ಪುಸ್ತಕ ಪರಿಚಯ
ಕಾಡ ಸೆರಗಿನ ಸೂಡಿ
ಕಾಡ ಸೆರಗಿನ ಸೂಡಿ
ಕಾದಂಬರಿ
ಮಂಜುನಾಥ್ ಚಾಂದ್
ಅಕ್ಷರ ಮಂಡಲ ಪ್ರಕಾಶನ
ಮಂಜುನಾಥ್ ಚಾಂದ್ ಅವರು ಪತ್ರಕರ್ತರು. ನಾಡಿನ ಹಲವು ಪತ್ರಿಕೆಗಳ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿರುವ ಚಾಂದ್ ‘ ಓ ಮನಸೇ’ ಪಾಕ್ಷಿಕದಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮೂಲತಃ ಕುಂದಾಪುರ ಸಮೀಪದ ಮರವಂತೆಯ ಮಗ್ಗುಲಲ್ಲಿ ಇರುವ ತ್ರಾಸಿ ಎಂಬ ಪುಟ್ಟ ಹಳ್ಳಿಯವರು. ‘ಅಮ್ಮ ಕೊಟ್ಟ ಜಾಜಿ ದಂಡೆ, ಕದ ತೆರೆದ ಆಕಾಶ’ ಅವರ ಪ್ರಮುಖ ಕೃತಿಗಳು. ‘ಕಾಡ ಸೆರಗಿನ ಸೂಡಿ’ ಅವರ ಪ್ರಥಮ ಕಾದಂಬರಿ.
ಕಾಡ ಸೆರಗಿನ ಸೂಡಿ ಕಾದಂಬರಿಯು 1930- 34ರ ಕಾಲಘಟ್ಟದಲ್ಲಿ ನಡೆಯುವ ಕಥಾನಕ. 1934ರ ಫೆಬ್ರವರಿ ಇಪ್ಪತ್ತಾರರಂದು ಮಹಾತ್ಮ ಗಾಂಧೀಜಿಯವರು ಕುಂದಾಪುರಕ್ಕೆ ಬಂದ ಎಳೆಯನ್ನು ಇಟ್ಟುಕೊಂಡು ಮಂಜುನಾಥರು ಈ ಕೃತಿಯನ್ನು ರಚಿಸಿದ್ದಾರೆ. ಗಾಂಧೀಜಿ ಬರುವ ಸಮಯದಲ್ಲಿ ಎಲ್ಲೋ ಪ್ರಕಟವಾದ ಪತ್ರಿಕೆ, ಅದು ಮತ್ಯಾವುದೋ ದೂರದ ಗ್ರಾಮದ ಮನೆಮನೆಗೆ ತಲುಪುತ್ತಿದ್ದ ರೀತಿ, ಆ ಗ್ರಾಮದ ಪ್ರಮುಖರು, ಅವರ ಜೀವನ, ಕಾಡಿನಲ್ಲಿ ಜೀವನ ನಡೆಸುತ್ತಿದ್ದ ಬುಡಕಟ್ಟು ಜನಾಂಗದ ತನಿಯಾ ಮತ್ತು ಸನಿಯಾರು ದಂಪತಿಯ ಚಿತ್ರಣ, ಬ್ರಿಟಿಷ್ ಅಧಿಕಾರಿಯ ಕ್ರೂರತೆ, ಮುಂದೆ ಆತ ಒಂದು ಅನೂಹ್ಯ ಕ್ಷಣದಿಂದ ಬದಲಾಗುವುದು, ಊರಿನವರೆಲ್ಲರ ಜೊತೆ ಒಂದಾಗಿ ಬಾಳುವ ಮುಗ್ಧ ತನಿಯಾ, ಸ್ವಾತಂತ್ರ್ಯ ಹೋರಾಟಗಾರರ ಸಾವುಗಳಿಂದ ಚೇತರಿಸಿಕೊಂಡು ಚಳುವಳಿಗೆ ತಮ್ಮದೇ ಕೊಡುಗೆಯನ್ನು ಕೊಡುವ ಮಹಿಳೆಯರು… ಹೀಗೆ ಕಾದಂಬರಿ ಸೌಪರ್ಣಿಕಾ ನದಿಯಂತೆ ಸರಳವಾಗಿ, ಶಾಂತವಾಗಿ ಮತ್ತು ಸುಂದರವಾಗಿ ಸಾಗುತ್ತದೆ.
ಯಾವುದೇ ಜನಪ್ರಿಯ ಧಾಟಿಯನ್ನು ಕೃತಿಕಾರರು ಅವಲಂಬಿಸದೇ ತಮ್ಮದೇ ಓಘದಲ್ಲಿ ಕಥೆಯನ್ನು ಹೇಳಿರುವುದು ಇಲ್ಲಿಯ ವಿಶೇಷವಾಗಿದೆ. ನದಿ, ಕಾಡು, ಗುಡ್ಡ, ಜಲಪಾತ, ಮರ, ಬಳ್ಳಿಗಳು ಕಾದಂಬರಿಯ ಉದ್ದಕ್ಕೂ ಹರಡಿಕೊಂಡಿವೆ. ಪ್ರಕೃತಿಯ ದಿವ್ಯ ಸಾನಿಧ್ಯದಲ್ಲಿ ಅಲೆದಾಡಿದ ಅನುಭವ ಓದುಗನಿಗೆ ದೊರೆಯುತ್ತದೆ. ಚಾಂದ್ ಅವರಲ್ಲಿರುವ ನಿರೂಪಕ ಇಲ್ಲಿ ಕಾವ್ಯಾತ್ಮಕವಾಗಿ ಗೋಚರಿಸುತ್ತಾನೆ. ಕುಂದಾಪುರ ಭಾಷೆಯ ಸೊಗಡನ್ನು ಇಲ್ಲಿ ಸವಿಯಬಹುದು.
ಇಲ್ಲಿರುವ ಶೀರ್ಷಿಕೆ ಸೂಡಿ ಎನ್ನುವುದು ಇಡೀ ಗ್ರಾಮದ, ಪಂಚಮುಖಿ ಕಣಿವೆಯ ಬೆಳಕೂ, ಜ್ಯೋತಿಯೂ ಆಗಿದೆ, ಪ್ರತಿಭಟನೆಯ ಅಸ್ತ್ರವೂ ಆಗಿದೆ ಮತ್ತು ಪ್ರತಿರೋಧ ತೋರಿದವರ ಪಾಲಿನ ಕೊಳ್ಳಿಯೂ ಆಗಿದೆ.
ಹೀಗೆ ಗಾಂಧೀಜಿಯವರು ನಡೆದ ನಾಡಿನ ಅದ್ಭುತವಾದ ಕಥಾನಕವನ್ನು ಚಾಂದ್ ಅವರು ಇಲ್ಲಿ ಕಟ್ಟಿ ಕೊಟ್ಟಿದ್ದಾರೆ. ಶ್ರೀಪತಿ ಮತ್ತು ಗಿರಿಜಾ ಹೆಗಡೆ, ತನಿಯಾ- ಸನಿಯಾರು, ಸುಂದರ ಶೆಟ್ಟಿ, ಶಿವರಾಮ ಪಂಡಿತ, ರಾಬರ್ಟ್ ಕೇವಿನ್ ಹೀಗೆ ಪ್ರತೀ ಪಾತ್ರವನ್ನು ಅವರು ತೀವ್ರವಾಗಿ ಚಿತ್ರಿಸಿದ್ದಾರೆ. ಪ್ರಕೃತಿ ಸಹ ಇಲ್ಲೊಂದು ಪಾತ್ರವಾಗಿ ಮಿಂಚುತ್ತದೆ. ಸುಧಾಕರ ದರ್ಭೆ ಅವರ ಮುಖಪುಟ ವಿನ್ಯಾಸ ಮನಸೆಳೆಯುತ್ತದೆ. ಸದಾ ಒಳಿತನ್ನೇ ಆಶಿಸುವ ಸದಾಶಯದ ಕೃತಿಯಿದು. ಮನೋಜಗತ್ತು ತಲ್ಲಣಿಸುತ್ತಿರುವ ಈ ಸಂದರ್ಭದಲ್ಲಿ ನೆಮ್ಮದಿಯ ಓದಿಗೆ ‘ಸೂಡಿ’ಯನ್ನು ಕೈಗೆತ್ತಿಕೊಳ್ಳಬಹುದಾಗಿದೆ.
***************************
ಡಾ. ಅಜಿತ್ ಹರೀಶಿ
ಉತ್ತಮ ವಿವರಣೆ ಸರ್. ನಮಸ್ತೆ
ಉತ್ತಮ ಪುಸ್ತಕ ಪರಿಚಯ.ಅಭಿನಂದನೆಗಳು
ಚೆನ್ನಾಗಿ ಹೇಳಿದ್ದೀರಿ
ನನಗೂ ಇಷ್ಟವಾಯಿತು ಈ ಕಾದಂಬರಿ