಿಡಿದಾಗಿ ಉಸಿರೆಳೆದು
ಹೊರಗೆ ಬಿಟ್ಟು ಬಿಡಿ.!
————————
ಸುಂದರ ರೂಪಕಗಳು..