ಭಯ

ಕಥೆ

ಭಯ

ಲಕ್ಷ್ಮೀದೇವಿ ಪತ್ತಾರ

Night jasmine flower in bright light. stock images

ಸಂಜನಾ ಬೆಳಗ್ಗೆದ್ದ ತಕ್ಷಣ ಪಾರಿಜಾತದ ಗಿಡದತ್ತ ಹೂ ತರಲು ಹೋದಳು. ಹೊತ್ತಾದರೆ ಹೂಗಳು ನೆಲಕ್ಕುರುಳಿ ಬಿಳುವುದೆಂದು ಹೂಬುಟ್ಟಿ ಹಿಡಿದು ಗಿಡದ ಬಳಿ ಹೋದಳು. ಆ ಹೂವೆ ಹಾಗೆ. ಅತಿಸೂಕ್ಷ್ಮವೂ ಅತ್ಯಾಕರ್ಷಕವೂ ಅಲ್ಲದೆ ರಾತ್ರಿ ಅರಳಿ ಬೆಳಗಾಗುವಷ್ಟರಲ್ಲಿ ನೆಲಕ್ಕೆ ಅಲಂಕಾರ ಮಾಡಿದಂತೆ ನೆಲದ ತುಂಬಾ ಅರಳಿ ಬೀಳುತ್ತಿದ್ದವು. ಕೆಲವಷ್ಟು ಗಿಡದ ಮೇಲೆಯೂ ಇರುತ್ತಿದ್ದವು. ಇನ್ನು ಪೂರ್ಣ ಬೆಳಕು ಹರಿಯುವ ಮುನ್ನವೇ ಅವನು ತಂದು ಬಿಡುತ್ತಿದ್ದಳು ಸಂಜನಾ. ಅಂದು ಸ್ವಲ್ಪ ಲೇಟಾಗಿ ಎದ್ದಿರುದರಿಂದ ದೌಡಾಯಿಸಿ ಹೋದಳು . ಗಾಳಿಗೆಲ್ಲಿ ಹೂಗಳೆಲ್ಲಾ ಬಿದ್ದುಬಡುವವೂ ಎಂದು ಅವಸರವಾಗಿ ಎಲೆಗಳ ಮೇಲಿನ ಹೂಗಳನ್ನು ಆಯ್ದುಕೊಂಡು ಬುಟ್ಟಿಗೆ ಹಾಕಿಕೊಂಡಳು. ಹೂಗಳೆಂದರೆ ಬಲು ಇಷ್ಟ ಸಂಜನಾಗೆ. ಗಿಡಗಳಿಗೆ ನೀರು ಹಾಕುವುದು, ಪೂಜೆಗೆ ಮತ್ತು ತನಗೂ ಹೂ ಕಿತ್ತು ತರುವುದು ಅವಳಿಗೆ ಅಚ್ಚುಮೆಚ್ಚಿನ ಕೆಲಸ. ಚೆಂದದ ಹೂಗಳನ್ನು ನೋಡುತ್ತಾ ಇರಬೇಕಾದರೆ ಅವುಗಳ ಮೇಲೆ ಸಣ್ಣದಾದ ಬಿಳಿ ಜೇಡ ಹರಿದಾಡಿದ್ದು ಕಾಣಿಸಿತು. ಅದನ್ನು ತೆಗೆಯಲು ಹೋದಾಗ ಅದು ಕೆಳಗೆ ಜಾರಿತು. ಹೂ ಸರಿಸಿ ಬುಡದಲ್ಲಿದ್ದ ಜೇಡರಹುಳು ತೆಗೆಯುವಷ್ಟರಲ್ಲಿ ಹೂಗಳ ಬುಡದಲ್ಲಿದ್ದ ಅತಿ ಸೂಕ್ಷ್ಮವಾದ ಸಣ್ಣ ಸಣ್ಣ ಹುಳುಗಳು ಹರಿದಾಡುತ್ತಿರುವದನ್ನು ಕಂಡಳು. ಅಂತಹ ಹುಳುಗಳನ್ನು ಈ ಮೋದಲು ಅವಳು ಗಮನಿಸಿರಲಿಲ್ಲ.ಅವು ಅವಳ ಕೈಮೇಲೆ ಸರಸರ ಏರಲಾರಂಭಿಸಿದವು . ಅಷ್ಟು ಸಣ್ಣ ಹುಳುಗಳಾಗಿದ್ದರು ಅವು ಹಾರುತ್ತಿದ್ದವು. ನಂತರ ಅವಳ ಮೈ ಮೇಲೆಲ್ಲಾ ಹರಿದಾಡಲಾರಂಭಿಸಿದವು. ಅವಳು ಆತಂಕದಿಂದ ಬುಟ್ಟಿ ದೇವರ ಜಗುಲಿ ಮೇಲೆ ಇಟ್ಟವಳೆ ತನ್ನ ಬಟ್ಟೆ ಜಾಡಿಸಲು ಆರಂಭಿಸಿದಳು .ಮೈಯೆಲ್ಲಾ ತುರುಸಲಾರಂಭಿಸಿತು .ಜೊತೆಗೆ ಬೊಬ್ಬೆಗಳು ಏಳಲಾರಂಭಿಸಿದವು. ಸ್ನಾನ ಮಾಡಿದರು ಗುಳ್ಳೆಗಳು ಹೋಗಲಿಲ್ಲ. ಎಣ್ಣೆ ಸವರಿದರು ಹೋಗಲಿಲ್ಲ .ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಬೊಬ್ಬೆಗಳು ದೊಡ್ಡವಾಗಿ ನೀರುಗುಳ್ಳೆಯಂತಾದವು .

ತಡಮಾಡದೇ ಸ್ಕಿನ್ ಡಾಕ್ಟರ್ ಬಳಿ ಕರೆದೊಯ್ದರು. ಇನ್ಫೆಕ್ಷನ್ ಆಗಿದೆ ಎಂದು ಡಾಕ್ಟರ್ ಔಷದಿ, ಮುಲಾಮು ಬರೆದುಕೊಟ್ಟರು. ಆದರೂ ವಾರ ಕಳೆದರೂ ಗುಳ್ಳೆಗಳು ಮಾಯಲಿಲ್ಲ .ಯಾವುದನ್ನೇ ಆಗಲಿ ಮನಸ್ಸಿಗೆ ಬೇಗ ಹಚ್ಚಿಕೊಳ್ಳುವ ಸಂಜನಾ ಅಂಜಿಕೆ ಆತಂಕದಿಂದ ಕುಗ್ಗಿ ಹೋದಳು. ತಂದೆ-ತಾಯಿಯರು ಗಾಬರಿಗೊಂಡರು. ಧಾರ್ಮಿಕ ಸ್ವಭಾವದವರಾದ ಅವರು ಇದು ದೇವರ ಶಾಪವು ಏನು. ನಾವೇನಾದರೂ ತಪ್ಪು ಮಾಡಿರಬೇಕು ಅದಕ್ಕೆ ನಮ್ಮ ಮಗಳಿಗೆ ಶಿಕ್ಷೆಯಾಗಿದೆ. ಇರುವುದು ಒಬ್ಬಳೇ ಒಬ್ಬಳು ಮಗಳು .ಅವಳಿಗೆ ಏನಾದರೂ ಆದರೆ ಅದು ನಮಗೆ ಆದಂತೆ ಎಂದು ಚಡಪಡಿಸಿದರು. ಅವಳ ತಂದೆ ತಾಯಿ ಕೊನೆಗೆ ಸ್ವಾಮಿಯರ ಬಳಿ ಕೇಳಿಬರಲು ನಿರ್ಧರಿಸಿದರು. ಮರುದಿನ ರವಿವಾರ ಸ್ವಾಮಿಯರ ಬಳಿ ಓಡಿ ಹೋದರು.ಆದದ್ದು ತಿಳಿಸಿದ ದಂಪತಿಗಳು ಹೀಗೇಕಾಗಿದೆ ನಮ್ಮ ಮಗಳಿಗೆ , ಪರಿಹಾರ ಏನು ಎಂದು ವಿಚಾರಿಸಲು ಗಣಪತಿ ಆಚಾರ್ಯರು “ಇದು ಖಚಿತವಾಗಿಯೂ ನಾಗದೋಷ ನೀವು ಕುಕ್ಕೆ ಗೆ ಹೋಗಿ ಬನ್ನಿ ಎಲ್ಲಾ ಪರಿಹಾರ ಆಗುತ್ತೆ “ಎಂದು ಹೇಳಿದರು. ಸರಿಯೆಂದು ಕುಕ್ಕೆಗೆ ಪ್ರಯಾಣಮಾಡಿದರು

ಸಂಜನಾಳ ತಂದೆ ನಾಗರಾಜ ,ತಾಯಿ ರತ್ನಮ್ಮ. ಹೋಗಿ ಹರಕೆ ತೀರಿಸಿ ಅಂದು ರಾತ್ರಿ ಅಲ್ಲೇ ಉಳಿದು ಮರುದಿನ ಸೇವೆಮಾಡಿ ಮನೆಗೆ ಬಂದರು .ಬಂದು ನೋಡಿದರೆ ಗುಳ್ಳೆಗಳ ಮಂಗಮಾಯ. ನಾಗರಾಜ ರತ್ನಮ್ಮಗಂತು ಹೇಳಲಾಗದಷ್ಟು ಸಂತೋಷ. ಸ್ವಾಮೇರ ಶಕ್ತಿ, ದೇವರ ಮಹಿಮೆ ಎಲ್ಲರ ಮುಂದೆ ಹೇಳಿ ಹೊಗಳಿದ್ದೆ ಹೊಗಳಿದ್ಧು. ಆದರೆ ನಿಜಕ್ಕೂ ಆದದ್ದೆ ಬೇರೆ .ಸಂಜನ ಯಾವುದನ್ನೇ ಆಗಲಿ ಬಹಳ ದೀರ್ಘವಾಗಿ ವಿಚಾರ ಮಾಡುತ್ತಿದ್ದಳು . ಓದುವಾಗ ನೋಡುವಾಗ ,ಕುಲಂಕುಶವಾಗಿ ತಿಳಿದುಕೊಳ್ಳುತ್ತಿದ್ದಳು.

ಇತ್ತೀಚಿಗೆ ವಾಟ್ಸಾಪ್ ಫೇಸ್ಬುಕ್ನಲ್ಲಿ ಬರುವ ಆರೋಗ್ಯ ಸೌಂದರ್ಯವರ್ಧಕಗಳ ಬಗ್ಗೆ ಓದುವುದು ಹೆಚ್ಚಾಗಿತ್ತು. 21ರ ಹರೆಯದ ಸಂಜನಾಗೆ ಸಹಜವಾಗಿ ವಯೋಧರ್ಮಕ್ಕೆ ತಕ್ಕಂತೆ ಮುಖದ ಮೇಲೆ ಮೊಡವೆ ಬಂದಿದ್ದವು. ಹೀಗಾಗಿ ದೇಹ ಸೌಂದರ್ಯದ ಬಗ್ಗೆ ತಲೆಕೆಡಿಸಿಕೊಂಡು ಅತಿ ವಿಷಯ ವಿಷಕ್ಕೆ ಸಾಮಾನ ಎಂಬಂತೆ ಸ್ವಲ್ಪ ಮೊಡವೆಯಾದರೂ ಅತಿಯಾಗಿ ಯೋಚಿಸುತ್ತಿದ್ದಳು. ಮೊದಲೇ ಸೈನ್ಸ್ ಸ್ಟೂಡೆಂಟ್. ಪಾರಿಜಾತ ಗಿಡದಲ್ಲಿನ ಸಣ್ಣ ಸಣ್ಣ ಹುಳಗಳು ದಿನಾ ಆ ಗಿಡದಲ್ಲಿ ಇರುತ್ತಿದ್ದವು.ಹೂವು ಕೀಳಿದವರ ಮೈಮೇಲೆ ಏರುತ್ತಿದ್ದವು. ಅದನ್ನು ಸಂಜನಾ ಮಬ್ಬುಬೆಳಕಿನಲ್ಲಿ ಗಮನಿಸಿರಲಿಲ್ಲ .ಆದರೆ ಆ ದಿನ ಸ್ವಲ್ಪ ತಡವಾಗಿದ್ದರಿಂದ ಜೇಡರ ಹುಳು ವಿನ ಕಾರಣದಿಂದ ಅವಳ ಗಮನಕ್ಕೆ ಬಂತು.ಆ ಹುಳುಗಳು ಮೇಲೇರಿ ಏನೇನು ಆಗಬಹುದು ಎಂದು ಅತಿಯಾಗಿ ಯೋಚಿಸುತ್ತಾ ಕಳೆದ ಪರಿಣಾಮ ಅವಳ ದೇಹದ ಮೇಲೂ ಆ ರೀತಿಯ ಪರಿಣಾಮ ಬೀರಿತ್ತು. ಅವಳ ಭಾವನೆ ತೀವ್ರವಾಗಿ ಅವಳ ಯೋಚನೆಯಂತೆ ಘಟಿಸಿತ್ತು. ಯಾವಾಗ ಕುಕ್ಕೆಗೆ ಹೋದರು ಅಲ್ಲೇ ದೇವರ ಮೇಲಿನ ಅತಿಯಾದ ನಂಬಿಕೆಯಿರುವದರಿಂದ ರೋಗ ಹೋಗುವದೆಂದು ಪೂರ್ಣವಾಗಿ ನಂಬಿದಳು.ಅದೂ ಪರಿಣಾಮ ಬೀರಿತು.ಅವಳು ಆರಾಮ ವಾದಳು. ಭಯದೊಂದಿಗೆ ಬಂದ ರೋಗ ಭಯ ಹೋದೊಡನೆ ಹೊರಟುಹೋಗಿತ್ತು ಆದರೆ ಇದು ಅವಳಿಗೆ ಗೊತ್ತಾಗಿದೆ ತನ್ನ ಮೆಚ್ಚಿನ ಪಾರಿಜಾತ ಹೂವುಗಳನ್ನು ತರುವುದನ್ನೇ ಅವಳು ಬಟ್ಟುಬಿಟ್ಟಳು.

**************************************

2 thoughts on “ಭಯ

  1. ಒಳ್ಳೆಯ ಮಾರಲ್ ಹೇಳಿದ್ದೀರಿ ಮೇಡಂ…. ತುಂಬಾ ಚೆನ್ನಾಗಿದೆ…

    1. ಹೃತ್ಪೂರ್ವಕ ಧನ್ಯವಾದಗಳು ನಿಮ್ಮ ಸದಾಭಿಪ್ರಾಯಕ್ಕೆ

Leave a Reply

Back To Top