GO BLUE- ಗೋ ಬ್ಲೂ

ಅಂಜಲಿ ರಾಮಣ್ಣ


ಇವತ್ತು ರಾಷ್ಟ್ರೀಯ ಮಕ್ಕಳ ದಿನಾಚರಣೆ. ೨೦ ನವೆಂಬರ್ ಅಂತರಾಷ್ಟ್ರೀಯ ಮಕ್ಕಳ ದಿನಾಚರಣೆ. ಮಕ್ಕಳ ಹಕ್ಕುಗಳ ವಿಷಯದಲ್ಲಿ ಈ ವರ್ಷಕ್ಕೆ ತನ್ನದೇ ಆದ ಮಹತ್ವ ಇದೆ. ೧೯೫೯ ರ ನವೆಂಬರ್ ೨೦ರಂದು ವಿಶ್ವಸಂಸ್ಥೆಯು ಜೆನೆರಲ್ ಅಸೆಂಬ್ಲಿಯಲ್ಲಿ ಮಕ್ಕಳ ಹಕ್ಕುಗಳ ಘೋಷಣೆ ಮಾಡಿತ್ತು. ನಂತರ ೧೯೮೯ರಲ್ಲಿ  ಹಲವಾರು ರಾಷ್ಟ್ರಗಳು ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಹಾಕಿದವು.

ಒಡಂಬಡಿಕೆಗೆ ಸಹಿ ಹಾಕಿರುವ ರಾಷ್ಟ್ರಗಳು, ಈ ವರ್ಷ ೧೪ ರಿಂದ ೨೦ನೆಯ ತಾರೀಕಿನವರೆಗೂ ಪ್ರಪಂಚದಾದ್ಯಂತ ಮಕ್ಕಳ ಹಕ್ಕುಗಳ ಬಗ್ಗೆ ಸಮಾಜದಲ್ಲಿ ಪ್ರಜ್ಞ್ನೆ  ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಮಕ್ಕಳ ಸಹಾಯವಾಣಿಯ ಬಗ್ಗೆ ಸಾಮಾನ್ಯರಿಗೆ ತಿಳುವಳಿಕೆ ಮೂಡಿಸುವುದು, ಮಕ್ಕಳಿಗಾಗಿಯೇ ಇರುವ ಕಾನೂನುಗಳ ಜಾಗೃತಿ ಶಿಬಿರಗಳನ್ನು ಆಯೋಜಿಸುವುದು, ಮಕ್ಕಳಿಗೆ ಮನೋರಂಜನೆಯ ಮೂಲಕ  ಅವರ ಹಕ್ಕುಗಳ ಅರಿವು ಮೂಡಿಸುವುದು ಹೀಗೆ ಸಾಲು ಸಾಲು ಕಾರ್ಯಕ್ರಮಗಳು ನಮ್ಮ ಕರ್ನಾಟಕದಾದ್ಯಂತ ನಡೆಯುತ್ತಿವೆ. ಈ ಎಲ್ಲಾ ಕಾರ್ಯಕ್ರಮಗಳು “ UNCRC30 “  ಎನ್ನುವ ಉಪಸಾಲನ್ನು ಹೊತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ.

ವಿಶ್ವಸಂಸ್ಥೆಯು ಈ ಬಾರಿಯ ಮಕ್ಕಳ ಹಕ್ಕುಗಳ ಸಪ್ತಾಹಕ್ಕಾಗಿ ಆಯ್ಕೆ ಮಾಡಿರುವ ಬಣ್ಣ ನೀಲಿ. ’GO BLUE ‘  ಈ ಘೋಷವಾಕ್ಯದಲ್ಲಿ ವಾರವಿಡೀ ಎಲ್ಲಾ ವಯಸ್ಕರು ನೀಲಿ ಬಣ್ಣದ ಬಟ್ಟೆಗಳನ್ನು ಹಾಕಿಕೊಳ್ಳಲು ಮನವಿ ಮಾಡಲಾಗಿದೆ. ಕಚೇರಿಗಳನ್ನು, ಮನೆಗಳನ್ನು, ಸರ್ಕಾರಿ ಕಟ್ಟಡಗಳನ್ನು, ಮಾರುಕಟ್ಟೆಗಳನ್ನು ನೀಲಿ ಬಣ್ಣದ ದೀಪಗಳಿಂದ ಅಲಂಕರಿಸಲು ಕೇಳಿಕೊಳ್ಳಲಾಗಿದೆ. ಸುತ್ತಮುತ್ತಲೂ ತಮ್ಮ ಕಣ್ಣುಗಳಿಂದ ‘ ನೀಲಿನೀಲಿ ‘ ನೋಡುವ ಅಪ್ರಾಯಸ್ಥರು ’ಯಾಕೆ ಹೀಗೆ?’ ಎಂದು ಪ್ರಶ್ನಿಸುವಾಗ ಅವರುಗಳಿಗೆ ತಮ್ಮ ಹಕ್ಕುಗಳ ಬಗ್ಗೆ ತಿಳಿಸಿಕೊಡುವ ಕೆಲಸವಾಗಲಿ ಎನ್ನುವ ಉದ್ದೇಶವಿದೆ ಈ ನೀಲಿ ಬಣ್ಣದ ಆಯ್ಕೆಗೆ. ಈ ವಾರವಿಡೀ ವಯಸ್ಕರೂ ಮಕ್ಕಳೆಡೆಗೆ ಸಂವೇದನಾಶೀಲರಾಗಲಿ, ಮಕ್ಕಳ ಸಮಾಜದೆಡೆಗೆ ಎಚ್ಚರಗೊಳ್ಳಲಿ ಎನ್ನುವ ನಿರೀಕ್ಷೆಯಿದೆ ಈ ನೀಲಿ ಬಣ್ಣಕ್ಕೆ.

ನೀಲಿಯೇ ಯಾಕೆ ಬಣ್ಣಗಳ ಅಧ್ಯಯನದಲ್ಲಿ ನೀಲಿ ಬಣ್ಣ ನಂಬಿಕೆ ಮತ್ತು ವಿಶ್ವಾಸದ ಧ್ಯೋತಕವಾಗಿದೆ. ಧ್ವನಿಯ ಬಣ್ಣ ನೀಲಿ ಎಂದು ಗುರುತಿಸಲಾಗಿದೆ. ನಿಷ್ಠೆ, ಬುದ್ಧಿವಂತಿಕೆ, ಸತ್ಯ ಸಂಧತೆಗೆ ನೀಲಿ ಬಣ್ಣವನ್ನು ಪ್ರತಿನಿಧಿಸಲಾಗಿದೆ. ವೈದ್ಯಕೀಯವಾಗಿ ನೀಲಿ ಬಣ್ಣವು ಮನಸ್ಸು ಹಾಗು ದೇಹವು ಹೊಂದಾಣಿಕೆ ಸಾಧಿಸಲು ಸಾಕಷ್ಟು ಸಹಾಯಕಾರಿ ಎಂದು ಹೇಳಲಾಗಿದೆ. ಆಕಾಶ ನೀಲಿ, ಶರಧಿ ನೀಲಿ. ಅದಕ್ಕೇ ಆಳ ಮತ್ತು ಧೃಢತೆಯ ಸಂಕೀತವಾಗಿದೆ ನೀಲಿ.

ಬೈಬಲ್‍ನಲ್ಲಿ ನೀಲಿ ಬಣ್ಣವನ್ನು ದೈವ ವಾಣಿಯ, ಸ್ವರ್ಗದ ಬಣ್ಣ ಎಂದು ಬಣ್ಣಸಲಾಗಿದೆ. ಯಹೂದಿಗಳು ನೀಲಿ ಬಣ್ಣವನ್ನು ದೈವತ್ವದ ಬಣ್ಣವೆಂದು ಭಾವಿಸುತ್ತಾರೆ. ಚಿತ್ತಸ್ಥಿಮಿತಕ್ಕೆ ನೀಲಿಯಾಕಾರ ಎನ್ನುತ್ತಾರೆ ಅವರು. ಹಿಂದು ದೇವರುಗಳಿಗೆ ನೀಲಿ ಬಣ್ಣವನ್ನು ಪರಿಕಲ್ಪಿಸಲಾಗಿದೆ.

ಮಕ್ಕಳು ನರಳುತ್ತಿದ್ದಾರೆ. ಅವರ ನೋವಿನ ಕೂಗನ್ನು ಕೇಳಿಸಿಕೊಳ್ಳಲು ಸ್ವಲ್ಪವೇ ಸೂಕ್ಷ್ಮತೆಯೂ ಸಾಕು. UNCRC30 ಎನ್ನುತ್ತಾ ವಿಶ್ವಸಂಸ್ಥೆಯು ಕೊಟ್ಟಿರುವ ನೀಲಿ ಬಣ್ಣದಲ್ಲಿ ನಾವುಗಳೂ ತೊಡಗಿಕೊಳ್ಳೋಣ. ನಾವೂ ಎಲ್ಲೆಡೆಯಲ್ಲಿಯೂ ನೀಲಿಯಾಗೋಣ. ನಾವೇ ನಿರ್ಮಿಸಿದ ಧರ್ಮ, ಆಚರಣೆ, ನಂಬಿಕೆಗಳಿಂದ ನೀಲಿಗಟ್ಟುತ್ತಿರುವ ಮಕ್ಕಳಿಗೆ ಉಸಿರು ತುಂಬೋಣ. ಮನುಷ್ಯರಾಗೋಣ. ಜಗತ್ತಿಗೆಲ್ಲ ’GO BLUE’ ಎನ್ನೋಣ.


ಅಂಜಲಿ ರಾಮಣ್ಣ
ಅಧ್ಯಕ್ಷರು , ಮಕ್ಕಳ ಕಲ್ಯಾಣ ಸಮಿತಿ

Leave a Reply

Back To Top