ಕಾವ್ಯಯಾನ

ನಿನ್ನ ಸೇರೋ ತವಕ

ಪ್ಯಾರಿಸುತ

ನಿನ್ನೂರು ದಾರಿಯು ಸವಿದಷ್ಟು
ದೂರ
ಹವೆ ತುಂಬಿದ ಗಾಲಿಗಳು ಉರುಳಿದಷ್ಟು
ಮತ್ತಷ್ಟು ದೂರ
ಉರುಳಿ ಹೊರಟ ಗಾಲಿಯಲ್ಲಿ ಹವೆಯಿತ್ತು
ನಿನ್ನ ನೆನೆದು ಬರುತ್ತಿರುವ ನನ್ನಲ್ಲಿ ಚಲವಿತ್ತು
ಪ್ರಯಾಸಗೊಂಡೆ,ಅನಾಯಾಸಗೊಂಡೆ
ಕತ್ತಲು ಆವರಿಸಿದ ಕಪ್ಪು ಹೊಲದ ನಟ್ಟ ನಡುವೆ
ಬೆಳೆದಿದ್ದ ಒಂಟಿ ಬೇವಿನಮರದ
ಬುಡದಲ್ಲಿ ಮಗ್ಗಲು ಭುವಿಗೆ ಹೊಂದಿಸಿ
ಮಲಗಿಕೊಂಡು
ನಿನ್ನ ಸೇರೋ ಕನಸು ಕಾಣುತ್ತಿದ್ದೆ
ಕನಸನ್ನು ಭಗ್ನ ಮಾಡಿ,ಮತ್ತೆ
ನಿನ್ನೂರು ದಾರಿ ಹಿಡಿಯಲು
ಪ್ರೇರೇಪಿಸಿದ್ದು ಅದೇ ಸೊಳ್ಳೆ
ಅದು ನೀನೋ ಅಥವಾ ನಿಜವಾಗಿಯೂ ಸೊಳ್ಳೆಯೂ
ತರ್ಕಕ್ಕೆ ಇಳಿಯುದಿಲ್ಲ
ಅದು ಕಚ್ಚಿ ಹೋದ ಜಾಗದಲ್ಲಿ ನೀ ಕಚ್ಚಿದ ಹೋಲಿಕೆಯಿದೆ
ದಾರಿಯುದ್ದಕ್ಕೂ ಮೈಲುಗಲ್ಲಿನ ಮೇಲೂ ನಿನ್ನದೇ
ಸ್ವಾಗತಗೀತೆ,
ಅದೆಷ್ಟು ಚಂದ ಅನ್ನುತ್ತಿಯಾ…?
ನೋಡುತ್ತಾ,ಕೇಳುತ್ತಾ ಅಲ್ಲೇ ನಿಂತುಬಿಡಬೇಕು
ಇಲ್ಲ,
ನಿನ್ನ ನೋಡುವ ತವಕದಿ ಓಡಿ ಬರಲೇ…?
ಸೂರ್ಯ ನಿನ್ನ ಹಣೆಯ ಕುಂಕುಮವನ್ನು ಹೋಲುತ್ತಿದ್ದ
ಗಾಳಿಯು ಸುಗಂಧ ಪುಷ್ಪ ಹೊತ್ತು ತರುತ್ತಿದ್ದ
ಹಕ್ಕಿಗಳು ಮರಳಿ ಗೂಡಿನಡಿಗೆ ಸಾಗುತ್ತಿದ್ದ
ಗಳಿಗೆಯಲಿ ನಮ್ಮಿಬ್ಬರ ದೇಹಗಳು ಒಟ್ಟುಗೂಡುತ್ತಿದ್ದವು
ಅಲ್ಲೊಂದಿಷ್ಟು ಪೋಲಿ ಸಂಜ್ಞೆಗಳು ಆಟ ಆಡುತ್ತಿದ್ದವು
ಭಾವನೆಗಳು ಕಟ್ಟಿಗೊಂಡ ಹಗ್ಗದಿಂದ ತಪ್ಪಿಸಿಕೊಂಡು
ಹಿಂಡು ಹಿಂಡಾಗಿ ಬರುತ್ತಿದ್ದವು
ಮತ್ತದೇ ಆಸೆಯಿಂದ ಸುಗಂಧಿ ಪರಿಮಳವನ್ನು ಬೆನ್ನುಬಿದ್ದು
ಸೂರ್ಯ ಕೆಂಪಾಗುವ,ಹಿತವಾಗುವ
ಸಮಯಕ್ಕೆ ನಿನ್ನೂರಿಗೆ ಕಾಲಿರುಸುವೆ
ನಿನ್ನೆಲ್ಲ ಸಮಯವನ್ನು ಕಾಯ್ದಿರುಸುವೆಯಾ…?

*********************************

Leave a Reply

Back To Top