ಕವಿತೆ
ರೇಷ್ಮಾ ಕಂದಕೂರ.
ಕೆಲವರು ಹಾಗೆ
ಕೆಲಸ ಸಾಧಿಸುವ ತನಕ ಒಡನಾಡಿಗಳು
ನಂತರ ಸರಿದುಹೋಗುವ ನರನಾಡಿಗಳು
ಕೆಲವರು ಹಾಗೆ
ಗೆಲ್ಲುವ ಕುದುರೆಯಿಂದ ಓಡುತ
ಸಲಾಮು ಮಾಡಿ ಬೇಳೆ ಬೇಯಿಸಿಕೊಳ್ಳುವರು
ಕೆಲವರು ಹಾಗೆ
ಮೋಹದ ಬಲೆಯ ಬೀಸಿ
ಕಬಳಿಕೆಯ ನಂತರ ತಿರುಗಿನೋಡದವರು
ಕೆಲವರು ಹಾಗೆ
ಮುಂದೊಂದು ನಡೆಯಲಿ
ಹಿಂದೆ ಧೂರ್ತರಾಗಿ ಗುದ್ದುಕೊಡುವರು
ಕೆಲವರು ಹಾಗೆ
ನಿಷ್ಟಾವಂತರಂತೆ ನಟಿಸಿ
ಒಳಗೊಳಗೆ ಕೊರೆಯುವ ಕೀಟದಂತವರು
ಕೆಲವರು ಹಾಗೆ
ಸತ್ಯ ಗೊತ್ತಿದ್ದರು
ಸುಳ್ಳಿನ ಬಿಡಾರ ಹೂಡುವರು
ಕೆಲವರು ಹಾಗೆ
ನೇಮ ನಿತ್ಯ ಮಾಡುತ
ಕಳ್ಳನೋಟ ಬೀರುವರು
ಕೆಲವರು ಹಾಗೆ
ಜೊತೆಗಾರರಂತೆ ಮುಖವಾಡದಿ
ಗುಪ್ತಚರರಂತೆ ಸಂಚನು ಹೂಡುವರು
ಕೆಲವರು ಹಾಗೆ
ಗೊತ್ತಿದ್ದರು ಅವರು ನಮ್ಮವರು
ಎಂಬ ಭ್ರಮೆಯಲಿ ಸಹಿಸಿಕೊಳ್ಳುವರು.
*****