ಖಾಲಿ ದೀಪ ಮತ್ತು ಕತ್ತಲು
ಬಿದಲೋಟಿ ರಂಗನಾಥ್
ಕಟ್ಟಿದ ಮಣ್ಣಗೋಡೆಯು
ತಪ ತಪನೆ ಬೀಳುತ್ತಿದೆ
ನಿದ್ದೆಯಿಲ್ಲದ ರಾತ್ರಿಗಳ ಕನಸು ಆ ಮನೆ
ಪ್ರತಿ ಇಟ್ಟಿಗೆಯ ಮೇಲೂ
ನಿನ್ನ ಶ್ರಮದ ಬೆವರ ವಾಸನೆ
ನೀನು ಮಲಗೆದ್ದ ಜಾಗದ ನಿಟ್ಟುಸಿರು
ಕಣ್ಣೀರಾಕುತ್ತಿದೆ
ನೀನೆ ನೆಟ್ಟ ನಂಬಿಕೆಯ ಗಿಡದ ಬುಡಕ್ಕೆ
ಪಾದರಸ ಸುರಿದ ಅವಳು
ಇವತ್ತು ಬೀದಿ ನಾಯಿಯ ಬಾಲ
ಅವಮಾನದ ಗಾಯ ನಂಜಾಗಿ ನಸಿರಾಡಿ
ಬದುಕುವ ಭರವಸೆಯು ಕುಂದಿ
ನೆಲದ ಮೇಲಿಟ್ಟ ಅಷ್ಟೂ ಹೆಜ್ಜೆಗಳು
ಕೆಂಡಗಳಾಗಿ ಧಗ ಧಗಿಸಿ ಉರಿದು
ಜೀವವನ್ನೇ ಸುಟ್ಟ
ನರಳುವಿಕೆಯ ಧ್ವನಿಯಲ್ಲಿ
ಮಕ್ಕಳ ಮೇಲಿನ ಪ್ರೀತಿ ಹಸಿ ಹಸಿಯಾಗಿತ್ತು
ಮಣ್ಣು ತಿನ್ನುತ್ತಿರುವ
ನಿನ್ನದೆ ದೇಹದ ಮೂಳೆಯನ್ನು ಒರಸಿ ನೋಡಿದೆ
ಎಷ್ಟೊಂದು ಕನಸುಗಳು ಜೀವಂತವಾಗಿದ್ದವು
ರೆಕ್ಕೆ ಪುಕ್ಕ ಎತ್ತಿಕೊಂಡು
ಮುಚ್ಚಿದ ರೆಪ್ಪೆಗಳಡಿಯಲ್ಲಿ
ಸವೆಯದ ಹಾದಿ ತೆರೆದೇ ಇತ್ತು
ಮಾತಾಡಿಸಿದೆ
ತಮ್ಮನೆಂಬ ಹೆಸರು ಎದೆಯೊಳಗೆ ಬಿರಿದು
ಮೌನದ ಗುಂಡಿಯಲಿ
ಮಾತುಗಳು ಸತ್ತಿರುತ್ತವೆಂಬ ಸಣ್ಣ ಅರಿವೂ ಇಲ್ಲದೆ.
ಅಲ್ಲಿಂದ ಎದ್ದು ಮಾರು ದೂರ ನಡೆದೆ
ಬಂದ ದಾರಿಗೆ ಸುಂಕವಿಲ್ಲದೆ.
ತಡೆಯದ ಮನಸು
ಮತ್ತೆ
ತಿರುಗಿ ನೋಡಿತು
ಮಣ್ಣ ಹೊದಿಕೆಯ ‘ಮಾಡಿ‘ನೊಳಗೆ
ಎಷ್ಟೊಂದು ಶಾಂತತೆಯಲಿ ಮಲಗಿದೆ
ಹಾರಿ ಹೋದ ಪ್ರಾಣ ಪಕ್ಷಿಯ ದೇಹ
ತಲೆದೆಸೆಯ ಗೂಡ ದೀಪದೊಳಗಿನ ಬತ್ತಿ
ಎಣ್ಣೆ ಇರುವವರೆಗೆ ಮಾತ್ರ ಉರಿಯುತ್ತದೆ.
ನಂತರ ಉಳಿಯುವುದು ಕೇವಲ
ಖಾಲಿ ದೀಪ ಮತ್ತು ಕತ್ತಲು.
***********************************