ಹೂವೂ ಮತ್ತು ಎಲೆಯ ನಿಟ್ಟುಸಿರು
ಡಾ.ಗೋವಿಂದ ಹೆಗಡೆ
ಹೂವೊಂದು ಅರಳುವಾಗ
ಎಷ್ಟೊಂದು ಸಂಗತಿಗಳು
ಮೈದಳೆಯುತ್ತವೆ
ಸುತ್ತ ಸುಳಿವ ಗಾಳಿಯಲ್ಲೇ ಪುಳಕ
ಗಂಧಕ್ಕಾಗಿ ಕಾದ ಮೂಗು
ಬಂಡುಣಲು ದುಂಬಿ
ಜೇನ್ನೊಣಗಳ ಪೈಪೋಟಿ
ಎರಗಿ ದಳದಳ ಕಿತ್ತು
ಹೊಸಕಲು ತಯಾರಾಗುವ ಕೈಗಳೂ
ಹೂವಿಗೋ ಅರಳುವ
ಅಂದ ಸುಗಂಧ ಸೂಸುವ
ತಹತಹ
ಹೀರುವ ತುಟಿಗೊಪ್ಪಿಸಿಕೊಳ್ಳಲು
ಕಾತರಿಸುವ ಎದೆ
ಗೊಂಚಲಲ್ಲಿ ಅರಳಿದರಂತೂ
ಪರಸ್ಪರರನ್ನು ಮೀರಿಸುವ ಹಠ
ಗಾತ್ರದಲ್ಲಿ ಚೆಲುವಿನಲ್ಲಿ
ಸೌರಭದಲ್ಲಿ
ಸನಿಹದಲ್ಲೇ ಇರುವ
ಪ್ರಾಯ ಸಂದ
ಬಣ್ಣ ಕಳೆದ ಎಲೆಯ
ನಿಟ್ಟುಸಿರು
ಯಾರಿಗೂ ತಲುಪುವುದಿಲ್ಲ
ಹೂವಿಗೆ ಕೂಡ
************************
ಪರಿಚಯ:
ವೃತ್ತಿಯಿಂದ ಅರಿವಳಿಕೆ ತಜ್ಞ. ಹುಬ್ಬಳ್ಳಿಯಲ್ಲಿ ಖಾಸಗಿಯಾಗಿ ವೃತ್ತಿ ನಿರ್ವಹಣೆ..ಕವಿತೆ, ಕಥೆ, ಲೇಖನ, ಅಂಕಣ ಬರಹಗಳಲ್ಲಿ ವ್ಯವಸಾಯ.ಮೈಸೂರು ದಸರಾ ಕವಿಗೋಷ್ಠಿ, ಧಾರವಾಡ ಉತ್ಸವ, ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ರಾಜ್ಯ ಸಮ್ಮೇಳನದ ಕವಿಗೋಷ್ಠಿಯೂ ಸೇರಿದಂತೆ,ಹಲವಾರು ವೇದಿಕೆಗಳಿಂದ ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದ್ದಾರೆ. ಕವನ ಸಂಕಲನ ‘ಕನಸು ಕೋಳಿಯ ಕತ್ತು’ ಕಾವ್ಯಾಸಕ್ತರ ಮನಸೆಳೆದಿದೆ. ಕವಿತೆಗಳು-ವಿವಿಧ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ;ಆಕಾಶವಾಣಿ ಗಳಿಂದ ಪ್ರಸಾರವಾಗಿವೆ.