ವಾರದ ಕವಿತೆ
ಮೋಹ
ಮಾಲತಿ ಶಶಿಧರ್
ಅಕಸ್ಮಾತಾಗಿ ಸಿಕ್ಕಿಬಿದ್ದೆ
ಮೋಹದ ತೆಕ್ಕೆಯೊಳಗೆ
ಮೋಹನರಾಗವ ಆಲಿಸುತ
ಅದರ ಜಾಡು ಹಿಡಿದು ಹೊರಟಿರುವೆ
ಮೂಲ ಹುಡುಕುತ್ತ
ನಮ್ಮೂರಿನಾಚಿನ ಗುಡ್ಡದ ಬಂಡೆಯ
ಮೇಲೆ ಯಾವತ್ತೋ ಗೀಚಿದ್ದ
ನೆಚ್ಚಿನ ನಟನ ಹೆಸರು, ಅಲ್ಲೇ
ಮುರಿದು ಬಿದ್ದ ಪಾಳು ಮಂಟಪ
ನೂರು ಕನಸು ಅದರೊಳಗೆ
ಸುತ್ತಲೂ ಘಮ್ಮೆನ್ನುವ ಹೂಗಳು
ಇವೆಲ್ಲವಕ್ಕೂ ಸರಿದೂಗುವ
ನೀನು ಕಣ್ಮುಂದೆ ನಿಂತಾಗ
ಬಾಯಿ ಪೂರ್ಣವಾಗಿ ಒಣಗಿ
ಮೈ ಬೆವರಿನಿಂದ ತೊಯ್ಯುತ್ತದೆ
ತೊಟ್ಟಿಕ್ಕುವ ಬೆವರ ಹನಿಗೆ
ನನ್ನೊಳಗಿನ ಬಿಂಕಕ್ಕೊಂದು
ಹೊಸ ನಾಮಕರಣ ಮಾಡುವ
ಹಂಬಲ..
ಮೆಲ್ಲಗೆ ಕಾಲು ಜಾರುವೆ ಹೊಸ
ಮೋಹದ ತೆಕ್ಕೆಗೆ ನನ್ನೊಳಗಿನ
ಸೊಕ್ಕನ್ನೆಲ್ಲ ಒಂದೆಡೆ ಅಡಗಿಸಿ
ನಿನ್ನ ನಸೆಯ ನೋಟ ಅಂಕು
ಡೊಂಕು ಹಾದಿ ತುಂಬಾ
ಓಡಾಡುವಾಗ ಕಣ್ಮುಚ್ಚಿ
ಕಳೆದುಹೋಗುವೆ.
ಕಣ್ಬಿಟ್ಟರೆ ಬಟ್ಟಲು ಕಂಗಳ
ಮದಿರೆ ಒಳಗಿಳಿದು ನೇಸರನಿಲ್ಲದ
ಹೊತ್ತಲ್ಲಿ ನಿನ್ನುಸಿರ ಏರಿಳಿತಗಳ
ನಡುವೆ ಸಿಕ್ಕಿ ಬಿಡಿಸಿಕೊಳ್ಳಲಾಗದೆ
ಮಿಸುಕಾಡಿ ಮೈ ಕೊಡವಿಬಿಡುವೆ
ಹೇಳು ಬಯಕೆಗಳ ನೆರಿಗೆ ಹಿಡಿದು
ಸಿಕ್ಕಿಸುವ ಸಾಹಸಕ್ಕೆ
ಹಾರುವ ಸೆರಗ ಒಪ್ಪ ಮಾಡಿ
ಸುಮ್ಮನಿರಿಸುವ ತಪ್ಪಿಗೆ ಕೈ ಹಾಕಲೇ?
ಇಲ್ಲ ಕೊನೆಯಿರದ ನಿನ್ನ ಸಾಗರಕ್ಕಿಳಿದು
ಈಜಲೇ
ತುದಿ ಇರದ ನಿನ್ನ ಆಗಸಕ್ಕೇರಿ
ಹಾರಲೇ?
*********************************
ಮೋಹಪಾಶವನ್ನು ಕವಿತೆಯಲ್ಲಿ ಚೆನ್ನಾಗಿ ಹಿಡಿದಿದ್ದೀರಿ
ಧನ್ಯವಾದಗಳು
ಮೋಹದ ರಸಾನುಭಾವ ಅದ್ಭುತವಾಗಿ ಅಕ್ಷರಕ್ಕಿಳಿಸಿದ್ದೀಯಾ ಸೋದರಿ
ಧನ್ಯವಾದಗಳು
ಕವಿತ ಆಪ್ತವಾಗಿದೆ. ‘ನನ್ನೊಳಗಿನ ಬಿಂಕ’, ‘ನಿನ್ನ ನಸೆಯ ನೋಟ’,’ಬಯಕೆಗಳ ನೆರಿಗೆ’ ಯಲಿ ಸಿಕ್ಕಿ ನವೆಯುವಾಗ ಹುಸಿನಗೆ ನಕ್ಕು ಒಳಸರಿಯುತ್ತದೆ ‘ಮೋಹ’… ಹಾರಲೇ….???ಈಜಲೇ…..????
Thank u so much akka. ❤️