ಗಝಲ್

ಗಝಲ್

ಸಹದೇವ ಯರಗೊಪ್ಪ

ಪ್ರೇಮದ ಹೂ ಬಾಣ ಹೃದಯದಲಿ ರುಜು ಹಾಕುವಾಗ ನಾನೇ ಇಲ್ಲದಾದೆ
ಹದವರಿತ ಎದೆಹೊಲದಿ ಬಿತ್ತಿದ ಪ್ರೀತಿ ಫಲ ನೀಡುವಾಗ ನಾನೇ ಇಲ್ಲದಾದೆ

ಅಂಗಗಳ ಸಂಗ ಬಯಸಿದ ಮನಸು ನಿದಿರೆ ಬತ್ತಿಸಿ ಕಂಗಳ ವಿಶ್ರಾಂತಿ ಕದ್ದಿದೆ
ತುಂಬಿದ ರೂಪದ ಬಟ್ಟಲು ಕಂಡು ಗುಲಾಬಿ ರಂಗೇರಿದಾಗ ನಾನೇ ಇಲ್ಲದಾದೆ

ಫಕೀರನಂತೆ ತಂಬೂರಿ ಮೀಟುತ ಅವಳ ಹಿಮ್ಮಡಿಯ ಹುಡಿಬೆಳಕಲಿ ಅಲೆದೆ
ಬದುಕಿನ ತಿರುವಿನಲ್ಲಿ ಕಣ್ಣ ಪ್ರಣತಿ ಹೊತ್ತಿಸಿ ಕಾಯುವಾಗ ನಾನೇ ಇಲ್ಲದಾದೆ

ಮೋಹ ತೃಷೆಯಲಿ ತೇಲಾಡುವ ಅಮಲಿಗೆ ಬಿಸಿಯುಸಿರ ಗುಟುಕಿಸಿದೆ
ಒಲವ ಮಳೆಗೆ ಹರಕೆ ಹೊತ್ತು ಇಳೆ ಸ್ನಾನ ಮಾಡುವಾಗ ನಾನೇ ಇಲ್ಲದಾದೆ

ಕಸಿ ಮಾಡಿದ ಹೂ ಬಳ್ಳಿ ತೆಕ್ಕೆಯಲಿ ಬಿಗಿದಪ್ಪಿ ಮುತ್ತಿಡಲು ಸಿದ್ದವಾಗಿದೆ
ಶ್ರಮ ಹರಿಸಿ ನೆಟ್ಟ ಗಿಡ ಹಸಿರನುಟ್ಟು ನೆರಳು ಹಾಸುವಾಗ ನಾನೇ ಇಲ್ಲದಾದೆ

ಒಡಲು ಕುಡಿಯೊಡೆಯಲು ಊರ ದೇವರಿಗೆ ನಡೆಮಡಿ ಹಾಸಿರುವೆ
ಹೆತ್ತು ಹೊತ್ತು ಬೆಳೆಸಿದ ಮಗ ಎದೆ ಎತ್ತರ ಬೆಳೆದಾಗ ನಾನೇ ಇಲ್ಲದಾದೆ

ಪಾಪಿ ‘ಸಾಚಿಗೆ’ ವಿಧಿ ಆಟದಲಿ ಕೈಗೆ ಬಂದ ತುತ್ತು ಬಾಯಿಗೆ ನಿಲುಕದಾಗಿದೆ
ಬೆವರನ್ನ ಉಂಡು ಒಕ್ಕಿದ ಫಸಲಿಗೆ ತಕ್ಕ ಬೆಲೆ ದಕ್ಕಿದಾಗ ನಾನೇ ಇಲ್ಲದಾದೆ

********************************

5 thoughts on “ಗಝಲ್

  1. ಉತ್ತಮವಾಗಿ ಮೂಡಿ ಬರುತ್ತಿದೆ….ಯುವ ಸಾಹಿತಿಗಳಿಗೆ ದಾರಿ ದೀಪವಾಗಿದೆ…..

Leave a Reply

Back To Top