ಚಂಸು ಪಾಟೀಲ ಎಂಬ ‘ರೈತಕವಿ’

ಚಂಸು ಪಾಟೀಲ ಎಂಬ ‘ರೈತಕವಿ’

ಚಂಸು ಪಾಟೀಲ ಎಂಬ ‘ಪತ್ರಕರ್ತ’, ‘ರೈತಕವಿ’ಯೂ..!
ಮತ್ತವನ ‘ಬೇಸಾಯದ ಕತಿ’ಯೂ.!!

ನನ್ನ ಪ್ರೀತಿಯ ಗೆಳೆಯ ಚಂಸು ಪಾಟೀಲ ಮೊನ್ನೆ ಭೇಟಿಯಾಗಿದ್ದ ಹಾವೇರಿಯಲ್ಲಿ. ಚಂಸು ತನ್ನ ಇತ್ತೀಚಿನ ಪುಸ್ತಕವಾದ ‘ಬೇಸಾಯದ ಕತೆ’ ಓದಲು ನನಗೆ ಕೊಟ್ಟ. ನನಗೆ ಈ ‘ಬೇಸಾಯದ ಕತಿ’ ಓದುತ್ತಿದಂತೆ ಇದರ ಬಗೆಗೇನೆ ಒಂದು ಬರಹ ಮಾಡೋಣವೆನಿಸಿ ಒಂದು ಈ ಬರಹವನ್ನು ಮಾಡಿದೆ.
ಈ ಚಂಸು ‘ರೈತಕವಿ’ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ.
ಅಷ್ಟೇ ಅಲ್ಲ ಈ ಚಂಸು ಪತ್ರಕರ್ತನೂ ಹೌದು. ಈ ಇವನ ಬಗೆಗಿನ ಮಾಹಿತಿ ಮತ್ತು ಬರಹ ಇಲ್ಲಿದೆ ನೋಡಿ…

ಈ ಚಂಸುನು ಬೇಸಾಯದ ಬಗೆಗೆ ಲೇಖಕನಾಗಿ ದೂರದಿಂದ ಕಂಡು ಬರೆದಿಲ್ಲ. ಅದರ ಒಂದು ಭಾಗವಾಗಿಯೇ ಬರೆಯುತ್ತಾ ಹೋಗುತ್ತಾನೆ. ಸ್ವಯಂ ಕೃಷಿಗಿಳಿದಿರುವ ಈ ಚಂಸು ಬೇಸಾಯದ ಲಾಭ-ನಷ್ಟಗಳನ್ನು ಒಂದೆಡೆ ಹೇಳುತ್ತಾನೆ.

ಹಾಗೆಯೇ ಕೃಷಿ ಬದುಕಿನ ಜೊತೆಗೆ ಸುತ್ತಿಕೊಂಡಿರುವ ಬೇರೆ ಬೇರೆ ಹಬ್ಬ, ಉತ್ಸವ ಇತ್ಯಾದಿಗಳನ್ನು ವಿವರಿಸುತ್ತಾನೆ. ಹಾಗೆಯೇ ಕೃಷಿಯ ಜೊತೆಗೆ ಅಂಟಿಕೊಂಡ ಸಂಬಂಧಗಳನ್ನೂ ತೆರದಿಡುವ ಪ್ರಯತ್ನ ಮಾಡುತ್ತಾನೆ. ಅಂದರೆ ಬೇಸಾಯದ ಬೇರೆ ಬೇರೆ ಮಗ್ಗುಲುಗಳು ಈ ಲೇಖಕನಿಂದ ಪರಿಚಯವಾಗುತ್ತಾ ಹೋಗುತ್ತದೆ.

ಇದೇ ಸಂದರ್ಭದಲ್ಲಿ ನಾವಿಂದು ಯಾವ ಹಬ್ಬ ಹರಿದಿನ, ಉತ್ಸವಗಳನ್ನು ಆಚರಿಸುತ್ತಿದ್ದೇವೆಯೋ ಅವೆಲ್ಲವೂ ಬೇಸಾಯದಿಂದ ತನ್ನ ನಂಟನ್ನು ಕಳೆದುಕೊಂಡು ಸ್ವತಂತ್ರವಾಗುತ್ತಿರುವುದು, ಮತ್ತು ಕೃತಕ ಆಚರಣೆಯಾಗಿ‌ ಮುಂದುವರಿಯುತ್ತಿರುವುದನ್ನೂ ಈ ‘ಬೇಸಾಯದ ಕತಿ’ ಕೃತಿಯು ಚರ್ಚಿಸುತ್ತದೆ.
ಶ್ರಾವಣದಿಂದ ಮಹಾನವಮಿಯವರೆಗಿನ ಹಬ್ಬಗಳಲ್ಲಿ ಮಣ್ಣನ್ನು ಪೂಜಿಸುವಂಥವೇ. ಮಣ್ಣೆತ್ತಿನ ಅಮವಾಸೆಗೆ ಮಣ್ಣೆತ್ತು ಮಾಡಿ ಪೂಜಿಸುವುದು. ನಾಗರ ಪಂಚಮಿಗೆ ಹುತ್ತಕ್ಕೆ ಹಾಲೆರೆಯುವುದು. ಗಣಪ ಕೂಡ ಮಣ್ಣೆ. ನಮ್ಮ ಅಡುಗೆ, ಉಡುಗೆ, ತೊಡುಗೆಗಳಿಗೆ ಬೇಕಾದ ಮೂಲ ಪದಾರ್ಥ, ಪರಿಕರಗಳನ್ನು ಒದಗಿಸುವ ಮಣ್ಣನ್ನು ಪೂಜಿಸುವ, ಮಣ್ಣಿನ ಋಣಕ್ಕೆ ಕೃತಜ್ಞತೆ ಸಲ್ಲಿಸುವ ಅರ್ಥಪೂರ್ಣ ಆಚರಣೆ. ಇಂತಹ ಹಲವು ಚಿಂತನೆಗಳು ಈ ಕೃತಿಯಲ್ಲಿದೆ…

ಚಂಸು ಪಾಟೀಲ ಕೃಷಿಯನ್ನೇ ಜೀವನ ವಿಧಾನವಾಗಿ ಸ್ವೀಕರಿಸಿರುವ ಲೇಖಕ. ಚಂಸು ಪಾಟೀಲನು (ಚಂದ್ರಶೇಖರ ಸುಭಾಶಗೌಡ) ಮೂಲತಃ ರಾಣೇಬೆನ್ನೂರು ತಾಲೂಕಿನ ಕೂನಬೇವು (ಅಂಚೆ: ಕಜ್ಜರಿ) ಗ್ರಾಮದವನು.

ಬಿ.ಎ. ಪದವೀಧರನು. ಕೆಲವು ಕಾಲ ನಾನು ಮೊದಲೇ ಹೇಳಿದಂತೆ ‘ಸಂಯುಕ್ತ ಕರ್ನಾಟಕ, ‘ಕ್ರಾಂತಿ’ ದಿನಪತ್ರಿಕೆಯಲ್ಲಿ ಹಾಗೂ ‘ನೋಟ’ ವಾರಪತ್ರಿಕೆಯಲ್ಲಿ ಸಹ ಸಂಪಾದಕರಾಗಿದ್ದವನು.

ಕೃಷಿ ಸಮಸ್ಯೆ ಕುರಿತು ಬರೆದ ಕೃತಿಯಾದ ‘ಬೇಸಾಯದ ಕತಿ’ಯು ನನ್ನ ತೀರಾ ಮನಮುಟ್ಟಿದ ಕೃತಿಯಾಗಿದೆ.

ಈ ಕೃತಿಗೆ ಕನ್ನಡ ಸಾಹಿತ್ಯ ಅಕಾಡೆಮಿಯ 2018 ರ ಸಾಲಿನ ಸಿಂಪಿ ಲಿಂಗಣ್ಣ ದತ್ತಿ ಪ್ರಶಸ್ತಿಯೂ ಲಭಿಸಿದೆ. ಇತನ ಇನ್ನುಳಿದ ಕೃತಿಗಳಾದ ‘ಗೆಳೆಯನಿಗೆ’ (1995), ‘ಕೆಂಪುಕಂಗಳ ಹಕ್ಕಿ ಮತ್ತದರ ಹಾಡು’ (2004), ‘ಅದಕ್ಕೇ ಇರಬೇಕು’ (2009) ಅಲ್ಲದೇ ಇವನ ಕವನ ಸಂಕಲನಗಳೂ ಓದಿಸಿಕೊಂಡು ಹೋಗುವ ಕೃತಿಗಳಾಗಿವೆ.
ಪ್ರಸ್ತುತವಾಗಿ ಸದ್ಯ ತನ್ನ ಕುನಬೇವ ಗ್ರಾಮದಲ್ಲೇ ಕೃಷಿಕರಾಗಿನಾಗಿದ್ದಾನೆ. ಸ್ವಯಂ ರೈತಕವಿಯಾಗಿ ರೈತಾಪಿ ಜಗತ್ತಿನ ಕೃಷಿ ಜಾಗೃತಿಯಲ್ಲಿ ತೊಡಗಿಕೊಂಡಿದ್ದಾನೆ.

ಇರಲಿ ಈಗ ಇವನ ಅತ್ಯುತ್ತಮ ಕೃತಿಯಾದ ಅಲ್ಲದೇ ನನಗೆ ತೀರಾ ಹಿಡಿಸಿದ ಕೃತಿಯಾದ ‘ಬೇಸಾಯದ ಕತಿ’ ಬಗೆಗೆ ನೋಡೋಣ…

‘ಬೇಸಾಯದ ಕತಿ’…

ಚಂಸು ಪಾಟೀಲ ಎಂಬ ಯುವ ಲೇಖಕನ ತವಕ ತಲ್ಲಣಗಳ ಲೇಖನ ಸಂಗ್ರಹವಿದು ‘ಬೇಸಾಯದ ಕತಿ’. ಬಾಲಕನಾಗಿದ್ದಾಗ ಶಾಲೆಯಲ್ಲಿ ಇದ್ದಾಗಲೇ ಕವಿತೆ ಬರೆದ ಪಾಟೀಲ ಎಂಬತ್ತು-ತೊಂಬತ್ತರ ದಶಕದಲ್ಲಿ ಕನ್ನಡದ ಪ್ರಮುಖ ಬರಹಗಾರರನ್ನು ಓದಿ ಕೊಂಡಿದ್ದ ಕವಿ ಹೃದಯಿಗೆ ತಮ್ಮ ತಂದೆ ಆಧುನಿಕ ಕೃಷಿ ಪದ್ದತಿಯಿಂದ ಸಾಲದ ಸುಳಿಯಲ್ಲಿ ಬಿದ್ದು ವಿಲವಿಲ ಒದ್ದಾಡುವುದು ಕಂಡು ತಲ್ಲಣಿಸಿ ಹೋಗುತ್ತಾನೆ. ತನ್ನಜ್ಜನ ಪಾರಂಪರಿಕ(ಕೃಷಿ) ಕಮತದಿಂದ ನಿರುಮ್ಮಳವಾಗಿದ್ದು ಕಂಡ ಈ ತರುಣನಿಗೆ ತಾನು ಪಾರಂಪರಿಕ ಕಮತಕ್ಕೆ ಇಳಿದು ತನ್ನಪ್ಪನನ್ನು ಸಾಲದ ಸುಳಿಯಿಂದ ಹೊರತರಲು ಯತ್ನಿಸುತ್ತಾನೆ.

ಇನ್ನು ಓದು ಓದಿಸುವೆ ಯಾವುದಾದರೂ ಕೆಲಸ ಹಿಡಿದು ಸುಖವಾಗಿರು ಎನ್ನುವ ತಂದೆ..!
ಆದರೆ ನಿರಂತರ ಪರಿಶ್ರಮ, ಪ್ರಯತ್ನ ಮತ್ತು ಅಚಲವಾದ ಆತ್ಮವಿಶ್ವಾಸವೇ ಕೃಷಿ, ಇಂಥ ಕೃಷಿಯಿಂದಲೇ ಮೊದಲಾದದ್ದು ನಾಗರೀಕತೆ, ಸಂಸ್ಕೃತಿ ಇತ್ಯಾದಿ, ಹಾಗಾಗಿಯೇ ಕೃಷಿಗೂ ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆವೆನ್ನುವ ಚಂಸು.

ಕೃಷಿ ಹೊರತುಪಡಿಸಿದ ಸಂಸ್ಕೃತಿ ಪ್ರೇತವೆನ್ನುವ ಚಂಸುನು ಕೃಷಿಯಲ್ಲೇ ಉಜ್ವಲ ಮತ್ತು ಅರ್ಥಪೂರ್ಣ ಬದುಕು ಕಾಣಲು ಹಂಬಲಿಸಿ ಆ ಪ್ರಯತ್ನದಲ್ಲಿ ಸಫಲನೂ ಆಗುತ್ತಾನೆ..!

ಸಂಸ್ಕೃತಿಯನ್ನು ಹೊರತುಪಡಿಸಿದ ಕೃಷಿ ಹೆಣಭಾರವೆನ್ನುವ ರೈತಕವಿ ಚಂಸು..! ಅಂದಂತೆಯೇ
ಈಗ ಆಗಿರುವುದು ಹೀಗೆಯೇ.
ಇಪ್ಪತ್ತು ವರ್ಷಗಳ ಹಿಂದೆ ಹೋದರೆ ಆಗ ಕೃಷಿ ಮತ್ತು ಸಂಸ್ಕೃತಿ ಯ ಸಂಬಂಧ ಅವಿನಾಭಾವ ಬಂಧವಿತ್ತು. ಅಲ್ಲಿಂದೀಚೆಗೆ ಇವೆರಡೂ ಪರಸ್ಪರ ವಿರುದ್ಧ ದಿಕ್ಕಿನತ್ತಲೇ ಸಾಗಿವೆ, ಈ ವೈರುಧ್ಯದ ಬದುಕೆ ಇವತ್ತು ನಮ್ಮ ರೈತರನ್ನು ಅಸಹಾಯಕರನ್ನಾಗಿಸಿದೆ. ಇನ್ನಿಲ್ಲದಷ್ಟು ಹತಾಶರನ್ನಾಗಿಸಿದೆ.

ಶ್ರಾವಣದಿಂದ ಮಹಾನವಮಿವರಿಗಿನ ಹಬ್ಬಗಳೆಲ್ಲ ಮಣ್ಣನ್ನು ಪೂಜಿಸುವಂಥವೇ. ಮಣ್ಣೆತ್ತಿನ ಅಮಾವಾಸ್ಯೆಗೆ ಮಣ್ಣೆತ್ತು ಮಾಡಿ ಪೂಜಿಸುವುದು. ನಾಗರ ಪಂಚಮಿಗೆ ಹುತ್ತಕ್ಕೆ ಹಾಲೆರೆಯುವುದು. ಗಣಪ ಕೂಡಾ ಮಣ್ಣೆ..! ಇದು ಉಂಡುಟ್ಟು ಸಂಭ್ರಮಿಸಲಿಕ್ಕೇ ಮಾತ್ರ ಬೆಳೆದುಬಂದ ಪರಂಪರೆಯಲ್ಲ. ನಮ್ಮ ಅಡುಗೆ, ಉಡುಗೆ, ತೊಡುಗೆಗಳಿಗೆ ಬೇಕಾದ ಮೂಲ ಪದಾರ್ಥ..! ಪರಿಕರಗಳನ್ನು ಒದಗಿಸುವ ಮಣ್ಣನ್ನು ಪೂಜಿಸುವ, ಮಣ್ಣಿನ ಋಣಕ್ಕೆ ಕೃತಜ್ಞತೆ ಸಲ್ಲಿಸುವ ಅರ್ಥಪೂರ್ಣ ಆಚರಣೆ. ಈ ಆಚರಣೆಗಳನ್ನು ಬಿಟ್ಟಿಲ್ಲ. ಆದರೆ, ಇಂದು ನಂಬಿಕೆಗಳಿಗೆ ಮಣ್ಣು ಕೊಟ್ಟಿದ್ದವೆಂದು ‘ಬೇಸಾಯದ ಕತಿ’ಯಲ್ಲಿ ಹೇಳುವ ಚಂಸು ಒಬ್ಬ ಮಣ್ಣಿನ ಆರಾಧಕ, ರೈತಕವಿ ಅಂತಲೇ ನನ್ನ ಅಭಿಪ್ರಾಯ ಮಾತ್ರವಲ್ಲ ಈತನನ್ನು ತೀರ ಹತ್ತಿರದಿಂದ ಕಂಡ ಬಹು ಜನರ ಅನುಭವವೂ ಆಗಿದೆ.

ಇನ್ನು ಮಣ್ಣಿನ ಸಂಸ್ಕೃತಿಯಿಂದ ದೂರ ಹೋಗಿರುವ ನಗರ ಪಟ್ಟಣಗಳಲ್ಲಿ ಈ ಹಬ್ಬಗಳು ಇನ್ನೂ ವಿಜೃಂಭಣೆಯಿಂದ, ವೈಭವದಿಂದ ಜರಗುವುದನ್ನು ನೋಡಿದರೆ ಇದೆಲ್ಲ ಹಾಸ್ಯಾಸ್ಪದ ಎನ್ನಿಸುತ್ತದೆ. ನಾವು ಇವತ್ತು ಮಾಡುವುದು ಸರಿ ಎಂದಿಟ್ಟುಕೊಳ್ಳೋಣ. ಮತ್ತೇಕೆ ಬೇಕು ನಮ್ಮೀ ಮಣ್ಣಿನ ದೇವರಿಗೆ ಹೋಳಿಗೆ. ಕಡುಬು ಪಾಯಸ..? ಎಂದು ಕೇಳುವ ಚಂಸು ಅವರಿಗೂ ಮೊನೋಕ್ರೋಟೋಫಾಸೋ, ಇಮಿಡಾಕ್ಲೋರಿಫೈಡೋ, ಯೂರಿಯಾವನ್ನೊ, ಡಿಎಪಿಯನ್ನೋ ನೈವೇದ್ಯವಾಗಿ ಅರ್ಪಸಬಹುದಲ್ಲವೆಂದು ಕೇಳುತ್ತಾನೆ..! ಹೀಗೆ ಕೇಳುವ ಈತನ ಪ್ರಶ್ನೆ ನಿಜಕ್ಕೂ ವಾಸ್ತವವಾದ ಪ್ರಾಕೃತಿಕ ಬದುಕಿನ ಪ್ರಶ್ನೆಯೇ ಆಗಿದೆ.

ಇಷ್ಟೆಲ್ಲಾ ತಿಳುವಳಿಕೆ ಇರುವ ವ್ಯಕ್ತಿಗೇ ದಳ್ಳಾಳಿಗಳು ಮೋಸ ಮಾಡುತ್ತಾರೆ ಅಂದರೆ ನೀವು ನಂಬಲಿಕ್ಕಿಲ್ಲ!
ಆ ಮೋಸಗಾರನಿಗೆ ಮೆಟ್ಟಿನಲ್ಲಿ ಹೊಡೆದು. ಪಟ್ಟಭದ್ರ ಹಿತಾಸಕ್ತಿಗಳ ನ್ಯಾಯ ಪಂಚಾಯಿತಿಯಲ್ಲಿ ಚಂಸು ಪಾಟೀಲನು ಗೆದ್ದು ಎದ್ದು ಬಂದಿದ್ದ ರೋಮಾಂಚಮಕಾರಿ ಅಧ್ಯಾಯವನ್ನು ನೀವು ಈ ‘ಬೇಸಾಯದ ಕತಿ’ ಕೃತಿಯನ್ನು ಓದಿಯೇ ತಿಳಿಯಬೇಕು.

ಹಸಿರು ಕ್ರಾಂತಿ ನಮ್ಮ ಕೃಷಿಯನ್ನು ಮಾತ್ರ ಬದಲಿಸಿಲ್ಲ. ನಮ್ಮ ಆಚಾರ-ವಿಚಾರಗಳನ್ನು ಬದಲಿಸಿದೆ. ನಮ್ಮ ಬದುಕಿನ ನಂಬಿಕೆಗಳನ್ನು ನಮಗರಿವಿಲ್ಲದಂತೆಯೇ ಬುಡಮೇಲು ಮಾಡಿದೆ. ಈ ದ್ವಂದ್ವದ ಬದುಕು. ಆಧುನಿಕತೆಯ ಅತೀ ವ್ಯಾಮೋಹವೇಯಾಗಿದೆ. ಲಾಭ ಬಡುಕರ ಲಗಾಮಿನಲ್ಲಿ ಓಡುತ್ತಿರುವ ತಂತ್ರಜ್ಞಾನದ ಸುಳಿಯಲ್ಲಿ ನಾವು ನಮ್ಮತನವನ್ನು ಕಳೆದುಕೊಂಡಿದ್ದೆವೆಂದು ಪರಿತಪಿಸುವ ಚಂಸು ನಾವು ಹಬ್ಬಕ್ಕೆ ತಂದ ಹರಿಕೆಯ ಕುರಿಗಳಾಗಿದ್ದೆವೆಂದೇ ಪರಿತಪಿಸುತ್ತಾನೆ.
ಮತ್ತೆ ಮತ್ತೆ ಮಾರ್ಕೆಟ್‌ ನ ತಳಿರಿಗೆ ಹಾತೊರೆಯುತ್ತಲೇ ಇದ್ದವೆಂದು ಗೋಳಿಡುತ್ತಾನೆ.

ರೋಹಿಣಿ ಅಥವಾ ಮೃಗಶಿರಾ ಮಳೆ ಆಯಿತೆಂದರೆ ಮೆಣಸಿನ ಅಗಿ ಹಚ್ಚುವ ಹೊಲಕ್ಕೆ ಈರುಳ್ಳಿ ಚೆಲ್ಲಿ ಎರಡು ಎರಡೂವರೆ ಅಡಿ ಅಂತರದಲಿ ಸಾಲು ಎಬ್ಬಿಸುತ್ತಿದ್ದರು. ಅರಿದ್ರಾ ಮಳೆ ಬರುವಷ್ಟರಲ್ಲಿ ಎರಡು ದೊಡ್ಡ ಮಳೆ ಬಂದಿರೋದು ಭೂಮಿಯೂ ತಂಪಾಗಿ ವಾತಾವರಣದಲ್ಲಿ ತಂಪು ಸೂಸುತ್ತಿರುವ ಸಮಯವದು. ಜುಲೈ ತಿಂಗಳಿಗೆ ಆಗಲೇ ಮುಂಗಾರು ಆರಂಭವಾಗಿ ಪೂರ್ವಾಭಿಮುಖವಾಗಿ ಚಲಿಸುವ ನೈರುತ್ಯ ಮಾರುತದ ಮೋಡಗಳ ಪರಿಣಾಮ ದಿನಗಳಲ್ಲಿ ಆಗಾಗ ಮಳೆ ಸೆಳಕುಗಳು ಓಡಾಡುತ್ತಲೇ ಇರುತ್ತಿದ್ದವು. ಗಿಡ ಹಚ್ಚಲು ಇದು ಸೂಕ್ತ ಕಾಲ. ‘ಆದ್ರಿ ಮಳೆಗೆ ಹಚ್ಚಿದರೆ ಆರು ಕಾಯಿ ಹೆಚ್ಚು’ ಎಂಬ ಗಾದೇನೇ ಇದೆ .
ಅರಿದ್ರಾ ಮಳೆ ಶುರುವಾಗುತ್ತಲೆ ಈರುಳ್ಳಿ ಚೆಲ್ಲಿದ ಹೊಲಕ್ಕೆ ಮೆಣಸಿನ ಕಾಯಿ ಅಗಿ ಹಚ್ಚುತ್ತಿದ್ದರು ಆಗ ಮತ್ತೇ ಆ ಹೊಲಕ್ಕೆ ಹುಬ್ಬಿ ಮಳೆ ಬಂದಾಗ ಸಣ್ಣ ಹತ್ತಿ ಅಂದರೆ ನಮ್ಮ ದೇಸಿ ಜೈಧರ ಹತ್ತಿ ಬೀಜ ಊರುತ್ತಿದ್ದರು. ಹೀಗೆ ಒಂದೇ ಹೊಲದಲ್ಲಿ ಬೇರೆ ಬೇರೆ ಕಾಲಮಾನಕ್ಕೆ ಮತ್ತು ಹವಾಮಾನಕ್ಕೆ ಬೆಳೆವ ಪ್ರಮುಖ ಮೂರು ಬೆಳೆಗಳನ್ನು ಅವರು ಅಂದರೆ ನಮ್ಮ ಹಿರಿಕರು ಬೆಳೆಯುತ್ತಿದ್ದರು.

ಈಗ ಹೈಬ್ರಿಡ್ ಬಂದು ಮಿಶ್ರ ಬೆಳೆ ಹಾಳಾಯಿತು. ಹೈಬ್ರಿಡ್ ಹಾಗೂ ಬಿಟಿ ಬಂದ ಮೇಲೆ ಈ ಅಪೂರ್ವವಾದಂತಹ ಮಿಶ್ರ ಬೆಳೆ ಪದ್ದತಿಯೇ ಮೂಲೆಗುಂಪಾಯಿತು. ಏಕಬೆಳೆ ಪದ್ದತಿಯೇ ಸಾರ್ವಭೌಮವಾಯಿತು. ಬಂದರೆ ಸರಿ ಇಲ್ಲದಿದ್ದರೆ ಬರೆ ಬೀಳುವುದೂ ಸಾಮಾನ್ಯವಾಯಿತು ಎಂದು ರೈತಕವಿ ಚಂಸು ಪರಿತಪಿಸುತ್ತಾನೆ.

ನಲವತ್ತು ವರ್ಷಗಳ ಹಿಂದೆ ಸುರುವಾದ ಬಾವಿ ನೀರಾವರಿಯ ಸಂದರ್ಭದಲ್ಲಿಯೇ ಹಸಿರು ಕ್ರಾಂತಿಯ ಘೋಷಣೆ ಮೊಳಗಿತು. ಆಗ ನನ್ನೂರಲ್ಲಿ ಸುಮಾರು ಇಪ್ಪತ್ತು-ಇಪ್ಪತ್ತೈದು ಬಾವಿಗಳಿದ್ದವು. ಆರಂಭದಲ್ಲಿ ಬಾವಿ ತುಂಬ ನೀರು ಇರುತ್ತಿತ್ತು. ಹಗಲಿಡೀ ವಿದ್ಯುತ್ ಇರುತ್ತಿತ್ತು. ಹೊಲಗಳೆಲ್ಲ ಹಸಿರಿನಿಂದ ಕಂಗೊಳಿಸುತ್ತಿದ್ದವು. ಸಂಜೆಗೆ ಬಾವಿ ಖಾಲಿಯಾದರೂ ಬೆಳಕು ಹರಿಯುವಷ್ಟರಲ್ಲಿ ಬಾವಿಗಳು ತುಂಬಿಕೊಳ್ಳುತ್ತಿದ್ದವುವೆನ್ನುವ ಚಂಸುನ ಈ ಮಾತು ಬರೀ ಚಂಸು ಊರಿಗೆ ಮಾತ್ರ ಸೀಮಿತವಾಗಿಲ್ಲ. ಕೃಷಿವೆನ್ನುದು ಎಲ್ಲಿದೆಯೋ ಅಲ್ಲಲ್ಲಿಲ್ಲೆಲ್ಲಾ ಸಂಬಂಧಿಸಿದ್ದೇಯಾಗಿದೆ.

ಹಸಿರು ಕ್ರಾಂತಿ ಅಥವಾ ಆಧುನಿಕ ಕೃಷಿ ಅಮೇರಿಕೆಯ ಕುರುಡು ಅನುಕರಣೆಯೇ ಹೊರತು ಅದರಲ್ಲಿ ಬೇರೆ ಹುರುಳಿಲ್ಲ ಎಂಬುವುದ್ದಕ್ಕೆ ಇವತ್ತು ಪ್ರತಿ ದಿನವೂ ಸಂಭವಿಸುತ್ತಿರುವ ರೈತರ ಆತ್ಮಹತ್ಯೆಗಳೇ ಸಾಕ್ಷಿ. ಹಸಿರು ಕ್ರಾಂತಿಯನ್ನು ಜಾರಿಗೊಳಿಸುವಾಗ ಆದನ್ನು ಕನಿಷ್ಟ ನಮ್ಮತನಕ್ಕೆ ಹಾಗೂ ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಹೇಗೆ ಕಾರ್ಯಗತಗೊಳಿಸಬಹುದೆಂಬ ಕುರಿತು ಯೋಚಿಸಿ ಬೇಕಿತ್ತು.
ಸಾವಿರ ಶತಮಾನಗಳ ಕೃಷಿ ಪರಂಪರೆಯ ನಾಡು ನಮ್ಮದು ಎಂಬ ಸಂಗತಿಯಾದರೂ ನೆನಪಿಗೆ ಬರಬೇಕಿತ್ತು. ಪರಿಸರ ನೈರ್ಮಲ್ಯ. ಜಲ ಸಂರಕ್ಷಣೆ. ಅರಣ್ಯ ರಕ್ಷಣೆಯ ಜೊತೆ ಜೊತೆಗೇನೇ ಕೃಷಿಯಲ್ಲಿ ಹೆಚ್ಚು ಇಳುವರಿಯ ಪಡೆಯುವ ಸಾದ್ಯತೆಗಳನ್ನು ಕಂಡುಕೊಳ್ಳಬಹುದಿತ್ತು. ಇವತ್ತು ದೇಶಕ್ಕೆ ಆಹಾರಭದ್ರತೆ ಇದೆ, ಆದರೆ ಅದನ್ನು ಬೆಳೆದು ಕೊಟ್ಟ ಕೃಷಿಕರ ಜೀವಕ್ಕೆ, ಜೀವನಕ್ಕೆ ಬೆಲೆ ಇಲ್ಲ ಅಂದ್ರೆ ಏನು ಅರ್ಥ? ಒಂದು ದೇಶ. ಅಲ್ಲಿನ ಸರ್ಕಾರ ಮತ್ತು ಆ ಸಮುದಾಯದ ಕೃತಘ್ನತೆಯ ವಿರಾಟ್ ಸ್ವರೂಪವಲ್ಲದೇ ಇದು ಮತ್ತೇನು..? ಎಂದು ಚಂಸು ಪಶ್ನಿಸುತ್ತಿರುವುದು ಸಕಾಲಿಕ ಸತ್ಯವೇ ಆಗಿದೆ.

ಫುಕುವೋಕಾರ ‘ಒಂದು ಹುಲ್ಲಿನ ಕ್ರಾಂತಿ’ ಪ್ರಕಟವಾಗಿದ್ದು 1975ರಲ್ಲಿ. ಅದು ಕನ್ನಡಕ್ಕೆ ಬಂದಿದ್ದು 1988ರಲ್ಲಿ. ಫುಕುವೋಕಾ ಸಹಜ ಕೃಷಿಯ ಬಗ್ಗೆ ಮಾತಾಡಿ ೪೦ ವರ್ಷಗಳಾದವು. ಈ ನಲವತ್ತು ವರ್ಷಗಳ ನಂತರವೂ ನಾವು ಆಧುನಿಕ ಕೃಷಿಯನ್ನೇ ಅನಿವಾರ್ಯ ಎಂದುಕೊಂಡು, ಪ್ರಕೃತಿಗೆ ಮಾರಕವಾದ ಅದನ್ನೇ ಮುಂದುವರಿಸಿಕೊಂಡು ಹೊರಟಿದ್ದೇವೆ. ಇದು ಇರುಳು ಕಂಡ ಬಾವಿಗೆ ಹಗಲು ಬಿದ್ದರೆಂಬ ಗಾದೆಯನ್ನು ನೆನಪಿಸುವಂತದಾಗಿದೆ.

ಇವತ್ತಿನ ಕೃಷಿಯಲ್ಲಿ ಕಾರ್ಮಿಕರ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತಿದೆ. ಬಹುಶಃ ಸರ್ಕಾರದ ಉದ್ದೇಶವೂ ಇದೆ ಎಂದು ಹೇಳಲಾಗುತ್ತಿದೆ. ಕಾರ್ಪೊರೇಟ್ ವಲಯದ ನಿಯಂತ್ರಣಕ್ಕೆ ಬರುವ ರೀತಿಯಲ್ಲಿ ಕೃಷಿಯನ್ನು ಬಗ್ಗಿಸಲಾಗುತ್ತಿದೆ. ಅಥವಾ ಹಿಗ್ಗಿಸಲಾಗುತ್ತಿದೆ. ಸಂಪೂರ್ಣ ಯಾಂತ್ರೀಕರಣದ ನಂತರ ಕೃಷಿಯಲ್ಲಿ ಪಾಲ್ಗೊಳ್ಳುವ ಜನಸಂಖ್ಯೆಯನ್ನು ಶೇ 25 ರೊಳಗೆ ತರುವ ಪ್ರಯತ್ನಗಳ ಕುರಿತ ವರದಿಗಳಿವೆ. ಕೃಷಿಯಿಂದ ಹೊರಬಂದ ಶೇ 40ಕ್ಕೂ ಹೆಚ್ಚು ಜನರಿಗೆ ಬೇರೆ ಬೇರೆ ವಲಯಗಳಲ್ಲಿ ಸ್ಥಿರವಾದ ಉದ್ಯೋಗಗಳ ಲಭ್ಯತೆ ಸಾದ್ಯವೆ..? ಎಂದು ಚಂಸು ಪ್ರಶ್ನಿಸುತ್ತಾನೆ.

ಆಗ ಊಟದ ವೇಳೆ ಎಂದರೆ ಹಿಂದಿ ವಾರ್ತಾ ಸುರುವಾಗುವ ಸಮಯ. ಅಲ್ಲಿಗೆ ರೇಡಿಯೋ ಬಂದ್ ಮಾಡಿ ಉಂಡು ಮಲಗಿಬಿಡುತ್ತಿದ್ದೆವು.
ಟಿವಿ ಬಂದ ಮೇಲೆ ಅಪ್ಪ ಅವರಿವರ ಮನೆಗೆ ಹೋಗುವುದನ್ನು ನಿಲ್ಲಿಸಿಬಿಟ್ಟ. ಯಾರಾದರೂ ಮನೆಗೆ ಬಂದರೆ ಹಾಂ ಹೂಂ ಅಷ್ಟೇ ಮಾತುಕತೆ. ಎಲ್ಲರ ಕಣ್ಣು, ಮನಸು ಟಿವಿ ಮೇಲೆ. ಅದು ನಮ್ಮ ಸಾಮಾಜಿಕ ಸಂಬಂಧಗಳೊತ್ತಟ್ಟಿಗಿರಲಿ ಮನೆಯೊಳಗಿನ ಕೌಟುಂಬಿಕ ಸಂಬಂಧಗಳನ್ನೂ ತೆಳುವಾಗಿಸಿಬಿಟ್ಟಿತು ಎಂದು ಚಂಸುನ ಕಳಕಳಿಯ ಪ್ರಶ್ನೆಯಾಗಿದೆ.

‘ಎಮ್ಮೆ ಮುಗಿಸಿ ಎಲ್ಲಾದರೂ ಲೆಕ್ಚರರ್ ಆಗು ಅಂದ್ರೆ ಅದೆಲ್ಲ ಬಿಟ್ಟು ಬರೇ ಕವನ ಬರ್ಕೊಂಡು ಸಾಯಿತಿ ಆಗ್ತಾನಂತೆ, ಎಂದು ಚಂಸುನ ಕಾಕಾನ ಎದುರು ಚಂಸುನ್ನನ್ನು ಲೇವಡಿ ಮಾಡಹತ್ತಿದ. ಹಾಗಾದ್ರೆ ಬರದಬದುಕಾಕ ಆಗ್ತೈತೇನು..? ಆ ದಮ್ಮ ಇದ್ರ ಬರದ ಬದುಕಿ ತೋರ್ಸು ನೋಡೋಣ. ಬರದ ನಿನ್ನ ಕಾಲಮೇಲೆ ನೀನು ನಿಂತು ತೋರ್ಸು ನೋಡೋಣ’ ಅಂತ ಮತ್ತೆ ಮತ್ತೆ ಸವಾಲು ಹಾಕತೊಡಗಿದರು. ಇಂಥ ಮಾತುಗಳನ್ನು ಪದೇ ಪದೇ ಕೇಳ್ತಾ ಕೇಳ್ತಾ ಮನೆಯಲ್ಲಿ ಇರೋದು… ಅದೂ ನನ್ನಿಷ್ಟದಂತೆ ಕಮ್ತ ಮಾಡಲು ಸಾದ್ಯವಿಲ್ಲ ಎನ್ನುವುದು ಖಚಿತವಾದ ಮೇಲೂ ಇರುವುದು ಅಸಹನೀಯವೆನಿಸಹತ್ತಿತು. ಕಮ್ತ ಮತ್ತು ಕವಿತೆ ಎರಡೂ ಚಂಸುನ ಇಷ್ಟದ ಸಂಗತಿಗಳೇ ಆಗಿದ್ದವು. ಚಂಸು ಪೂರ ನೆಚ್ಚಿ ಕೊಂಡಿದ್ದ ಕಮ್ತದಿಂದ ಇದ್ದಕ್ಕಿದ್ದಂತೆ ದೂರವಾದಂತೆ. ಅಪ್ಪ ಆಡಿರುವ ಮಾತುಗಳ ದೆಸೆಯಿಂದ ನಾನು(ಚಂಸು) ನಂಬಿರುವ ಬರವಣಿಗೆ ಚಂಸುನನ್ನ ಕೈ ಹಿಡಿಯಬಲ್ಲುದೇ ಎಂದು ಯೋಚಿಸಿತೊಡಗಿದನು.

ಮನೆಯಿಂದ ಹೊರ ಬಂದು ಎಲ್ಲೆಲ್ಲೂ ಅಲೆದು ಉದ್ಯೋಗಕ್ಕಾಗಿ ಬೆಂಗಳೂರು ಗೆ ಬಂದ ನಮ್ಮ ಚಂಸು ಪಾಟೀಲನು ದೊಡ್ಡ ಬಳ್ಳಾಪುರದ ಸಮೀಪದ ಹಳ್ಳಿಯೊಂದರಲಿ ಫ್ಯಾಕ್ಟರಿಯಲ್ಲಿ ದಿನಗೂಲಿ ನೌಕರನಾಗಿ ದುಡಿದು, ಮತ್ತಲಿಯೇ ತೋಟವೊಂದರಲ್ಲಿ ಕೃಷಿ ಕಾರ್ಮಿಕನಾಗಿ ಆ ತೋಟದಲ್ಲಿ ಟೊಮೆಟೊ ಅದಿಕ ಇಳುವರಿ ಕಂಡು ಊರಲ್ಲಿ ಮತ್ತೆ ಕಮ್ತ ಮಾಡಲೆಂದು ಹಿಂದುರುಗಿ ಹೋಗಲು ಬೆಂಗಳೂರುಗೆ ಬಂದು ಪತ್ರಿಕೆಯೊಂದರಲ್ಲಿ ವರದಿಗಾರನಾಗಿ. ಅಲ್ಲದೇ ಅದರದ್ದೇ ಕಲ್ಬುರ್ಗಿ ಶಾಖೆಯಲ್ಲಿ ಕೆಲಸ ಮಾಡಲು ಹೋಗಿ ಅಲ್ಲಿನ ರೈತಾಪಿ ವರ್ಗದ ಕಷ್ಟನಷ್ಟಗಳ ಕಣ್ಣಾರೆ ಕಂಡು ಮಮ್ಮಲ ಮರುಗಿ, ಪಾರಂಪರಿಕ ಕೃಷಿಯಿಂದ ನಿರುಮ್ಮುಳವಾಗಿದ್ದ ಶತಯುಷಿ ಅಜ್ಜನ ನೆನಪು ಮಾಡಿಕೊಂಡು..!
ಅಲ್ಲಿಂದ ತಾತನೂರಿಗೆ ಪಯಣ ಬೆಳೆಸುತ್ತಾನೆ. ಅಜ್ಜನ ನಿರ್ಗಮನದ ನಂತರ ಧಾರವಾಡದಲ್ಲಿ ಪತ್ರಿಕೋದ್ಯಮದಲ್ಲಿ ತಲ್ಲೀನನಾಗಿ, ಅಪ್ಪನ ಕರೆಗೆ ಓಗೊಟ್ಟು ಮತ್ತೆ ಕಮ್ತಕ್ಕೆ ಪಾದರ್ಪಣೆ ಮಾಡುತ್ತಾನೆ.
ಅಮೇರಿಕೆಯಲ್ಲಿ ಇತ್ತೀಚಿನ ಕೆಲ ವರ್ಷಗಳಲ್ಲಿ ಸಾವಯವ ಆಹಾರ ಧಾನ್ಯಗಳ ಬೇಡಿಕೆ ಶೇ 10 ರಷ್ಟು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲಿಯೂ ಕೂಡ ನಮ್ಮಲಿನ ಮಿಶ್ರಬೆಳೆ ಪದ್ಧತಿಯನ್ನು ಆಧರಿಸಿ ಪರಿಸರಸ್ನೇಹಿ ಕೃಷಿಗೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ. ವಿಪರ್ಯಾಸವೆಂದರೆ ಅಲ್ಲಿ ಬ್ಯಾನ್ ಆದ ರಾಸಾಯನಿಕ ಔಷದಿಗಳನ್ನೇ ಬಳುಸುತ್ತೇವೆ. ಎತ್ತ ಸಾಗಿದೆ ನಮ್ಮ ಕೃಷಿ..? ಎಂದು ಪ್ರಶ್ನಿಸಿಕೊಳುತ್ತಾನೆ. ಈತ ಪ್ರಶ್ನೆಯು ಸಹಜವಾಗಿದೆ. ಹೀಗೆಯೇ ಕೃಷಿಯ ಬಗೆಗೆ ಹೇಳುತ್ತಾ ಮತ್ತು ಕೇಳುತ್ತಾ ಸಾಗುವ ಚಂಸು ಪಾಟೀಲನ ಸಹಜ ಕೃಷಿಯ ಮಮಕಾರವೇ ‘ಬೇಸಾಯದ ಕತಿ’ಯಲ್ಲಿ ಅಡಗಿದೆ. ಈ ಕೃತಿ ನನಗಂತೂ ತೀರಾ ಆಪ್ತವೆನಿಸಿದ ಕೃತಿಯಾಗಿದೆ. ಈ ‘ಬೇಸಾಯದ ಕತಿ’ಯನ್ನು ನೀವೂ ಓದಿ ಕೃತಿಯನ್ನು ಆಪ್ತವಾಗಿಸಿಕೊಳ್ಳಿ ಎನ್ನುತ್ತಾ ಈ ‘ಬೇಸಾಯದ ಕತಿ’ಯ ಬಗೆಗಿನ ಈ ಬರಹವನ್ನು ಮುಗಿಸುತ್ತೇನೆ..!

ಈ ಕೃತಿಗಾಗಿ ಇಲ್ಲಿ ಸಂಪರ್ಕಿಸಬಹುದು…

‘ಬೇಸಾಯದ ಕತಿ’
ಕೃತಿಯ ಲೇಖಕರು- ಚಂಸು ಪಾಟೀಲ
ಅಹರ್ನಿಶಿ ಪ್ರಕಾಶನ
ಪ್ರಕಾಶಕರು
ಅಕ್ಷತಾ.ಕೆ
ಸಂಪರ್ಕ ಸಂಖ್ಯೆಗಳು
9449174662
9448628511

******************************

ಶಿವು ಲಕ್ಕಣ್ಣವರ

Leave a Reply

Back To Top