ಪುಸ್ತಕ ಸಂಗಾತಿ

ಹಸಿರಿನೆಡೆಗೆ ನಮ್ಮನ್ನು ನಡೆಸುವ ‘ಹೂ ಹಸಿರಿನ ಮಾತು’

ಹೂ ಹಸಿರಿನ ಮಾತು
ಲೇಖಕಿ : ಡಾ.ಎಲ್.ಸಿ.ಸುಮಿತ್ರಾ
ಪ್ರಕಾಶಕರು : ಅಂಕಿತ ಪುಸ್ತಕ, ಬೆಂಗಳೂರು
ಪ್ರಕಟಣಾ ವರ್ಷ :೨೦೧೨
ಪುಟಗಳು : ೯೬ ಬೆಲೆ : ರೂ.೧೨೦

ಹಿರಿಯ ಲೇಖಕಿ ಡಾ.ಎಲ್.ಸಿ.ಸುಮಿತ್ರಾ ಅವರ ‘ಹೂ ಹಸಿರಿನ ಮಾತು’ ಸಾರ್ವಕಾಲಿಕ ಪ್ರಸ್ತುತಿಯುಳ್ಳ ಒಂದು ಕೃತಿ.  ಎಲ್ಲೆಲ್ಲೂ ಕಾಡು ಕಡಿದು, ಗುಡ್ಡಗಳನ್ನು  ಅಗೆದು, ಗದ್ದೆಗಳನ್ನು ಮುಚ್ಚಿ ಕಾಂಕ್ರೀಟು ಕಾಡುಗಳನ್ನಾಗಿ ಪರಿವರ್ತಿಸಿ ನಾವು ಪ್ರಕೃತಿಯ ಮುನಿಸಿಗೆ  ತುತ್ತಾಗುತ್ತಿರುವ ಇಂದು ಎಚ್ಚೆತ್ತುಕೊಳ್ಳಬೇಕಾದ ಕಾಲ. ಬಂದಿರುವ ಇಂದಿನ ಸಂಧರ್ಭದಲ್ಲಿ ಪರಿಸರದ ಬಗ್ಗೆ ಕಾಳಜಿಯಿರುವ ಪ್ರತಿಯೊಬ್ಬರೂ ಓದಬೇಕಾದ ಕೃತಿಯಿದು. ಸಾಹಿತ್ಯದೊಂದಿಗೆ ಉದ್ಯಾನ ಕಲೆ ಮತ್ತು ಹಸಿರುಪ್ರಿಯತೆಗಳನ್ನೂ ಮೈಗೂಡಿಸಿಕೊಂಡಿರುವ ಮಲೆನಾಡಿನ ತೀರ್ಥಹಳ್ಳಿಯ ಸುಮಿತ್ರಾ ಅವರು ಸ್ವತಃ ಕಾಡುಮೇಡುಗಳನ್ನು ಸುತ್ತಿ ಅಳಿವಿನಂಚಿನಲ್ಲಿರುವ ಅಪರೂಪದ ಗಿಡಗಳ ಸುಂದರ ಚಿತ್ರಗಳನ್ನು ಕ್ಲಿಕ್ಕಿಸಿ ಸಸ್ಯಶಾಸ್ತ್ರಜ್ಞರೊಂದಿಗೆ ಚರ್ಚಿಸಿ ಪುಸ್ತಕಗಳನ್ನು ಪರಾಮರ್ಶಿಸಿ ಚಿಂತನೆ ನಡೆಸಿ  ಈ ಪುಸ್ತಕವನ್ನು ಬರೆದಿದ್ದಾರೆ. ಅವರ ನಿರೂಪಣೆಯಲ್ಲಿ ವೈಜ್ಞಾನಿಕ ವಿವರಗಳೊಂದಿಗೆ ಸಾಹಿತ್ಯದ ಸೊಗಡೂ ಇರುವುದರಿಂದ  ಬಹಳ ಖುಷಿಯಿಂದ ಓದಿಸಿಕೊಂಡು ಹೋಗುತ್ತದೆ.

‘ಹೂ ಹಸಿರಿನ ಮಾತಿ’ನಲ್ಲಿ ೨೩ ಜಾತಿಯ ಅಪರೂಪದ, ಪರಂಪರಾಗತ ಹಿನ್ನೆಲೆಯ ಸಸ್ಯಗಳ ಕುರಿತಾದ ವಿವರಗಳಿವೆ. ಹಲವು ಸಸ್ಯಗಳ ಉಪಪ್ರಭೇದಗಳನ್ನೂ ಅವರು ಇಲ್ಲಿ ಉಲ್ಲೇಖಿಸುತ್ತಾರೆ. ಪ್ರತಿಯೊಂದು ಗಿಡ-ಮರ-ಬಳ್ಳಿಗಳ ಮೂಲ, ಅವುಗಳ ಬೇರು-ಕಾಂಡ-ಕೊಂಬೆ-ರೆಂಬೆಗಳು, ಎಲೆ, ಹೂವು, ಹಣ್ಣು, ಕಾಯಿ, ಬೀಜಗಳ ಬಾಹ್ಯ ಸ್ವರೂಪದ ವಿವರಣೆಗಳಿಂದ ಆರಂಭಿಸಿ ಅವುಗಳ ಸಸ್ಯಶಾಸ್ತ್ರೀಯ ಹೆಸರುಗಳು,  ಕನ್ನಡದಲ್ಲಿ ವಾಡಿಕೆಯಲ್ಲಿರುವ ಹೆಸರುಗಳನ್ನು ನಮೂದಿಸುತ್ತ ಮುಂದೆ ಅವುಗಳ ಸಾಮಾನ್ಯ ಉಪಯೋಗಗಳು, ಅವುಗಳ ಔಷಧೀಯ ಗುಣಗಳು, ಬೀಜಗಳ ಲಭ್ಯತೆ, ಪರಾಗಸ್ಪರ್ಷ, ಯಾವುದರ ಹೂಗಳ ಮೇಲೆ ಜೇನು ಹುಳಗಳು ಕುಳಿತು ಜೇನು ಉತ್ಪಾದನೆ ಮಾಡಲು ಸಹಾಯಕವಾಗುವ ಅಪಾರ ಪ್ರಮಾಣದ ಸಿಹಿಯಿದೆ, ಯಾವುವು ನಿತ್ಯಹರಿದ್ವರ್ಣದ ಸಸ್ಯಗಳು ಎಂದು ಮುಂತಾದ  ಮಾಹಿತಿಗಳನ್ನು ಕೊಡುತ್ತಾರೆ. ಅಲ್ಲದೆ  ಬೇರೆ ಬೇರೆ ಗಿಡಗಳನ್ನು ಪುನರುತ್ಪಾದನೆ ಮಾಡುವುದು ಹೇಗೆ, ಬೀಜಗಳ ಮೂಲಕವೋ, ಬೇರುಗಳ ಮೂಲಕವೋ, ಗೆಲ್ಲುಗಳನ್ನು ನೆಡುವುದರ ಮೂಲಕವೋ ಎಂಬುದನ್ನೂ ತಿಳಿಸುತ್ತಾರೆ.   ಮತ್ತು ಹೆಚ್ಚು ಉಪಯುಕ್ತ ಗಿಡಗಳು ಹೇಗೆ ಅತಿಯಾದ ಬಳಕೆಯಿಂದಾಗಿ ಅಳಿವಿನಂಚಿಗೆ ಬಂದದ್ದರಿಂದ ಅವುಗಳನ್ನು ತಂದು ಪುನಃ ನೆಟ್ಟು ಬೆಳೆಸುವ ಅನಿವಾರ‍್ಯತೆಯಿದೆ ಎಂಬುದನ್ನೂ ಹೇಳುತ್ತಾರೆ.

ಲೇಖಕಿ ತಮ್ಮಮುನ್ನುಡಿಯಲ್ಲಿ ಹೇಳುವಂತೆ ಈ ಕೃತಿಯಲ್ಲಿ ಅವರು ನೀಡುತ್ತಿರುವ ವಿವರಗಳು ಇಂದು ತೀರಾ ಅಪರೂಪವಾಗಿರುವ, ಇವತ್ತಿನ ತಲೆಮಾರಿನ ಯುವಕ-ಯುವತಿಯರಿಗೆ ಕೇಳಿಯೂ ಗೊತ್ತಿಲ್ಲದ ಸಸ್ಯಗಳ ಕುರಿತು ಮಾತ್ರ.  ಸುರಗಿ, ಅಶೋಕ, ರಂಜ, ಹೊಳೆ ದಾಸವಾಳ, ಹಾಲಿವಾಣ, ಕೇದಿಗೆ, ಮಾಧವಿಲತೆ, ಪಾರಿಜಾತ ಮೊದಲಾದ, ಹಿಂದೆ ನಾಡಿನ ಎಲ್ಲರ ಮನೆಗಳ ತೋಟ, ಹಿತ್ತಲು-ಬಯಲು-ಹೊಳೆಬದಿಗಳಲ್ಲಿ ಕಾಣಸಿಗುತ್ತಿದ್ದು ಪರಿಮಳ ಬೀರುತ್ತಿದ್ದ ಹೂಗಿಡಗಳು, ಸೀತಾಳೆ, ನಾಗಸಂಪಿಗೆ, ಕುರಿಂಜಿ ಹೂ, ನರ‍್ವಾಲ, ಕಾಡಿನ ದೀಪ, ಕಂಚುವಾಳ ಕಕ್ಕೆ, ಮೊದಲಾದ ಕಾಡು ಹೂಗಳು, ಶಾಲ್ಮಲಿ, ಇಪ್ಪೆಮರ,ಬೂರುಗ, ಮುತ್ತುಗ ಮೊದಲಾದ ಬೃಹತ್ ವೃಕ್ಷಗಳನ್ನು  ಲೇಖಕಿ ಓದುಗರಿಗೆ ಸಮೃದ್ಧ ವಿವರಗಳೊಂದಿಗೆ ಪರಿಚಯಿಸುತ್ತಾರೆ. ವಿದೇಶಿ ಮೂಲದವಾಗಿದ್ದು ಇಲ್ಲಿ ನೆಲೆಯೂರಿರುವ ಹೂಬಾಳೆ, ಆಲ್ಪೀನಿಯಾ,ಬ್ಲೀಡಿಂಗ್ ಹರ‍್ಭ್  ಮೊದಲಾದ ಕೆಲವು ಸಸ್ಯಗಳೂ ಇಲ್ಲಿ ಜಾಗ ಪಡೆದಿವೆ.

ಹಲವಾರು ಗಿಡಮರಗಳ ಬಗ್ಗೆ ಮಾತನಾಡುವಾಗ ಲೇಖಕಿ ತಮ್ಮ ಬಾಲ್ಯದಲ್ಲಿ ಅವುಗಳ ಅಂದ ಚೆಂದ ಪರಿಮಳಗಳನ್ನು ಆಸ್ವಾದಿಸಿದ ಬಗ್ಗೆ , ಹೂಗಳನ್ನು ಮುಡಿಗೇರಿಸಿಕೊಂಡು ಖುಷಿಪಟ್ಟಿದ್ದರ ಬಗ್ಗೆ , ಹಬ್ಬ ಹರಿದಿನಗಳಂದು ಆಚರಣೆಯ ವಿಧಿಗಳಲ್ಲಿ ಅವುಗಳ ಹೂವು-ಹಣ್ಣು-ಎಲೆಗಳನ್ನು ಬಳಸಿಕೊಂಡದ್ದರ ಬಗ್ಗೆ,  ಸಮಾರಂಭಗಳಲ್ಲಿ ಅಲಂಕಾರಕ್ಕಾಗಿ ತೋರಣ ಕಟ್ಟುತ್ತಿದ್ದುದರ ಬಗ್ಗೆ ಸಂಭ್ರಮದಿಂದ ನೆನಪಿಸಿಕೊಳ್ಳುತ್ತ ನಿರೂಪಣೆಯ ನಡುನಡುವೆ ವೈಯಕ್ತಿಕ ಸ್ಪರ್ಶ ಕೊಡುತ್ತಾರೆ.  ಸಾಹಿತ್ಯದ ಪ್ರಾಧ್ಯಾಪಕಿಯಾದ್ದರಿಂದ ಸಹಜವಾಗಿ  ಅವರಿಗೆ ಪಂಪ, ರನ್ನ, ಜನ್ನ, ಬೇಂದ್ರೆ, ಕುವೆಂಪು, ಶಿವರುದ್ರಪ್ಪ ಮೊದಲಾದ ಕವಿಗಳ ಕವಿತೆಗಳಲ್ಲಿ ಆ ಗಿಡ-ಮರ-ಹೂವುಗಳ ಹೆಸರು ಬರುವುದು ಸಾಂಧರ್ಭಿಕವಾಗಿ  ನೆನಪಾಗುತ್ತದೆ. ರಾಮಾಯಣ, ಮಹಾಭಾರತ, ತಮಿಳಿನ ಸಂಘಂ ಕಾವ್ಯಗಳನ್ನೂ ಅವರು ಉದ್ಧರಿಸುತ್ತಾರೆ. ಒಟ್ಟಿನಲ್ಲಿ ಲೇಖಕಿಯ ಓದಿನ ವಿಸ್ತಾರಕ್ಕೆ ಈ ಎಲ್ಲ ಉದಾಹರಣೆಗಳು ಸಾಕ್ಷಿಯಾಗುತ್ತವೆ.

‘ಹೂ ಹಸಿರಿನ ಮಾತು’ ಅನೇಕ ವೈಶಿಷ್ಟ್ಯಗಳುಳ್ಳ ಕೃತಿ.  ಮೊತ್ತ ಮೊದಲಾಗಿ ಇದು ಸಾಹಿತ್ಯ-ವಿಜ್ಞಾನಗಳ ಸಂಗಮ. ಪರಂಪರಾಗತವಾಗಿ ನಮ್ಮಲ್ಲಿ ಬೆಳೆದುಕೊಂಡು ಬಂದ ಗಿಡಮರಗಳು ಅಳಿದು ಹೋಗಲು ಬಿಡಬಾರದೆಂಬ  ಕಾಳಜಿ ಇದರ ಹಿಂದೆ ಇದೆ. ನಮ್ಮ ಪರಿಸರವು ಗಿಡಮರಗಳನ್ನು ಕಳೆದುಕೊಂಡು ಬೋಳಾಗಿ  ಮನುಷ್ಯನ ಆಧುನಿಕತೆಯ ಹುಚ್ಚಿಗೆ ಬಲಿಯಾಗಬಾರದು ಎಂಬ ಕಾಳಜಿ ಇಲ್ಲಿದೆ.  ನಿಸರ್ಗದ ಮಕ್ಕಳಾದ ನಾವು ನಿಸರ್ಗವನ್ನು ಉಳಿಸಿಕೊಂಡು ಹೂ ಹಸಿರುಗಳ ಜತೆಗೆ ಸದಾ ಮಾತುಕತೆ ನಡೆಸುವುದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ  ಒಳ್ಳೆಯದೆನ್ನುವ ಪರೋಕ್ಷವಾದ ಸಂದೇಶವೂ ಇದರೊಳಗಿದೆ. ಈ ಕೃತಿ ಗಾತ್ರದಲ್ಲಿ ಚಿಕ್ಕದಾದರೂ ಇದರ ಹಿಂದೆ ಲೇಖಕಿಯ ಅಪಾರ ಪರಿಶ್ರಮವಿದೆ. ಯಾಕೆಂದರೆ ಇದು ಒಂದೆಡೆ ಅಲುಗಾಡದೆ ಕುಳಿತು ಬರೆದದ್ದಲ್ಲ. ಆಗಲೇ ಹೇಳಿದಂತೆ ಇದರ ಹಿಂದೆ ಬಹಳಷ್ಟು ಕ್ಷೇತ್ರಕಾರ‍್ಯ ಮತ್ತು ಸಂಶೋಧನೆಗಳಿವೆ. ಸಸ್ಯಶಾಸ್ತ್ರವನ್ನು ಒಂದು ಪಠ್ಯ ವಿಷಯವನ್ನಾಗಿ ತೆಗೆದುಕೊಂಡವರಿಗೆ ಮಾತ್ರವಲ್ಲದೆ ಸಾಮಾನ್ಯ ಓದುಗರಿಗೂ ಖುಷಿ ಕೊಡಬಲ್ಲ ,ಉಪಯುಕ್ತವಾಗ ಬಲ್ಲ ಮತ್ತು ಅರಿವು ಮೂಡಿಸಬಲ್ಲ ಒಂದು ಕೃತಿಯಿದು. ಅಂಕಿತ ಪುಸ್ತಕವು ೨೦೧೨ರಲ್ಲಿ ಮುದ್ರಿಸಿ ಪ್ರಕಟಿಸಿದ  ಕೃತಿಗೆ ಕಥೆಗಾರ್ತಿ ಉಷಾ ಪಿ.ರೈಯವರು ಬರೆದು ಅಪಾರ ಅವರು ವಿನ್ಯಾಸ ಮಾಡಿದ ಸುಂದರವಾದ ಮುಖಪುಟ ಚಿತ್ರವು ಪುಸ್ತಕದ ಅಂದವನ್ನು ಹೆಚ್ಚಿಸಿದೆ.

        *********************************

ಡಾ.ಪಾರ್ವತಿ ಜಿ.ಐತಾಳ್

       

2 thoughts on “ಪುಸ್ತಕ ಸಂಗಾತಿ

  1. ಒಂದು ಪರಿಸರ ಕಾಳಜಿ ಹಾಗೂ ಜ್ಞಾನ ಹೆಚ್ಚಿಸುವ ಕೃತಿಯೊಂದನ್ನು ಚನ್ನಾಗಿ ಪರಿಚಯಿಸಿದ್ದೀರಿ.ನಿಮಗೆ ಹಾಗೂ ಕೃತಿಕಾರರಿಗೆ ವಂದನೆಗಳು.

  2. ಥ್ಯಾಂಕ್ಯೂ ಪಾರ್ವತೀ. ವಿವರ ಓದಿ ಖುಶಿಯಾಯ್ತು. ಪುಸ್ತಕ ಪಡಕೊಳ್ಳಬೇಕು

Leave a Reply

Back To Top