ಲೇಖನ
ಮಕ್ಕಳಿಗೂ ಒಂದು ವ್ಯಕ್ತಿತ್ವವಿದೆ
ಡಾ. ಸಹನಾ ಪ್ರಸಾದ್
ಇಂದಿನ ಜೀವನ ಬಹಳ ಸ್ಪರ್ಧಾತ್ಮಕವಾದುದು.ನಮ್ಮ ಯುವ ಜನಾಂಗವನ್ನು ನೋಡಿದಾಗ ಕೆಲವೊಮ್ಮೆ “ ಅಯ್ಯೋ ಪಾಪ” ಎನ್ನಿಸುವುದುಂಟು.ಎಷ್ಟು ಓದಿದರೂ ಸಾಲದು, ಎಷ್ಟು ಕಷ್ಟಪಟ್ಟರೂ, ಎಷ್ಟು ಅಂಕೆಗಳು ತೆಗೆದರೂ ಸಾಕಾಗುವುದಿಲ್ಲ. ಯಾವಾಗಲೂ ಒತ್ತಡದ ಬದುಕು. ಚಿಕ್ಕ ತರಗತಿಗಳಿಂದಲೇ ಶುರು.ತರಹ ತರಹದ ಕ್ಲಾಸುಗಳು, ಮನೆ ಪಾಠಗಳು, ಒಂದು ತರಗತಿಯಿಂದ ಇನ್ನೊಂದಕ್ಕೆ ಯಾವಾಗಲೂ ಓಟ. ನರ್ಸರಿಗೆ ಸೇರುವ ಮೊದಲೇ “ಕೋಚಿಂಗ್”. ವಿಧ ವಿಧವಾದ ಬಣ್ಣಗಳು,ಆಕೃತಿಗಳು, ಪದ್ಯಗಳನ್ನು ಕಂಠ ಪಾಠ ಮಾಡಬೇಕು. ತಾಯಿ ಪ್ರೀತಿಯಿಂದ ಮುದ್ದು ಮಾಡುತ್ತಾ ಕಲಿಸಬೇಕಾದ ವಿಷಯಗಳನ್ನು ಈಗ ದುಡ್ಡು ಕೊಟ್ಟು ಶಿಕ್ಷೆಯ ತರಹ ಕಲಿಸುವ ತರಗತಿಗಳು, ಅವನ್ನು ಅಳು ಮುಖದಿಂದ ಕಲಿವ ಮಕ್ಕಳು.ಸಂಜೆ ಆರಾಮವಾಗಿ ಆಟವಾಡಿಕೊಂಡಿರಬೇಕಾದ ಮಕ್ಕಳು ತರಗತಿಯಲ್ಲಿರುವುದನ್ನು ನೋಡಿದರೆ ಬೇಸರವಾಗುತ್ತದೆ, ಆಟವಾಡಿ ಬೆಳೆಯಬೇಕಾದ ಎಳೆ ಮನುಸ್ಸುಗಳು ಈ ರೀತಿಯ ಸತತವಾದ ಧಾಳಿಯಿಂದ ಕೊರಗುವ ಸಾಧತೆಗಳೂ ಇವೆ. ಎಷ್ಟೋ ಸಲ ತಾವು ಮಾಡಲಾಗದಿದ್ದನ್ನು ಮಕ್ಕಳಿಂದ ಮಾಡಿಸುವ, ತಮ್ಮ ಅಪೂರ್ಣ ಕನಸುಗಳನ್ನು ಅವರ ಮೂಲಕ ಸಾಕಾರಗೊಳಿಸುವ ಪೋಷಕರೂ ಸಿಗುತ್ತಾರೆ.ನಮ್ಮ ಮಕ್ಕಳ ಅಭಿವೃದ್ಧಿ ಎಲ್ಲಾ ರೀತಿಯಲ್ಲೂ ಆಗಲಿ, ಅವರ ಬೆಳವಣಿಗೆ ಪರಿಪೂರ್ಣವಾಗಲಿ ಎಂದು ಸದ್ದುದ್ದೇಶ ಹೋಂದಿರುವ ಮಾತಾ ಪಿತೃಗಳೂ ಇದ್ದಾರೆ. ಕೆಲವು ಮಕ್ಕಳು ಅತಿಯಾಗಿ ಚೂಟಿಯಾಗಿರುತ್ತಾರೆ.ಅಂತಹ ಮಕ್ಕಳನ್ನು ಹಿಡಿಯುವುದು ಬಲು ಕಷ್ಟ., ತಂಟೆ ಮಾಡದೆ, ಏನೋ ಒಂದು ತೊಂದರೆಗೆ ಸಿಕ್ಕಿಹಾಕಿಕೊಳ್ಳದೆ ಇದ್ದರೆ ಆ ಮಕ್ಕಳಿಗೆ ಸಮಾಧಾನವೇ ಇಲ್ಲ. ಅಂತಹ ಮಕ್ಕಳಿಗೆ ಈ ರೀತಿಯ ತರಗತಿಗಳಿಗೆ ಸೇರಿಸುವುದರಿಂದ ಸ್ವಲ್ಪ ಮಟ್ಟಿಗೆ ಅವರ ತುಂಟತನ ಕಡಿಮೆಯಾಗುತ್ತದೆ ಹಾಗೂ ಜ್ನಾನಾಭಿವೃದ್ಧಿ ಕೂಡ ಆಗುತ್ತದೆ.
“ಮಕ್ಕಳಿಗೆ ಕಷ್ಟ ಎಂದರೇನು, ಅವರಿಗೆ ಇನ್ನೇನು ಕೆಲಸವಿರುತ್ತದೆ? ಎಲ್ಲ ಕಡೆ ಕರೆದೊಯ್ಯಲು,ಕೇಳಿದ್ದೆಲ್ಲಾ ಕೊಡಿಸಲು ನಾವಿದ್ದೇವೆ, ಕಲಿಯಲು ಏನು ಕಷ್ಟ” ಎಂದು ಕೇಳುವ ಪೋಷಕರು ಬಹಳ. ಅದು ನಿಜವೇ ಆದರೂ, ಮಕ್ಕಳ ಇಷ್ಟ ಹಾಗೂ ಆಸಕ್ತಿಯನ್ನೂ ಗಮನಿಸಿ ಪೋಷಕರು ಮುಂದುವರೆಯುವುದು ಮುಖ್ಯ.ಎಷ್ಟೋ ಜನ ವಿದ್ಯಾರ್ಥಿಗಳಿಗೆ ವಿಜ್ಞಾನ ಕಷ್ಟ. ಅದರಲ್ಲೂ ಗಣಿತವೆಂದರೆ ಅಲರ್ಜಿ.ಅಂತಹ ಮಕ್ಕಳನ್ನು ಬಲವಂತವಾಗಿ ವಿಜ್ಞಾನ ಓದುವುದಕ್ಕೆ ನೂಕಿದರೆ ಅದು ತುಂಬಾ ತಪ್ಪು.ಎಷ್ಟೂ ಜನ ಪೀಯೂಸೀಯಲ್ಲಿ ಗಣಿತ ತೆಗೆದುಕೊಂಡು, ಒದ್ದಾಡಿ, ಆಮೇಲೆ ತಮ್ಮ ತಮ್ಮ ಆಸಕ್ತಿಯ ಮೇಲೆ ಬೇರೆ ವಿಷಯ ಓದುವುದುಂಟು. ಕೆಲವು ಪೋಷಕರು ಇದನ್ನು ಅರ್ಥ ಮಾಡಿಕೊಂಡು ಮಕ್ಕಳಿಗೆ ಉತ್ತೇಜನ ನೀಡಿದರೆ,, ಇನ್ನೂ ಕೆಲವರು ಇದರಿಂದ ತಮ್ಮ ಅಭಿಮಾನಕ್ಕೆ ಧಕ್ಕೆ ಎಂದೇ ಭಾವಿಸುತ್ತಾರೆ.
ಖ್ಯಾತ ವೈದ್ಯರೊಬ್ಬಳ ಮಗಳು ಕಲಾ ವಿಭಾಗಕ್ಕೆ ಸೇರಲು ಬಂದಿದ್ದಳು.ಅವಳು ಮುಂಚೆ ಓದಿದ್ದು ವಿಜ್ಞಾನ. ಅಂಕೆಗಳೂ ಸುಮಾರು ಚೆನ್ನಾಗಿಯೇ ಬಂದಿತ್ತು. ಸಾಮಾನ್ಯವಾಗಿ ಕೇಳುವಂತೆ ಯಾಕೆ ಈ ಬದಲಾವಣೆ ಎಂದು ವಿಚಾರಿಸಿದಾಗ , ಅವಳು ಹೇಳಿದ್ದು “ ನನಗೆ ಮುಂಚಿಂದಲೂ ಕಲೆಯ ಬಗ್ಗೆ ಒಲವು,ಅದರಲ್ಲೂ ಆಂಗ್ಲ ಸಾಹಿತ್ಯ ನನ್ನ ಅಚ್ಚು ಮೆಚ್ಚಿನ ವಿಷಯ.ಆದರೆ ನಮ್ಮ ಕುಟುಂಬದಲ್ಲಿ ಎಲ್ಲರೂ ವಿಜ್ಞಾನ ಓದಿದವರೆ, ವೈದ್ಯ ಅಥವಾ ಎಂಜಿನಿಯರ್ ಆಗಿರುವರೆ. ಇದುವರೆಗೂ ನಾನು ತೆಗೆದಿರುವ ಅಂಕಿಗಳಿಗೂ, ನನ್ನ ಆಸಕ್ತಿಗೂ ಏನೂ ಸಂಭಂಧವಿಲ್ಲ.ಅದೆಲ್ಲ ಟ್ಯೂಷನ್ ಮಹಿಮೆ ಅಷ್ಟೇ”. ಅವಳ ತಾಯಿಯ ಮುಖ ಕೋಪದಿಂದ ಗಂಟಿಕ್ಕಿತ್ತು.” ನಾನು ನನ್ನ ಆಸ್ಪತ್ರೆಯನ್ನು ಇವಳು ಮುಂದುವರೆಸುತ್ತಾಳೆ,ಅದನ್ನು ಬೆಳೆಸುತ್ತಾಳೆ ಎಂದು ಕನಸು ಕಟ್ಟಿದ್ದೆ.ಇವಳಿಗೆ ಅದರ ಪರಿವೆಯೇ ಇಲ್ಲ”. ಅವರ ಮಾತಿಗೆ ಸೊಪ್ಪು ಹಾಕದೆ ಆ ಹುಡುಗಿಗೆ ಸೀಟ್ ಕೊಡುವುದೆಂದು ನಿರ್ಧರಿಸಿದೆವು.
ಆದರೆ ಸ್ವಲ್ಪ ದಿನದ ನಂತರ ತಿಳಿದುದೆಂದರೆ ಅವಳಿಗೆ ಬಲವಂತವಾಗಿ ಇಂಜಿನೀರಿಂಗ್ ಸೀಟ್ ಕೊಡಿಸಿದ್ದರು.ಕೆಲವು ವರುಷದ ನಂತರ ಸಿಕ್ಕಾಗ ಹೇಗಿದ್ದೆಯ ಎಂದು ಕೇಳಿದರೆ, ಅವಳ ಮಾತಿನಲ್ಲಿ ರೋಷ ಹೆಪ್ಪುಗಟ್ಟಿತ್ತು. ಎಲ್ಲ ಸೆಮ್ಮಿಸ್ಟರ್ನಲ್ಲೂ “ ಬ್ಯಾಕ್ ” ಇದೆ.ನಮ್ಮ ಮನೆಯವರ ಸಮಾಧಾನಕ್ಕಾಗಿ ಓದುತ್ತಿದ್ದೇನೆ. ಆದರೆ ಮನಸ್ಸೆಲ್ಲ ಸಾಹಿತ್ಯದ ಮೇಲೆ. ಕೆಲವೊಮ್ಮೆ, ಅವರಿಗೆ ಬುದ್ಧಿ ಕಲಿಸಲಿಕ್ಕಾದರೂ ಇದೆ ರೀತಿ ನಪಾಸಾಗುತಲೇ ಇರೋಣ ಎನಿಸುತ್ತದೆ”. ಅವಳ ಬಿಚ್ಚು ಮನಸ್ಸಿನ ಮಾತು ಕೇಳಿ ಎದೆ ಧಸಕ್ಕೆಂದಿತು. “ ನೋಡಮ್ಮ, ಇದು ನಿನ್ನ ಬದುಕು. ನೀನು ಇದೇ ರೀತಿ ಅಂಕಿಗಳು ತೆಗೆಯುತ್ತಿದ್ದರೇ , ನಿನಗೆ ಒಳ್ಳೆಯ ಕೆಲಸ ಸಿಗುವುದು, ನೀನು ನಿನ್ನ ಸಾಹಿತ್ಯದ ಕಡೆ ಗಮನ ಕೊಡುವುದಕ್ಕಾಗುವುದೇ ಇಲ್ಲ.ಯೋಚಿಸು, ಅವರಿಗೆ ಬುದ್ಧಿ ಕಲಿಸಲು ಹೋಗಿ ನಿನ್ನ ಬದುಕನ್ನು ನೀನೆ ನಾಶ ಮಾಡಿಕೊಳ್ಳಬೇಡ “ ಎಂದು ಹೇಳಿದಾಗ ಅವಳ ಕಣ್ಣಲ್ಲಿ ಅರ್ಥವಾದ ಭಾವ ಕಂಡು ಬಂದಿತು.”.
ಅಡ್ಮಿಷನ್ ಸಮಯದಲ್ಲಿ ಮಕ್ಕಳ ಜತೆ ಪೋಷಕರಿಗೂ “ ಕೌನ್ಸಿಲ್ಲಿಂಗ್” ಬೇಕಾಗುತ್ತದೆ.ಮಕ್ಕಳಿಗೆ ನಮ್ಮ ಬದುಕಿನ ಒಂದು ಭಾಗದಂತೆ ನೋಡದೆ, ಅವರಿಗೂ ಅವರದೇ ಆದ ವ್ಯಕ್ತಿತ್ವ ಇದೆಯೆಂದು ಅರಿತು ಅವರನ್ನು ಗೌರವಿಸಿದಾಗ, ಅವರ ಬದುಕೂ ಸುಂದರ, ನಮ್ಮ ಬದುಕೂ ಸಾರ್ಥಕ!
*****************************************
ಬಹಳ ಒಳ್ಳೆಯ ಲೇಖನ. ಮಕ್ಕಳ ಅಭಿರುಚಿ ತಂದೆ-ತಾಯಿಯರ ಆಕಾಂಕ್ಷೆಗಳಿಗೆ ಬಲಿಯಾಗಬಾರದು.