ಗಝಲ್
ದೇವು ಮಾಕೊಂಡ
ಎಚ್ಚರಗೊಂಡ ಕನಸಿಗೆ ಕಾತರಿಸಬೇಡ ಸಂಗಾತಿ
ಮುಂಗುರುಳ ಸ್ವಪ್ನ ಕಾಣಬೇಡ ಸಂಗಾತಿ
ಅವರ ಬದುಕು ಅವರೇ ಕಂಡುಕೊಂಡಿಲ್ಲ
ಬೇರೆಯವರ ಮನದ ಭಾವನೆಗೆ ಕಾಯಬೇಡ ಸಂಗಾತಿ
ಸುಖದ ಕಡಲು ಬಿಟ್ಟು ಬಯಲಾಗಿ ಬಂದು ಶೂನ್ಯವಾದೆ
ಹಗಲ ಕುದುರೆಯನೇರಿ ಇರುಳು ತಿರುಗಬೇಡ ಸಂಗಾತಿ
ಅತ್ತು ಗಾಯಗೊಂಡ ಕಣ್ಣಿಗೆ ಮುಲಾಮು ತರಬೇಕಿದೆ
ಬಿರುಗಾಳಿಗೆ ಉಕ್ಕೇರುವ ನದಿಯ ದಾರಿ ಹುಡುಕಬೇಡ ಸಂಗಾತಿ
ಜಗದ ಕೂಗಿಗೆ ಕಿವಿ ಏಕೆ ಕೊಡುತ್ತಿರುವೆ ‘ದೇವ’
ಹಳೆ ಕಂದಕದ ನಿಟ್ಟುಸಿರ ಬವಣೆ ನೂಕಬೇಡ ಸಂಗಾತಿ
**************************************