ಮಕ್ಕಳ ಕವಿತೆಗಳು
ಸಂತೆಬೆನ್ನೂರು ಫೈಜ್ನಾಟ್ರಾಜ್
ನಮ್ಮ ಚಂದ್ರ
ನಮ್ಮ ಚಂದ್ರ
ಬಾನಿಗೊಬ್ಬ ಚಂದಿರ
ದೇಶಕ್ಕೊಬ್ಬ ಚಂದಿರ
ಅವನೇ ಸುಭಾಸ್ ಚಂದಿರ//ಬಾ//
ಶಕ್ತಿ ಕೊಡಿ ರಕ್ತ ಕೊಡಿ
ಸ್ವತಂತ್ರ ಕೊಡುವೆ ಎಂದನು
ಸ್ವಾರ್ಥ ಬಿಡಿ ನಿಸ್ವಾರ್ಥ ದುಡಿ
ದೇಶಕದುವೆ ಹೆಮ್ಮೆ ಎಂದನು//ಬಾ//
ಜೈ ಹಿಂದ್ ಜೈ ಹಿಂದ್ ಜೈಕಾರ
ಕೂಗುತ ಎಂದಿಗೂ ಮುನ್ನುಗ್ಗಿ
ಏನೇ ಬರಲಿ ಒಗ್ಗಟ್ಟಿರಲಿ
ದೇಶಭಕ್ತರು ಒಂದಾದರೆ ಅದೇ ಸುಗ್ಗಿ //ಬಾ//
ಒಂದೆ ನಾಡು ಒಂದೆ ತಾಯಿ
ನಾವೆಲ್ಲರೂ ಭಾರತಾಂಬೆ ಮಕ್ಕಳು
ಹಿಂದು-ಮುಸ್ಲಿಂ ಯಾರೇ ಇರಲಿ
ದೇಶದಲ್ಲಿ ನಾವೆಲ್ಲ ಒಂದೆ ಒಕ್ಕಲು! //ಬಾ//
————————-
ಸುಭಾಸ್ ಜೀ ನಿಮಗೆ ಸಲಾಂ
ಸುಭಾಸ್ ಜೀ ನಿಮಗೆ ಸಲಾಂ
ಭಾರತಮಾತೆಯ ಪುತ್ರನೇ ಸಲಾಂ //ಸು//
ಆಜಾದ್ ಹಿಂದ್ ಕಟ್ಟಿದ ಸೇನಾನಿ ನೀನು
ಜೈ ಹಿಂದ್-ಎಂದು ಅಬ್ಬರಿಸಿದ ಶೂರ ನೀನು
ಮರೆಯಲಾರೆವು ನಾವು ನಿನ್ನ ಎಂದಿಗೂ
ನಮ್ಮ ಹೃದಯದಲ್ಲಿರುವೆ ನೀನು ಎಂದಿಗೂ //ಸು//
ಸ್ವತಂತ್ರಕ್ಕಾಗಿ ದೇಶ-ದೇಶ ತಿರುಗಿದೆ ನೀನು
ಬ್ರಿಟಿಶರನ್ನು ಹೊರ ಹಾಕಲು ಹವಣಿಸಿದೆ ನೀನು
ದೂರಾದೆ ಗೆಳೆಯ ನೀನು ತಿಳಿಯದಂತೆ ಸುಮ್ಮನೆ
ಅರ್ಪಿಸುವೆವು ನಿನಗೆ ಇದೋ ಇದೋ ನಮ್ಮನೆ! //ಸು//
——————————————
ಹೊಸ ಲೆಕ್ಕ
ಒಂದು ಎರೆಡು ಮೂರು
ಬಾಳಲಿ ಕಷ್ಟ ನೂರಾರು
ನಾಕು ಐದು ಆರು
ಎಲ್ಲಾ ಮೆಟ್ಟಿಲ ನೀ ಏರು
ಏಳು ಎಂಟು ಒಂಭತ್ತು
ಗೆಲ್ಲು ಜೀವನದ ಆಪತ್ತು!
ಹತ್ತು ಹನ್ನೊಂದು ಹನ್ನೆರೆಡು
ಸಾಧನೆಯ ಬೆನ್ನತ್ತಿ ಹೊರಡು
ಹದಿಮೂರು ಹದಿನಾಲ್ಕು ಹದಿನೈದು
ಶಿಕ್ಷಣ ಕಲಿತರೆ ಅಪಾಯ ಏನೂ ಬರದು!
——————————————————
ಬಳ್ಳಿ ಮತ್ತು ಮರದ ಮಾತುಕತೆ
ಆಕಾಶಕ್ಕೆ ಮುಖ ಮಾಡಿ ಒಂದು ಮರ ನಿಂತಿತ್ತು
ಮರದ ಮೈಗೆ ಫ್ರೆಂಡಾಗಿ ಬಳ್ಳಿ ಹಬ್ಬಿತ್ತು
ಬಳ್ಳಿ ಜೊತೆ ಮರಕ್ಕಂತು ಗುಡ್ ಫ್ರಂ ಶಿಪ್ಪು
ಇವರಿಬ್ಬರನ್ನು ನೋಡಿ ಉಳಿದವರು ಗಪ್ ಚಿಪ್ಪು!
ಹಬ್ತಾ ಹಬ್ತಾ ಬಳ್ಳಿ ಮೇಲೆ ಹೋಗಿತ್ತು
ಪಕ್ಕದಲ್ಲೇ ಇದ್ದ ಲೈಟ್ ಕಂಬ ಮುಟ್ಟಿತ್ತು
ಅಯ್ಯೋ ಅಯ್ಯೋ ಬಳ್ಳಿ ಅದರಲ್ಲಿದೆ ಕರೆಂಟು ಹುಷಾರು
ಹೆಚ್ಚು ಕಮ್ಮಿ ಆದರೆ ನೀನ್ ಜೊತೆ ನಾನು ಢಮಾರು
ಇಲ್ಲಪ್ಪ ಮರ-ರಾಯ ಹೆದರಬೇಡ ಅರಾಮಾಗಿರು
ಜೀವನ ಅಂದ್ರೆ ಎಲ್ಲಾ ಇರುತ್ತೆ ಖುಷಿಯಾಗಿರು
ಆದ್ರೂ ಕರೆಂಟಂದ್ರೆ ಭಯ ಅಲ್ವಾ ನೀ ಯಾಕ್ ಅಪ್ಪಿದೆ?
ನೀನು ನನ್ನ ಫ್ರೆಂಡ್ ನಿನ್ ಧೈರ್ಯ ನಾನ್ ಒಪ್ಪಿದೆ
ನಾವು ಒಳ್ಳೆಯವರಾದ್ರೆ ಲೋಕನೆ ಒಳ್ಳೆದಂತೆ
ಸ್ನೇಹದಿಂದ ಇದ್ದರಂತು ಎಲ್ಲಾನು ಗೆಲ್ಲಬಹುದಂತೆ!
——————————————————