ಗಝಲ್
ಸುಜಾತ ಲಕ್ಷ್ಮೀಪುರ
ಮಾತು ಮಾತಿಗೆ ಕಿಡಿ ತಾಗಿಸಿ ಸುಡುವುದು ಸಹಜ ಧರ್ಮವಲ್ಲ
ಸುಮ್ಮನೇ ಮೌನದ ಅಗಾಧ ಕೂಪಕೆ ದೂಡುವುದು ಸರಿಯಲ್ಲ.
ಮೌನವೂ ಮಣಭಾರವಾಗಿ ಕಾಡುವುದಿಲ್ಲವೆ ಏಕಾಂತದಿ
ಕಣ್ಣಿನಲ್ಲೇ ಒಲವನು ಸೂಸಬಹುದು ಕೊಲ್ಲುವುದು ತರವಲ್ಲ
ತಪ್ಪು ಮಾಡಿ ಕ್ಷಮೆ ಕೇಳುವುದೇ ದೊಡ್ಡ ವಿಚಾರವಲ್ಲಾ
ಪ್ರೀತಿಗೆ ಶರಣಾಗಲು ಅಹಂಕಾರ ಸರಿಸುವುದು ಸೋಲಲ್ಲ
ಬೆಳಕು ಮೂಡಲು ತಮವು ಅಳಿದೂ ಜಗವೆಲ್ಲಾ ಬೆಳಗುತ್ತದೆ
ಮೈಮನವೆಲ್ಲ ಆವರಿಸಲು ಒಲವಲ್ಲದೆ ಬೇರೆ ಪಥವಿಲ್ಲ
ಶಿವೆ,ಕಾಡುವ ಬಳ್ಳಿ ಬಿಡಿಸಿಕೊಳ್ಳುವುದು ಸಾಧ್ಯವೆ ನಿನ್ನಂತೆ
ಎರಡಳಿದು ಒಂದಾಗಲು ಸವಿ ಪ್ರೇಮವಲ್ಲದೆ ಜಗವಿಲ್ಲ
*******************************.