ಕವಿತೆ
ಹೃದಯಂಗಮ
ಸ್ಮಿತಾ ಭಟ್
ನೀನಿರುವುದೇ ಬಡಿದುಕೊಳ್ಳಲು
ಅನ್ನುವಾಗಲೆಲ್ಲ
ಒಮ್ಮೆ ಸ್ತಬ್ಧವಾಗಿಬಿಡು
ಎನ್ನುವ ಪಿಸುಮಾತೊಂದ ಹೇಳಬೇಕೆನಿಸುತ್ತದೆ!
‘ಹೃದಯದ ಮಾತು ಕೇಳಬೇಡ
ಬುದ್ಧಿಯ ಮಾತು ಕೇಳು’
ಎನ್ನುವ ಫಿಲಾಸಫಿಗಳ
ಎದೆಗಾತುಕೊಳ್ಳುವ ಕಿವಿಗಳಿಗೆ ಇಯರ್ ಪೋನ್ ಜೋತು ಬಿದ್ದು
ಲಬ್ ಡಬ್
ಒಂಟಿ
ಬಡಿತ!
ಅಡಿಯಿಂದ ಮುಡಿಯವರೆಗೂ
ಪಾರುಪತ್ಯದ ಅಧಿಕಾರ ಹೊತ್ತರೂ
ನಿರಂತರ ಚಲನೆಯಲ್ಲಿ ನಿಲ್ಲುವ ಅಧಿಕಾರವಿಲ್ಲ!
ಚೂರೇ ಚೂರು ದಣಿವಿಗೆ ಕೊಸರಿಕೊಂಡರೂ
ಭುಗಿಲೇಳುವ ಭಯದ ಹನಿ.
ಇರ್ರಿ, ಹೃದಯ ಬಡಿತ ಶುರುವಾಗಲಿ ಈಗೇನೂ ಹೇಳುವದಿಲ್ಲ –
ಎದೆಯ ಮೇಲೆ ಕೈ ಇಟ್ಟು ಸ್ಕ್ಯಾನಿಂಗ್ ಕೋಣೆಯಿಂದ ಹೊರ ಬರುವ ಜೀವ
ಮನದೊಳಗಿನ ಪ್ರತೀ ಭಾವಕ್ಕೂ ಸ್ಪಂದಿಸಿ –
ಲಬ್ ಡಬ್ ಮತ್ತಷ್ಟು ತೀವ್ರ.
ಹಿಡಿಯಷ್ಟು ಪುಟ್ಟ ಕೋಣೆಯೊಳಗೆ
ಹಿಡಿಯಲಾರದಷ್ಟು ನೋವು ನಲಿವು ಭಾವ ಜೀವಗಳು
ಹೃದಯದಿಂದ ಹೊರಟು ಮತ್ತೆ ಹೃದಯಕ್ಕೇ
ಸೇರುವ ತದಾತ್ಮ್ಯ
ಪ್ರೇಮ ಪ್ರವಹಿಸುವ ಪ್ರತೀ ದಾರಿಯಲಿ ಜೀವಕಳೆ
ನದಿಯೊಂದು ಹರಿದು ಸಾಗರದೊಳು ಲೀನವಾಗ ಬಯಸಿದಾಗಲೇ
ಎದೆಯ ಕವಾಟವೊಂದು ಮುಚ್ಚಿಕೊಳ್ಳುವುದು!!
**************************
ಕವಿತೆ,ಅರ್ಥಗರ್ಭಿತ.
ಧನ್ಯವಾದಗಳು ಸರ್
Nice…ಸ್ಮಿತಾ
Thanku Smita ji