ನಾನು ದೀಪ ಹಚ್ಚ ಬೇಕೆಂದಿದ್ದೆ

ಪುಸ್ತಕ ವಿಮರ್ಶೆ

ನಾನು ದೀಪ ಹಚ್ಚ ಬೇಕೆಂದಿದ್ದೆ

ನಮ್ಮ ಕಣಿವೆಯ ಹುಡುಗಿ ಅಕ್ಷತಾ ಕೃಷ್ಣಮೂರ್ತಿ ಕಳಿಸಿದ “ನಾನು ದೀಪ ಹಚ್ಚ ಬೇಕೆಂದಿದ್ದೆ”ಕವನ ಸಂಕಲನ ತಲುಪಿದೆ. ಅಣಶಿ ಘಟ್ಟದ ಶಾಲೆಯೊಂದರಲ್ಲಿ ಕಷ್ಟದಲ್ಲಿ ಕಾರ್ಯ ನಿರ್ವಹಿಸುತ್ತಾ ಬರೆವ ಓದಿನ  ತನ್ನನ್ನೇ ಅರ್ಪಿಸಿಕೊಂಡ ಅವಳ ಜೀವನ ಪ್ರೀತಿಗೆ ಮನಸ್ಸು ಅರಳುತ್ತದೆ.


                    ಈಗಿತ್ತಲಾಗಿ ಓದುವುದೇ ಕಡಿಮೆಯಾದ ನನ್ನ ಬದುಕಿನಲ್ಲಿ ಆಗಾಗ ಓದಿಗೆ ಹಚ್ಚಿ ಬರೆಸುವ ಅನೇಕ ಗೆಳತಿಯರಿದ್ದಾರೆ ಎನ್ನುವುದೇ ಖುಷಿಯ ಸಂಗತಿ ಅವರೆಲ್ಲರಿಗೂ ನನ್ನ ರಾಶಿರಾಶಿ ಪ್ರೀತಿ .


                             ಅಕ್ಷತಾಳ “ನಾನು ದೀಪ ಹಚ್ಚ ಬೇಕೆಂದಿದ್ದೆ”  ಕವನಸಂಕಲನದಲ್ಲಿ ಅನೇಕ ಕವನಗಳು ಪ್ರೀತಿಯಲ್ಲಿ ಅದ್ದಿ ತೆಗೆದಂತವುಗಳು ಹಾಗೆ ಮನಸ್ಸಿನಾಳಕ್ಕೆ ಇಳಿದು ನೆಲೆಗೊಳ್ಳುವಂತವುಗಳು. ” ನೀ ಮಾತನಾಡಿಸದ ಮೇಲೆ “ಕವನದಲ್ಲಿ  “ನಿನ್ನ ನೆನಪಲ್ಲಿ ಹುಟ್ಟಿದ ಕವನಗಳಿಗೆ ನೇಣು ಹಾಕಿ ಗಲ್ಲಿಗೇರಿಸಬೇಕಿತ್ತು  ಕೊನೆ ಆಸೆ ಕೇಳದೆ … ” ವಿರಹದುರಿಯಲ್ಲಿ ಬೆಂದ ಸಾಲುಗಳು..ಇನ್ನೊಂದು ಕವನದಲ್ಲಿ “ನನಗೆ ಬೇಸರವಿದೆ ಒಂದೊಂದು ಮಧ್ಯಾಹ್ನ ಕಳೆದ ಹಾಗೆಲ್ಲ ಅರಳಿದ ಗುಲ್ಮೊಹರ್  ಉದುರುತ್ತದೆ ಸದ್ದಿಲ್ಲದೆ …”ಬೇಸರವನ್ನು ಹಾಸಿ ಹೊದ್ದ0ತ  ಸಾಲುಗಳು  ಎದೆಗೆ ತಾಕುತ್ತವೆ .ರಾಧಾ ಮಾಧವರ ಪ್ರೇಮಕವನಗಳಂತೂ  ವಿಶಿಷ್ಟವಾಗಿವೆ. “ತರಬೇತಿ ಯನ್ನಾದರೂ ನೀಡು ಕೃಷ್ಣನ ಕೊಳಲ ದನಿ ಯಾಗುವುದು ಹೇಗೆಂದು ?..” ಎಂದು ರಾಧೆಯಲ್ಲಿ ಅರಹುವ ಸಾಲುಗಳು ಕೃಷ್ಣನ ಕಾಡದೇ ಇರದು .


           “ಮಸರಿಯಾಗಲೇ ಬಾರದು”   ಕವನದಲ್ಲಿ ಶೋಷಣೆಯ ವಿರುದ್ಧದ ದನಿಯಿದೆ. ಸೀರೆ ಮಸರಿಯ ಪ್ರತಿಮೆಗಳಲ್ಲಿ ಕವನ ಕಣ್ಸೆಳೆಯುತ್ತದೆ. ಹಾಗೆಯೇ”ಎಲ್ಲಿಯೂ  ಮಾತನಾಡಬಾರದು” ಕವನ ಕೂಡ ಇದನ್ನೇ ಮಾತನಾಡುತ್ತದೆ .


           ‌‌‌‌‌                 ಕಣಿವೆಯ ಉಸಿರಾದ ಕಾಳಿ ನದಿಯ ದಂಡೆಯಲ್ಲೂ ಕವನಗಳರಳುತ್ತವೆ .ಅಣೆಕಟ್ಟು ಒಡೆದಿದೆ ಎಂಬ ಸುಳ್ಳುಸುದ್ದಿ ಮುಗ್ಧ ಜೀವಿಗಳ ಕಾಡಿದ ಪರಿಗೆ ಕಣ್ಣು ಆರ್ದ್ರವಾಗುತ್ತದೆ .ಕಾಯುವ ಕಾಳಿ ಕಾಡುವ ಕಾಳಿ ಯಾಗದಿರಲಿ ಮನಸ್ಸು ಬೇಡುತ್ತದೆ .ಕೊನೆಯ ಆರು ಮಕ್ಕಳ ಕವಿತೆಗಳು ಬಾಲ್ಯದ ಬೆರಳು ಹಿಡಿದು ನಡೆಸುತ್ತವೆ. ಈಗಾಗಲೇ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಹಾಗೂ ಮಯೂರವರ್ಮ ಪ್ರಶಸ್ತಿ ತನ್ನದಾಗಿಸಿಕೊಂಡ ಹೆಮ್ಮೆ ಕವಯಿತ್ರಿಯ ಈ ಸಂಕಲನಕ್ಕಿದೆ.
                   ಈ ಸಂಕಲನದ ಎಲ್ಲ ಕವನಗಳು ವಿಶಿಷ್ಟ ರೀತಿ ನೆಲೆಯಲ್ಲಿ ಎದೆಗೆ ಹತ್ತಿರವಾಗುತ್ತವೆ. ಥೇಟು  ಅಕ್ಷತಾಳ೦ತೆ. ತುಂಬು ಪ್ರೀತಿ ವಿಶ್ವಾಸ ಮೊಗೆ ಮೊಗೆದು ಮಡಿಲಲ್ಲಿ  ತುಂಬುತ್ತವೆ ಅವಳಂತೆ .ದೂರದಲ್ಲೆಲ್ಲೋ ಅರೆಬರೆ ಮಿಣುಕುವ ನಕ್ಷತ್ರವನ್ನು ದಿಟ್ಟಿಸುವ ಕಕ್ಕುಲತೆಯಿದೆ ಕಣಿವೆಯ ದಾರಿಯಲ್ಲಿ. ಅಕ್ಷತಾ ಬರೆದ ಅಕ್ಷರಗಳೆಲ್ಲ ಅಕ್ಷಯವಾಗಲಿ ….ಆ ಅಕ್ಷರಗಳೆಲ್ಲ ಕಣಿವೆಯ ದಾರಿಯಲ್ಲಿ ಹೂವಾಗಿ ಅರಳಿ ದಾರಿಹೋಕರ ದಣಿವಾರಿಸಲಿ ಎಂಬುದು ಮನದಾಳದ ಹಾರೈಕೆ.

****************************************

ಪಿ .ಎಸ್. ಸಂಧ್ಯಾರಾಣಿ

   #

Leave a Reply

Back To Top