ಅವಳ ಕಣ್ಣುಗಳು

ಕವಿತೆ

ಅವಳ ಕಣ್ಣುಗಳು

ಡಾ. ಪ್ರೇಮಲತ ಬಿ.

ಅವಳ ಕಣ್ಣುಗಳು ಅವನನ್ನು
ನಿರುಕಿಸುವುದೇ ಹೀಗೆ
ನಿಧಾನವಾಗಿ ಪರೀಕ್ಷಿಸುವಂತೆ
ಯಾರೆಂದು ಯಾವತ್ತೂ ನೋಡಿರದ ಹಾಗೆ
ಆಳವಾಗಿ ಕತ್ತರಿಸುವ ಬಗೆ

ಅವಳು ಅತ್ತಿತ್ತ ಹರಿಸುವ ನೋಟದಲ್ಲಿ
ಇಡೀ ಜೀವಿತದಿ ಕಂಡಿರದ್ದಕ್ಕಿಂತ
ಹೆಚ್ಚು ನೋಡಿಬಿಡುತ್ತಾನೆ ಅವನು
ದೀಪಗಣ್ಣುಗಳು ಆಳವಾಗಿ ಯೋಚಿಸುತ್ತ
ನಿಷ್ಯಬ್ದವಾಗಿ ಪ್ರಕಟಿಸುತ್ತವೆ
ತಟ್ಟನೆ ಒಂದು ಕಥೆಯನ್ನು ಬರೆಯುತ್ತ
ಹೊಸಲೋಕದ ಕವಿತೆಯೊಂದನ್ನು ಹಾಡುತ್ತ
ಇವನು ನಿಂತ ನೆಲ ಕಂಪಿಸುವ ಹಾಗೆ

ಅವಳ ಕಣ್ಣೋಟದ ಕೊಲೆಗಡುಕನಿಗೆ
ಇವನು ಬಲಿಯಾದ್ದು ಇದೇ ಮೊದಲಲ್ಲ
ಕೊನೆಯೂ ಇಲ್ಲ
ಅವಳ ನೋಟವೇ ಹಾಗೆ
ಅವನ ಹೊರಮೈ ಭಾವಗಳ ಬಟ್ಟೆ
ಕಳಚಿ ನಗ್ನವಾಗಿಸುವ ಹಾಗೆ
ಒಳಮೈಯ ಬೇಗುದಿಗಳಿಗೆ ತಿದಿಯನ್ನು
ಒತ್ತಿ ಜ್ಯೋತಿ ಬೆಳಗಿಸುವ ಹಾಗೆ

ಅವನು ಮಿಡಿಯುತ್ತಾನೆ
ಅವಳು ರೆಪ್ಪೆ ಬಡಿದಾಗೆಲ್ಲ ಹೊಸದೊಂದು
ಎಪಿಸೋಡಿಗೆ ಕಾಯುವ ವೀಕ್ಷಕನಂತೆ
ಕೊನೆಯಿರದ ಆಳಗಳಲಿ ಮುಳುಗೇಳುತ್ತ
ದೃಷ್ಟಿಗೆ ದೃಷ್ಟಿ ಬೆರೆಸಿ ಕುಣಿಯುತ್ತ
ಚಪ್ಪಾಳೆ ತಟ್ಟಿ ಕೆಲವೊಮ್ಮೆ
ತಾನೇ ಅವಳಂತೆ ಮಗದೊಮ್ಮೆ!

****************************

Leave a Reply

Back To Top