ಗುಪ್ತಗಾಮಿನಿ

ಕವಿತೆ

ಗುಪ್ತಗಾಮಿನಿ

ಮಮತಾ ಶಂಕರ

ಇಲ್ಲಿ ಹುಟ್ಟಿದ ಮೇಲೆ
ನಾವು ಇಲ್ಲಿನ ಕೆಲವು
ಅಲಿಖಿತ ಆದೇಶಗಳ ಪಾಲಿಸಲೇಬೇಕಾಗುತ್ತದೆ

ಯಾರೋ ಅಜ್ನಾತ ಕ್ರೂರಿಗಳ ಕೈಗೆ ಸಿಕ್ಕು
ನಾವು ನಲುಗಬಹುದೆಂಬ ಒಣ ಗುಮಾನಿಯಿಂದ
ತಮ್ಮ ಕರುಣಾಳು ಕೈಯಿಂದ ನಮ್ಮನ್ನು ರಕ್ಷಿಸುತ್ತೇವೆಂದು
ಮುಸುಕಲ್ಲಿ ಮುಚ್ಚಿಟ್ಟು ಕಾಪಿಡುತ್ತಾರೆ….
ಮತ್ತು ಪತಿ ಪಿತ ಸುತರಾದಿಯಾಗಿ
ಅವರೆಲ್ಲಾ ನಮ್ಮನ್ನು ಪೊರೆಯುವವರೆಂದು
ಕರೆಯಲ್ಪಡುವವರಾಗಿ ನಮ್ಮ
ನಡೆಯಲಾಗದ ನಿಶ್ಯಕ್ತ ಕಾಲುಗಳಾಗಿರುತ್ತಾರೆ
ಹಾಗೆಯೇ
ಇವರೆಲ್ಲಾ ಶೂರರೇ ಆಗಿರಬೇಕೆಂಬ ಕರಾರೇನಿರುವುದಿಲ್ಲ….

ಕೆಲವೊಮ್ಮೆ ನಾವು
ನಿರ್ವೀರ್ಯರ ನಿಷ್ಪಂದರ ಸುಪರ್ದಿಯಲ್ಲಿ
ಸುಖಿಗಳೆಂದು ಜಗತ್ತಿಗೆ ತೋರಿಸುವಲ್ಲಿ
ನೆಮ್ಮದಿಯ ಪಡೆದವರಾಗಿರುತ್ತೇವೆ….

ಹೇಗಿದೆ ನೋಡಿ….
ಸುಳ್ಳಿನ ಪ್ರತಿಬಿಂಬವನ್ನು ಜಗತ್ತು ನಂಬುತ್ತದೆ
ಅಷ್ಟೇಕೆ…..? ಪೋಷಿಸುತ್ತದೆ ಕೂಡ…..

ಓ…… ಮಾಯೆ ಮುಸುಕಿದ ಜಗದ ಕಣ್ಣೇ
ನಿನಗೆಂದೂ ಕಾಣದ
ಸತ್ಯದ ಮುಖ ನಮ್ಮಂತರಂಗ…
ಅಘೋಷಿತ ನಿಷೇಧಾಜ್ಞೆಗಳಲ್ಲಿ
ಬದುಕುವ ನಾವು
ನಿಮ್ಮನ್ನು ದ್ವೇಷಿಸುತ್ತೇವೋ, ಪ್ರೀತಿಸುತ್ತೇವೋ
ಅಥವಾ ಕ್ಷಮಾಕರಗಳಿಂದ ನಿಮ್ಮನ್ನಪ್ಪಿ
ದೇವರಾಗಿರುತ್ತೇವೋ…….ನಮಗೇ ಗೊತ್ತು….
ನೀವೇನ ಬಲ್ಲಿರಿ……..?

****************************************

One thought on “ಗುಪ್ತಗಾಮಿನಿ

Leave a Reply

Back To Top