ಡಾ.ಪ್ರೇಮಲತ ಬಿ. ಕಾವ್ಯ ಗುಚ್ಚ
ನೆನಪುಗಳೇ……
ಬೆಳ್ಳಂಬೆಳಗು ನಸುನಕ್ಕು
ಮತ್ತೆ ಬಂದಿಹೆನೆಂಬ ಹೊತ್ತಲ್ಲಿ
ಹೊಸ್ತಿಲಲಿ ನಿಂತು ಕಣ್ಣಾಲೆ ತುಂಬಿ
ವರ್ತಮಾನವ ಕದಡದಿರಿ
ಅಂಗಳದ ತುಂಬೆಲ್ಲ ಹಕ್ಕಿಗಳ ಚಿಲಿಪಿಲಿ
ನೋವು ನಲಿವುಗಳ ಚಿತ್ತಾರದ ರಂಗೋಲಿ
ಹಾಲುಕ್ಕಿ ಹರಿದ ಬದುಕಿನಲಿ
ಒಂದೊಂದೇ ಪಾರಿಜಾತಗಳು ಜಾರಿ ಉದುರಿ
ಭೂತದ ನೆರಳುಗಳಿಗೆ ಇಂದು
ಹೊಸರೆಕ್ಕೆ ಕಟ್ಟಿ
ಅಗಲಿಕೆಯ ನೋವು, ವಿರಹದ ಕಾವು
ತುಂಬಿಹ ಬೆಂಗಾಡಿನ
ಮಾಯೆ ಮರುಳಿಗೆ ಹೊತ್ತೊಯ್ಯದಿರಿ
ಬರಗಾಲದ ಬಿರು ಬಿಸಿಲಿಗೆ
ನಿಡುಸುಯ್ದ ಈ ಇಹಕ್ಕೆ
ಮರಳಿ ಅರಳುವ ಬಯಕೆ
ನೀರು ಹುಯ್ಯುವವರಿಲ್ಲ
ಒಂಟಿ ಮರಕ್ಕೆ
ಸಂಜೆ ಗಾಳಿಯ ಹಿತ
ಆಳಕ್ಕೆ ಇರಿದ ಕೆಂಪಿನಲಿ
ಮನಸ್ಸರಳಿ ಹಿತವಾಗಿ ನರಳುತ್ತದೆ
ಅವನೆದೆ ಕಾವಿನಲಿ ಕರಗುತ್ತದೆ
ಸೆಟೆದ ನರನಾಡಿಗಳು ಅದುರಿ
ಹಗುರಾಗಿ ಬಿಡುತ್ತವೆ
ಕೂಡಿ ಕಳೆದುಹೋಗುವ ತವಕದಲಿ
ಕಣ್ಣೆವೆ ಭಾರವಾಗುವ ಹೊತ್ತಲ್ಲಿ
ನಿಮ್ಮ ಒತ್ತಾಸೆಯಿರಲಿ ನನಗೆ
ನನ್ನ ಬಿಡದಿರಿ,ಬಿಡದೆ ಕಾಡದಿರಿ
ಅಣಕಿಸದಿರಿ ನೆನಪುಗಳೆ, ಬದುಕಿದು
ಎಪ್ಪತ್ತರಲಿ ಒಂಟಿ ಮುದುಕಿ.
ಭಿಕ್ಷೆಗೆ ಬೀಳದ ಬದ್ಧತೆ…
ಬೊಂಬೆಯಂತ ಬೊಂಬೆ ಮಗುವ ಬಟ್ಟೆಯಲಿ ಸುತ್ತಿ
ಸುಡುವ ನೆತ್ತಿ, ಚಪ್ಪಲಿಯಿಲ್ಲದ ಕಾಲ
ಹೆಂಗಸೊಬ್ಬಳು
ಕಾರ ಕಿಟಕಿಗೆ ಮೈ ತಾಗಿಸಿ
ಭಿಕ್ಷೆಗೆ ಕೈ ಮುಂದೊಡ್ಡೂತ್ತಾಳೆ
ನಿರೀಕ್ಷೆಯಿಲ್ಲದ ಕಣ್ಣುಗಳ
ಆಚೀಚೆ ಸರಿಸುತ್ತ ಮುಂದೆ ಯಾರೆಂದು
ಮನದಲ್ಲೇ ಲೆಕ್ಕವಿಡುವಾಗ ಎಲ್ಲ ದಿನಗಳು
ಕೊನೆಯಲಿ ಒಂದೇ ಇರಬೇಕು..
ಹೊಟ್ಟೆಪಾಡು, ಕೈ ಗಳ ಜೋಲಿ ಹಾಡು
ಇಷ್ಟಕ್ಕೇ ಮುಗಿಯುತ್ತಿರಬೇಕು…
ದಣಿವಿರದೆ ದುಡಿದ ಇಪ್ಪತ್ತು ವರ್ಷಗಳ
ಕಾಲೇಜಿನಲಿ ಕಳೆದ ಹತ್ತು ವರ್ಷಗಳ
ಮನೆದುಡಿಮೆಯಲಿ ಸುಕ್ಕುಗಟ್ಟಿದ ಕೈಯಲ್ಲಿ
ಹತ್ತು, ನೂರು,ಸಾವಿರದ ನೋಟುಗಳ
ತಡಕುತ್ತ ಅಂಜುತ್ತೇನೆ, ಕೊನೆ ಎಲ್ಲಿಗೆ?
“ಬರುತ್ತೀಯೇನು ಕೊಡುತ್ತೇನೆ
ಊಟ, ಬಟ್ಟೆ, ದುಡ್ಡು, ಕೆಲಸ
ಪುಟ್ಟಮಗುವಿಗೆ ಆಟದ ಸಾಮಾನು
ಶಾಲೆಯ ಜೊತೆ , ತೂಗಲು ಆಶೆಯ ಕಮಾನು? “
ಪ್ರಶ್ನೆ ಕೇಳದಂತೆ, ಮುಂದೆ ಮಾತಾಡದಂತೆ
ಮುಖ ತಿರುವಿ ನಡೆಯುತ್ತಾಳೆ
ಇರದಿರುವುದು ಎಂದೋ ಕಳೆದ ನಂಬಿಕೆಯೇ?
ಸುಟ್ಟ ಸಂಕಲ್ಪವೆ? ಹಲ್ಲಂಡೆ ಬದುಕಿನ
ಭಾರೀ ಸೆಳೆತವೆ?
ತೋರದೆ ಬೆಪ್ಪಾಗುತ್ತೇನೆ
ಮುಂದಿರುವ ಡ್ರೈವರು ಮೀಸೆಯಡಿ
ನಗುವ ತಡೆಹಿಡಿದು ಮುಚ್ಚಿಡುವಾಗ
ಪ್ರಶ್ನೆಗಳು ಮಿನುಗುತ್ತವೆ
ಆದರ್ಶಗಳು ಅಳ್ಳಕವೆ ?
ಭಿಕ್ಷೆಯ ಕೈಗಳಿಗೆ ಚಾಚಿದ
ಸಹಾಯ ಹಸ್ತ ಇಷ್ಟು ನಿರರ್ಥಕವೆ?
ಬಂಧನಗಳಿಲ್ಲದ ಅವಳ ಬದುಕಿನಲಿ
ಬದ್ಧತೆಯ ಕೇಳಿದ ನನ್ನ
ಭಿಕ್ಷಾ ಪಾತ್ರೆ ಖಾಲಿಯೇ ಉಳಿಯುತ್ತದೆ !
ಗಾಳ ಹಾಕಿ ಕೂತ ಮನಸು….
ಗಾಳ ಹಾಕಿ ಕೂತ ಮನಸ
ಜಾಳು ಜಾಳು ಬಲೆಯ ತುಂಬ
ಸಿಕ್ಕ ನೆನಪುಗಳು ವಿಲ ವಿಲ
ಪರ್ವತಗಳು ಪುಡಿಯಾಗಿ ಸಿಡಿದು
ಹಡೆದ ಮರುಭೂಮಿಯಲ್ಲಿ
ಸೂರ್ಯ ಉರಿದು ಕರಗಿ
ನಡುಗಿ ಇಳಿಯುತಿರುವಲ್ಲಿ
ಕಡುಗಪ್ಪು ಬಣ್ಣದ ವೃತ್ತ
ಭುವಿಯ ಕುದಿಯೆಲ್ಲ ಉಕ್ಕಿ
ರಂಧ್ರಗನ್ನಡಿ ಕೊರೆದು ಕಣ್ಣೀರಿನಲಿ
ಸೃಷ್ಟಿಸಿದಂತಹ ಪುಟ್ಟ ಕೊಳ
ಸುತ್ತ ಯಾವ ಹೆಜ್ಜೆ ಗುರುತುಗಳಿಲ್ಲ
ದಂಡೆಯಿರದ ತೀರ
ಬೇರೊಂದು ಲೋಕಕ್ಕೆ ಒಯ್ಯಲು
ತೆರೆದಂತೆ ಬಾಗಿಲಾಗಿ ಕರೆವಲ್ಲಿ
ತಲೆ ಮೇಲೆತ್ತಿ ನೋಡಲು
ಆಗಸದಲಿ ಮೋಡ, ತಾರೆಗಳಿಲ್ಲ
ಫಳಕ್ಕನೆ ಏನೋ ಮಿಂಚಿ ಹಿಂಡುತ್ತದೆ
ತುಟಿ ಎದೆಗಳಲಿ ವಿದ್ಯುತ್ ಪುಳಕಿಸಿದಂತೆ
ದಶಕಗಳಿಗೂ ಮುಂಚೆ
ಮುಳುಗುವ ಸೂರ್ಯನ ಸಾವಿರ ರಶ್ಮಿಗಳಲಿ
ಒಂದು ಬಾಗಿ ನನ್ನ ತಲೆ ಸವರಿದಂತೆ
ಹಿಡಿದು ಬಿಡಲು ಸೆಣೆಸುತ್ತೇನೆ
ಕಣ್ಣಿಗೆ ಕಂಡಿದ್ದು, ಕೈಗೆ ಸಿಗದಾಯ್ತು
ಆತಿಡಿದು ಜೋತುಬೀಳಲು ಮನಸಿನಲಿ
ಕನಸುಗಳು ಗೂಡು ಕಟ್ಟಲಾಗಲಿಲ್ಲ
ಮತ್ತೇನೋ ತಡಕುತ್ತದೆ ಬಹು
ಆಳದ ತಳದಲ್ಲಿ ಭಾರೀ ತೂಕದ ವಸ್ತು
ಅದರ ನೆನಪೆಲ್ಲ ಹೇಳುವುದು ದುಃಖದ
ಕತೆ, ಅಳಲು, ಅಸಹಾಯಕತೆ
ಕೈ ಚಾಚಿ, ಎದೆ ಚೀಪಿ ಆಳ ಆಳ ಮುಳುಗಿ
ಒಳಗಿಳಿದು ನೋಡಿದರೆ ನನ್ನದೇ ಕಥೆ
ಹೋಗಿ ಸೇರಲು ರಸ್ತೆ ಕಡಿದು
ಕಣ್ಣೀರಲ್ಲಿ ಕರಗಿದ ನೆನಪುಗಳ ತಲೆ
-ಮಾರುಗಳು ಕಳೆದಿವೆ ಮತ್ತೆ ಮರುಕಳಿಸಿ
ಕತ್ತಲು ಸೂರ್ಯನ ಕರಗಿಸಿ
ಬಾನನ್ನು ತಿಂದು ತೇಗಿ
ಪ್ರೇತದಂತಹ ಚಂದ್ರನ ತೂಗುಬಿಟ್ಟಿದೆ
ಗಾಳವನು ಸರಕ್ಕನೆ ಎಳೆದು ತಲೆಯೆತ್ತಿ
ದಕ್ಕಿರದಿದ್ದನ್ನು ಹಿಡಿಯುವ ಚಂಡಿಯಾಗಿ
ಗಾಳವೆಸೆದು ಕೂರುತ್ತೇನೆ ಮತ್ತೆ
ಕೇಳುತ್ತೇನೆ ಕಳೆದುಕೊಳ್ಳಲು ಏನಿದೆ?
ಕತ್ತಲ ರಾತ್ರಿ ನುಂಗಲೆಂದು ಕಾಯುತ್ತೇನೆ….
*****************