ಅನುವಾದ ಸಂಗಾತಿ

ಶೂರ್ಪನಖಾಯಣ

ಮಲಯಾಳಂ ಮೂಲ:ರವೀಂದ್ರನ್ ಪಾಡಿ

ಕನ್ನಡಕ್ಕೆ:ಚೇತನಾ ಕುಂಬ್ಳೆ

ರಾತ್ರಿ ಕಂಡ ಕನಸಿನಲ್ಲಿ
ನನ್ನ ಮುಂದಿದ್ದಳು ಶೂರ್ಪನಖಿ
ಎಲ್ಲಿಯೂ ಸೀತೆಯನ್ನು ಕಾಣಲಿಲ್ಲ
ಬಳಿಯಲ್ಲಿ ರಾಮನೂ ಇರಲಿಲ್ಲ

ಹಲವು ದಿನಗಳಿಂದ ಆಲೋಚನೆಗಳಲ್ಲಿ
ರಾಮ ರಾವಣ ಯುದ್ಧವೇ ತುಂಬಿತ್ತು
ಯಾರ ಪಕ್ಷ ಸೇರಲಿ?
ಮಾನ್ಯರಲ್ಲ ಇಬ್ಬರೂ

ಸೀತೆಯೊಂದಿಗೆ ನಿಂತು
ರಾಮನನ್ನು ದೂಷಿಸಬಹುದೇ?
ವಾಲಿಯನ್ನು ವಧಿಸದೆ
ರಾಮನ ವಿರುದ್ಧ ನಿಲ್ಲಬಹುದು

ತಾಟಕಿ, ಶಂಬೂಕರು
ನಮ್ಮ ಪಕ್ಷ ಸೇರುವರು
ರಾವಣನನುಜ ವಿಭೀಷಣನನ್ನು ಅಂಕೆಯಲ್ಲಿರಿಸಬಹುದು

ಹನುಮಂತನನ್ನು ಸೋಲಿಸಲು
ವಾಲಿಯೊಬ್ಬನೇ ಸಾಕಲ್ಲವೇ
ಪ್ರಜೆಗಳು ಹೇಗಾದರೂ ಇರಲಿ
ಅಮ್ಮನಿಗೆ ಕೈಯೆತ್ತುವರು

ಅವರ ಮಾತನಾಲಿಸಿ
ನಾಡಿನಲ್ಲಿ ಬದುಕಲು ಸಾಧ್ಯವೇ?
ಗಾಳಿಸುದ್ದಿಯನ್ನೇ ಹಬ್ಬಿಸುವರೆಲ್ಲರೂ
ಬೇರೇನೂ ಕೆಲಸವಿಲ್ಲವಲ್ಲ

ವಾಲ್ಮೀಕಿ ಬರೆಯಲಿ
ಅವರು ಕವಿಯಲ್ಲವೇ
ಕವಿತೆಗಳೆಲ್ಲವೂ ಕಥೆಗಳಲ್ಲ
ಕಥೆಗಳೆಲ್ಲವೂ ನಿಜವಲ್ಲ

ರಾಮನಿಗೆ ಸೀತೆ ಏನಾಗಬೇಕೆಂದು
ಚಿಂತಿಸುತ್ತಲೇ
ಜನರು ಸಮಯ ವ್ಯಯಿಸುತ್ತಾರೆ
ಕಾಡುಗಳಲ್ಲಿ ಮತ್ತೆ ಹೂಗಳರಳುತ್ತವೆ

ಬಂದುಬಿಡು ಪ್ರಾಣಸಖಿ
ಶೂರ್ಪನಖೀ ನನ್ನೊಲವೇ
ಲಕ್ಷ್ಮಣ ಹೋಗಲಿ ಬಿಡು
ನಾನಿದ್ದೇನೆ ನಿನಗೆ

****************************

Leave a Reply

Back To Top