ದ್ರಾವಿಡ ಭಾಷಾ ಅಸ್ಮಿತೆಗೆ ಕೇಂದ್ರದ ಕೊಡಲಿ ಪೆಟ್ಟು..!

ಲೇಖನ

ದ್ರಾವಿಡ ಭಾಷಾ ಅಸ್ಮಿತೆಗೆ ಕೇಂದ್ರದ

ಕೊಡಲಿ ಪೆಟ್ಟು..!

ಕೆ.ಶಿವು ಲಕ್ಕಣ್ಣವರ

ಹಿಂದಿ ಹೇರಿಕೆಯು ದ್ರಾವಿಡ ಭಾಷಾ ಅಸ್ಮಿತೆಗೆ ಕೇಂದ್ರದ ಕೊಡಲಿ ಪೆಟ್ಟು..!

ಕರ್ನಾಟಕದಲ್ಲಿ ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಅಣತಿ ಮೇರಗೆ ಬೆಂಗಳೂರು ಮೆಟ್ರೋ ಆಡಳಿತ ಮಂಡಳಿ ಇಲ್ಲಿನ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಭಾಷೆಯಲ್ಲಿ ಫಲಕಗಳನ್ನು ಹಾಕಿದಾಗಲೇ ಸ್ಥಳೀಯ ಕನ್ನಡಪರ ಹೋರಾಟಗಾರರು ಹಿಂದಿ ಫಲಕಗಳಿಗೆ ಬಣ್ಣ ಬಳಿದು ಪ್ರತಿಭಟಿಸಿದ್ದರು. ಈ ಸಂದರ್ಭದಲ್ಲಿ ಸಂವಿಧಾನದಲ್ಲಿ ಯಾವ ಭಾಷೆಗೂ ರಾಷ್ಟ್ರಭಾಷೆ ಎಂಬ ವಿಶೇಷ ಸ್ಥಾನಮಾನ ನೀಡಲಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿತ್ತು.

ದ್ರಾವಿಡ ಭಾಷಾ ಅಸ್ಮಿತೆಗೆ ಕೇಂದ್ರದ ಕೊಡಲಿ ಪೆಟ್ಟು; ಹಿಂದಿ ಹೇರಿಕೆಯ ವಿರುದ್ಧ ರಾಜ್ಯ ನಾಯಕರು ಕೆಂಡಾಮಂಡಲವಾಗಿದ್ದರು.

ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ತಣ್ಣಗಾಗಿದ್ದ ಹಿಂದಿ ಹೇರಿಕೆಯ ಪರ-ವಿರೋಧದ ಚರ್ಚೆ ಇದೀಗ ಮತ್ತೆ ಕಾವು ಪಡೆದುಕೊಂಡಿದೆ. ಇದಕ್ಕೆ ಕಾರಣ  ಕೇಂದ್ರ ಸರ್ಕಾರ ಹೇರಲು ಮುಂದಾಗಿರುವ ತ್ರಿಭಾಷಾ ನೀತಿ. ಕೇಂದ್ರ ಸರ್ಕಾರದ ಈ ನೀತಿಯ ವಿರುದ್ಧ ಇದೀಗ ಕರ್ನಾಟಕ ಮಾತ್ರವಲ್ಲ, ಇಡೀ ದಕ್ಷಿಣ ಭಾರತ ಸಿಡಿದೆದ್ದು ನಿಂತಿದ್ದು ರಾಜ್ಯ ನಾಯಕರು ಟೀಕಾಪ್ರಹಾರ ನಡೆಸಿದ್ದಾರೆ. ಪರಿಣಾಮ ಮುಂದಿನ ದಿನಗಳಲ್ಲಿ ಇದು ದೊಡ್ಡ ಹೋರಾಟವಾಗಿ ರೂಪಗೊಳ್ಳುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿದೆ.

ಕರ್ನಾಟಕದಲ್ಲಿ ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಅಣತಿ ಮೇರಗೆ ಬೆಂಗಳೂರು ಮೆಟ್ರೋ ಆಡಳಿತ ಮಂಡಳಿ ಇಲ್ಲಿನ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಭಾಷೆಯಲ್ಲಿ ಫಲಕಗಳನ್ನು ಹಾಕಿದಾಗಲೇ ಸ್ಥಳೀಯ ಕನ್ನಡಪರ ಹೋರಾಟಗಾರರು ಹಿಂದಿ ಫಲಕಗಳಿಗೆ ಬಣ್ಣ ಬಳಿದು ಪ್ರತಿಭಟಿಸಿದ್ದರು. ಈ ಸಂದರ್ಭದಲ್ಲಿ ಹಿಂದಿ ರಾಷ್ಟ್ರಭಾಷೆ ಎಂದು ಬಿಂಬಿಸಲಾಗಿತ್ತು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಯೇ ನಡೆದಿತ್ತು.

ಆದರೆ, ಈ ಸಂದರ್ಭದಲ್ಲಿ ಸಂವಿಧಾನದಲ್ಲಿ ಯಾವ ಭಾಷೆಗೂ ರಾಷ್ಟ್ರಭಾಷೆ ಎಂಬ ವಿಶೇಷ ಸ್ಥಾನಮಾನ ನೀಡಲಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿತ್ತು.  ಹೀಗಿದ್ದ ಮೇಲೆ ಕೇಂದ್ರ ಸರ್ಕಾರ ಮತ್ತೇ ದಕ್ಷಿಣ ರಾಜ್ಯಗಳ ಮೇಲೆ ಒತ್ತಾಯ ಪೂರ್ವಕವಾಗಿ ಹಿಂದಿ ಹೇರಿಕೆಗೆ ಮುಂದಾಗಿದೆ. ಇದಕ್ಕೆ ರಾಜ್ಯದಲ್ಲೂ ಸಹ ಪರ-ವಿರೋಧ ಚರ್ಚೆಗಳು ಶುರುವಾಗಿದೆ.

ಹಾಗಾದರೆ ಏನಿದು ತ್ರಿಭಾಷಾ ನೀತಿ? ಇದಕ್ಕೆ ದಕ್ಷಿಣ ರಾಜ್ಯಗಳ ವಿರೋಧವೇಕೆ?..?–

ಏನಿದು ತ್ರಿಭಾಷಾ ಸೂತ್ರ?

ಬಹುಭಾಷಾ ಸಂವಹನ ಕೌಶಲ್ಯವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ 1968 ರಲ್ಲೇ ಮೊದಲ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತ್ರಿಭಾಷಾ ಸೂತ್ರವನ್ನು ಪ್ರತಿಪಾದಿಸಲಾಗಿತ್ತು. 1986 ರ ನೀತಿಯಲ್ಲಿಯೂ ಇದನ್ನು ಪುನರುಚ್ಚರಿಸಲಾಗಿತ್ತು. ಇದರಂತೆಯೇ ದೇಶದಾದ್ಯಂತ ಶಾಲಾ ಮಕ್ಕಳಿಗೆ ಪ್ರಾಥಮಿಕ ಶಾಲಾ ಹಂತದಿಂದಲೇ ಅಲ್ಲಿನ ಸ್ಥಳೀಯ ಮಾತೃಭಾಷೆಯ ಜೊತೆಗೆ ಇಂಗ್ಲೀಷ್​ ಹಾಗೂ ತೃತೀಯ ಭಾಷೆಯಾಗಿ ಹಿಂದಿಯನ್ನೂ  ಕಲಿಸುವುದು ಈ ನೀತಿಯ ಉದ್ದೇಶವಾಗಿತ್ತು.

ಆದರೆ, ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಭಾಷಾ ಹೇರಿಕೆಯಿಂದ ಒಂದು ಭಾಷೆ ಒಂದು ಸಂಸ್ಕೃತಿ ನಿರ್ಮಾಣವಾಗುತ್ತದೆ. ಇದರಿಂದ ದ್ರಾವಿಡ ಭಾಷೆಗಳ ಅಸ್ಮಿತೆಗೆ ಕೊಡಲಿ ಪೆಟ್ಟು ಬಿದ್ದಂಗಾಗುತ್ತದೆ. ಇದರಿಂದ ಮುಂದೊಂದು ದಿನ ದ್ರಾವಿಡ ಭಾಷೆಗಳು ಕಣ್ಮರೆಯಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರದ ಈ ನೀತಿಯನ್ನು 1969 ರಿಂದಲೂ ತೀವ್ರವಾಗಿ ವಿರೋಧಿಸುತ್ತಾ ಬಂದಿತ್ತು. ಒಂದು ಹಂತದಲ್ಲಿ ಸ್ವತಂತ್ರ್ಯ ದ್ರಾವಿಡ ರಾಷ್ಟ್ರದ ಪರಿಕಲ್ಪನೆಯನ್ನೂ ಮುಂದಿಟ್ಟಿತ್ತು.

ಕೊನೆಗೆ ಕೇಂದ್ರದ ನೀತಿಗೆ ಬೆನ್ನು ತೋರಿಸಿದ್ದ ತಮಿಳುನಾಡು ಈವರೆಗೆ ದ್ವಿಭಾಷಾ ಸೂತ್ರವನ್ನು ಮಾತ್ರ ಅನುಸರಿಸುತ್ತಿದೆ. ತಮಿಳುನಾಡಿನಲ್ಲಿ ಕಳೆದ 6 ದಶಕದಿಂದ ಹಿಂದಿ ಕಲಿಕೆ ಕಡ್ಡಾಯವಲ್ಲ. ಇದರಂತೆ ಅಲ್ಲಿನ ಮಕ್ಕಳು ತಮಿಳು ಹಾಗೂ ಆಂಗ್ಲ ಭಾಷೆಯನ್ನು ಮಾತ್ರ ಕಲಿಯುತ್ತಿದ್ದಾರೆ. ಆದರೆ, ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿ ಮಾತ್ರ ಹಿಂದಿಯನ್ನು ಸಾಮಾನ್ಯವಾಗಿ ಕಲಿಸಲಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ತಮಿಳುನಾಡನ್ನು ಗುರಿಯಾಗಿಸಿಕೊಂಡು ಮತ್ತೇ ತ್ರಿಭಾಷಾ ನೀತಿಯನ್ನು ಕಡ್ಡಾಯಗೊಳಿಸಲು ಮುಂದಾಗಿತ್ತು. ಆದರೆ, ಕೇಂದ್ರದ ಈ ನೀತಿಗೆ ಇದೀಗ ಕರ್ನಾಟಕ ಸೇರಿದಂತೆ ಉಳಿದೆಲ್ಲಾ ದಕ್ಷಿಣ ರಾಜ್ಯಗಳು ಒಮ್ಮೆಲೆ ತಿರುಗಿಬಿದ್ದಿವೆ. ರಾಜ್ಯದ ನಾಯಕರು ಹಿಂದಿ ಹೇರಿಕೆಯ ವಿರುದ್ಧ ಟೀಕಾಪ್ರಹಾರ ನಡೆಸುತ್ತಿರುವುದು ಕೇಂದ್ರಕ್ಕೆ ನುಂಗಲಾರದ ತುತ್ತಾಗಿದೆ..!

ಕೇಂದ್ರ ಸರ್ಕಾರ ತ್ರಿಭಾಷಾ ನೀತಿಯನ್ನು ಕಡ್ಡಾಯಗೊಳಿಸುವ ತೀರ್ಮಾನ ಹೊರಬೀಳುತ್ತಿದ್ದಂತೆಯೇ ರಾಜ್ಯ ನಾಯಕರು ಇದನ್ನು ಸಾರಾಸಗಟಾಗಿ ಖಂಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ‘ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಹೊರಡಿಸಿದ ಶಿಕ್ಷಣ ಕರಡು ಕಾರ್ಯನೀತಿಯಲ್ಲಿ ಹಿಂದಿ ಹೇರಿಕೆಯ ಬಗ್ಗೆ ನನ್ನ ಗಮನಕ್ಕೆ ಬಂದಿದೆ. 3-ಭಾಷಾ ಸೂತ್ರದ ಹೆಸರಿನಲ್ಲಿ ಒಂದು ಭಾಷೆಯನ್ನು ಇತರರ ಮೇಲೆ ಯಾವ ಕಾರಣಕ್ಕೂ ಹೇರಬಾರದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ರಾಜ್ಯ ಸರ್ಕಾರದ ನಿಲುವನ್ನು ಕೇಂದ್ರಕ್ಕೆ ತಿಳಿಸಲಾಗುವುದು’ ಎಂದಿದ್ದರು. ಕುಮಾರಸ್ವಾಮಿ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಇದೀಗ ಬಹುತೇಕ ರಾಜ್ಯದ ಎಲ್ಲಾ ನಾಯಕರು ಹಿಂದಿ ಹೇರಿಕೆಯ ವಿರುದ್ಧ ಕೂಗೆತ್ತಿದ್ದಾರೆ.

ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಯ ವಿರುದ್ಧ ಟ್ವೀಟ್ ಮಾಡುವ ಮೂಲಕ ಗುಡುಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಕನ್ನಡಿಗರ ಮೇಲೆ ಹಿಂದಿ ಹೇರಿಕೆಯನ್ನು ಸಹಿಸಲಾಗದು. ಕನ್ನಡ ನಮ್ಮ ಅಸ್ಮಿತೆ. ನೆಲ, ಜಲ ಹಾಗೂ ಭಾಷೆಯ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ರಾಜ್ಯದ ಜನಪ್ರತಿನಿಧಿಗಳೆಲ್ಲರೂ ಪಕ್ಷಾತೀತವಾಗಿ ಚಿಂತನೆ ಮಾಡಬೇಕೆಂದು ನನ್ನ ಮನವಿ’ ಮಾಡಿದ್ದಾರೆ ಅವರು.

ಮತ್ತೊಂದು ಟ್ವೀಟ್​ನಲ್ಲಿ, ‘ಶಿಕ್ಷಣದಲ್ಲಿ ಮಾತೃಭಾಷೆಯಲ್ಲದ ಭಾಷೆ ಐಚ್ಛಿಕವಾಗಿರಬೇಕೇ ಹೊರತು ಕಡ್ಡಾಯವಾಗಬಾರದು. ಇದು ಇನ್ನೊಂದು ಭಾಷೆಯ ಒತ್ತಾಯಪೂರ್ವಕ ಹೇರಿಕೆಯಂತಾಗಿದೆ. ಮಗುವಿನ ಕಲಿಕೆಯ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಹಿಂದಿ ಭಾಷಿಗರಲ್ಲದವರ ಮೇಲೆ ಹಿಂದಿ ಹೇರಿಕೆ ಮಾಡಲು ಹೊರಟಿರುವುದು ಭಾರತ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದಲ್ಲದೆ ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಅವರು, ‘ಕೇಂದ್ರ ಸರ್ಕಾರ ಏಕಮುಖ ನಿರ್ಧಾರ ಕೈಗೊಳ್ಳುತ್ತಿದೆ. ನಾವೇನಾದರೂ ಹಿಂದೆ ಭಾಷೆಬೇಕೆಂದು ಕೇಳಿದ್ದೇವೆಯೇ? ಕೇಂದ್ರ‌ ಇದಕ್ಕೆ‌ ನೀತಿ ಜಾರಿಗೆ ತರುತ್ತಿರುವುದು ಕನ್ನಡಿಗರ ಮೇಲೆ ಬಲವಂತದ ಹಿಂದಿ ಹೇರಿಕೆಯಾಗಿದೆ. ನೆಲ‌, ಜಲ‌, ಭಾಷೆ ವಿಚಾರದಲ್ಲಿ ರಾಜಿ ಇಲ್ಲ. ಬಲವಂತವಾಗಿ ಯೋಜನೆ ಜಾರಿಗೆ ಮುಂದಾರೆ ನಾವು ತಮಿಳುನಾಡು ಮಾದರಿಯ ಹೋರಾಟ ಮಾಡಲೂ ಸಿದ್ಧ’ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ ಅವರು.

ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​ ಸಹ ಅಸಮಾಧಾನ ವ್ಯಕ್ತಪಡಿಸಿದ್ದರು, ‘ಕೇಂದ್ರ ಸರ್ಕಾರದ ಈ ನೀತಿ ರಾಜ್ಯಗಳ ಸಂವೇದನೆ ಹಾಗೂ ಉತ್ತಮ ಹಿತಾಸಕ್ತಿಗಳನ್ನು ಪ್ರತಿಬಿಂಬಿಸುವಂತಿರಬೇಕು. ಆದರೆ, ಈ ಭಾಷಾ ನೀತಿ ನಮ್ಮ ಹಿತಾಸಕ್ತಿಗೆ ಅನುಗುಣವಾಗಿಲ್ಲ. ಹೀಗಾಗಿ ನಮ್ಮ ರಾಜ್ಯದ ಮೇಲಿನ ಯಾವುದೇ ಭಾಷಾ ಹೇರಿಕೆಯನ್ನು ನಾವು ವಿರೋಧಿಸುತ್ತೇವೆ’ ಎಂದು ತಿಳಿಸಿದ್ದಾರೆ.

ಒಟ್ಟಾರೆ ಕೇಂದ್ರದಲ್ಲಿ ಹೊಸ ಎರಡನೇ ಅವಧಿಗೆ ಬಿಜೆಪಿ ಸರ್ಕಾರ ಮತ್ತೇ ಅಧಿಕಾರ ಹಿಡಿದ ಕೇವಲ ಮೂರು ದಿನಗಳಲ್ಲಿ ದಕ್ಷಿಣ ಭಾರತದ ಮೇಲೆ ಹಿಂದಿ ಭಾಷೆ ಹೇರಿಕೆಗೆ ಮುಂದಾಗಿದೆ. ಈ ಹಿಂದೆಯೂ ಹಲವು ಬಾರಿ ಕೇಂದ್ರ ಸರ್ಕಾರ ಹಿಂದಿ ಹೇರಿಕೆಗೆ ಮುಂದಾದಾಗಲು ದಕ್ಷಿಣ ರಾಜ್ಯಗಳು ಅದರಲ್ಲೂ ಮುಖ್ಯವಾಗಿ ತಮಿಳುನಾಡು ಪ್ರಬಲವಾಗಿ ವಿರೋಧಿಸಿತ್ತು. ಇದೀಗ ಕರ್ನಾಟಕ, ಕೇರಳ ಹಾಗೂ ಆಂಧ್ರಪ್ರದೇಶ ಸಹ ಒಟ್ಟಾಗಿ ಕೇಂದ್ರದ ವಿರುದ್ಧ ಹಿಂದಿ ಹೇರಿಕೆ ವಿರೋಧದ ಹೋರಾಟಕ್ಕೆ ದನಿಗೂಡಿಸಿರುವುದು ಮುಂದಿನ ದಿನಗಳಲ್ಲಿ ದೊಡ್ಡ ಚಳುವಳಿಯಾಗಿ ರೂಪಗೊಂಡರೂ ಅಚ್ಚರಿ ಇಲ್ಲ. ಹೀಗಿರುವಾಗ ಹಿಂದಿ ಹೇರಿಕೆಯನ್ನು ಕೈಬಿಟ್ಟರೇ ಒಳಿತು..!

*****************************************************************

Leave a Reply

Back To Top