ಕವಿತೆ
ಸಿಂ(ಹ)ಪತಿ
ವಿಶಾಲಾ ಆರಾಧ್ಯ
ಮನದ ಮೆಟ್ಟಿಲುಗಳ
ನೀ ಒಂದೊಂದಾಗಿ
ಎಷ್ಟೇ ಬಾರಿ ಇಳಿದು
ಹೋದರೇನು ಗೆಳೆಯ ?
ಮತ್ತೆ ಮತ್ತೆ ನೀ ಕೂರುವೆ
ಬಂದು ಅಧಿಪತಿಯಾಗಿ …//
ಒಡಲ ಕಣದಲಿ
ನೀ ಅಂಗಾಂಗುಲವೂ
ಎಷ್ಟೇ ಗಾಯಗೊಳಿಸಿ
ಕೊರಗಿಸಿದರೇನು ಗೆಳೆಯ ?
ಮತ್ತೆ ಮತ್ತೆ ನೀನೇ ಬರುವೆ
ನನ್ನ ಭೂಪತಿಯಾಗಿ…//
ಮೋಹಕ ನೋಟದ
ಕಣ್ಣ ಕಂಬನಿಗೆ
ನೀ ಕಾರಣವಾಗಿ
ಎಷ್ಟೇ ಕಾಡಿದರೇನು ಗೆಳೆಯ ?
ಆ ಕಣ್ಣ ಕನಸಲಿ
ಮತ್ತೆ ಮತ್ತೆ ನೀನೇ ಬರುವೆ
ನನ್ನ ಪತಿಯಾಗಿ…!!
ಅದಕ್ಕೆ ನಾವಾಗಿರುವೆವು
ದಂಪತಿಯಾಗಿ …//
***************************