ಕಾವ್ಯಯಾನ

ಗುಳಿಗೆ ಮಾರುವ ಹುಡುಗ

ಅರುಣ್ ಕೊಪ್ಪ

ಇವನು ಬ್ಯಾಗ್ ಹೊತ್ತು
ಬೆವರು ಬಿತ್ತಿ
ಜಿಪ್ಪು ಸರಿಸುತ್ತಾ ಸ್ಯಾಂಪಲ್ ಹಂಚುವ
ಡಾಕ್ಟರ್ ಛೆಂಬರ್ ಲಿ ದಿನವೂ ಜ್ಞಾನಾರ್ಜನೆಯಂತೆ!
ಸರತಿ ಸಾಲಿನಲ್ಲಿ ಮಾತು ಬರದವ
ಹೊಡೆಯಲು ಹೋಗುತ್ತಲೇ…
ಕಾಲು ಕಿತ್ತು ಬೇರೆ ವೈದ್ಯರ ಭೇಟಿಗೆ ಗೀಳಿಡುತ್ತಾನೆ
ಇವ ಗುಳಿಗೆ ಮಾರುವ ಹುಡುಗನಂತೆ

ಒಳ ಸೇರಿಸಿದ ಅಂಗಿ, ಕಪ್ಪು ಸೊಂಟದ ಪಟ್ಟಿ
ಶೂ ಕೂಡ ಹೊಳೆವ ಹಾಗೇ
ರೋಗಿಗಳು ಮತ್ತಷ್ಟು ಹಿಡಿ ಶಾಪ ಹಾಕುವ
ಉತ್ತೇಜನ ನೀಡುವ ಹಾಗೇ ಅವನ ಡ್ರೆಸ್ ಕೋಡ್ !
ತನಗೂ ಇತರರಿಗೂ ಬದುಕು ಸಾಕುವ
ಪಾಲಕ ಸೇವಕ, ಎಂತೆಲ್ಲ ಹಲುಬುತ್ತಾರೆ…
ಅಲೆದಾಟದ ಬದುಕಲಿ ಕಾರದ ಕಲ್ಲು ಗೊತ್ತಾಗದೆ ಸವೆದ ಹಾಗೇ, ಇವ ಗುಳಿಗೆ ಮಾರುವ ಹುಡುಗನಂತೆ

ಸೈಕಲ್ ತುಳಿಯುತ್ತಾನೆ
ಹೆಲ್ಮೆಟ್ ಇಲ್ಲದೆ ಬೈಕ್ ಗುರ್ ಗುಡಿಸಿ
ನಡೆಯುತ್ತಾ, ತಟ ತಟನೆ ಮೈ ಧಗಿಸಿ
ಶ್ರಮಿಕರ ವರ್ಗದಲಿ ಇವನೂ ಒಬ್ಬ
ವೈದ್ಯರ ಸಮಯಕ್ಕೆ ಇವನು ಸರಿಯಾಗಿ
ಒಡೆದು ಮೂಡುತ್ತಾನೆ ತಪಸ್ಸಲಿ ದೇವರು
ಕಂಡ ಹಾಗೇ ಹಪಾಹಪಿಯ ಭಾವ ಮಂದಹಾಸ
ದಿನ ಕಳೆಗಟ್ಟಿದೆ ಅವಗೆ ವ್ಯಾಪಾರ ಜೋರಂತೆ ಇವ ಗುಳಿಗೆ ಮಾರುವ ಹುಡುಗನಂತೆ

ಮನಸ್ಸು ಕಂಡಾಗ ಕರೆಯುವ ಕೆಲ ವಿಶೇಷ ತಜ್ಞರು
ಬೆಟ್ಟಿಯಾದಾಗಲೆಲ್ಲ ತಿರುಪತಿ ವೆಂಕಟ್ರಮಣ ದರ್ಶನವಾದಂತೆ ನನಗೆ ಎನ್ನುತ್ತಾನೆ.
ಒಂದಷ್ಟು ಬಿಡುವಿಲ್ಲದ ಬಿಡುವಿನಲ್ಲಿ
ಮಡದಿ ಮಕ್ಕಳು ಬಂದುಗಳಿಗೆ
ಇಳಿ ಪ್ರಾಯದಲ್ಲೂ ನಗುವ ಊರಲ್ಲಿ
ಸಿಗುವ ತನ್ನ ಹೆತ್ತಮ್ಮನಿಗಾಗಿ ತಂದೆಗಾಗಿ
ಇವನು ಗುಳಿಗೆ ಮಾರುವ ಹುಡುಗನಂತೆ

ತಿಂಗಳು ಕೊನೆಯಲ್ಲಿ
ಹಾಹಾಕಾರದ ಗುಬ್ಬಿಯಂತೆ
ಕಡ್ಡಿ ಸೇರಿಸಿ ಗೂಡ ಹೆಣೆದಂತೆ
ಸುರಿಗೂ ಇಲ್ಲದ ಆಯುಷ್ಯ
ಇನ್ನು ಮನೆ ಎಲ್ಲಿ?
ನೀರ ಮೇಲಿನ ಗುಳ್ಳೆಯ ಹಾಗೇ
ಸ್ವಾವಲಂಭಿಯ ಒಂದು ರೂಪವಂತೆ
ಇವನು ಗುಳಿಗೆ ಮಾರುವ ಹುಡುಗನಂತೆ

ಉದ್ಯೋಗ ಅರಸಿ ಬಂದನಂತೆ
ಕಾಂಕ್ರೀಟ್ ಕಾಡಿಗೆ, ನಿರುದ್ಯೋಗ
ಮೆಟ್ಟಲು ಬದುಕ ಕಟ್ಟಲು
ಮೆಟ್ಟಿಲು ಏರುತ್ತಾ ಒಂದೊಂದೇ
ಆಫೀಸರ್ ಆಗುತ್ತಾನೆ, ಚಾಲಕನಾಗುತ್ತಾನೆ
ಶಿಕ್ಷಕನಾಗುತ್ತಾನೆ, ವಿದ್ಯಾರ್ಥಿಯಾಗುತ್ತಾನೆ ಕೊನೆಗೆ ಹಮಾಲಿಯೂ, ಚೌಕಟ್ಟಿನ ಭಯದಲ್ಲಿ
ಬದುಕ ಗೆಲ್ಲುತ್ತಾ ಇವ ಗುಳಿಗೆ ಮಾರುವ ಹುಡುಗನಂತೆ

**********************************

(ಔಷಧಿ ಕಂಪನಿ ಪ್ರತಿನಿಧಿಗಳಿಗೆ (ಮೆಡಿಕಲ್ ರೇಪ್ರೆಸೆಂಟಿಟಿವ್ ) ಕವಿತೆ ಅರ್ಪಣೆ )

One thought on “ಕಾವ್ಯಯಾನ

Leave a Reply

Back To Top