ಅಂಕಣ ಬರಹ
ಸಾಹಿತ್ಯಿಕ ರಾಜಕಾರಣ ಸಮಾಜಕ್ಕೆ
ಅತೀ ಹೆಚ್ಚು ಅಪಾಯಕಾರಿ
ಕೆ.ಬಿ.ವೀರಲಿಂಗನಗೌಡ್ರ
ಪರಿಚಯ
ಬಾಗಲಕೋಟ ಜಿಲ್ಲೆ, ಬಾದಾಮಿ ತಾಲೂಕಿನ ನಂದಿಕೇಶ್ವರ ಸ್ವಗ್ರಾಮ. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ(ಶಿರ್ಸಿ) ಪಟ್ಟಣದಲ್ಲಿ ಚಿತ್ರಕಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವೆ. ಪ್ರಕಟಿತ ಕೃತಿಗಳು ‘ಅರಿವಿನ ಹರಿಗೋಲು’ (ಕವನ ಸಂಕಲನ), ‘ಅವಳು ಮಳೆಯಾಗಲಿ’ (ಕಥಾ ಸಂಕಲನ), ಘಟಸರ್ಪ (ಸಾಮಾಜಿಕ ನಾಟಕ), ‘ಸಾವಿನಧ್ಯಾನ’ (ಲೇಖನಗಳ ಸಂಕಲನ), ‘ಮೌನ’ (ಸಂಪಾದಿತ)
ಸಂದರ್ಶನ
ಪ್ರಶ್ನೆ :ನೀವು ಚಿತ್ರ ಮತ್ತು ಕವಿತೆಗಳನ್ನು ಏಕೆ ಬರೆಯುತ್ತಿರಿ?
ಉತ್ತರ :ನನ್ನೊಳಗೆ ನುಸುಳುವ ತುಮುಲಗಳನ್ನು ಹೊರಹಾಕಿ ಹಗುರಾಗುವುದಕ್ಕೆ.
ಪ್ರಶ್ನೆ :ಚಿತ್ರ ಮತ್ತು ಕವಿತೆ ಹುಟ್ಟುವ ಕ್ಷಣ ಯಾವುದು?
ಉತ್ತರ :ಒಂದು ನೋವು ತಿಂದಾಗ, ಇನ್ನೊಂದು ನೋವಿಗೆ ಕಾಲವೇ ಮುಲಾಮು ಸವರುವಾಗ.
ಪ್ರಶ್ನೆ :ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು?
ಉತ್ತರ :ನಿರ್ದಿಷ್ಟವಾದ ವಸ್ತು ವ್ಯಾಪ್ತಿ ಅಂದ್ರೆ ಅದೊಂದು ಚೌಕಟ್ಟು ಅನ್ಸತ್ತೆ, ಚೌಕಟ್ಟಿಗೆ ಸಿಲುಕದೆ ಮೆಲ್ಲಗೆ ಎಲ್ಲವ ದಾಟಿಕೊಂಡು ಅಲ್ಲಮರ ಬಯಲಿಗೆ ಹೋಗಲು ಕನವರಿಸುವೆ, ಬಯಲೇ ನನ್ನ ವಸ್ತು ಮತ್ತು ವ್ಯಾಪ್ತಿ. ಇನ್ನು ನನ್ನನ್ನು ಪದೇ ಪದೇ ಕಾಡುವ ವಿಷಯ ಅಂದ್ರೆ, ಚಾಡಿ ಕೇಳಲಷ್ಟೇ ತೆರೆದುಕೊಳ್ಳುವ ಕೆಲ ಹಾಳು ಕಿವಿಗಳಿಗೆ, ಜೀವಪ್ರೀತಿಯ ಹಾಡನ್ನು ಹೇಗೆ ತಾಗಿಸುವುದು!
ಪ್ರಶ್ನೆ :ಕವಿತೆಗಳಲ್ಲಿ ಬಾಲ್ಯ ಹರೆಯ ಇಣುಕಿದೆಯೇ?
ಉತ್ತರ :ಅನುಭವಿಸದೇ ಬರೆಯುವುದು ಬಾಲ್ಯ, ಅನುಭವಿಸಿ ಬರೆಯುವುದು ಹರೆಯ, ಅನುಭವ ಅನುಭಾವ ಆಗುವುದೇ ಮುಪ್ಪು ಅಥವಾ ಮುಕ್ತಿ ಅಂತಾ ಅಂದ್ಕೊತಿನಿ.
ಪ್ರಶ್ನೆ :ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?
ಉತ್ತರ :ಜಾತಿ ಧರ್ಮ ಮತ್ತು ಹಣಕ್ಕಾಗಿ ಅಮೂಲ್ಯವಾದ ಮತವನ್ನೇ ಮಾರಿಕೊಳ್ಳೊರು, ತೂರಿಕೊಳ್ಳೊರು, ಅಡ ಇಡೊವ್ರು ಇರೊವರ್ಗೂ ರಾಜಕೀಯ ಸನ್ನಿವೇಶ ಚೆನ್ನಾಗಿರಲ್ಲ..
ಪ್ರಶ್ನೆ :ಧರ್ಮ ದೇವರ ವಿಷಯದಲ್ಲಿ ನಿಮ್ಮ ನಿಲುವೇನು?
ಉತ್ತರ : ಈ ಎರಡೂ ನಮ್ಮೊಳಗೆ ಮಾನವೀಯ ಪ್ರೀತಿ ತುಂಬಿ, ಚೂರು ದಾರಿ ತಪ್ಪಿದಾಗ ಎಡಬಿಡದೇ ಕಾಡಿ ನಿದ್ದೆಗೆಡಿಸಿ ಭಯ ಹುಟ್ಟಿಸಬೇಕಿತ್ತು, ಆದರೆ ಹಾಗಾಗದೇ ಸ್ವಾರ್ಥದ ಸರಕಾಗುತ್ತಿರುವುದರ ಕುರಿತು ತುಂಬಾ ಬೇಸರವಿದೆ.
ಪ್ರಶ್ನೆ : ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಕುರಿತು ನಿಮಗೆ ಏನನ್ನಿಸುತ್ತಿದೆ?
ಉತ್ತರ : ಮುಖಗಳಿಗಿಂತ ಮುಖವಾಡಗಳೇ ಹೆಚ್ಹೆಚ್ಚು ರಾಚುತ್ತಿವೆ ಅಂತಾ ಅನ್ನಸ್ತಿದೆ.
ಪ್ರಶ್ನೆ : ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ಹೇಗೆ ಪ್ರತಿಕ್ರಿಯಿಸುವಿರಿ?
ಉತ್ತರ : ನೇರ ರಾಜಕಾರಣಕ್ಕಿಂತ, ಸಾಹಿತ್ಯಿಕ ರಾಜಕಾರಣ ಸಮಾಜಕ್ಕೆ ಅತೀ ಹೆಚ್ಚು ಅಪಾಯಕಾರಿ.
ಪ್ರಶ್ನೆ :ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತದೆ?
ಉತ್ತರ :“ರಿಪೇರಿಯ ಹಂತವನ್ನೂ ಮೀರಿ ಹೋಗುತ್ತಿದೆ” ಎಂದ ಲಂಕೇಶ್‍ರ ಮಾತೇ ಹೇಳುತ್ತದೆ.
ಪ್ರಶ್ನೆ :ನಿಮ್ಮ ಕನಸುಗಳೇನು?
ಉತ್ತರ :ಬಯಲು ಸೀಮೆಯಲಿ ಕಾಡು ಬೆಳೆಸುವುದು, ಬೆಳೆಸಿದ ಆ ಕಾಡ ನೆರಳಲಿ ಕುಳಿತು ಸ್ನೇಹ ಪ್ರೀತಿ ಸೌಹಾರ್ದತೆಯ ಆಟ ಪಾಠ ಸಂವಾದ ನಡೆಸುವುದು.
ಪ್ರಶ್ನೆ :ಕನ್ನಡ ಹಾಗೂ ಅನ್ಯ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು?
ಉತ್ತರ : ಕನ್ನಡದ ಕುವೆಂಪು, ತೇಜಸ್ವಿ, ಲಂಕೇಶ್, ನಿಸ್ಸಾರಹ್ಮದ್, ದೇವನೂರು ಮಹಾದೇವ ತುಂಬಾ ಇಷ್ಟ, ಇನ್ನು ಚಾಲ್ರ್ಸಬಕೊವಸ್ಕಿ, ರೂಮಿ, ಬ್ರೆಕ್ಟ್, ಬೋದಿಲೇರ್ ಮತ್ತು ಗೀಬ್ರಾನ್‍ರ ಅನುವಾದಿತ ಬರಹಗಳು ಸಹ ಕನ್ನಡದಷ್ಟೇ ಇಷ್ಟವಾಗ್ತಾವೆ.
ಪ್ರಶ್ನೆ :ಈಚೆಗೆ ಓದಿದ ಕೃತಿಗಳಾವವು?
ಉತ್ತರ :‘ನೋವೂ ಒಂದು ಹೃದ್ಯ ಕಾವ್ಯ’ ರಂಗಮ್ಮ ಹೊದೇಕಲ್ಲರ ಕವನ ಸಂಕಲನ, ‘ಏಪ್ರಿಲ್ ಫೂಲ್’ ಹನುಮಂತ ಹಾಲಿಗೇರಿಯವರ ಕಥಾ ಸಂಕಲನ. ‘ದೀಪದ ಗಿಡ’ ಬಸೂ ದ್ವಿಪದಿಗಳು.
ಪ್ರಶ್ನೆ :ನಿಮಗೆ ಇಷ್ಟವಾದ ಕೆಲಸ ಯಾವುದು?
ಉತ್ತರ :ಮಕ್ಕಳಿಗೆ ಪಾಠ ಮಾಡುವುದು.
ಪ್ರಶ್ನೆ :ಇಷ್ಟವಾದ ಸ್ಥಳ ಯಾವುದು?
ಉತ್ತರ :ಬಯಲು
ಪ್ರಶ್ನೆ :ತುಂಬಾ ಇಷ್ಟಪಡುವ ಸಿನಿಮಾ ಯಾವುದು?
ಉತ್ತರ :ದಿಯಾ
ಪ್ರಶ್ನೆ :ನೀವು ಮರೆಯಲಾರದ ಘಟನೆ ಯಾವುದು?
ಉತ್ತರ :ಪ್ರಕಟಿತ ಕಥೆಗೆ ನೋಟಿಸ್ ಪಡೆದು, ಒಂದು ಬಡ್ತಿ ಕಳೆದುಕೊಂಡಿದ್ದು.
ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.