ಥಾಂಕ್ಸ್ ಎಂದರೆ ಸಾಕೇ

ಲೇಖನ

ಥಾಂಕ್ಸ್ ಎಂದರೆ ಸಾಕೇ

ಶಾಂತಿವಾಸು

ನನಗೆ ನಮ್ಮಪ್ಪ (ನಾವು ನಮ್ಮಪ್ಪನನ್ನು ಅಣ್ಣ ಅಂತಾನೇ ಕರೀತಿದ್ದಿದ್ದು) ಏನು ಅಂತ ಅರ್ಥವಾಗಿದ್ದು, ನಾನು ಮದುವೆ ಆದ ಮೇಲೇನೆ. ನನ್ನ ಮದುವೆಯಾದ ನಂತರ ಮೊದಲ ಸಲ ಅತ್ತೆ ಮನೆಗೆ ಹೊರಡಿಸಲು ಕೆಲವರು ಹಾಗೂ ಕರೆದುಕೊಂಡು ಹೋಗಲು ಬಂದ ನೆಂಟರು ಮನೆ ತುಂಬಾ ತುಂಬಿರುವಾಗ, ನಮ್ಮಪ್ಪ ಬಚ್ಚಲುಮನೆಯ ಒಳಗೆ ಸೇರಿಕೊಂಡು ಚಿಲಕ ಜಡಿದು ಕಿರಿಚಿ ಕಿರಿಚಿ ಅತ್ತಿದ್ದನ್ನು ಕಂಡು ಎಲ್ಲರಿಗೂ ಪರಮಾಶ್ಚರ್ಯ. ನಮ್ಮಪ್ಪನ ಹೃದಯದಲ್ಲಿಯೂ ಪ್ರೀತಿ ಎಂಬ ಒರತೆ ಜಿನುಗುತ್ತದೆ ಎಂದು ಎಲ್ಲರಿಗೂ ಗೊತ್ತಾಗಿದ್ದೇ ಆಗ. ಪಟಪಟ ಮಾತು, ಹಠ ಹಾಗೂ ಅತಿ ಶುದ್ಧತೆಯಿದ್ದ ನಾನು ನಮ್ಮಪ್ಪನ ಕಣ್ಣಲ್ಲಿ “ಸಾಧಕಿ”. ಅತೀ ಕೋಪ ಇದ್ದ ನಮ್ಮಪ್ಪ ಬಹಳ ಶಿಸ್ತಿನ ಸಿಪಾಯಿಯಾಗಿದ್ದರು. ಮನೆಗೆ ಯಾರೇ ಬಂದರೂ ಯಾರೂ ಮುಖ ಹೊರಹಾಕುವಂತಿರಲಿಲ್ಲ. ನನಗೊಬ್ಬಳಿಗೆ ಮಾತ್ರ ಅದರಲ್ಲೆಲ್ಲ ಸ್ವಲ್ಪ ಸಡಿಲತೆಯಿತ್ತು. ಬಂದವರೆದುರು ಮಾತು, ಡಾಕ್ಟರ್ ರಾಜ್ ಕುಮಾರ್ ಪರ ವಾದ, ಚರ್ಚೆ ಮಾಡುವುದಕ್ಕೂ ಮತ್ತು ಅವರಿಗೆಲ್ಲಾ ತಿಂಡಿ ಕಾಫಿ ಕೊಡುವುದಕ್ಕೂ ನನಗೆ ಮಾತ್ರ ಅವಕಾಶವಿತ್ತು. ನಾವು ನಾಲ್ಕು ಜನ ಅಕ್ಕತಂಗಿಯರು ಕೂರವ, ನಿಲ್ಲುವ ಭಂಗಿಗಳೆಲ್ಲ ಅವರು ಮಾಡಿದ ನಿಯಮಗಳ ಪಟ್ಟಿಯಲ್ಲಿದ್ದವು. ಮಕ್ಕಳು ಕೂರುವಂಥ ಪುಟ್ಟ ಪುಟ್ಟ ಕಬ್ಬಿಣದ ಕಟ್ಟಿನಲ್ಲಿ ಬಿಗಿದ ಪ್ಲಾಸ್ಟಿಕ್ ವೈರಿನ ಮೂರು ಖುರ್ಚಿಗಳನ್ನು ತಂದು ಅದರಲ್ಲಿಯೇ ಕೂರಲು ನಿರ್ಭಂಧ ಹೇರಿದ್ದರು. ನನಗೆ ಬುದ್ದಿ ಬಂದ ಮೇಲೆ (ನನಗೆ ಪ್ರಶ್ನೆ ಕೇಳುವಷ್ಟು ಬುದ್ದಿ ಬಂದದ್ದು ನನ್ನ 20 ವರ್ಷ ವಯಸ್ಸಿನ ನಂತರ) ಕೇಳಿದ್ದೆ “ಯಾಕಣ್ಣ ನಮ್ಮನ್ನ ಯಾವಾಗಲೂ ಪುಟ್ಟ ಖುರ್ಚಿ ಮೇಲೆ ಕೂರಿಸ್ತಿದ್ದೆ” ಅಂತ. ಅದಕ್ಕವರು “ಜಾಗ ದೊಡ್ಡದಿದ್ರೂ ಚಿಕ್ಕದಾಗಿ ಕೂತ್ಕೋಳ್ಳೋದನ್ನು ಕಲಿಸೋಕ್ಕೆ” ಎಂದಿದ್ದರು. ಯಾರಿಗೂ ಏನೂ ಅಲ್ಲವೆನಿಸುವ, ಅಷ್ಟು ಸಣ್ಣ ವಿಷಯ ಕೂಡಾ ನನ್ನ ತಂದೆಯ ಜೀವನದಲ್ಲಿ ಶಿಸ್ತಿನ ಭಾಗವಾಗಿತ್ತು.

ನನ್ನ ತಂದೆಯ ಕೊನೇ ದಿನ ನನ್ನನ್ನು ಮನೆಗೆ ಕರೆಸಿಕೊಂಡು, ಪಕ್ಕದಲ್ಲೇ ರಾತ್ರಿ ಪೂರ್ತಿ ಕೂಡಿಸಿಕೊಂಡು ತಾನು ನಿದ್ದೆ ಮಾಡಿದ್ದರು. ಕೊನೆಯ ಊಟ ನನ್ನ ಕೈಯಿಂದ ಮಾಡಿ, ತಲೆಮೇಲೆ ಕೈಯಿಟ್ಟು ಆಶೀರ್ವಾದ ಮಾಡಿ, ದೀರ್ಘವಾದ ಉಸಿರಿನೊಂದಿಗೆ ಹಾಗೇ ಹೊರಟುಬಿಟ್ಟರು.

ನಾನು ತಣ್ಣಗಾದ್ರೆ ತಿನ್ನಲ್ಲ ಅಂತ ಪ್ರತಿದಿನ ಬೇಸರ ಮಾಡದೆ, ಎರಡು ಕಿಲೋಮೀಟರ್ ದೂರವಿದ್ದ ನನ್ನ ಶಾಲೆಯ ತನಕ ನಡೆದು ಊಟ ತಂದುಕೊಟ್ಟು, ಮತ್ತೆರಡು ಕಿಲೋಮೀಟರ್ ವಾಪಸ್ ಮನೆಗೆ ಬರುತ್ತಿದ್ದ ನನ್ನಪ್ಪನಿಗೋ, ತಾತನಿಗೋ ನಾನೆಂದೂ ಥಾಂಕ್ಸ್ ಹೇಳೇ ಇಲ್ಲ. ನನಗೆ ಊಟದ ಡಬ್ಬಿ ಕೊಟ್ಟುಬಂದು ನಮ್ಮಪ್ಪ, ಊಟ ಮಾಡಿ ಎರಡು ಕಿಲೋಮೀಟರ್ ದೂರದ ಕಾರ್ಖಾನೆಗೆ ಎರಡನೇ ಪಾಳಿಯ ಕೆಲಸಕ್ಕೆ ನಡೆದು ಹೋಗಬೇಕಿತ್ತು. ಅಲ್ಲಿ ಮೆಷಿನಿನ ಮುಂದೆ ನಿಂತು ಕೆಲಸ ಮಾಡಿ, ಮಧ್ಯರಾತ್ರಿ 12.30ಗೆ ಮನೆಗೆ ನಡೆದು ಬರುತ್ತಿದ್ದ ನನ್ನಪ್ಪನ ಕಷ್ಟಗಳು, ಪ್ರೀತಿ ನನಗೆ ತಿಳಿದದ್ದು ಮಾತ್ರ ಗಂಡನ ಮನೆ ಮೆಟ್ಟಿದ ನಂತರವೆ.

ನಾಲ್ಕು ಹೆಣ್ಣು ಮಕ್ಕಳಿಗೂ 8 ಗಂಟೆ ಒಳಗೆ ಸ್ನಾನ, ಸೀಮೆಎಣ್ಣೆ ಸ್ಟವ್ವಿನಲ್ಲಿ ತಿಂಡಿ, ಬ್ಯಾಗು ಏನೇನೋ ಅವಸ್ಥೆ ಜೊತೆಗೆ ಎಂಟು ಜಡೆ ಹೆಣಿದ ಅಮ್ಮನಿಗೂ ನಾನೆಂದೂ ಥಾಂಕ್ಸ್ ಹೇಳಲಿಲ್ಲ.

ಎಳವೆಯಲ್ಲಿ ಅಂದರೆ ಇಲ್ಲಿಗೆ 45 ವರ್ಷಗಳ ಹಿಂದೆ ಬೇನೆ ಬಂದು, ಮುಚ್ಚಿಹೋದ ಕಣ್ಣಿಗೆ ಹಾಕಲು, ಕಳ್ಳರ ಕೂಪವಾಗಿದ್ದ, ಆಗಿನ ಬೆಂಗಳೂರು ಹೊರವಲಯದಲ್ಲಿದ್ದ (ಈಗ ಈ ಜಾಗವನ್ನೂ ದಾಟಿ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಸೇರಿಕೊಂಡಿದೆ) 40 ಕ್ಯಾಂಡಲ್ ಬ್ರಿಡ್ಜ್ ಹತ್ತಿರವಿದ್ದ ಸೀಗೇ ಬೇಲಿಯ ಕೊರಡನ್ನು, ನನ್ನ ಸೋದರಮಾವನೊಡನೆ ನಡೆದೇ ಹೋಗಿ ತಂದು, ಪ್ರಾಣ ಹಾರಿಹೋಗುವಂತೆ ಊದಿದರೆ, ಬರುವ ಎಣ್ಣೆಯನ್ನು ಹಾಕಿ ಕಣ್ಣುಳಿಸಿದ ನನಪ್ಪನನ್ನು ಕಣ್ಣುಮುಚ್ಚುವ ತನಕ ಮಗುವಂತೆ ಕಾಯ್ದಿದ್ದೇನೆ.

ಗಂಡ್ಯಾಕೆಂದು ಇಂದು ನಿಡುಸುಯ್ವ ಇದೇ ಜನ, ಅಂದು “ನಾಲ್ಕೂ ಹೆಣ್ಣು ಬೋಕಿಗಳೆಂದೂ, ಕೊಳ್ಳಿ ಇಡಲು ಒಬ್ಬ ಗಂಡು ಹೆರಲು ಯೋಗ್ಯತೆಯಿಲ್ಲದವಳು, ಕೊನೇ ಕಾಲದಲ್ಲಿ ನಿನಗ್ಯಾರು ಆಸರೆ” ಎನ್ನುತ್ತಾ ಮೂದಲಿಸಿ, ಹೆದರಿಸಿದಾಗೆಲ್ಲ, ಕೊರಗುತ್ತಿದ್ದ ನಮ್ಮಮ್ಮನ ಮನಸ್ಸನ್ನು ಮಾತ್ರ, ಅವರಿರುವ ತನಕವೂ ಬದಲಾಯಿಸಲಾಗದೆ ಸೋತಿದ್ದೇನೆ…

ಇದುವೇ ಅಲ್ಲವೇ “ಸಹಜ ಜೀವನ” ಮಾತುಮಾತಿಗೆ ಥಾಂಕ್ಸ್ ಥಾಂಕ್ಸ್ ಅನ್ನುವುದು, ಮತ್ತು ನಮ್ಮ ಮಕ್ಕಳಿಗೆ ನಾವು ಮಾಡಲೇಬೇಕಾದ ಕರ್ತವ್ಯಕ್ಕೂ ಥಾಂಕ್ಸ್ ನಿರೀಕ್ಷಿಸುವ ಇಂದಿನ ಮನಃಸ್ಥಿತಿ ಖಂಡಿತ ಅಸಹಜ. ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ. ನನ್ನ ತಂದೆತಾಯಿಯರಿಗೋ ಮತ್ತು ಅವರ ಸಮವಯಸ್ಕರಿಗೋ ಈ ವಿಷಯದಲ್ಲಿ ಖಿನ್ನತೆ ಇರಲಿಲ್ಲ. ಯಾಕೆಂದ್ರೆ ಎಲ್ಲರೂ ಮಾಡುವ ಕೆಲಸವನ್ನೇ ನಾವು ಮಾಡುವುದೆಂಬ ಭಾವನೆಯಿತ್ತು. ಕುಟುಂಬಕ್ಕಾಗಿ ನಾನೇನೂ ವಿಶೇಷವಾದದ್ದನ್ನು ಮಾಡುತ್ತಿಲ್ಲ ಅನ್ನೋ ಹಾಗೆ ಹೇಳದೆ ಬದುಕಿಬಿಟ್ಟರು. ಮುಖ್ಯವಾಗಿ ಒಬ್ಬರ ಬಗ್ಗೆ ಮತ್ತೊಬ್ಬರಿಗೆ ನಿರೀಕ್ಷೆಗಳೆ ಇರಲಿಲ್ಲ. ಬದಲಾದ ಪರಿಸ್ಥಿತಿಗಳು ಜೀವನದ ಸಹಜತೆಯನ್ನು ನುಂಗಿ ಖಿನ್ನತೆಯನ್ನು ಹುಟ್ಟುಹಾಕುತ್ತಿವೆ.

******************************************

Leave a Reply

Back To Top