ಸರಿತಾ ಮಧು
ಮಕ್ಕಳಿಗಾಗಿ ಹಂಬಲ ಎಲ್ಲರದು. ಅಂದಿನಿಂದ ಇಂದಿನವರೆಗೂ ಮಕ್ಕಳು ಮನೆಯ ನಂದಾದೀಪ. ಮಕ್ಕಳಿರಲವ್ವ ಮನೆತುಂಬ ಎನ್ನುವ ಕಾಲ ಸರಿದು ಆರತಿಗೊಬ್ಬಳು ಕೀರ್ತಿ ಗೊಬ್ಬ , ತದನಂತರ ನಾವಿಬ್ಬರು ನಮಗೊಂದು ಮಗು ಅನ್ನುವ ಕಾಲಘಟ್ಟದಲ್ಲಿದ್ದೇವೆ. ಇದೆಲ್ಲವೂ ಸರಿಯಷ್ಟೇ ಆಧುನಿಕತೆಯ ಬೆನ್ನನೇರಿದ ಈಗಿನವರು ಮಗುವಿನ್ನೂ ಗರ್ಭದಲ್ಲಿರುವಾಗಲೇ ವಿದ್ಯಾಭ್ಯಾಸದ ವಿಚಾರಕ್ಕೆ ತಲೆಬಿಸಿ ಮಾಡಿಕೊಳ್ಳುತ್ತಾರೆ.ಮೊದಲೆಲ್ಲಾ ಹೀಗಿರುತ್ತಿತ್ತೇ?
ಅವಿಭಕ್ತ ಕುಟುಂಬಗಳಲ್ಲಿ ಅನೌಪಚಾರಿಕವಾಗಿ ಪ್ರಾಥಮಿಕ ಶಿಕ್ಷಣ ಆರಂಭವಾಗುತ್ತಿತ್ತು.ಐದುವರ್ಷಗಳು ಪೂರ್ಣ ತುಂಬುವವರೆಗೂ ಬಾಲ್ಯಾವಸ್ಥೆಯ ಎಲ್ಲಾ ಸುಖಗಳನ್ನು ಸಂಪೂರ್ಣ ಬಾಚಿಕೊಳ್ಳುತ್ತಿದ್ದೆವು.
ಮನೆಯ ಅಜ್ಜ ಅಜ್ಜಿ, ದೊಡ್ಡಪ್ಪ ದೊಡ್ಡಮ್ಮ, ಮಾವ ಅತ್ತೆ, ಚಿಕ್ಕಪ್ಪ ಚಿಕ್ಕಮ್ಮ ,ಅಣ್ಣ ಅಕ್ಕ , ಅಪ್ಪ ಅಮ್ಮ ರೊಂದಿಗೆ ನಲಿವಿನ ಸಮಯ ಕಳೆಯಲು ಅವಕಾಶವಿತ್ತು.
ಹಗಲಿನಲ್ಲಿ ಹಾಡುವ ಹಕ್ಕಿಯೂ,ಓಡುವ ಎಳೆಗರುವೂ, ಮೂಡಣದ ಸೂರ್ಯ, ಹಸಿರೆಲೆಯ ಗಿಡಮರಗಳು, ಬಣ್ಣ ಬಣ್ಣದ ಹೂಗಳು, ಮಕರಂದ ಹೀರುವ ದುಂಬಿಗಳು ಒಂದಲ್ಲ ಎರಡಲ್ಲ . ಎಂಥ ಚಂದವಿತ್ತು ನಮ್ಮ ಬಾಲ್ಯ.ಸಂಜೆಯಾದೊಡನೆ ತಿಂಗಳ ಬೆಳಕಿನ ಅಂಗಳದಲ್ಲಿ ಅಜ್ಜನೇ ಮೇಷ್ಟ್ರು. ಅವನ ಬಾಯಿ ಲೆಕ್ಕಾಚಾರದ ಮುಂದೆ ಈಗಿನ ಕ್ಯಾಲ್ಕುಲೇಟರ್ ಸಹಾ ಹಿಂದೆಬೀಳುತ್ತಿತ್ತು.ಎಷ್ಟು ಸರಾಗವಾಗಿ ಮಗ್ಗಿಗಳನ್ನು ನನ್ನಜ್ಜ ಹೇಳುತ್ತಿದ್ದ.
ಅಜ್ಜಿಯೇ ಕಥೆಯ ನಿರೂಪಕಿಯಾಗಿ ಲಾಲಿ ಹಾಡುವವರೆಗೂ ರಾತ್ರಿಯ ಸಮಯ ಕಳೆದದ್ದೇ ತಿಳಿಯುತ್ತಿರಲಿಲ್ಲ.
ಟಿವಿ, ಮೊಬೈಲ್ ಗಳ ಹಾವಳಿಯಿಲ್ಲದ ನಿರಾತಂಕ ಜೀವನ. ಐದು ವರ್ಷಗಳ ನಂತರವೇ ಊರಿನ ಕನ್ನಡ ಶಾಲೆಗೆ ಹೋಗುವುದು. ಹೆಚ್ಚಿನ ಹೊರೆಯಿಲ್ಲದ ಸರಳ ಕಲಿಕೆ ಆದರೂ ಶಾಶ್ವತ ಕಲಿಕೆಯಾಗಿತ್ತು.
ಬದಲಾದ ಕಾಲಕ್ಕೆ ಎಲ್ಲವೂ ಮರೆಯಾಯಿತು.ಈಗಂತೂ ಹುಟ್ಟುವ ಮೊದಲೇ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗೆ ಹೆಸರು ನೊಂದಾಯಿಸಿ ತಮ್ಮ ಮಗುವಿಗೆ ಸೀಟೊಂದನ್ನು ಕಾಯ್ದಿರಿಸಲಾಗುತ್ತದೆ. ರಾತ್ರಿಯಿಡೀ ಸರತಿಸಾಲಿನಲ್ಲಿ ನಿಂತು ತಾವು ಕಷ್ಟಪಟ್ಟ ಅನೇಕ ವರ್ಷಗಳ ದುಡಿಮೆಯನ್ನು ಕೇವಲ ಒಂದು ವರ್ಷದ ಶಾಲಾ ಶುಲ್ಕಕ್ಕಾಗಿ ಖರ್ಚುಮಾಡುತ್ತೇವೆ. ಎರಡೂವರೆ ಮೂರು ವರ್ಷದ ಮಕ್ಕಳ ಬೆನ್ನಿಗೆ ಬಣ್ಣದ ಬ್ಯಾಗನ್ನು ಏರಿಸಿ, ಕೈಗೊಂದು ಊಟದ ಬ್ಯಾಗನ್ನು ಇಳಿಬಿಟ್ಟು, ಹಳದಿ ಬಣ್ಣದ ಬಸ್ಸನ್ನು ಅವಸರದಿಂದಲೇ ಹತ್ತಿಸಿ ಟಾಟಾ, ಬೈಬೈ ಹೇಳಿ ನಿಟ್ಟುಸಿರು ಬಿಡುತ್ತೇವೆ. ಅಲ್ಲಿಗೆ ಒಂದು ದಿನದ ಮಗುವಿನ ಪಯಣ ಯಶಸ್ವಿಗೊಳಿಸಿದ ನಿರಾಳತೆ.
ಆದರೆ ಒಲ್ಲದ ಮನಸ್ಸಿನಿಂದ ಶಾಲೆಗೆ ಹೊರಟ ಮಗುವಿನ ಮನಸ್ಸು ಅರಿಯಲು ನಾವು ವಿಫಲವಾದೆವಲ್ಲ!
ಬಾಲ್ಯದ ಚಿಗುರುವ ಕನಸುಗಳ ಅಲ್ಲಿಯೇ ಹೊಸಕಿಹಾಕಿಬಿಟ್ಟೆವಲ್ಲ.ನಮ್ಮ ನಿರೀಕ್ಷೆಗಳಿಗಾಗಿ ಅವರ ಕನಸುಗಳನ್ನು ಸೀಲ್ ಮಾಡಿಬಿಟ್ಟೆವಲ್ಲ.
ಖಲೀಲ್ ಗಿಬ್ರಾನ್ ಒಬ್ಬ ಅಮೆರಿಕದ ಕವಿ ತನ್ನ ಕವಿತೆಯೊಂದರಲ್ಲಿ ಹೇಳುವಂತೆ:
Your children are not children
They are the sons and daughters of life’s longing for itself
They come through you but not from you
And though they are with you ,
Yet they belong not to you “
ಹೀಗೆ ಸಾಗುವ ಪದ್ಯವೊಂದರಲ್ಲಿ “ನಿಮ್ಮ ಮಕ್ಕಳು , ಮಕ್ಕಳಲ್ಲ
ಜೀವದ ಸ್ವಪ್ರೇಮದ ಪುತ್ರ ಪುತ್ರಿಯರು
ಅವರು ನಿಮ್ಮ ಮೂಲಕ ಬಂದಿದ್ದಾರೆಯೇ ನಿಮ್ಮಿಂದಲ್ಲ
ನಿಮ್ಮ ಜೊತೆ ಇರುವುದಾದರೂ ನಿಮಗೆ ಸೇರಿದವರಲ್ಲ”
ಹೌದು ಮಕ್ಕಳ ಮೇಲೆ ನಮ್ಮ ನಿರೀಕ್ಷೆ ಎಂದೂ ಅತಿಯಾಗಬಾರದು.ನಮ್ಮ ಕನಸುಗಳ ಈಡೇರಿಕೆಗೆ ಅವರನ್ನು ಬಳಸಿಕೊಳ್ಳಬಾರದು.ನಾವೆಂದೂ ಅವರನ್ನು ನಮ್ಮಂತೆ ಮಾಡಲು ಪ್ರಯತ್ನಿಸಬಾರದು.ಕಾರಣ ಅವರ ಕನಸಿನೊಳಗೆ ನಮ್ಮ ಪ್ರವೇಶವಿರಕೂಡದು.ನಮ್ಮ ಪ್ರೀತಿಯನ್ನು ಮಕ್ಕಳಿಗೆ ನೀಡಬೇಕೇ ಹೊರತು ಆಲೋಚನೆಗಳನ್ನಲ್ಲ.
ಡಾ||ಸಿ.ಆರ್.ಚಂದ್ರಶೇಖರ್ ರವರು ತಮ್ಮ ಮನಸ್ಸೇ ನೀ ಪ್ರಶಾಂತವಾಗಿರು ಪುಸ್ತಕದಲ್ಲಿ(ಪು.74) ಹೇಳುತ್ತಾರೆ ನಿರೀಕ್ಷೆಗಳನ್ನು ತಗ್ಗಿಸಿ, ಸಾಧ್ಯವಾದರೆ ನಿವಾರಿಸಿಕೊಳ್ಳಿ. ಅವರ ಮಾತಿನಂತೆ ಖಂಡಿತವಾಗಿ ನಿರೀಕ್ಷೆಗಳಿಂದ ನಿರಾಸೆಯೂ, ನಿರ್ಲಿಪ್ತತೆಯಿಂದ ನೆಮ್ಮದಿಯೂ ದೊರೆಯುತ್ತದೆ.
ಮಕ್ಕಳ ಪಾಲನೆ, ಪೋಷಣೆ, ವಿದ್ಯಾಭ್ಯಾಸ,ಮದುವೆ, ಉದ್ಯೋಗ ಎಲ್ಲವೂ ನಮ್ಮ ಕರ್ತವ್ಯ. ಆದರೆ ಇದಕ್ಕೆ ಪ್ರತಿಫಲವಾಗಿ ಪ್ರೀತಿ, ಆಸರೆ,ಹಣ,ವೃದ್ಧಾಪ್ಯದಲ್ಲಿ ನೆರವನ್ನು ನಿರೀಕ್ಷಿಸಬೇಡಿ ಎನ್ನುತ್ತಾರೆ ಡಾಕ್ಟರ್.
ಹಾಗಿದ್ದರೆ ಮಕ್ಕಳನ್ನು ಹೆತ್ತು ಹೊತ್ತು ಸಾಕಿದ್ದಕ್ಕೆ ನಿರೀಕ್ಷೆ ಇರಬಾರದೇ?
ಇರಲಿ, ಆದರದು ಒತ್ತಾಯಕ್ಕಲ್ಲ.ನಿಮ್ಮ ಆಸೆ ಆಕಾಂಕ್ಷೆಗಳನ್ನು ,ಗುರಿಗಳನ್ನು ಬಲವಂತವಾಗಿ ಅವರ ಮೇಲೆ ಹೇರಬೇಡಿ. ಅವರ ಹುಟ್ಟು ನಿಮಗೆ ಅದೃಷ್ಟ ತಂದಿತೆಂದು , ಸಂಪತ್ತಿಗೆ ಅಧಿಪತಿಯಾದರೆಂದು ಯಾವುದೇ ಮಗುವನ್ನು ಮೆರೆಸುವುದಾಗಲೀ ಅಥವಾ ಉಂಟಾದ ಸಾಲ ನಷ್ಟಗಳಿಗೆ ಹುಟ್ಟಿದ ಮಗುವಿನ ಜಾತಕವೇ ಕಾರಣವೆಂದು ಹೀಗಳೆಯುವುದಾಗಲೀ ಸಲ್ಲದು.
ಮಕ್ಕಳಿಗೆ ಅವರ ಆಸೆ ಆಕಾಂಕ್ಷೆಗಳಿಗೆ ಅನುಗುಣವಾದ ಶಿಕ್ಷಣ ನೀಡಿ, ಆದರೆ ಸಮಾಜದ ಇತರೆ ಮಕ್ಕಳೊಂದಿಗೆ ಹೋಲಿಕೆ ಖಂಡಿತಾ ಬೇಡ.
ಜೀವನೋಪಾಯಕ್ಕಾಗಿ ಅವಶ್ಯಕವಾಗಿ ನ್ಯಾಯಯುತವಾದ ದುಡಿಮೆಯೊಂದನ್ನು ಮಾಡುವಂತಿರಲಿ. ದುಡಿಯದೇ ಅಥವಾ ಕೆಲಸ ಮಾಡದೇ ಸುಲಭ ಮಾರ್ಗದಲ್ಲಿ ಹಣ ಗಳಿಸುವುದನ್ನು ತಪ್ಪು ಎಂಬ ಅರಿವು ನೀಡಿದರೆ ಸಾಕು.
ಮಕ್ಕಳೆಂದಿಗೂ ನಿಮ್ಮ ಹಣವನ್ನು ಹಿಂತಿರುಗಿಸುವ ಯಂತ್ರಗಳಲ್ಲ. ಬಂಡವಾಳ ಹೂಡಿ ಲಾಭವನ್ನು ನಿರೀಕ್ಷಿಸುವ ವ್ಯವಹಾರವಲ್ಲ.ಬದಲಾಗಿ ಪ್ರೀತಿ, ಸಂಸ್ಕಾರ , ಜವಾಬ್ದಾರಿ , ಶಿಕ್ಷಣ , ಮಾನವೀಯತೆ ನೀಡಿ ನಿರ್ಲಿಪ್ತವಾಗಿ ನೆಮ್ಮದಿಯಿಂದ ನಿಂತು ಬಿಡಿ ಕಾರಣ ಮಕ್ಕಳು ನಿಮ್ಮ ಮಕ್ಕಳಲ್ಲ, ನಿಮ್ಮ ಮೂಲಕ ಬಂದ ದೈವ ಸೃಷ್ಟಿಗಳು.
****************************************
“ನಿಮ್ಮ ಮಕ್ಕಳು, ಮಕ್ಕಳಲ್ಲ”
ಎನ್ನುವುದಕ್ಕೂ
“ನಿಮ್ಮ ಮಕ್ಕಳು *ನಿಮ್ಮ* ಮಕ್ಕಳಲ್ಲ”
ಎನ್ನುವುದಕ್ಕೂ ವ್ಯತ್ಯಾಸವಿದೆ.
ಖಲೀಲ್ ಗಿಬ್ರಾನ್‌ರ ಮೂಲ ಪದ್ಯವನ್ನು ಗಮನಿಸಿ.
ಹೌದು, ನಿಮ್ಮ ಮಕ್ಕಳು , ನಿಮ್ಮ ಮಕ್ಕಳಲ್ಲ
ಎಂದು ಬರೆಯಬೇಕಿತ್ತು. ಧನ್ಯವಾದಗಳು
Your children are not your children ಎಂದು ಹೇಳಿರುವರೇ ಹೊರತು, ನಿಮ್ಮ ಮಕ್ಕಳು ಮಕ್ಕಳಲ್ಲ ಎಂದು ಖಲೀಲ್ ಗಿಬ್ರಾನ್ ಅವರು ಹೇಳಿಲ್ಲ ಒಮ್ಮೆ ಅವರ ಮೂಲ ಪದ್ಯ ಗಮನಿಸಿ … ಏನೋ ಪುಟ್ಟ ತಪ್ಪಾಗಿದೆ ಅನಿಸುತ್ತದೆ.
ಹೌದು, ನಿಮ್ಮ ಮಕ್ಕಳು, ನಿಮ್ಮ ಮಕ್ಕಳಲ್ಲ ಎಂದೇ ಮೂಲ ಪದ್ಯದಲ್ಲಿರುವುದು…