ಕವಿತೆ
ನೆನಪ ಕಟ್ಟೋಣ
ಸುಧಾರಾಣಿ ನಾಯಕ್
ಹೇಗೂ ದೂರಾಗುವವರಿದ್ದೆವೆ
ಬಾ..ಕಡಲದಂಡೆಯ ಗುಂಟ
ಒಂದಿಷ್ಟು ಹೆಜ್ಜೆ ಹಾಕೋಣ
ನಾಳೆಯ ಮಾತೇಕೆ,
ಕವಲು,ಕವಲು,
ನಿನ್ನೆಯದೇ ಬೇಕು
ನೆನೆದುಕೊಳ್ಳೊಣ
ಸಾವಿರ ಸಾವಿರ ಆಣೆಗಳು
ಸವಕಲಾಗಿದೆ,
ಚಲಾವಣೆಯಿಲ್ಲದ
ಸಂದೂಕಿನ ನಾಣ್ಯಗಳಂತೆ
ಯಾವ ವ್ಯಥೆಯ
ಕಹಾನಿಯು ಬೇಡ
ಒಂದಿಷ್ಟು ನೆನಪ ಕಟ್ಟೋಣ
ಕಾಡಿ,ಬೇಡಿ,ಮೋಹಿಸಿ
ಮುದ್ದಿಸಿದ್ದೆಲ್ಲ ನಕಾಶೆಯ
ಗೆರೆಗಳಂತಿದೆ ಎದೆಯಲಿ
ಮಾತು,ನಗು ಯಾವುದು
ಮುಗಿದಿಲ್ಲ,ಮುಗಿಯದ
ಮಾತುಗಳ ಸೊಲ್ಲೇ ಬೇಡ
ಒಂದಿಷ್ಟು ಜೊತೆ ಸಾಗೋಣ
ಅರ್ಧರ್ಧ ಹೀರುವ ಚಹಾ,
ತಾಸಿನ ಪರಿವೇ ಇಲ್ಲದೇ
ವಿಷಯವೂ ಇರದೇ
ಮಾತಾಡಿ,ಕಿತ್ತಾಡಿ ಕಳೆದ
ದಿನಗಳೆಲ್ಲ ನಾಳೆಗೆ
ಪಳೆಯುಳಿಕೆಯಾಗಬಹುದು
ಬಾ ,ಒಂದಿಷ್ಟು
ಒಪ್ಪವಾಗಿಸೋಣ
ಅಲೆಅಲೆಯು
ಕೊಡುವ ಕಚಗುಳಿ,
ಅಪ್ಪಿ ಗುಯ್ ಗುಡುವ
ಆರ್ದ್ರ ಗಾಳಿ,
ನದಿ ನೀರು ಸಹ ಉಪ್ಪಾಗುವ
ಹುಚ್ಚು ಮೋಹದ ಪರಿ,
ಎಲ್ಲವನೂ ನಾಳೆಗೆ
ನಮ್ಮೊಲವಿಗೆ ಸಾಕ್ಷಿಯಾಗಿಸ
ಬೇಕಿದೆ
ನೀ ತೊರೆದಾಗಲೂ,
ನೀನಿರುವ ಭ್ರಮೆಯಲಿ
ನಾ ಬದುಕಬೇಕಿದೆ,
ಬಾ..ಸುಳ್ಳಾದರೂ ಒಂದಿಷ್ಟು
ಕನಸ ಕಟ್ಟೋಣ
********************************************
ಚನ್ನಾಗಿದೆ. ಅಭಿನಂದನೆಗಳು
ಚಂದ ಕವಿತೆ
ಅರ್ಥಪೂರ್ಣ…
ಅಭಿನಂದನೆಗಳು.
ಅರ್ಥ ಪೂರ್ಣ ಕವಿತೆ
ಚಂದ
Nice
Nice teacher
ಚನ್ನಾಗಿದೆ ಮೇಡಂ……