ಅಂಕಣ ಬರಹ
ಕನಸಿನೂರಿನ ಕಿಟ್ಟಣ್ಣ
ಕನಸಿನೂರಿನ ಕಿಟ್ಟಣ್ಣ ( ಮಕ್ಕಳ ಕಾದಂಬರಿ)
ಮಲೆಯಾಳ ಮೂಲ : ಇ.ಪಿ.ಪವಿತ್ರನ್ ಕನ್ನಡಕ್ಕೆ : ಕೆ.ಪ್ರಭಾಕರನ್: ದೇಸಿ ಪುಸ್ತಕ
ಪ್ರಕಟಣೆಯ ವರ್ಷ :೨೦೧೫
ಬೆಲೆ :ರೂ.೮೦
ಪುಟಗಳು :೧೩೮
ಕನ್ನಡದಲ್ಲಿ ಅತಿ ವಿರಳವೆಂದು ಹೇಳಬಹುದಾದ ಮಕ್ಕಳ ಕಾದಂಬರಿ ಪ್ರಕಾರಕ್ಕೆ ಕೊಡುಗೆಯಾಗಿ ಈ ಕಾದಂಬರಿ ಅನುವಾದವಾಗಿ ಬಂದಿದೆ ಎನ್ನಬಹುದು. ಶೀರ್ಷಿಕೆಯೇ ಸೂಚಿಸುವಂತೆ ಕಿಟ್ಟಣ್ಣ ಈ ಕಥೆಯ ನಾಯಕ. ಕನಸಿನೂರು ಎಂಬ ಪುಟ್ಟ ಹಳ್ಳಿಯ ಮಧ್ಯಮ ವರ್ಗದ ಜಮೀನ್ದಾರಿ ಕುಟುಂಬವೊಂದರಲ್ಲಿ ಪುರಾಣದ ಕೃಷ್ಣನಂತೆ ಜಡಿಮಳೆಯ ಆರ್ಭಟದ ನಡುವೆ ಹುಟ್ಟುವ ಕಿಟ್ಟಣ್ಣ ಮುಂದೆ ಉದ್ದಕ್ಕೂ ಪವಾಡಗಳನ್ನು ಸೃಷ್ಟಿಸುತ್ತ ಹೋಗುತ್ತಾನೆ. ಕಿಟ್ಟಣ್ಣನ ಬುದ್ಧಿಶಕ್ತಿ, ಅವನ ನಿಸರ್ಗ ಪ್ರೇಮ, ನಿಸರ್ಗದೊಂದಿಗಿನ ಅವನ ವಿಚಿತ್ರ ಒಡನಾಟ, ಅವನ ಸಾಹಸಗಳು, ಅವನ ಬದುಕಿನಲ್ಲಾಗುವ ಆಕಸ್ಮಿಕ ತಿರುವುಗಳು ಮತ್ತು ಆಶ್ಚರ್ಯಕರ ಬೆಳವಣಿಗೆಗಳು ಇಡೀ ಕಾದಂಬರಿಯ ಕಥಾನಕದ ಕವಲುಗಳಾಗಿ ಟಿಸಿಲೊಡೆಯುತ್ತ ಹೋಗುತ್ತವೆ.
ಮಕ್ಕಳನ್ನು ಖುಷಿ ಪಡಿಸಲು ಬೇಕಾಗುವ ಎಲ್ಲ ಸರಕುಗಳೂ ಇಲ್ಲಿವೆ. ಮಕ್ಕಳ ಕುತೂಹಲವನ್ನು ಹೆಜ್ಜೆ ಹೆಜ್ಜೆಗೂ ಹೆಚ್ಚಿಸುವಂತಹ ನೂರಾರು ಘಟನೆಗಳಿಂದ ಕಾದಂಬರಿ ತುಂಬಿದೆ. ನಂಬಲಸಾಧ್ಯವಾದ ನೂರಾರು ಅಚ್ಚರಿಗಳು ಇದೊಂದು ಕನಸಿನ ಕಂತೆಯೇನೋ ಎಂಬ ಭಾವನೆಯನ್ನು ಹುಟ್ಟಿಸುತ್ತವೆ. ಹಳ್ಳಿಯ ಹಸಿರು ನಿಸರ್ಗ, ಪ್ರಾಣಿ-ಪಕ್ಷಿಗಳ ಓಡಾಟ, ದಟ್ಟ ಕಾಡಿನ ರುದ್ರ ರಮಣೀಯ ದೃಶ್ಯಗಳು ಮತ್ತು ಅತಿಯಾಗಿ ತಿಂದರೂ ಅರಗಿಸಿಕೊಳ್ಳುವ ದೈತ್ಯನಾಗಿ ಬೆಳೆಯುವ ಕಿಟ್ಟಣ್ಣನ ಪರಿ ಕಾದಂಬರಿಗೆ ಫ್ಯಾಂಟಸಿಯ ಸ್ಪರ್ಶವನ್ನು ಕೊಟ್ಟಿವೆ. ಆದರೆ ದೇವಸ್ಥಾನದಿಂದ ಕಳವಾಗುವ ಗಣಪತಿ ವಿಗ್ರಹವು ಕಾಡಿನ ಭಯಾನಕತೆಯೊಳಗೆ ಬಯಲಾಗುವ ಮೂಲಕ ಪತ್ತೆಯಾಗುವ ಕಳ್ಳರ ಜಾಲ ಹಾಗೂ ಆ ಬಗ್ಗೆ ಮುಂದುವರಿಯುವ ಕಾರ್ಯಾಚರಣೆಗಳು , ಪತ್ರಿಕೆಯಲ್ಲಿ ಪ್ರಕಟವಾಗುವ ಸುದ್ದಿಗಳು ನಮ್ಮನ್ನು ಕನಸಿನೂರಿನಿಂದ ವಾಸ್ತವ ಪ್ರಪಂಚಕ್ಕೆ ತರುತ್ತವೆ. ಒಟ್ಟಿನಲ್ಲಿ ಈಗಾಗಲೇ ಮಕ್ಕಳ ಮನಸ್ಸನ್ನು ಬಹುವಾಗಿ ಸೆಳೆದಿರುವ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ಯ ಇನ್ನೊಂದು ಮುಖವೇ ‘ಕನಸಿನೂರಿನ ಕಿಟ್ಟಣ್ಣ’ ಎನ್ನಬಹುದು.
ಇಂದು ಮಕ್ಕಳಿಗೆ ಖುಷಿ ಕೊಡುವ, ಮಕ್ಕಳ ಮನಸ್ಸನ್ನು ತೆರೆದಿಡುವ, ಮಕ್ಕಳ ಕಲ್ಪನಾಶಕ್ತಿಯನ್ನು ಬೆಳೆಸುವ, ಅವರಲ್ಲಿ ಧೈರ್ಯವನ್ನೂ ಸಾಹಸ ಪ್ರವೃತ್ತಿಯನ್ನೂ ಪ್ರೋತ್ಸಾಹಿಸುವ ಸಾಹಿತ್ಯವನ್ನು ನಾವು ಮಕ್ಕಳಿಗೆ ಕೊಡ ಬೇಕಾಗಿದೆ. ಈ ನಿಟ್ಟಿನಲ್ಲಿ ‘ಕನಸಿನೂರಿನ ಕಿಟ್ಟಣ್ಣ’ ಒಂದು ಒಳ್ಳೆಯ ಸೇರ್ಪಡೆ. ಈಗಾಗಲೇ ಮಲೆಯಾಳದಿಂದ ಆರಕ್ಕೂ ಹೆಚ್ಚು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿರುವ ಪ್ರಭಾಕರನ್ ಈ ಕೃತಿಯನ್ನು ಸರಳ ಸುಂದರ ಭಾಷೆಯಲ್ಲಿ ಅನುವಾದಿಸಿದ್ದಾರೆ.
********************************
ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಕೃತಿಯ ಪರಿಚಯ ಉತ್ತಮವಾಗಿ ನಿರೂಪಿಸಿದ್ದಿರಿ.ಅಭಿನಂದನೆಗಳು
ಈ ಕೃತಿ ನಾನು ಓದಿದ್ದೇನೆ. ಒಳ್ಳೆಯ ಮಕ್ಕಳ ಕಾದಂಬರಿ.ಪರಿಚಯ ಆಪ್ತವಾಗಿದೆ. ವಂದನೆಗಳು.