ಮಗಳು
ಲಕ್ಷ್ಮಿಕಾಂತ್ ಮಿರಜಕರ
ಮಗಳು ಹುಟ್ಟಿದ್ದಾಳೆ
ತಂದಿದ್ದಾಳೆ ಜೊತೆಯಲ್ಲಿಯೇ
ಹೆಡೆಮುರುಗಿ ಕಟ್ಟಿ ವಸಂತನನ್ನು
ಮನೆಯಲ್ಲೀಗ ನಿತ್ಯ ದೀಪಾವಳಿ
ಮನ ತುಂಬಾ ಬೆಳದಿಂಗಳ ಓಕುಳಿ
ಮಗಳು ಮುಗುಳ್ನಗುತ್ತಿದ್ದಾಳೆ
ಮಾಯವಾಗುತ್ತಿವೆ
ಜಗದ ಜಂಜಡಗಳು ಒಂದೇ ಗುಕ್ಕಿಗೆ
ಕರಗಿ
ಅವಳ ನಿಷ್ಕಲ್ಮಶ ನಗುವಿನ ಮೋಡಿಗೆ
ಬಂದು ಬೀಳುತ್ತಿವೆ
ಗಗನದ ನಕ್ಷತ್ರಗಳೆಲ್ಲಾ
ಅವಳ ಸುಕೋಮಲ
ಮೃದು ಪಾದದ ಅಡಿಯಲ್ಲಿ
ಮಗಳು ಅಂಬೆಗಾಲಿಡುತ್ತಿದ್ದಾಳೆ
ಅವಳ ಎಳೆದೇಹದ ಸ್ಪರ್ಷ ಸಂಚಾರವಾಗುತ್ತಲೇ
ಅರ್ಥ ಕಳೆದುಕೊಳ್ಳುತ್ತಿವೆ
ದೊಡ್ಡವರ ಸಿನಿಕತನದ ಮಾತುಗಳು
ಮಗಳು ಮಾತನಾಡುತ್ತಿದ್ದಾಳೆ
ಕಪಟವರಿಯದ ಮಗಳ
ತೊದಲುಮಾತುಗಳಿಗಿಂತ ಶ್ರೇಷ್ಟವೇನಲ್ಲ
ರಾಮಾಯಣ ,ಕುರಾನ್,ಬೈಬಲ್
ಭಗವದ್ಗೀತೆಯ ಸಾರ
ನಿಜ,ಮಗಳು ಇಲ್ಲದೇ ಹೋದರೆ
ಬದುಕು ನಿಸ್ಸಾರ!
ಮಗಳು ನಡೆಯುತ್ತಿದ್ದಾಳೆ
ಒಂದೊಂದೇ ತಪ್ಪುಹೆಜ್ಜೆಗಳ ಸರಿಪಡಿಸಿಕೊಳ್ಳುತ
ನಡೆಯುತ್ತಿದೆ ಸರಿದಾರಿಯಲ್ಲಿ
ಹಳಿ ತಪ್ಪಿದ್ದ ಜೀವನಯಾನ
ಮಗಳೆಂಬ ತಾಯಿಯ ಆಗಮನದಿಂದ
ಜೀವಂತಿಕೆಯ ಸಾನಿಧ್ಯದಿಂದ
ಮಗಳು ಓಡುತ್ತಿದ್ದಾಳೆ
ಸಮಯವೂ ಈಗ ಅವಳ
ಹಿಂದೆ ಹಿಂದೆ ಓಡುವ ಬಾಲಂಗೋಚಿ
ಸರಿದದ್ದೇ ಗೊತ್ತಾಗುವುದಿಲ್ಲ
ಮಗಳೆಂಬ ಚೈತನ್ಯದ ಸನ್ನಿಧಿಯಲ್ಲಿ
ಬದುಕೀಗ ರಸನಿಮಿಷಗಳ ಆಗರ
ಮನೋಲ್ಲಾಸದ ಸಾಗರ.
*********************
ಪರಿಚಯ:
ಲಕ್ಷ್ಮಿಕಾಂತ ಮಿರಜಕರ ..ಊರು ಹಾವೇರಿ ಜಿಲ್ಲೆ ಶಿಗ್ಗಾಂವ.ಸದ್ಯ ಮೊಳಕಾಲ್ಮುರು ತಾಲೂಕಿನ ದೇವಸಮುದ್ರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಪ್ರಭಾರಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಣೆ.ಕವನ ಕತೆ ಓದು ಮತ್ತು ಬರೆಯುವುದರಲ್ಲಿ ಆಸಕ್ತಿ..ಶಾಲೆಯ ಮಕ್ಕಳ ಬರಹಗಳನ್ನು ಸಂಪಾದಿಸಿ “ಚಿಲುಮೆ” ಎನ್ನುವ ಪುಸ್ತಕವನ್ನು ಪ್ರಕಟಿದ್ದೇನೆ.ಕವಿತೆಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ..