ದಿಟ್ಟ ಹೆಜ್ಜೆ

ಕವಿತೆ

ದಿಟ್ಟ ಹೆಜ್ಜೆ

ಶಿವಲೀಲಾ ಹುಣಸಗಿ

ಇನ್ನೇನು ಬೀದಿಗೆ ಬಿದ್ದಂತೆ
ಒಣಹುಲ್ಲಿಗೂ ಆಸರೆಯಿಲ್ಲದೇ
ಕೊನೆಗಳಿಗೆಯ ನಿಟ್ಟುಸಿರಿಗೆ
ನಿತ್ರಾಣದ ನಡುವಿಂದ ನಡುಕ
ಕಣ್ಸನ್ನೆಯಲಿ ನುಡಿದುದೆಲ್ಲ ದಿಟ
ಹೊತ್ತಿಗೆ ಬಾರದ ತುತ್ತ ನೆನೆದು
ಕತ್ತು ಹೊರಳಿದರೂ ನಿಲ್ಲದ ಆಪತ್ತು
ತೂಗುಗತ್ತಿಯ ನೆತ್ತಿಯಲಿ ಹೊತ್ತು
ಸ್ವಪ್ನ ಕಾಣುವ ಭರದಲ್ಲಿಯೇ
ಸೂರಿಲ್ಲದೆ ತಾರೆಗಳಾದರೆಷ್ಟೋ
ಒಣಹುಲ್ಲಿಗೆ ಮಣಲೆಕ್ಕ ಬರೆದು
ಹೊಟ್ಟೆ ಬಗಿದರೂ ಚಿಮ್ಮದಾ ನೆತ್ತರು
ಹಸಿವಿನ ಮುಂದೆ ಎಲ್ಲ ಸೋತವರು
ಶೂನ್ಯದಾಹುತಿಗೆ ಕೊರಳೊಡ್ಡಿಹರು
ಬೀದಿಗೆ ಬಂದ ಬದುಕಿಗೆಲ್ಲಿದೆ ತ್ರಾಣ
ಇರಳೊಂದು ಮಸಿ ಚಲ್ಲಿದಂತೆ
ಗಾಢಂಧಕಾರದಲಿ ಸುಖವೆಲ್ಲ ವ್ಯರ್ಥ
ಎಲುಬಿನ ಎಣಿಕೆಯೋ ಗೋರ ಅನರ್ಥ
ಬಯಲಿಗೆ ಬೆತ್ತಲಾಗುವ ಭಯವಿಲ್ಲ
ನಮಗೋ ಬಯಲಾಗದೇ ಬದುಕಿಲ್ಲ
ಬೀದಿ ಚಂದ್ರಮನೇ ಮೌನವಾಗಿಹನು
ಚಿಗುರೊಡೆಯದೆ ಕಮರಿದ ಬಾಳಿಗೆ.
ಎದೆಸೆಟಿಸಿ ನಡೆದೆನೆಂದರೂ ನಿರಾಶೆ
ಎದೆಬಗಿದು ಕರುಳ ಹೊಸೆಯುತಲಿ
ನೆತ್ತರ ದೀಪ ಹಚ್ಚಿ ನಗುವವರ ನಡುವೆ
ಬೀದಿ ದೀಪಗಳೇ ಹಿತವನಿಸಿ ಬಿಟ್ಟಿದೆ
ದಿಕ್ಕರಿಸಿದವರ ಹುಟ್ಟಡಗಿಸಿ ನಕ್ಕರೆ
ಬದುಕಿಗೆಲ್ಲಿದೆ ಭದ್ರತೆಯ ಹಸ್ತ
ಸೋತ ಮನಕೆ ಆಗಸದ ಅಭಯ
ನೆಚ್ಚಿಕೆಯ ಹಂಗಿಲ್ಲದಾ ಆರ್ಭಟವು
ಸ್ವಾಭಿಮಾನದ ಕಿಡಿಯ ಒಳಕಿಚ್ಚಿಗೆ
ಭಸ್ಮವಾಗಿ ಬೀದಿಗೆ ಬಂದಾಗಿದೆ
ಅಳಿವು,ಉಳಿವಿನ ಹೊರಾಟಕೆ
ರಟ್ಟೆಯ ಕಸುವು ಕೊಸರುವ ಮುನ್ನ
ದಿಟ್ಟ ಹೆಜ್ಜೆಯಿಟ್ಟು ಬದುಕಬೇಕಿದೆ.
ಇಲ್ಲವಾದರೆ ಬೀದಿ ಹೆಣವಾದಂತೆ…

***********************

8 thoughts on “ದಿಟ್ಟ ಹೆಜ್ಜೆ

  1. ಬದುಕು ಎಂದಾಕ್ಷಣ ಏನಿಲ್ಲ? ಎಲ್ಲವೂ ಇದೆ ಹಾಗಂತ ಮನಸ್ಸಿಗೆ ಬಂದಂತೆ ಬದುಕಲಾಗದು ಬದುಕಿದರೂ ಅದು ಬದುಕು ಏನಿಸದು ಹಾಗಾಗಿ ಪ್ರತಿ ವ್ಯಕ್ತಿ ಅಳುಕದೆ ಇಟ್ಟ ಹೆಜ್ಜೆ ಹಿಂದೆ ತೆಗೆಯದಂತೆ ಧೈರ್ಯ ದಿಂದ ಬಂದಿದ್ದನ್ನು ಎದುರಿಸಬೇಕು ಅದಕ್ಕೆ ಇಡುವಾಗಲೇ ದಿಟ್ಟಹೆಜ್ಜೆ ಇಡಬೇಕು ಕವಿತೆ ಚೆನ್ನಾಗಿದೆ ಅಭಿನಂದನೆಗಳು ಮೆಡಮ್

  2. ದಿಟ್ಟತನದಿಂದಲೇ ಹೆಜ್ಜೆ ಇಡಬೇಕು ನಿಜವಾಗಿಯೂ ಹೌದು ನಿನ್ನ ಬರವಣಿಗೆ ಸೂಪರ್

  3. ದಿಟ್ಟ ಹೆಜ್ಜೆ ಇಟ್ಟು ಮುಂದೆ ಸಾಗಬೇಕು ಎನ್ನುವುದು ನೀಜವಾಗಿಯು ಹೌದು.ನಿಮ್ಮ ಬರವಣಿಗೆ ಸೂಪರ್ ಟೀಚರ್.

  4. ದಿಟ್ಟ ಹೆಜ್ಜೆ ದಿಟ್ಟತನದಿಂದ ಕೂಡಿದೆ ಸೂಪರ್ ಮೆಡಮ್

  5. ಪ್ರತಿಯೊಬ್ಬರ ಬದುಕಿನಲ್ಲಿ ದಿಟ್ಟತನವೇ ಒಂದು ಸವಾಲು ಅದನ್ನು ಸೂಕ್ಷ್ಮವಾಗಿ ಬಿಂಬಿಸಿದ್ದೀರಿ.

Leave a Reply

Back To Top