ನೆನಪುಗಳ ಸುತ್ತ”
ರಿತೇಶ್ ಕಿರಣ್ ಕಾಟುಕುಕ್ಕೆ
ಅಂದು..,
ನನ್ನಪ್ಪ ಸೋರುವ
ಮುಳಿ ಮಾಡಿನೆಡೆಗೆ
ದೃಷ್ಟಿ ನೆಟ್ಟಿದ್ದ.,
ನಾವೋ…..
ಅಂಗಳದ ಬದಿಯಲ್ಲೋ
ಹರಿವ ತೊರೆಯ ಬದಿಯಲ್ಲೋ
ಉದುರುವ ಮಳೆ
ಹನಿಗಳ ಜೊತೆ
ಹರಿವ ನೀರಿನ ಜೊತೆ
ಮೈ ಮರೆಯುತ್ತಿದ್ದೆವು……
ಅಮ್ಮನೂ..,
ಅಷ್ಟೇ., ನೀರು ಹೀರಿದ
ಸೌದೆಯ ಒಲೆಗಿರಿಸಿ
ಕಣ್ಣು ಕೆಂಪಗಾಗಿಸಿ
ಊದಿಸಿಕೊಂಡಿದ್ದಳು..,
ಮೂರು ಹೊತ್ತು
ಹೊಟ್ಟೆ ತಣಿಯದಿದ್ದರೂ
ಒಂದು ಹೊತ್ತಿಗಾದರೂ
ಪಾತ್ರೆ ಪಗಡೆಗಳ
ಸದ್ದಾಗುತಿತ್ತು
ಹೊಟ್ಟೆ ಸಮಾಧಾನಿಸುತ್ತಿತ್ತು……,
ಹರಿದ.,
ಅರಿವೆಗೆ ತೇಪೆ ಹಾಕಿಸಿ
ವರುಷವಿಡಿ ಕಳೆದರೂ
ಯಾವುದೇ ಸಂಕೋಚವಿರಲಿಲ್ಲ
ಮನೆಯ ಒಳಗೂ
ಹೊರಗಿನ ಜಗುಲಿಗೂ..,
ದಾಟಿದರೆ ಅಂಗಳಕ್ಕೆ ಮಾತ್ರ
ನಮ್ಮ ಮಾತುಗಳು ಕೇಳಿಸುತಿತ್ತು.
ನಮ್ಮ ಕನಸುಗಳೂ ಅಷ್ಟೇ..!
ಅಷ್ಟಕ್ಕೇ ಸೀಮಿತವೋ..?
ತಿಳಿಯೆ ನಾ……….,
ಅಪ್ಪ ದಿನಾ.,
ಮಳೆಯಲ್ಲಿ ತೋಯುತ್ತಿದ್ದ
ಸಂಜೆಗೆ ನಮ್ಮ
ಆತ್ಮೀಯ ಗೆಳೆಯನಾಗುತ್ತಿದ್ದ.
ಒದ್ದೆಯಾದ ವಸ್ತ್ರದ
ಅರಿವೂ ಅವನಿಗಿಲ್ಲ.,
ಚಳಿಯ ಅನುಭವವೂ ಅವನಿಗಿಲ್ಲ.,
ನಮ್ಮ ಮುಖವ ನೋಡಿ
ಎಲ್ಲವ ಮರೆಯುತ್ತಿದ್ದ
ಮುಖವರಳಿಸಿ ನಗುತ್ತಿದ್ದ...…..,
ಮನೆಯ
ಮಾಡಿನ ಮೇಲೆ
ಹೊಗೆ ಸುರುಳಿಯಾಡುವಾಗ
ಇತ್ತ ನೇಸರನು ಓಡಿದ್ದ..,
ಹೊರಗೆ
ನಾಯಿ ಬೊಗಳಿದರೂ
ಒಳಗೆ
ಬೆಕ್ಕು ಸುತ್ತಿ ಸುತ್ತಿ ಬರುವಾಗಲೂ
ಅಮ್ಮ ಮಾತ್ರ
ಒಲೆಯ ಬಾಯಿಗೆ ಪಹರೆಯಾಗಿದ್ದಳು.!
ಇಂದು..,
ಅದೆಲ್ಲ ನೆನಪುಗಳು ಮಾತ್ರ……….,
ಹೊರಗೆ
ಮೈ ಕೈಗೆ ಮಣ್ಣ
ಮೆತ್ತಿಸಿಕೊಂಡ ಅಪ್ಪ.,
ಒಳಗೆ ಬೂದಿ
ಮೆತ್ತಿಸಿಕೊಂಡ ಅಮ್ಮ.,
ಜ್ಞಾನ ದೇಗುಲದ
ಬಾಗಿಲ ಕಾಣದಿದ್ದರೂ..,
ಅನ್ನ.., ನೀರಿನ
ಅರಿವೂ ಇತ್ತು
ಮಣ್ಣ ವಾಸನೆಯೂ
ಮೈಗಂಟಿಯೇ ಇತ್ತು……….
*************************