ಕಬ್ಬಿಗರ ಅಬ್ಬಿ -8

ನಿಸರ್ಗಕ್ಕೂ ಬೇಕು ಸ್ವಾತಂತ್ರ್ಯ

Peacock feather , close up. Closeup of Beautiful Peacock feather royalty free stock images

ಈ ನೆಲ, ಈ ಜಲ ಈ ಆಕಾಶ
ಈ ಜೀವ ಈ ಭಾವ ಅನಂತಾವಕಾಶ
ಈ ಕಲ್ಲು ಪರಮಾಣು ಒಳದೇವರ ಕಣ್ಣು
ಈ ಸ್ಥಾವರ ಈ ಜಂಗಮ ಪ್ರಾಣ ವಿಹಂಗಮ
ಈ ವಾತ ನಿರ್ವಾತ ಆತ್ಮನೇ ಆತ್ಮೀಯ
ಈ ಅಂಡ ಬ್ರಹ್ಮಾಂಡ ಉಸಿರಾಡುವ ಕಾಯ

ಕಾವ್ಯದೊಳಗೆ ಜೀವರಸವಿದೆ.
ರಸದ ಸೆಲೆಯಿದೆ.
ಕುದಿಸಮಯವನ್ನೂ ತಣಿಸುವ ಪ್ರೀತಿಯಿದೆ.
ಕಲ್ಲ ಮೊಟ್ಟೆಯನ್ನೂ ಕಾವು ಕೊಟ್ಟು ಮರಿ ಮಾಡುವ ಸೃಷ್ಟಿ ತಂತುವಿನ ತರಂಗವಿದೆ.
ಕವಿಯ ಕಣ್ಣೊಳಗೆ ಮೂಡಿದ ಪ್ರತೀ ವಸ್ತುವಿನ ಬಿಂಬ ಜೀವಾತ್ಮವಾಗಿ ಕಾವ್ಯದೇಹ ತೊಟ್ಟು ಹೊರ ಬರುತ್ತೆ.
ಸ್ಪಂದನೆ ಮತ್ತು ಪ್ರತಿಸ್ಪಂದನೆ ಕಲ್ಲಿನೊಳಗಿನ ಪರಮಾಣು ಕೂಡಾ ಮಾಡುತ್ತೆ.
ನೋಟದ ವ್ಯಾಪ್ತಿಗೆ ಸಿಕ್ಕಿದ ಅಷ್ಟನ್ನೂ ಕವಿಯ ಪ್ರಜ್ಞೆ ಬಾಚಿ ಎದೆಗಿಳಿಸುತ್ತೆ.
ಮನುಷ್ಯ ಜಗತ್ತಿನ ನೋವು ನಲಿವು, ಶೋಷಣೆಗಳು, ಕಪ್ಪು ಬಿಳುಪು, ಹೆಣ್ಣು ಗಂಡು, ಬೇಧಭಾವಗಳು ಕವಿಗೂ ಕಾಣಿಸುತ್ತೆ, ಇತರರಿಗೂ ಕಾಣಿಸುತ್ತೆ.

ಆದರೆ ದಿನಾಲೂ ಬೆಳಗ್ಗೆ ಕೂಗುವ, ಈ ದಿನ ಹಾಜರು ಹಾಕದ ಕೋಗಿಲೆ,
ಚಿಟ್ಟೆಯ ರೆಕ್ಕೆಯಲ್ಲಿರುವ ಚುಕ್ಕಿಗಳ ಡಿಸೈನ್,
ರಸ್ತೆಯಗಲಿಸಲು ಕಡಿದ ಮರದ ಕಾಂಡದಿಂದ ಜಿನುಗುವ ಕಣ್ಣೀರು,
ನೀರ ಹರಿವು ನಿಂತು ಏದುಸಿರು ಬಿಡುತ್ತಿರುವ ನದೀ ಪಾತ್ರ,
ಎಂಡೋಸಲ್ಫಾನ್ ಸ್ಪ್ರೇ ಯಿಂದ ಸತ್ತು ಬೀಳುವ ಜೇನು ನೊಣ,
ಕಾರಿನ ಹೊಗೆ, ಗಗನ ಚುಚ್ಚುವ ಕಟ್ಟಡ,
ಎಲ್ಲವೂ ಕವಿ ಹೃದಯಕ್ಕೆ ತುಂಬಾ ಚುಚ್ಚುತ್ತೆ.

ಪರಿಸರದ ಪರಿವರ್ತನೆಗಳು, ಪರಿಸರದ ಮೇಲೆ ಮನುಷ್ಯನ ಯಾಂತ್ರಿಕ ಮನೋಭಾವದ ಅತ್ಯಾಚಾರ, ಮತ್ತು ಅದರಿಂದಾಗಿ, ಪರಿಸರದಲ್ಲಿ ನಢೆಯುತ್ತಿರುವ ಅಸಮತೋಲನ, ಅತಿವೃಷ್ಟಿ,,ಅನಾವೃಷ್ಟಿ ಕವಿಯನ್ನು ದರ್ಶಿಸಿ, ದರ್ಶನವಾಗಿ ಇಳಿದು ಬಂದಾಗ ಕವಿತೆ ಒಳಗೊಳಗೇ ಅಳುತ್ತೆ. ಅಂತಹ ಒಂದು ಎದೆತಟ್ಟುವ ಕವಿತೆ, ಚಂದಕಚರ್ಲ ರಮೇಶ್ ಬಾಬು ಅವರು ಪುಟಕ್ಕಿಳಿಸಿದ್ದಾರೆ. ಈ ಕವಿತೆಯಲ್ಲಿ, ಕೋಗಿಲೆ, ಮನುಷ್ಯನಲ್ಲಿ ಕ್ಷಮೆ ಕೇಳುತ್ತೆ. ಕೋಗಿಲೆಯ ಮಾತುಗಳು ಹೀಗಿವೆ.

ಕ್ಷಮೆ ಇರಲಿ

ವಸಂತವನದ
ವಸ್ತುಪ್ರದರ್ಶನಕ್ಕೆ
ನಿಮಗೆಲ್ಲ ಸ್ವಾಗತ
ನನ್ನ ಹೆಸರು ಕೋಗಿಲೆ
ನಾನು ವಸಂತನ
ಆಗಮನಸೂಚಿ
ನಾನು ಹೊರಡಿಸುವ ಇನಿದನಿ
ವಸಂತನು ಕಾಲಿಟ್ಟ ಗುರುತು

ಒಂದಾನೊಂದು ಕಾಲದಲ್ಲಿ
ನನಗೆ ಎಲ್ಲೆಂದರಲ್ಲಿ
ಮಾವಿನ ಚಿಗುರು ಸಿಗುತ್ತಿತ್ತು
ಅದು ಮೆದ್ದು ನಾನು
ನನ್ನ ಇನಿದನಿ ಹೊರಡಿಸುತ್ತಿದ್ದೆ
ಈಗ ಹುಡುಕುವುದರಲ್ಲೇ ಸಾಕಾಗಿದೆ
ದನಿ ಹೊರಡದಿದ್ದಲ್ಲಿ ಕ್ಷಮಿಸಿ

ಹೀಗೆ ಬನ್ನಿ
ಇಲ್ಲಿ ಒಂದು ಸಮಯದಲ್ಲಿ
ನಿಸರ್ಗದ ಮಡಿಲಾದ
ದಟ್ಟ ಕಾಡೊಂದಿತ್ತು
ಗಿಡಮರ ಹೂವು ಹಣ್ಣುಗಳಿಂದ
ನಮ್ಮೆಲ್ಲರ ತಂಗುದಾಣವಾಗಿತ್ತು
ಈಗ ಇದು ಬರೀ ಅವಶೇಷ ಭೂಮಿ
ಇಲ್ಲಿಗೆ ವಸಂತನ ಆಗಮನದ
ಸುಳಿವು ಸಿಗುವುದಿಲ್ಲ
ಕುರುಹೂ ಕಾಣುವುದಿಲ್ಲ
ಆದಕಾರಣ ಏನೂ ಕಾಣದಿದ್ದರೆ
ಕ್ಷಮೆ ಇರಲಿ

ಹೀಗೆ ಬನ್ನಿ
ಕೆಲವಾರು ದಶಕಗಳ ಹಿಂದೆ ಇಲ್ಲಿ
ವನಜೀವಿಗಳ ಸಂಭ್ರಮವಿತ್ತು
ಪಶು ಪಕ್ಷಿಗಳ ಜಾತ್ರೆಯಿತ್ತು
ಹಸಿರುವನ ಸಿರಿಯ ನಡುವೆ
ಅವುಗಳ ಜೀವನವೂ ಹಸಿರಾಗಿತ್ತು
ಈಗ ಇದು ಬರೇ ಬೀಡು
ಗುಡ್ಡ ದಿನ್ನೆಗಳ ನಾಡು

ನನ್ನ ಬಿಕ್ಕಳಿಕೆಗಳನ್ನು
ತಡೆದು ತಡೆದು
ದನಿಯ ಒತ್ತಿ ಹಿಡಿದು
ಈಗ ಹೊರಡುವುದೇ ಕಷ್ಟವಾಗಿದೆ
ನಿಮ್ಮೊಟ್ಟಿಗೆ ಬರಲೂ ಆಗದಾಗಿದೆ

ವಸಂತನ ಆಗಮನದ
ಕಾತರ ತೋರುವ ನಿಮಗೆ
ನಿರಾಶೆ ಮಾಡುತ್ತಿದ್ದಕ್ಕೆ
ಕ್ಷಮೆ ಇರಲಿ
ನೀವು ಮುಂದುವರೆಸಿ
ಎಲ್ಲಾದರೂ ವನಸಿರಿ
ನಳನಳಿಸಿದ್ದು ಕಂಡುಬಂದರೇ
ನನಗೆ ತಿಳಿಸಿ

ಮತ್ತೆ ನನ್ನ ದನಿಗೊಂದು
ನವ ಜೀವನ ಬಂದೀತು
ವನ ಜೀವನದ ಸವಿ ತಂದೀತು
ಹೋಗಿಬನ್ನಿ ನಮಸ್ಕಾರ

*** *** ***

ಕೋಗಿಲೆಯ ಸ್ವಗತ ಈ ಕವಿತೆ. ವಸಂತವನದ ವಸ್ತುಪ್ರದರ್ಶನ ಕಾರ್ಯಕ್ರಮವನ್ನು ಪ್ರೇಕ್ಷಕರಿಗೆ ತೋರಿಸುವ ಕೆಲಸ ಕೋಗಿಲೆಯದ್ದು.

ವಸಂತ ಎಂದರೆ ಪ್ರಕೃತಿ ನಳನಳಿಸಿ, ಹೂ ಅರಳಿಸಿದ ಹಸಿರು ಲಂಗ ತೊಟ್ಟು ಇನಿಯನಿಗಾಗಿ ಕಾದು ಪ್ರೇಮಿಸಿ,ಕಾಮಿಸಿ, ನಲಿದು ಗರ್ಭವತಿಯಾಗುವ ಕಾಲ. ಸೃಷ್ಟಿ ಕ್ರಿಯೆ ಔನ್ನತ್ಯವನ್ನು ಮುಟ್ಟುವ, ಕಲಾತ್ಮಕವಾಗುವ, ಜೀವರಾಶಿಗಳು ಸಂಭ್ರಮಿಸುವ ಕಾಲ. ಮಾವಿನ ಮರ ಹೂ ಬಿಡುತ್ತೆ,ಕೆಲವೆಡೆ ಚಿನ್ನದ ತಳಿರಾಗಿ ಮೆದು ಮೆದುವಾದ ಎಲೆ ಚಿಗುರಿ, ಕೋಗಿಲೆಗೆ ಹಬ್ಬವೋ ಹಬ್ಬ!

ಇಂತಹ ಜೀವೋತ್ಸವವನ್ನು, ಕವಿ ವಸಂತವನದ ‘ ವಸ್ತುಪ್ರದರ್ಶನ’ ಅಂತ ಹೆಸರಿಟ್ಟು ಕರೆಯುವಾಗಲೇ ಜೀವರಾಶಿಗಳು ಹೆಣವಾಗಿ ಮಸಣ ಹುಡುಕುವುದರ ಚಿತ್ರಣದ ಅರಿವಾಗುತ್ತೆ.


ವಸ್ತು ಪ್ರದರ್ಶನ, ಮಾನವ,ತನ್ನ ಸಾಧನೆಯನ್ನು ಪ್ರದರ್ಶಿಸುವ ಕಾರ್ಯಕ್ರಮ. ಮಾನವ ನಿರ್ಮಿತ ಎಂದರೆ ಅದು ನಿರ್ಜೀವ ವಸ್ತುವೇ. ‘ವಸಂತವನದ ವಸ್ತುಪ್ರದರ್ಶನ’ ಎಂಬ ಈ ಸಾಲಿನ ಮೊದಲ ಪದ ಜೀವತತ್ವ,ಎರಡನೆಯ ಪದ ನಿರ್ಜೀವ ತತ್ವ. ಈ ಕವಿತೆ ಅಷ್ಟೂ ದ್ವಂದ್ವಗಳನ್ನು, ಜೀವದಿಂದ ನಿರ್ಜೀವತ್ವದತ್ತ ನಡೆದ ದಾರಿಯನ್ನು ಎರಡೇ ಪದದಲ್ಲಿ ಸೆರೆಹಿಡಿಯಿತಲ್ಲಾ. ಇದು ಕವಿಸಮಯ.

“ನನ್ನ ಹೆಸರು ಕೋಗಿಲೆ
ನಾನು ವಸಂತನ
ಆಗಮನಸೂಚಿ
ನಾನು ಹೊರಡಿಸುವ ಇನಿದನಿ
ವಸಂತನು ಕಾಲಿಟ್ಟ ಗುರುತು”

ಕೋಗಿಲೆಯ ಸೆಲ್ಫ್ ಇಂಟ್ರೊಡಕ್ಷನ್ ನಲ್ಲಿ, ಗತವೈಭವದ ನೆನಪಿನ ಸುಖವಿದೆ. ಕವಿತೆ ಹಾಗೆ ಆರಂಭವಾಗುತ್ತೆ. ಕೋಗಿಲೆಯ ಸ್ವರ ವಸಂತಾಗಮನಕ್ಕೆ ರೂಪಕವೂ ಆಗಿದೆ.

“ಒಂದಾನೊಂದು ಕಾಲದಲ್ಲಿ
ನನಗೆ ಎಲ್ಲೆಂದರಲ್ಲಿ
ಮಾವಿನ ಚಿಗುರು ಸಿಗುತ್ತಿತ್ತು
ಅದು ಮೆದ್ದು ನಾನು
ನನ್ನ ಇನಿದನಿ ಹೊರಡಿಸುತ್ತಿದ್ದೆ
ಈಗ ಹುಡುಕುವುದರಲ್ಲೇ ಸಾಕಾಗಿದೆ
ದನಿ ಹೊರಡದಿದ್ದಲ್ಲಿ ಕ್ಷಮಿಸಿ”

ವಸಂತನ ಆಗಮನ ಸೂಚಿ, ಕೋಗಿಲೆಯ ಕೊರಳ ಕುಹೂ. ಮೇಲಿನ ಸಾಲಿನಲ್ಲಿ, ಹೇಳುವಂತೆ, ಕೋಗಿಲೆಗೆ ಇತ್ತೀಚೆಗೆ ಮಾವಿನ ತಳಿರು ಸಿಗುತ್ತಿಲ್ಲ. ಹುಡುಕಿ ಸಾಕಾಗಿದೆ. ತಳಿರು ಮೆದ್ದರೇ ಕೋಗಿಲೆಗೆ ಸ್ವರ. ತಳಿರು ತಿನ್ನದೆ ಸ್ವರ ಹೊರಡಲ್ಲ ಕೋಗಿಲೆಗೆ.
ವಸಂತಾಗಮನದ ಮಾರ್ಗ ಸೂಚಿ ಕೂಗಿಲ್ಲ ಎಂದರೆ, ವಸಂತಾಗಮನವೇ ಆಗುತ್ತಿಲ್ಲ. ಮನುಷ್ಯನಿಗೆ ಅದರ ಪರಿವೆಯೂ ಇಲ್ಲ! ಆತ ಸ್ಪಂದನಾರಹಿತ ಸ್ವಾರ್ಥಿ ಜೀವ.
ಆತನಿಗೆ ವಸ್ತು ಪ್ರದರ್ಶನ ನಡೆದರೆ ಸಾಕು ತಾನೇ.

ಮುಂದುವರೆದು ಕೋಗಿಲೆ ಅಳುತ್ತೆ. ಬಿಕ್ಕಿ ಬಿಕ್ಕಿ ಅಳುತ್ತೆ.

“ನನ್ನ ಬಿಕ್ಕಳಿಕೆಗಳನ್ನು
ತಡೆದು ತಡೆದು
ದನಿಯ ಒತ್ತಿ ಹಿಡಿದು
ಈಗ ಹೊರಡುವುದೇ ಕಷ್ಟವಾಗಿದೆ
ನಿಮ್ಮೊಟ್ಟಿಗೆ ಬರಲೂ ಆಗದಾಗಿದೆ”

ವಸ್ತುಪ್ರದರ್ಶನ ತೋರಿಸಲು ಕೋಗಿಲೆಗೆ ಮಾತು ಹೊರಡುತ್ತಿಲ್ಲ. ಅದು ಬಿಕ್ಕುತ್ತಿದೆ. ಬಿಕ್ಕಿ ಬಿಕ್ಕಿ ಅಳುವ ನಡುವೆ ಮಾತುಗಳು ತುಂಡು ತುಂಡಾಗಿ ನೋವಿನಲ್ಲಿ ಅದ್ದಿ ಅರ್ಧ ಪದಗಳಾಗಿ, ಉಳಿದರ್ಧ ಎಂಜಲಿನ ಜತೆ ಗಂಟಲು ಸೇರಿ ಮಾತಾಡಲಾಗಲ್ಲ. ದನಿಯ ಒತ್ತಿ ಹಿಡಿದು,ಅಳು ಕಟ್ಟಿ ಹೊರಡುತ್ತಿಲ್ಲ.

“ಎಲ್ಲಾದರೂ ವನಸಿರಿ
ನಳನಳಿಸಿದ್ದು ಕಂಡುಬಂದರೇ
ನನಗೆ ತಿಳಿಸಿ

ಮತ್ತೆ ನನ್ನ ದನಿಗೊಂದು
ನವ ಜೀವನ ಬಂದೀತು
ವನ ಜೀವನದ ಸವಿ ತಂದೀತು
ಹೋಗಿಬನ್ನಿ ನಮಸ್ಕಾರ”

ಕೋಗಿಲೆ, ಪ್ರೇಕ್ಷಕನಿಗೆ, ವಿನಂತಿಸುತ್ತೆ. ಎಲ್ಲಾದರೂ ವನಸಿರಿ ನಳನಳಿಸಿದ್ದು ಕಂಡರೆ ತಿಳಿಸಿ, ಮತ್ತೆ ನನ್ನ ದನಿಗೊಂದು ನವಜೀವನ ಬಂದೀತು, ಅಂತ.‌ ಹೋಗಿ ಬನ್ನಿ ನಮಸ್ಕಾರ ಎಂದು ಕೋಗಿಲೆ ಪ್ರೇಕ್ಷಕನಿಗೆ ಹೇಳುವಾಗ ನಮಸ್ಕಾರದೊಳಗೆ,ಮನುಷ್ಯಜಗತ್ತಿನತ್ತ ತಿರಸ್ಕಾರ ಭಾವನೆಯಿದೆಯೇ?.

ಇಷ್ಟೊಂದು ನಿರಾಶೆಯಲ್ಲೂ ‘ನವ ಜೀವನ ಬಂದೀತು’ ಎಂಬ ಆಶಾಭಾವದೊಂದಿಗೆ ಕೋಗಿಲೆಯ ಕವಿತೆ ಮುಗಿಯುತ್ತೆ. ಕವಿತೆಯ ಶೀರ್ಷಿಕೆ ವಿಡಂಬನಾತ್ಮಕ. ಮನುಷ್ಯ ಕೋಗಿಲೆಯಲ್ಲಿ ಕ್ಷಮೆ ಕೇಳಬೇಕಿತ್ತು. ಆದರೆ ಮನುಷ್ಯನ ಸ್ವಕೇಂದ್ರಿತ ಮನಸ್ಸು ಸ್ಪಂದನೆಯನ್ನೇ ಮರೆತು ಒಣವಾದಾಗ, ಕೋಗಿಲೆಯೇ ಕ್ಷಮೆ ಕೇಳುವಂತಾಗಿದೆ.

ಆದರೆ ಕವಿಯ ಪ್ರಜ್ಞೆ ಹೊಸತೊಂದು ಅನುಭವಕ್ಕೆ ತೆಗೆದುಕೊಂಡಾಗ, ಅದೇ ಕೋಗಿಲೆಯ ಕವಿತೆ ಹೇಗೆ ಬದಲಾಗುತ್ತೆ ಅಂತ ನೋಡಿ!.
ಕರೋನಾ ಲಾಕ್ ಡೌನ್ ಆದಾಗ, ಮನುಷ್ಯನ ಇಂಟರ್ಫಿಯರೆನ್ಸ್ ಇಲ್ಲದೇ, ವನಪುಷ್ಪಗಳು ನಳನಳಿಸಿದಾಗ ಕೋಗಿಲೆಯ ಕನಸು ನನಸಾಗುತ್ತೆ. ರಮೇಶ್ ಬಾಬು ಅವರ ಕರೋನ ಸಮಯದ ಕೋಗಿಲೆಯ ಉಲ್ಲಾಸದ ಮಾತುಗಳು ಹೀಗಿವೆ.

ತಳಿರು ಮೆದ್ದ ಕೋಗಿಲೆ

ಪ್ರತಿವರ್ಷದಂತೆ
ಯುಗಾದಿಯಂದು
ವಸಂತನ ಆಗಮನ
ಸೂಚ್ಯವಾಗಿ
ಸಾಂಕೇತಿಕವಾಗಿ
ದನಿ ಹೊರಡಿಸಲು
ಕೊರಳು ಸರಿಪಡಿಸಿಕೊಂಡ ಕೋಗಿಲೆ
ಎಂದಿನಂತೆ ಕೆಲ ಕ್ಷಣಕ್ಕೆ
ಮಾತ್ರ ಎಂದು ತಯಾರಿ
ಅದೇನಾಶ್ಚರ್ಯ
ತನ್ನ ಉಸಿರು ಕಟ್ಟಲಿಲ್ಲ
ದನಿ ಗೊಗ್ಗರಾಗಲಿಲ್ಲ
ಸರಾಗವಾಗಿ ಹೊರಟ ಇಂಚರ
ಉಬ್ಬಸ ಕಳೆದ ನಿಸರ್ಗ
ಹರಡಿದ ರಂಗಸ್ಥಳ
ದಿನವಿಡೀ ಮನತುಂಬಿ
ಸಾಗಿತು ಗಾನ
ಕೊರೋನಾದ ಖಬರಿಲ್ಲ
ಆಡಳಿತದ ಅರಿವಿಲ್ಲ
ಕಾಲುಷ್ಯ ಕಾಣದ್ದೇ ಮಾನದಂಡ
ಅಂದಿನಿಂದ ಇಂದಿಗೂ
ಚುಮುಚುಮು ವೇಳೆ
ಆರಂಭವಾದರೆ ಕಚೇರಿ
ಗೂಡು ಸೇರುವ ಹೊತ್ತಿಗೂ ಮುಗಿಯದು
ಮತ್ತೆಂದು ಸಿಕ್ಕೀತೋ
ಎನ್ನುವ ಹಾಗೆ
ಕತ್ತುಚಾಚಿ
ಸ್ವರದೌತಣ ನೀಡುತ್ತಿದೆ
ತಳಿರು ಮೆದ್ದ ಕೋಗಿಲೆ !

** *** ****

ಈ ಸಾಲುಗಳನ್ನು ನೋಡಿ!

“ವಸಂತನ ಆಗಮನ
ಸೂಚ್ಯವಾಗಿ
ಸಾಂಕೇತಿಕವಾಗಿ
ದನಿ ಹೊರಡಿಸಲು
ಕೊರಳು ಸರಿಪಡಿಸಿಕೊಂಡ ಕೋಗಿಲೆ
ಎಂದಿನಂತೆ ಕೆಲ ಕ್ಷಣಕ್ಕೆ
ಮಾತ್ರ ಎಂದು ತಯಾರಿ
ಅದೇನಾಶ್ಚರ್ಯ
ತನ್ನ ಉಸಿರು ಕಟ್ಟಲಿಲ್ಲ
ದನಿ ಗೊಗ್ಗರಾಗಲಿಲ್ಲ
ಸರಾಗವಾಗಿ ಹೊರಟ ಇಂಚರ
ಉಬ್ಬಸ ಕಳೆದ ನಿಸರ್ಗ “

Coral-billed Ground Cuckoo Bird. Beautiful colorful bird, Coral-billed Ground Cuckoo Carpococcyx renauldi standing on the ground, Khao Yai National Park Thailand royalty free stock photo

ಬಹುಷಃ ಕೋಗಿಲೆಯಷ್ಟೇ ನಿಮಗೂ ಖುಶಿಯಾಗಿರಬೇಕು!
‘ತನ್ನ ಉಸಿರು ಕಟ್ಟಲಿಲ್ಲ ದನಿ ಗೊಗ್ಗರಾಗಲಿಲ್ಲ’ ಅಂತ ಕೋಗಿಲೆ ಮನುಷ್ಯಾಕ್ರಮಣದಿಂದ ಕಳೆದ ಕೊರಳು ಮರುಪಡೆದ ಸಂತಸ ವ್ಯಕ್ತಪಡಿಸುತ್ತದೆ. ಇಲ್ಲಿ ಕೋಗಿಲೆ, ವಸಂತನಿಗೆ ರೂಪಕ. ವಸಂತ ಪ್ರಕೃತಿಗೆ ಪ್ರತಿಮೆ. ಹಾಗೆ ಕೋಗಿಲೆಗೆ ಸ್ವರ ಬಂದಿದೆ ಎಂದರೆ ಪ್ರಾಕೃತಿಕ ಸಮತೋಲನ ವಾಪಸ್ಸಾಗಿದೆ ಅಂತ. ಉಬ್ಬಸ ಕಳೆದ ನಿಸರ್ಗ ಅನ್ನುವಾಗ, ಇದೇ ಧ್ವನಿ. ಸಾಧಾರಣವಾಗಿ ವಾತಾವರಣ ಕಲುಷಿತಗೊಂಡಾಗ ಉಬ್ಬಸ. ವಾತಾವರಣ ನಿರ್ಮಲವಾದಾಗ,ಪ್ರಕೃತಿಯ ಉಬ್ಬಸ ಕಳೆದಿದೆ.

“ಚುಮುಚುಮು ವೇಳೆ
ಆರಂಭವಾದರೆ ಕಚೇರಿ
ಗೂಡು ಸೇರುವ ಹೊತ್ತಿಗೂ ಮುಗಿಯದು
ಮತ್ತೆಂದು ಸಿಕ್ಕೀತೋ
ಎನ್ನುವ ಹಾಗೆ
ಕತ್ತುಚಾಚಿ
ಸ್ವರದೌತಣ ನೀಡುತ್ತಿದೆ
ತಳಿರು ಮೆದ್ದ ಕೋಗಿಲೆ !”

ಎಡೆಬಿಡದೆ ಸಂಭ್ರಮದಿಂದ ತಳಿರುಮೆದ್ದ ಕೋಗಿಲೆ ಸ್ವರದೌತಣ ಕೊಡುತ್ತೆ. ನೀವೆಲ್ಲಾ ಗಮನಿಸಿರಬಹುದು, ಕೊರೊನಾ ಲಾಕ್ ಡೌನ್ ನಲ್ಲಿ, ಮನುಷ್ಯ ಬಂದಿಯಾದಾಗ, ನಿಸರ್ಗಕ್ಕೆ ಸ್ವಾತಂತ್ರ್ಯ ದಿನದ ಸಂಭ್ರಮ.

ಯಾಕೆ ಹೀಗೆ?. ಮನುಷ್ಯ ತಾನು ಮತ್ತು ಪ್ರಕೃತಿಯ ನಡುವೆ ಗೋಡೆ ಕಟ್ಟಿ, ಉಳಿದೆಲ್ಲಾ ಜೀವಸಂಕುಲಗಳನ್ನು ನಿಕೃಷ್ಟವಾಗಿ ನೋಡಿ, ಇಟ್ಟಿಗೆ ಪಟ್ಟಣ ಕಟ್ಟಿದ.

ಆ ಪಟ್ಟಣ, ಪಶ್ಚಿಮ ಘಟ್ಟದ ಸಾಲುಗಳಲ್ಲಿ ನಡೆಯುತ್ತಿರುವ ಗುಡ್ಡಕುಸಿತದಡಿಯಲ್ಲಿ ಭೂಗರ್ಭದಲ್ಲಿ ಪಳೆಯುಳಿಕೆಯಾಗುತ್ತಿದೆ . ಕೊರೊನಾದಂತಹ ಕಣ್ಣಿಗೆ ಕಾಣಿಸದ ವೈರಾಣು ದಾಳಿಗೆ ಸಿಕ್ಕಿ ಸ್ತಬ್ಧವಾಗಿದೆ.

ಭಾರತೀಯ ಜೀವನಶೈಲಿ ಹೀಗಿತ್ತೇ?.

ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ |
ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಮ್ ||

(ಈ ಜಗತ್ತಿನಲ್ಲಿ ಚಲನಾತ್ಮಕವಾದದ್ದು ಏನೇನಿದೆಯೋ ಅವೆಲ್ಲವೂ ಈಶನಿಂದ ಆವೃತವಾದದ್ದು. ಅದನ್ನು ಯಾವತ್ತೂ ನಿನ್ನದಾಗಿಸಿಕೊಳ್ಳಲು ಪ್ರಯತ್ನಿಸಬೇಡ. ಯಾವ ಸಂಪತ್ತನ್ನೂ ಬಯಸಬೇಡ)

ಜಗತ್ತಿನ ಕಣ ಕಣದಲ್ಲಿ, ಜೀವವಿರಲಿ ನಿರ್ಜೀವ ವಸ್ತುವಾಗಿರಲಿ,ಎಲ್ಲದರಲ್ಲೂ ಈಶನನ್ನು ಕಾಣುವ ಆ ಮೂಲಕ ನಮ್ಮನ್ನೇ ಕಾಣುವ ದರ್ಶನ ನಮ್ಮದು.
ನಮಗೆ ಸ್ವಾತಂತ್ರ್ಯ ಹೇಗೆ ಇಷ್ಟವೋ, ಹಾಗೆಯೇ ಉಳಿದ ಜೀವಜಾಲದ ಸ್ವಾತಂತ್ರ್ಯವನ್ನು ಗೌರವಿಸಿ ಸಹಬಾಳ್ವೆ , ಉಸಿರಿನಷ್ಟೇ ಸಹಜವಾಗಲಿ.

********************************

ಲೇಖಕರ ಬಗ್ಗೆ:

ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

4 thoughts on “

  1. ಭಿನ್ನ ಸಮಯಗಳಲ್ಲಿ ಬರೆದ ಎರಡು ಕವಿತೆಗಳನ್ನು‌ ಪಕ್ಕಪಕ್ಕಕ್ಕೆ ಜೋಡಿಸಿ ಅವುಗಳಿಗೆ ಒಂದು ತಾರ್ಕಿಕ ಸಾಮ್ಯ ಕೊಟ್ಟು ಅವುಗಳ ರೂಪ ಬದಲಿಸಿದ ಮಹದೇವರಿಗೆ ನಾನು ಎಷ್ಟು ಧನ್ಯವಾದ ಹೇಳಿದರೂ ಸಾಲದು. ಸಾಹಿತಿಗೆ ತೃಪ್ತಿ ದೊರೆಯುವುದು ಅವನ ಬರಹಗಳನ್ನು ಯಾರಾದರೂ ಮೆಚ್ಚಿದಾಗಲೇ ಅಲ್ಲವೇ ! ಸಂಗಾತಿ‌ ಪತ್ರಿಕೆಗೆ ಸಹ ಧನ್ಯವಾದಗಳು. ಜೈ ಕನ್ನಡಾಂಬೆ !

    1. ರಮೇಶ್ ಸರ್
      ಕವಿತೆ ನಡೆಸಿದ ಹಾಗೆ ಚಿಂತನೆ ನಡೆಯುತ್ತೆ.
      ತುಂಬಾ ಧನ್ಯವಾದಗಳು

    1. ತುಂಬಾ ಧನ್ಯವಾದಗಳು ಭಾರತೀ ಮ್ಯಾಡಂ.
      ನಿಮ್ಮ ನಲ್ನುಡಿ ನನಗೆ ಹುಮ್ಮಸ್ಸು ಕೊಡುತ್ತದೆ.

Leave a Reply

Back To Top