ಅಂಕಣ ಬರಹ
ಕಳೆದುಕೊಂಡದ್ದು ಸಮಯವಾದರೆ
ಹುಡುಕಲೂ ಆಗದು
(ಟೈಂ ಬ್ಯಾಂಕ್ ಅಕೌಂಟ್ ಮೆಂಟೇನನ್ಸ್- ಹೀಗೆ ಮಾಡಿ ನೋಡಿ )
ಟೈಂ ನೋಡೋಕೂ ಟೈಂ ಇಲ್ಲ. ಎಲ್ಲಾ ಟೈಮಿನೊಳಗೂ ಮೈ ತುಂಬ ಕೆಲಸ. ಎಲ್ಲಿ ಕುಂತರೂ ಕೆಲಸ ಕೈ ಮಾಡಿ ಕರಿತಾವ..ಮೈ ಕೆರೆದುಕೊಳ್ಳಲೂ ಪುರುಸೊತ್ತಿಲ್ಲದಂಗ ಕೆಲಸ ಮಾಡಿದರೂ ಕೆಲಸ ಮುಗಿತಿಲ್ಲ. ಆದರೂ ಮಾಡಿದ ಕೆಲಸ ಒಂದೂ ನೆಟ್ಟಗಾಗ್ತಿಲ್ಲ ಎನ್ನುವದು ಅನೇಕರ ಗೊಣಗಾಟ. ಇಂಥ ಟೈಮಿನೊಳಗ ಕನಸು ಬೇರೆ ಕಾಡ್ತಾವ. ಕನಸು ಕಾಣಬೇಕೋ ನೆಟ್ಟಗಾಗುವಂಗ ಕೆಲಸ ಮಾಡೂ ರೀತಿನ ಬದಲಿಸಬೇಕೋ ಏನೂ ತಿಳಿತಿಲ್ಲ. ಎಲ್ಲಾ ಗೊಂದಲಮಯ. ಈ ಗೊಂದಲಕ್ಕೆ ಮಂಗಳಾರತಿ ಹಾಡಬೇಕಂದರೆ ಇದನ್ನು ಗಮನವಿರಿಸಿ ಓದಿ ಇದರಲ್ಲಿಯ ನಿಯಮ ಪಾಲಿಸಿ.ಕೆಲಸಕ್ಕೆ ಉತ್ತಮ ಫಲ ತಾನೆ ಸಿಗುತ್ತೆ ನೋಡಿ..
ಕಾಲ ಮಿತ್ರನೂ ಹೌದು ಶತ್ರುವು ಹೌದು
ಅರೆ ಅದ್ಹೇಗೆ ಮಿತ್ರ ಶತ್ರು ಆಗುವದು ಸಾಧ್ಯವಿದೆ ಅಂತಿರೇನು? ಕಾಲವನ್ನು ನಾವು ಸಕಾರಾತ್ಮಕವಾಗಿ ಉಪಯೋಗಿಸಿಕೊಂಡರೆ ಮಾತ್ರ ಮಿತ್ರ ಇಲ್ಲದೇ ಹೋದರೆ ಶತ್ರು. ಬದುಕನ್ನು ನಂದನವನದಂತೆ ಸುಂದರಗೊಳಿಸುವ ದಿವ್ಯಶಕ್ತಿ ಮತ್ತು ಬಿರುಗಾಳಿಯಂತೆ ಹಾಳುಗೆಡುವುವÀ ದೈತ್ಯಶಕ್ತಿಯೂ ಇದಕ್ಕಿದೆ. ಕಾಲವನ್ನು ತಡೆಯೋರು ಯಾರು ಇಲ್ಲ. ಕಾಲ ಸಮುದ್ರದ ಅಲೆಯಂತೆ ಯಾರಿಗೂ ಕಾಯಲ್ಲ. ಕಾಲದ ಕಾಲಿಗೆ ಸಿಕ್ಕು ಹಲುಬದಿರಿ. ಚಿರದುಃಖಿಗಳಾಗದಿರಿ. ಅದನ್ನು ನೀವು ನಿಮ್ಮ ಆಪ್ತಮಿತ್ರನನ್ನಾಗಿಸಿಕೊಳ್ಳಿ. ಕಾಲವನ್ನು ಉಪೇಕ್ಷಿಸಿದರೆ ಅದು ನಮ್ಮನ್ನೂ ಉಪೇಕ್ಷಿಸುತ್ತದೆ. ಎನ್ನುವದು ನೆನಪಿರಲಿ ಕಾಲವನ್ನು. ಗೌರವಿಸಿದರೆ ನಮ್ಮನ್ನು ಗೌರವಿಸುವ ಕಾಲ ಬರುತ್ತೆ. ವ್ಯರ್ಥವಾಗಿ ವ್ಯಯ ಮಾಡಿದರೆ ನಮ್ಮ ಕಾಲುಗಳನ್ನೇ ಇಲ್ಲದಂತೆ ಮಾಡುತ್ತೆ. ಸದುಪಯೋಗಪಡಿಸಿಕೊಂಡರೆ ಸುಖದ ಉಡುಗೊರೆಯಾಗುತ್ತೆ. ಹೀಗೆ ಉಡುಗೊರೆಯಾಗಿಸಿಕೊಳ್ಳಲು ಕಳೆದು ಹೋದ ಸಮಯ ಒಡೆದ ಮುತ್ತಿನಂತೆ ಮರಳಿ ಮತ್ತೆಂದೂ ಬಾರದು ಎಂಬುದು ಮನದಲ್ಲಿರಲಿ.
ಕೈಯಲ್ಲಿ ಹಿಡಿದುಕೊಂಡರೆ ಕಾಲಡಿಯಲ್ಲಿ ಬೀಳುತ್ತೆ.
ಕಾಲವನ್ನು ಕೊಳ್ಳುವ ಶ್ರೀಮಂತ ಜಗತಿನಲ್ಲಿ ಇನ್ನೂ ಹುಟ್ಟಿಲ್ಲ. ಹಣದಿಂದ ಜಗತ್ತಿನ ಎಲ್ಲ ವೈಭೋಗಗಳನ್ನು ನಮ್ಮದಾಗಿಸಿಕೊಂಡು ಮೆರೆಯಬಹುದು. ಆದರೂ ಕಾಲವನ್ನು ಕೊಳ್ಳುವ ಶಕ್ತಿಯನ್ನು ಕಾಲ ಜಗತ್ತಿನ ನಂಬರ್ ಒನ್ ಶ್ರೀಮಂತನಿಗೂ ಕೊಟ್ಟಿಲ್ಲ.ಇಂಥ ಶಕ್ತಿಯುತ ಕಾಲವನ್ನು ಅಂಗೈಯಲ್ಲಿ ತಡೆದು ಹಿಡಿದಿಟ್ಟುಕೊಂಡರೆ ನಮ್ಮ ಕಾಲಡಿಯಲ್ಲಿ ಬೀಳುತ್ತೆ. ಹಿಡಿದಿಟ್ಟುಕೊಳ್ಳುವ ಶಕ್ತಿ ಮನಸ್ಸಿಗೆ ಮಾತ್ರ ಇದೆ.ಹೀಗೆ ಮನಸ್ಸು ಮಾಡಿದರೆ ಕಾಲನಿಗೆ ಯಜಮಾನರಾಗಬಹುದು. ಯಜಮಾನರಾಗಲು ಶಿಸ್ತು ಸಂಯಮವೆಂಬ ಹಣ ಬೇಕೇ ಬೇಕು. ದಿನದ ಪ್ರತಿ ಕ್ಷಣ ಹೇಗೆ ಕಳೆಯಬೇಕೆಂಬ ವೇಳಾಪಟ್ಟಿ ಹಿಂದಿನ ದಿನದ ರಾತ್ರಿಯೇ ಸಿದ್ಧವಾಗಿರಬೇಕು ನೀವು ಹಾಕಿಕೊಂಡೆ ವೇಳಾ ಪಟ್ಟಿಯ ಅನುಷ್ಟಾನದಲ್ಲಿ ಕೆಲವು ಅಡೆತಡೆಗಳು ಬಂದೇ ಬರುತ್ತವೆ ಅವಗಳನ್ನು ಜಾಣ್ಮೆಯಿಂದ ಪರಿಹರಿಸಿ..ಕಾಲದ ಸದುಪಯೋಗಪಡಿಸಿಕೊಂಡವನೇ ಜಾಣ. ಅವನೇ ಗೆಲುವಿನ ಸರದಾರ. ಸಮಯ ಸರಿಯಾಗಿ ಉಪಯೋಗಿಸುತ್ತ ಹೋದ ಹಾಗೆ ಆತ್ಮವಿಶ್ವಾಸದ ಬಲ ಹೆಚ್ಚುತ್ತೆ. ಆತ್ಮವಿಶ್ವಾಸವಿರುವವನು ಸಾಧನೆಗೆ ಬೇಗ ಹತ್ತಿರವಾಗುತ್ತಾನೆ. ದಿನದ ಒಟ್ಟು ಕಾಲವನ್ನು ಅಂಗೈಯಲ್ಲಿಟ್ಟುಕೊಂಡು ಗುರಿ ಸಾಧನೆಗೆ ಮೀಸಲಿಟ್ಟು ಕಾರ್ಯ ಪ್ರವೃತ್ತರಾಗಬೇಕು. ಹೀಗೆ ಮಾಡುವದರಿಂದ ಬೆರಗು ಸೃಷ್ಟಿಸಬಹುದು.
ಕಾಲವನ್ನು ನಿಮಗಿಷ್ಟ ಬಂದಂತೆ ಆಡಿಸೋ ಶಕ್ತಿ ನಿಮಗಿದೆ.
ವಿದ್ಯಾರ್ಥಿ ದಿಸೆಯಲ್ಲಿಯೇ ವೇಳಾ ಪಟ್ಟಿಯ ಅನುಸರಣೆಯ ರೂಡಿ ಅಂಟಿಸಿಕೊಳ್ಳಿ. ಸೋಮಾರಿತನದ ರೋಗದಿಂದ ಮುಕ್ತವಾದರೆ ಮಾತ್ರ ಕಾಲ ನಿಮ್ಮ ಕೈಗೆ ಸಿಗೋದು. ಸೋಮಾರಿತನಕ್ಕೆ ಮತ್ತು ಕಾಲಕ್ಕೆ ಎಣ್ಣೆ ಸೀಗೆಕಾಯಿ ಸಂಬಂಧ. ಕಾಲ ಎಲ್ಲ ಸಂಪತ್ತನ್ನೂ ಮೀರಿದ್ದು. ಈ ಸಂಪತ್ತಿನ ಒಡೆಯರಾಗಬೇಕೆಂದರೆ ಶ್ರದ್ಧೆ ಮತ್ತು ಪರಿಶ್ರಮದ ಅವಶ್ಯಕತೆಯಂತೂ ಇದ್ದೇ ಇದೆ. ಗುರಿಯ ಗೆರೆ ಮುಟ್ಟೋಕೆ ಕಾಲನ ಸಾಥ್ ಬೇಕೆ ಬೇಕು. ತಿಥಿ ಮಿತಿ ನೋಡದೆ ಒಂದೇ ಸಮನೆ ಓಡಬೇಕು. ಯಾವುದೇ ರಸ್ತೆಯಲ್ಲಿ ಸುಮ್ಮನೆ ಗೊತ್ತು ಗುರಿಯಿಲ್ಲದೆ ನಡೆಯುವದನ್ನು ಬಿಟ್ಟು ಗುರಿ ಯಾವುದು? ಎಷ್ಟು ಸಮಯದವರೆಗೆ ಅದರ ಜೊತೆ ಕಾಲು ಹಾಕಬೇಕು ಎನ್ನುವದನ್ನು ಮೊದಲೇ ನಿರ್ಧರಿಸಬೇಕು.
ಹಿತ ಚಕ್ರದೊಂದಿಗೆ ಕಾಲು ಹಾಕಿ
ಬೇರೆ ಎಲ್ಲರಿಗೂ ಹೊಂದಿಕೆಯಾಗುವಂತೆ ತನ್ನನ್ನ್ನು ಕತ್ತರಿಸಿಕೊಳ್ಳುವವÀನು ತನ್ನ ಸ್ವಂತ ಆಕಾರವನ್ನೇ ಕಳೆದುಕೊಳ್ಳುತ್ತಾನೆ. ಎಂಬುದೊಂದು ನುಡಿಮುತ್ತು. ನಿನ್ನ ಸ್ಡಂತ ಆಸಕ್ತಿಗಳ ಬಗ್ಗೆ ಯೋಚಿಸಿದ್ರೆ ಪರರ ಹಿತಾಸಕ್ತಿಗಳನ್ನು ಚೆನ್ನಾಗಿ ಪೋಷಿಸಬಲ್ಲಿರಿ. ಇದೇ ಹಿತಚಕ್ರ . ಈ ಹಿತಚಕ್ರದೊಂದಿಗೆ ಕಾಲು ಹಾಕಿದರೆ ಕಾಲದ ಮೌಲ್ಯ ನಿಮಗೆ ಪೂರ್ಣ ದಕ್ಕುತ್ತದೆ. ಉತ್ತಮ ನಾಯಕರು ಹುಟ್ಟಿ ಬಂದವರಲ್ಲ. ಕಾಲನ ಸದುಪಯೋಗದಿಂದ ರೂಪಗೊಂಡವರು. ಎಂಬ ಮಾತು ಮನದಲ್ಲಿರಲಿ. ಬೇರೆಯವರು ನಿಮ್ಮ ಬಗ್ಗೆ ಅದೇನು ಅಂದುಕೊಳ್ಳುತ್ತಾರೊ ಎಂಬ ಯೊಚನೆಯಲ್ಲಿ ಬೀಳದಿರಿ. ನಿಮ್ಮಲ್ಲಿ ಇಲ್ಲದುದುರ ಬಗ್ಗೆ ಕೊರಗುವ ಬದಲು ನಿಮ್ಮಲ್ಲಿರುವ ಪ್ರತಿಭೆಯ, ಸದ್ಗುಣಗಳನ್ನು ಪೋಷಿಸಿ ಬೆಳೆಸಲು ಕಾಲ ಕಳೆಯಿರಿ. ಆಶಾರಹಿತ ಭಾವವೇ ಬೇಸರ. ಆಯಾಸವೆನಿಸಿದಾಗ ವಿರಾಮಕ್ಕೆ ಜಾಗ ಮಾಡಿಕೊಡಿ ಹೊರತು ಬೇಸರಕ್ಕಲ್ಲ.
ಇಂದು ನಿಮ್ಮ ಕೈಯಲ್ಲಿದೆ.
ಸಾಧನೆಗೆ ಬೇಕಾಗಿರುವ ಮೊದಲ ಭಾವ ಕನಸು. ಕಾಲ ಮತ್ತು ಕನಸಿನ ನಡುವೆ ಅವಿನಾಭಾವ ಸಂಬಂಧವುಂಟು. ಕಣ್ಣಲ್ಲಿ ಕನಸಿಲ್ಲದಿದ್ದರೆ ಹೋಗುವ ದಾರಿ ತಿಳಿಯುವದಿಲ್ಲ. ಸಾಧನೆಯಲ್ಲಿ ಕನಸು ಪ್ರಥಮ ಹೆಜ್ಜೆ. ಮೊದಲ ಹೆಜ್ಜೆ ಗಟ್ಟಿಯಾಗಿರಬೇಕು. ದಿಟ್ಟವಾಗಿರಬೇಕು. ಆತಂಕವನು ದೂರ ಸರಿಸಿ ಕಂಡ ಕನಸಿಗೆ ಶಕ್ತಿ ಸಾಮಥ್ರ್ಯ ಕೊಡಬೇಕಾದರೆ ನಿನ್ನೆ ನಾಳೆಗಳ ಚಿಂತೆಯಲ್ಲಿ ಇಂದನ್ನು ಹಾಳು ಮಾಡಿಕೊಳ್ಳದಿರಿ.ನಿನ್ನೆ ಇತಿಹಾಸ ನಾಳೆ ನಿಗೂಢ ಇಂದು ಉಡುಗೊರೆ ಅದನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುವ ಯೋಜನೆ ಹಾಕಿಕೊಳ್ಳಿ ಯೋಜನೆ ಅನ್ನುವದು ಮಾನಸಿಕ ದೂರ ದೃಷ್ಟಿ. ಪ್ರತಿ ಕೆಲಸಕ್ಕೂ ಲೆಕ್ಕಾಚಾರ ಹಾಕಿ ತರ್ಕಬದ್ಧವಾಗಿ ಯೋಚಿಸಿ ಸಮಯದ ಸದುಪಯೋಗದ ಕುರಿತು ಮೈಂಡ್ ಟ್ಯೂನಿಂಗ್(ಮೆದುಳು ಹದಗೊಳಿಸುವದು) ಮಾಡಿಕೊಂಡರಂತೂ ಭಯ ಉದ್ವೇಗ ಖಿನ್ನತೆಗಳು ಮಾಯವಾಗುತ್ತವೆ. ಕಾಲದ ಹಗ್ಗವನ್ನು ಗಟ್ಟಿಯಾಗಿ ಹಿಡಿದು, ಹಿಡಿದ ಕಾರ್ಯದಲ್ಲಿ ತಲ್ಲೀನವಾದರೆ ವಿಜಯದ ಮಾಲೆ ನಿಮ್ಮ ಕೊರಳನ್ನು ಹುಡುಕಿಕೊಂಡು ಬರುತ್ತೆ.
ಕೆಲವೊಂದಕ್ಕೆ ಇಲ್ಲ ಅನ್ನಿ
ಸಮಯವನ್ನು ರಬ್ಬರ ತರ ಹಿಗ್ಗಿಸೋಕೂ ಆಗಲ್ಲ ಕುಗ್ಗಿಸೋಕೂ ಆಗಲ್ಲ. ಒಂದು ದಿನಕ್ಕಿರೋದು 1440 ನಿಮಿಷ ಮಾತ್ರ. ಸಾಧಿಸಬೇಕಾದ ಗುರಿಗೆ ಈ ಸಮಯ ಸಾಕಾಗಲ್ಲ. ಅಂತಿಮವಾಗಿ ನಿಮ್ಮ ಸಮಯವನ್ನು ಹಾಳು ಮಾಡಲು ನಿಂತವರಿಗೆ ನಿರ್ದಾಕ್ಷಿಣ್ಯವಾಗಿ ಇಲ್ಲ ಎಂದು ಹೇಳಲು ಕಲಿಯಿರಿ. ದಾಕ್ಷಿಣ್ಯಕ್ಕೆ ಬಿದ್ದು ಅಮೂಲ್ಯ ಸಮಯ ಹಾಳು ಮಾಡಿಕೊಳ್ಳದಿರಿ. ನೀವು ಕೆಲಸ ಮಾಡುವ/ಓದುವ ಕೋಣೆಯಲ್ಲಿ ನನ್ನ ಸಮಯ ಅಮೂಲ್ಯ ಎಂದು ದೊಡ್ಡದಾಗಿ ಬರೆದು ಅಂಟಿಸಿ. ಸಮಯ ಪಾಲಿಸದವರ ಜೊತೆ ಅತಿಯಾದ ಸ್ನೇಹಬೇಡ. ಯಾರೋ ಯಾವುದೊ ಇಲ್ಲ ಸಲ್ಲದ ಕೆಲಸಕ್ಕೆ ಕರೆದರೆ ಇಲ್ಲ ಎನ್ನಲಾಗದೆ ಅವರ ಹಿಂದೆ ಕಾಲು ಎಳೆದುಕೊಂಡು ಹೊಗದಿರಿ. ನಿಮ್ಮ ಅತೀ ಜರೂರು ಕೆಲಸದ ಕಾರಣ ಹೇಳಿ ನಯವಾಗಿ ನಿರಾಕರಿಸಿ. ಹರಟೆ ತಡರಾತ್ರಿಯವರೆಗೂ ಹೊರಗೆ ತಿರುಗಾಡುವದು ಅಪರಿಚಿತ ವ್ಯಕ್ತಿಗಳೊಂದಿಗೆ ವಾಟ್ಸಪ್ ಫೇಸ್ ಬುಕ್ಗಳಲ್ಲಿ ಅನವಶ್ಯಕ ಚಾಟ್ ಮಾಡೋದು ಇವೆಲ್ಲವುಗಳಿಗೆ ಮುಲಾಜಿಲ್ಲದೆ ಇಲ್ಲ ಅನ್ನಿ.
ಕಲೆ ಕರಗತಗೊಳಿಸಿಕೊಳ್ಳಿ
ಸಮಯ ಆಭಾವದಿಂದ ಕೆಲಸದ ಒತ್ತಡ ಹೆಚ್ಚುತ್ತಿದೆ. ಅಂತ ಕಾರಣ ಹೇಳುವದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಬಹಳ ಕೆಲಸಗಳಲ್ಲಿ ತೊಡಗಿಸಿಕೊಂಡವರು ಎಲ್ಲ ಕೆಲಸಗಳನ್ನು ಮಾಡಿ ಮುಗಿಸುವಷ್ಟು ಸಮಯ ಹೊಂದಿರುತ್ತಾರೆ. ನೀವೊಂದು ಮಹಲು ಕಟ್ಟುವದಾದರೆ ಕೈತುಂಬ ಕೆಲಸವಿರುವ ವಾಸ್ತುಶಿಲ್ಪಿಯ ಬಳಿ ಹೋಗಿ. ಎನ್ನುವ ನುಡಿಮುತ್ತು ಸಮಯ ನಿರ್ವಹಣೆ ಒಂದು ಕಲೆ ಎನ್ನುವದನ್ನು ಸಾರಿ ಹೇಳುತ್ತೆ. ಸಮಯ ನಿರ್ವಹಣೆಯಲ್ಲಿ ಆದ್ಯತೆಗೆ ಪ್ರಥಮ ಆದ್ಯತೆಯಿದೆ. ಅದರಲ್ಲಿ ತುರ್ತು ಮತ್ತು ಮಹತ್ವದ್ದು. ಅಂತ ಎರಡು ಪ್ರಕಾರ ತುರ್ತು ಅನಿವಾರ್ಯವಾದ ಕೆಲಸಗಳಿದ್ದರೆ ಶ್ರದ್ಧೆ ಶಿಸ್ತು ಆಸಕ್ತಿಯಿಂದ ತೊಡಗಿಸಿಕೊಳ್ಳಿ. ತಕ್ಷಣದ್ದು ಮತ್ತು ಅನಿವಾರ್ಯವಾದದ್ದು ಅಂದರೆ ತಕ್ಷಣಕ್ಕೆ ನಿಮಗೆ ಖುಷಿ ಕೊಡಬಹುದು. ಆದರೆ ಅದರ ಅಗತ್ಯ ನಿಮಗಿಲ್ಲ. ಎನ್ನುವಂತದಕ್ಕೆ ಮಾರು ಹೋಗಲೇಬೇಡಿ. ಅನಿವಾರ್ಯ ಮತ್ತು ತಕ್ಷಣವಲ್ಲದ್ದು ಅಂದರೆ ಭವಿಷ್ಯತ್ತಿನಲ್ಲಿ ಲಾಭದಾಯಕವಾದುದು. ಈಗ ಮಾಡದೇ ಹೋದರೆ ಮುಂದೆ ತೊಂದರೆ ಆಗುವಂತಹುದು. ಸಮಯಾವಕಾಶ ಬಹಳವಿದೆಯೆಂದು ಮುಂದೂಡುತ್ತ ಬಂದರೆ ಸಂಕಷ್ಟಕ್ಕೆ ಸಿಲುಕಿ ಹಾಕಿಕೊಳ್ಳುವದು ನೂರಕ್ಕೆ ನೂರುಷ್ಟು ಖಚಿತ. ಮುಂಬರುವ ವಾರ್ಷಿಕ ಪರೀಕ್ಷೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ .ಇನ್ನೂ ಸಾಕಷ್ಟು ಸಮಯವಿದಿಯೆಂದು ಉಪೇಕ್ಷಿಸಿ ತಯಾರಿ.ಮಾಡದೇ ಹೋದರೆ ಸಮಸ್ಯೇಗೆ ಆಹ್ವಾನ ನೀಡಿದಂತೆ ಸರಿ. ಊಟ ಆಟ ಟಿವಿ ಮನರಂಜನೆ ಕುಟುಂಬ ಗೆಳತನಕ್ಕೆ ಅಗತ್ಯವಿರುವಷ್ಟು ಸಮಯ ಎತ್ತಿಡಿ.
ಟೈಂ ಬ್ಯಾಂಕ್ ಬ್ಯಾಲೆನ್ಸ್
ಒಂದು ದಿನ ಬ್ಯಾಂಕಿನ ಖಾತೆಯಲ್ಲಿ ಪ್ರತಿದಿನವೂ ಪ್ರತಿಯೊಬ್ಬರಿಗೂ ಬೆಳ್ಳಂಬೆಳಿಗ್ಗೆ 86400 ಸೆಕೆಂಡುಗಳು ಜಮೆಯಾಗಿರುತ್ತವೆ. ಈ ಸೆಕೆಂಡುಗಳನ್ನು ಅಂದೇ ಖರ್ಚು ಮಾಡಬೇಕು. ಇಲ್ಲಿ ಓವರ್ ಡ್ರಾಫ್ಟ್ ಸೌಲಭ್ಯವಿಲ್ಲ. ಅಂದಿನದು ಅಂದು ಖರ್ಚು ಮಾಡಬೇಕು ಇಲ್ಲದಿದ್ದರೆ ಖಾತೆಯಲ್ಲಿ ಬ್ಯಾಲೆನ್ಸ್ ನಿಲ್ ಆಗಿ ಹೋಗುತ್ತೆ. ದೇವರು ನೀಡಿದ ಟೈಂ ಬ್ಯಾಂಕಿನ ಸೆಕೆಂಡುಗಳನ್ನು ತಪ್ಪದೇ ಸದ್ವಿನಿಯೊಗಪಡಿಸಿಕೊಳ್ಳಬೇಕು. ಟೈಂ ವೇಗವಾಗಿ ಜಾರುತ್ತಿದೆಯಾದರೆ ನೀವು ತುಂಬಾ ಬಿಜಿ ಎಂದರ್ಥ. ಬಿಜಿಯಾಗಿರುವ ಸಾಧಕರಿಗೆ ಸಮಯ ನಿರ್ವಹಣೆ ತುಂಬಾ ಆಕರ್ಷಣೀಯವಾಗಿ ಸೆಳೆಯುತ್ತೆ ಹೀಗಾಗಿ ಅವರು ನಮ್ಮ ಟೈಂ ಬ್ಯಾಂಕಿನಲ್ಲಿ ಪ್ರತಿದಿನದ ಒಂದೊಂದು ಸೆಕಂಡನ್ನು ಕಳೆದುಕೊಳ್ಳಲು ಇಚ್ಛಿಸುವದಿಲ್ಲ.
ಕಳೆದುಕೊಂಡಿದ್ದು ವಸ್ತು ಆದರೆ ಹುಡುಕಬಹುದು. ಸಿಗದಿದ್ದರೆ ಮತ್ತೊಂದು ಪಡೆದುಕೊಳ್ಳಲೂಬಹುದು. ಕಳೆದುಕೊಂಡದ್ದು ಸಮಯವಾದರೆ ಹುಡುಕಲೂ ಆಗದು ಪಡೆದುಕೊಳ್ಳಲೂ ಆಗದು. ಎನ್ನುವದನ್ನು ಮನಸ್ಸಿನಲ್ಲಿ ಬೇರೂರಿಸಿಕೊಂಡು ನಿಖರವಾದ ಗುರಿಯೊಂದಿಗೆ ಸಂವಹನ ಕಲೆ ಜಾಣ್ಮೆ ವ್ಯಹವಾರ ಕೌಶಲ ಬೆರೆಸಿ ಕಾಲದ ಜೊತೆ ಕಾಲು ಹಾಕಿದರೆ ಕಣ್ಣು ಕಂಡ ಕನಸುಗಳೆಲ್ಲ ನನಸಾಗಿ ಗೆಲುವು ನಿನ್ನ ಕಾಲಡಿಯಲ್ಲಿ ನಿಂತಿರುತ್ತದೆ ಹಾಗದರೆ ತಡವೇಕೆ? .ಬನ್ನಿ ಟೈಂ ಬ್ಯಾಂಕ್ ಬ್ಯಾಲನ್ಸ್ನ್ನು ಬೇಗ ಬೇಗ ಇಂದಿನಿಂದ ಇಂದೇ ಗುರಿ ಸಾಧನೆಗಾಗಿ ಖಾಲಿ ಮಾಡಿ ಯಶ ಗಳಿಸಿ.
===============================================
ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು
Osm
Nice mahiti
,,ಲೇಖನ ಚೆನ್ನಾಗಿದೆ ಮೇಡಂ.