ಅಗ್ನಿ ಕುಸುಮ
ಶ್ವೇತ ಮಂಡ್ಯ
ಹೂವೊಂದು ತೊಟ್ಟು ಕಳಚಿ
ನೋವಿನಿಂದ ಸಪ್ಪೆಮುಖ ಮಾಡಿ
ಹಗುರಾಗಿ ನೆಲಕೆ ಬೀಳುವಾಗ
ಭಾರವಾದ ಹೃದಯದಲ್ಲಿ
ಗಾಯಗೊಂಡ ಪ್ರೀತಿ ಪಿಸುನುಡಿಯುತ್ತದೆ
ಕಲ್ಲು, ಕಟ್ಟಿಗೆ ,ವಿಷಯುಕ್ತ ಉಗುರುಗಳು
ಮುಖವಾಡದ ಬೆರಳುಗಳು
ಇದ್ದಷ್ಟು ದಿನ ತಪ್ಪಿಸಿಕೊಂಡು ಬಂದ
ಹೋರಾಟದಲ್ಲಿ ಬೆಂದು ಬೆಂದು ಬಾಡಿ ಬಿದ್ದಿದ್ದೇನೆ
ಅಗ್ನಿ ಕುಸುಮ ಮಾತನಾಡುತ್ತಿದೆ.
ಅಕ್ಕ ಸೀತೆ, ನನ್ನ ಅತ್ತೆಯ ಮಗಳು ಅಹಲ್ಯೆ
ಗುರುಪುತ್ರಿ ದ್ರೌಪದಿ, ತಾರೆ ಮಂಡೋದರಿ
ಈ ನನ್ನ ಸಂತಾನದ ಹಣೆಪಟ್ಟಿಗಳು
ಮಣ್ಣು ಸೇರಿ ಮೊಳೆತು ಹೂವಾಗುವ ನನಗೆ
ರಂಗು ನೀಡಿದ ಆ ಆತ್ಮಸಾಕ್ಷಿಗೆ
ಯಾವತ್ತೂ ಭಂಗ ಬಂದಿಲ್ಲ
ಮುಖಗಳೇ ಇಲ್ಲದ ಮುಖವಾಡಗಳು
ಕುಣಿ ಕುಣಿದು ನರ್ತಿಸಿ
ತಮ್ಮ ತಲೆಯಮೇಲೆ ತಾವೇ ಕೈ ಹೊತ್ತು
ಭಸ್ಮವಾಗುವ ಕಾಲ ಬರಲಿಲ್ಲ
ನನ್ನ ಸಂತಾನದ ಕರುಳ ನೋವು
ಅಗ್ನಿಯಾಗಿ ಉರಿಯಲಿಲ್ಲ
ಕೆಂಡವಾಗಿ ಕಾಯಲಿಲ್ಲ
ಬುದಿಮಾಡುವ ಹುನ್ನಾರಗಳಿಗೆ ಭಯಪಡಲಿಲ್ಲ
ಗಂಧದರಮನೆ ಕಟ್ಟಿ
ತಳಿರು ತೋರಣ ಒಟ್ಟಿ
ಶಯನದ ಶೃಂಗಾರ ಮಾಡಿ
ಪಟ್ಟ ಕಿರೀಟಗಳ ಆಸೆ ಹೊತ್ತು
ಛತ್ರಿ ಚಾಮರಗಳ ಬೀಸಿದಾಗ
ಆಸೆಗಳ ಕಮಟುವಾಸನೆಗೆ ನಾನು ಕುದ್ದು ಹೋಗಿದ್ದೇನೆ
ನನ್ನ ಕುಲದ ಮೆರವಣಿಗೆಯಲ್ಲಿ
ನಾನು ಬೆಂದು ಭಸ್ಮವಾಗಿದ್ದೇನೆ
ಆದರೆ ನಾನು ನಾನಾಗೇ ಅಗ್ನಿ ಕುಸುಮವಾಗಿದ್ದೇನೆ
ಬೆಂದಿದ್ದೇನೆ ಹೊರೆತು
ಕಾಣದ ಕೈಗಳಲ್ಲಿ ಅರಳಲಿಲ್ಲ
ಈ ಹಟ ಈ ಹೋರಾಟಕ್ಕೆ
ಮತ್ತೆ ನನ್ನ. ಬಲವನೆಲ್ಲಾ ತುಂಬ ಬೇಕಿದೆ
ಉರಿಯಬೇಕಿದೆ ಶತಮಾನಗಳ ಅಗ್ನಿ ಕುಸುಮವಾಗಿ…
ಭಾವಸ್ಪರ್ಶಿಸುತ್ತ ಕವಿತೆ ದ್ವನಿಸಿದೆ.ಲಯ ತುಂಬಿ ನಳನಳಿಸುತ್ತಿದೆ. ನೈಸ್ ಮೆಡಮ್
ಉತ್ತಮ ಹೆಂಗವಿತೆ. ಶ್ವೇತ ಶುಭವಾಗಲಿ
ಭಾವತೀವ್ರತೆಯ ನಿಗಿ ನಿಗಿ ಜೊತೆ ಉದಾತ್ತ ಆಶಯದ ತಂಪುಣಿಸುವಂತಿದೆ…
all the best
Super