ಕವಿತೆಯೆಂದರೆ…

ಕವಿತೆ

ಕವಿತೆಯೆಂದರೆ…

ವಿದ್ಯಾಶ್ರೀ ಎಸ್ ಅಡೂರ್

ಕವಿತೆಯೆಂದರೆ ಮನದೊಳಗೊಂದು
ಚುಚ್ಚುವ ನೋವು….
ಕವಿತೆಯೆಂದರೆ ಉಕ್ಕಿಹರಿವ
ಮನಸಿನ ನಲಿವು….

ಕವಿತೆಯೆಂದರೆ ಮೌನಮನಸಿನ
ಸ್ವಚ್ಚಂದ ಆಕಾಶ
ಕವಿತೆಯೆಂದರೆ ಗಿಜಿಗುಡುವ
ಏಕತಾನತೆಯ ಆಕ್ರೋಶ

ಕವಿತೆಯೆಂದರೆ ಸುಮ್ಮನೆ
ನಿಡುಸುಯ್ದ ನಿಟ್ಟುಸಿರು
ಕವಿತೆಯೆಂದರೆ ನೀರು-ಗೊಬ್ಬರ
ಹಾಕಿ ಬೆಳೆಸಿದ ಹಸಿರು

ಕವಿತೆಯೆಂದರೆ ರಂಗುರಂಗಿನ
ಬಣ್ಣ ಬಣ್ಣದ ಕಾಮನಬಿಲ್ಲು
ಕವಿತೆಯೆಂದರೆ ಗಾಢಾಂಧಕಾರದಿ
ಬಿಡುಗಡೆಯ ಸೊಲ್ಲು

ಕವಿತೆಯೆಂದರೆ ಮೌನ
ಮನಸ್ಸಿನ ಟಿಪ್ಪಣಿ
ಕವಿತೆಯೆಂದರೆ ಕೂಗಿ ಕರೆಯುವ
ಹಾರಿ ಸಾರುವ ಪುರವಣಿ

ಕವಿತೆಯೆಂದರೆ ಜಗಕ್ಕೆ ಬೆನ್ನು ಮಾಡಿ
ಉಪ್ಪಿ ಅಪ್ಪಿದ ಮೌನ
ಕವಿತೆಯೆಂದರೆ ಅಂಗೈಯಲ್ಲಿ
ಮೊಗೆಮೊಗೆದು ಅನುಭವಿಸುವ ಜೀವನ

ಕವಿತೆಯೆಂದರೆ ಹೆಪ್ಪುಗಟ್ಟಿದ
ಭಾವಗಳ ಕಾರ್ಮುಗಿಲು
ಕವಿತೆಯೆಂದರೆ ಧುಮ್ಮಿಕ್ಕಿ ಸುರಿಯುವ
ಮನಸಿನ ದಿಗಿಲು

ಕವಿತೆಯೆಂದರೆ ಬಿದ್ದಾಗ
ಆಸರೆ ಕೊಡುವ ನೆಲ
ಕವಿತೆಯೆಂದರೆ ಸದಾ ಹಸಿರು
ತೆನೆಗಳಿಂದ ತೊಯ್ದಾಡುವ ಹೊಲ

ಕವಿತೆಯೆಂದರೆ ಮನದ ತಮ ಕಳೆಯಲು
ನಾನೇ ಹಚ್ಚಿದ ದೀಪ
ಕವಿತೆಯೆಂದರೆ ಬಗೆ ಬಗೆ
ಭಾವದ ಬಗೆಬಗೆ ರೂಪ

ಕವಿತೆಯೆಂದರೆ ನನ್ನ ಸದಾ
ಪೊರೆವ ಅಮ್ಮನ ಮಡಿಲು
ಕವಿತೆಯೆಂದರೆ ಭಾವದ ಕೂಸು
ಮಲಗಿರುವ ತೂಗುವ ತೊಟ್ಟಿಲು

********************************************

6 thoughts on “ಕವಿತೆಯೆಂದರೆ…

  1. ಕವಿತೆಯೆಂದರೆ ಇಷ್ಟೆಲ್ಲ! ಕವನ ಚೆನ್ನಾಗಿದೆ.

  2. ಅದ್ಭುತ. ಎಂತಹ ಪ್ರಾಸಬದ್ಧ ಪದಜೋಡಣೆ

Leave a Reply

Back To Top