(ಅಮ್ಮನೂರಿನ ನೆನಪುಗಳು)
ಅಮೇರಿಕಾದಿಂದ ಅಶ್ವಥ್
ಬರೆಯುತ್ತಿದ್ದಾರೆ…..
ಅಶ್ವಥ್
ಮೂಗು ಹಿಡಿದುಕೆನ್ನೆಗೆ ಹೊಡಿ!
ಕಾನ್ವೆಂಟೆನ್ನುವಶಾಲೆಯನ್ನು ಸೇರಿಯೂ ಆಯ್ತು, ಮೂರ್ನಾಲ್ಕು ತಿಂಗಳು ಉರುಳಿದ್ದೂ ಆಯ್ತು. ಈ ಸಮಯದಲ್ಲಿ ಯಾವುದೇ ನೆಪ ಹೇಳಿ ತಪ್ಪಿಸಿಕೊಳ್ಳಲಾಗುವುದಿಲ್ಲ; ಒಂದು ವರ್ಷ ಪೂರೈಸಲೇ ಬೇಕು. ಹಾಗಾಗಿ ಕೆಜಿ ಕ್ಲಾಸು ಯಾಂತ್ರಿಕವಾಗಿ ಸಾಗುತ್ತಿತ್ತು. ಹೊಸದೇನೂ ಕಲಿಯಲು ಇಲ್ಲದೇ ಬೋರು ಹೊಡೆಯುತ್ತಿತ್ತು. ಶಾಲೆ ಮುಗಿದ ಮೇಲೆರಾಣಿ ಮೇಡಮ್ ಮನೆಯೂ ಬಂದ್ ಆಗಿದ್ದರಿಂದ ಒಂದು ದಿನ ಮಧ್ಯಾಹ್ನ ಶಾಲೆ ಮುಗಿಸಿ ನಿತ್ಯವೂ ಕರೆತರುತ್ತಿದ್ದ ಅಕ್ಕನ ಶಾಲೆಯ ಬಗ್ಗೆ ಅಲ್ಲೇ ರಸ್ತೆಯಲ್ಲಿ ನಿಂತಿದ್ದವರ ಬಳಿ ಕೇಳುತ್ತಾ ಅವಳ ಶಾಲೆಯ ಕಾಂಪೌಂಡಿನೊಳಗೆ ಬಂದು ಹುಡುಕುತ್ತಿದ್ದೆ. ಸೈಕಲ್ ಮೇಷ್ಟ್ರು ಅವರ ಹೆಸರು, ಪಕ್ಕಾ ನೆನಪಿದೆ. ಅವರ ಹೆಸರು ಶೇಖರ್ ಮೇಷ್ಟ್ರಂತೆ, ಸೈಕಲ್ಲೇರಿ ಬರುತ್ತಿದ್ದರಿಂದ ಸೈಕಲ್ ಮೇಷ್ಟ್ರು ಅಂತಲೇ ಅವರ ಹೆಸರನ್ನು ಬದಲಾಯಿಸಿಬಿಟ್ಟಿದ್ದರಂತೆ. ಹಿರಿಯ ಪ್ರಾಥಮಿಕ ಶಾಲೆಯ ಮೇಷ್ಟರು ಇನ್ನೂ ಕಿರಿಯ ಪ್ರಾಥಮಿಕವೂ ಆಗಿಲ್ಲದ ನನ್ನನ್ನು ಕಂಡು, ʼಯಾರೋ ನೀನು? ಇಲ್ಲೇನ್ ನೋಡ್ತಿದ್ದೀಯಾ?ʼ ಅನ್ನುತ್ತಾ ಹತ್ತಿರ ಬಂದರು. ನನ್ನ ಅಕ್ಕನನ್ನು ಹುಡುಕುತ್ತಿದ್ದೇನೆಂದಾಗ ಒಳಗೆ ಕರೆದುಕೊಂಡು ಹೋಗಿ ಯಾರು ಅಕ್ಕ? ಅಂದಿದ್ದಕ್ಕೆ ಅಕ್ಕನೇ ಎದ್ದು, ʼನಮ್ ಚಿಕಪ್ಪನ ಮಗ ಸಾʼ ಅನ್ನುತ್ತಾ ನನ್ನ ಮತ್ತು ನನ್ನ ಕೆಜಿಸ್ಕೂಲಿನ ವಿವರ ತಿಳಿಸಿದಳು. ಸರಿ ಅಂದು ಅವಳ ಪಕ್ಕದಲ್ಲಿ ಕೂತ್ಕೊಳ್ಳಲು ನನಗೆ ಅವಕಾಶ ಕೊಟ್ಟ ಸೈಕಲ್ ಮೇಷ್ಟರು, ಮಕ್ಕಳಿಗೆ ಕಾಗುಣಿತ ಹೇಳಿಸುವಾಗ, ನಾನೂ ಹೇಳ್ತೀನಿ ಅಂದೆ. ಹೇಳು ನೋಡನಾ, ಅಂದು ಕಾಗುಣಿತ ಶುರು ಮಾಡಿ ಹಾಗೇ ನನಗೆ ಗೊತ್ತಿದ್ದ ಎಲ್ಲವನ್ನೂ ಕೆದಕುತ್ತಾ ಕೇಳಿ, ಮಗ್ಗಿಯನ್ನೂ ಹೇಳಿಸಿ, ನೋಡಿಲ್ಲಿ ಇವ್ರಿಗೆಲ್ಲಮಗ್ಗಿ ಕಾಗುಣಿತ ಹೇಳೋದಿಕ್ಕೇ ಬರೋದಿಲ್ಲ ಅಂದಿದ್ದೇ, ಮೂಗು ಹಿಡಿದು ಕೆನ್ನೆಗೆರೆಡು ಬಾರಿಸೋ ಮರಿ ಅಂದರು. ಗೊತ್ತಾಗದೇ ಸುಮ್ಮನೇ ನಿಂತಿದ್ದವನಿಗೆ ಮೇಷ್ಟರೇ ಪಕ್ಕದಲ್ಲಿದ್ದ ಅಕ್ಕನನ್ನು ತೋರಿಸಿಕೊಡಲು ಹೇಳಿದರು. ಎಡಗೈಯಲ್ಲಿ ಅವರ ಮೂಗು ಹಿಡಿದು ಬಲಗೈಯಿಂದ ಆಕಡೆ ಕೆನ್ನೆಗೊಂದು ಈ ಕಡೆ ಕೆನ್ನೆಗೊಂದು, ಹಾಂ ಹಂಗೇ!! ಎಲ್ಲರಿಗೂ ಬಾರಿಸು ನೋಡಾಣಾ ಅಂದರು. ಅವತ್ತು ಶಾಲೆಯ ಬೇಸರವೆಲ್ಲ ಹೋಗಿ ಎಲ್ಲರಿಗೂ ಮೂಗು ಹಿಂಡಿ ಒಂದು ಸುತ್ತು ಕೆನ್ನೆ ಸವರಿ ಬಂದಿದ್ದಾಯ್ತು. ನನ್ನ ಎರಡುಪಟ್ಟು ಎತ್ತರವಿದ್ದ ಮಾಧ್ಯಮಿಕ ಶಾಲೆಯ ಎಲ್ಲರೂ ಸ್ವಯಂಪ್ರೇರಣೆಯಿಂದ ತಲೆಬಾಗಿಸಿ ನಾನು ಮೂಗು ಹಿಂಡುವುದಕ್ಕೂ, ಕೆನ್ನೆ ಸವರುವುದಕ್ಕೂ ಸಹಾಯ ಮಾಡಿದ್ದರು. ದೊಡ್ಡಪ್ಪನ ಮಗಳು ಈಗಲೂ ಆ ಸ್ಕೂಲಿನ ಘಟನೆಯನ್ನು ಮರೆತಿಲ್ಲ! ದಿನಾ ಹೊತ್ಕಂಡ್ ಹೋಗದಲ್ಲದೇ ಕೆನ್ನೆಗೆ ಏಟೂ ಕೊಟ್ಟಿದ್ದ ಗುಂಡೂರಾಯ ಅಂತಾಳೆ ಸಿಕ್ಕಾಗಲೆಲ್ಲಾ.
ದಿನವಿಡೀ ನನಗೆ ಶಾಲೆಯಲ್ಲಿ ಉಪ್ಪಿಟ್ಟಿನದೇ ನೆನಪು. ಅದೇ ನೆನಪನ್ನು ಉಳಿಸಿಕೊಂಡು ಸಂಜೆ ಖುಷಿಯಾಗಿ ಮನೆಗೆ ಬಂದೆ.
ಎಲ್ಲಿ ಉಪ್ಪಿಟ್ಟು? ಅಕ್ಕನನ್ನು ಕೇಳಿದರೆ ತಕ್ಷಣ ಬಂದು ರಾಗಿ ಮುದ್ದೆಯನ್ನು ಮುಂದೆ ಹಿಡಿದು ತುತ್ತು ತಿನಿಸಲು ಪ್ರಯತ್ನಿಸಿದರು. ʼಅದಿರಲಿ, ಉಪ್ಪಿಟ್ಟು ಎಲ್ಲಿ?ʼ ನನ್ನ ಪ್ರಶ್ನೆ. ತಿಂದು ನೋಡು ಇದನ್ನ ಅನ್ನುತ್ತಾ ಅಕ್ಕ ಒಂದು ತುತ್ತು ಬಾಯಲ್ಲಿ ಇರಿಸಿಯೇ ಬಿಟ್ಟರು.
ರಾಗಿ ಮುದ್ದೆಯೇ ಆದರೂ ಬರೀ ಮುದ್ದೆಯಲ್ಲ. ಅದಕ್ಕೆ ಉಪ್ಪು ಮೆಣಸಿನಕಾಯಿ, ಹುಣಸೆ, ಜೀರಿಗೆ ಬೆಳ್ಳುಳ್ಳಿ ಸೇರಿಸಿ ಅಡುಗೆ ಮನೆಯ ಒರಳುಗಲ್ಲಿನಲ್ಲಿ ಕುಟ್ಟಿ ಪುಡಿ ಮಾಡಿ ಅದಕ್ಕೆ ಬೆಳಿಗ್ಗೆಯೇ ಮಾಡಿಟ್ಟು ತಣ್ಣಗಾಗಿದ್ದ ತಂಗುಳು ಮುದ್ದೆಯನ್ನೂ ಸೇರಿಸಿ ರುಬ್ಬಿದ್ದರು. ಹೊಸ ರುಚಿ ಅನಿಸಿದ್ದರಿಂದ ಅದನ್ನೇ ತಿನ್ನುತ್ತಾ ಮುಂದುವರಿದೆ. ʼಮತ್ತೆ ಉಪ್ಪಿಟ್ಟು?ʼ ಅಂದೆ. ಈಗ ತಿಂದಿದ್ದೇ ಉಪ್ಪಿಟ್ಟು, ಹಿಂದೆಲ್ಲಾ ರಾತ್ರಿ ಅಡುಗೆ ಮಾಡುವಾಗಲೇ ಜಾಸ್ತಿ ಮುದ್ದೆ ಮಾಡಿಟ್ಟು, ಬೆಳಗಿನ ಹೊತ್ತು ಹಿಂಗೇ ಉಪ್ಪಿಟ್ಟು ಮಾಡ್ತಿದ್ದರು, ಅದೇ ಆಗೆಲ್ಲಾ ತಿಂಡಿ, ಗೊತ್ತಾ? ಹಿಟ್ಟು ತಿಂದವರು ಗಟ್ಟಿಯಾಗ್ತಾರಂತೆ ಅಂದರು ಅಕ್ಕ.
ಅದು ಹೇಗೋ ಆ ಒಂದು ಶೈಕ್ಷಣಿಕ ವರ್ಷ ಕಳೆಯಿತು. ಸೋದರ ಮಾವ ಒಬ್ಬರು ಬಂದು ಮತ್ತೆ ಅಮ್ಮನ ಊರಿಗೆ ಕರೆದುಕೊಂಡು ಬಂದರು. ಆಮೇಲೆ ಅಕ್ಕನೂರಿನ ಕೆಜಿ ಕ್ಲಾಸು ಬೇಡವೇ ಬೇಡವೆಂದು ನನ್ನದೇ ಸ್ವಂತದ್ದಾಗಿದ್ದ ಅಮ್ಮನೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೇ ಸೇರಿಕೊಂಡೆ. ಅಕ್ಕನ ಊರಿನಲ್ಲಿ ಎಲ್ ಕೆಜಿ ಕ್ಲಾಸಿಗೆಂದು ಇದ್ದ ಒಂದು ವರ್ಷದಲ್ಲಿ ಹೆಚ್ಚು ಹಿತವೆನಿಸಿದ್ದು ರಾಣಿ ಮೇಡಮ್ ಮತ್ತೆ ಅಕ್ಕನ ಈ ಉಪ್ಪಿಟ್ಟು ಎರಡೇ!
ಈಗ ಮಗಳಿಗೆ ಇವತ್ತು ಅಡುಗೆ ಏನ್ ಮಾಡೋದಮ್ಮಾ ಅಂತ ಕೇಳಿದರೆ ಸಾಕು. ತಕ್ಷಣ “ಮುದ್ದೆ!” ಅಂತ ಏರುದನಿಯಲ್ಲಿ ಚೀರುತ್ತಾ ಒತ್ತಾಯಿಸ್ತಾಳೆ. ರಾಗಿಹಿಟ್ಟಿನ ಸರಬರಾಜು ಇರದೇ, ಅವಳಿಗೆ ಅಡುಗೆಗೆ ಏನು ಅಂತ ಕೇಳುವುದನ್ನೇ ಕಡಿಮೆ ಮಾಡಿಬಿಟ್ಟಿದ್ದೇವೆ. ಇಲ್ಲಾಂದ್ರೆ ತಿಂಗಳಿಗೆ ಮೂರು ಟ್ರಿಪ್ಪು ಪಿಟ್ಸ್ ಬರ್ಗಿಗೊ, ನ್ಯೂಯಾರ್ಕಿಗೋ ಇಂಡಿಯನ್ ಸ್ಟೋರ್ ಹುಡುಕಿ ಪ್ರಯಾಣ ಮಾಡಬೇಕಾಗುತ್ತೆ!
******
(ಮುಂದುವರಿಯುವುದು)