ಕಾವ್ಯಯಾನ

ಸಾಹಿತ್ಯದ ಒಳಸುಳಿಗಳ ಜೊತೆ ಒಂದು ಸುತ್ತು!!

ಸುಜಾತಾ ಲಕ್ಮನೆ

ಅರೆಚಣವೂ
ಅತ್ತಿತ್ತ ಅಲುಗದೇ
ಮಗ್ಗುಲಲ್ಲೇ ಕೂತು ಕಚಗುಳಿಯಿಟ್ಟು ನಗಿಸುವ
ಮನದನ್ನೆಯಂತೆ ಇದು –
“ಸಾಮಾಜಿಕ ಜಾಲತಾಣ” !
ನಾವೂ ನೀವೂ ಎಲ್ಲರೂ ಜಾಲಿಯಾಗಿ ಜಾಲಾಡಿ
ಈಜಾಡುವ ಸುಂದರ ತಾಣ!
ಮೆರೆಸಬಹುದಿಲ್ಲಿ
ಸ್ವ-ಪ್ರತಿಷ್ಠೆ, ಸ್ವ-ಪ್ರಶಂಸೆ, ಬೊಗಳೆ ಒಂದಷ್ಟು, ವೈಯಕ್ತಿಕ ಬಿನ್ನಾಣ..!
ಅಷ್ಟಷ್ಟು ಸಾಧನೆ ಸನ್ಮಾನಗಳ ಲಿಸ್ಟಿನ ಅನಾವರಣ!
ಹಾಗೋ ಹೀಗೋ ಗೀಚಿ, ಬೀಗಿ,, ಎದೆ ಸೆಟೆಸಿ
ಮೈ ಮನ ಮ(ಮೆ)ರೆಯಲು ಇದೊಂದು ಚಂದದ ನಿಲ್ದಾಣ!
ಬರೆದದು ಜೊಳ್ಳೋ, ಸುಳ್ಳೋ, ಕಾವ್ಯವೋ, ವಾಚ್ಯವೋ,
ನಿಯಮಬದ್ಧ ಗಜ಼ಲ್ಲೋ, ಅಪಭ್ರಂಶವೋ,
ಸ್ವಂತವೋ, ಸಂಗತವೋ, ಅನೂಹ್ಯವೋ
ಒಟ್ಟಾರೆ–
ದೊಪ್ಪೆಂದು ರಾಶಿ ರಾಶಿ ಸುರುವಿ
ಸಾಕಷ್ಟು ಲೈಕ್ ಗಿಟ್ಟಿಸಿದರೆ
ಅಲ್ಲಿಗೆ ಸಾರ್ಥಕ್ಯ ಆ ದಿನ!!
“ನೀನು ನನಗೆ ಲೈಕ್ ಕೊಡು, ನಾನೂ ಕೊಡುವೆ”
“ಮತ್ತೆ ನೋಡು- ವಿರುದ್ಧ ಕಮೆಂಟ್ ಮಾಡಬೇಡ” ಒಳ ಒಪ್ಪಂದ!!
ತರಾತುರಿಯಲಿ ಅಂತೂ ಗೀಚಿ
ಹೊಗಳಿಕೆಗಷ್ಟೇ ಹಾತೊರೆದು
ಕಸದ ತೊಪ್ಪೆಯಂತೆ ಎಲ್ಲ ತಂದು ಸುರಿದಂತೆಲ್ಲ
ಕೆಲವಕ್ಕೆ ಲೈಕುಗಳ ಜಡಿಮಳೆ;
ಇನ್ನು ಕೆಲವಕ್ಕೆ ಜಡಿದು ಜಡಿದಂತೆ ಕೊನೆಯ ಮೊಳೆ!!
ಹೆಂಗಸರು ಹೆತ್ತ ಕವನಗಳಲ್ಲಿ ಮೈ ಕಾಯಿಸಿಕೊಳ್ಳುವ
ಜೊಲ್ಲುಬುರುಕ ಪುರುಷ ಸಿಂಹಗಳು!
ಇವರು ಫ್ರೀಯಾಗಿ ಕೊಡುವ ಗುಲಾಬಿ ಗುಚ್ಛ,
ತುಟಿಯಂಚಲೊತ್ತಿದ ಮುತ್ತು;
ಕಣ್ಣಲ್ಲೆರಡು ಲವ್ ಸಿಂಬಾಲ್
ಗಳ ಇಮೋಜಿಗಳಲಿ ಕಣ್ಣರಳಿಸಿ
ಚಪ್ಪರಿಸಿ ಬವಳಿ ಬಂದು ಕಳೆದುಹೋಗುತ್ತಾರೆ
ಕವಯಿತ್ರಿ ಲಲನಾ ಮಣಿಗಳು!!

ಕೊಂಡಾಟ ಅಟ್ಟಕ್ಕೇರಿದಂತೆಲ್ಲಾ
ಜಿರಲೆ ಮೀಸೆಯ ಕೆಳಗಿನ ತನ್ನ ತುಟಿಗಳ ಮೇಲೆ ನಗು ತೇಲಿಸಿ
ತನ್ನೊಳಗೇ ಖುಷಿ ಪಟ್ಟು ಬೀಗುವವನಿಗೆ
ತಾನು ಬರೆದುದೇ ಪರಮ ಶ್ರೇಷ್ಠವೆಂಬ ಭಾವ!!
ತಪ್ಪು ಒಪ್ಪುಗಳ ಪರಾಮರ್ಶೆಯ ಉಸಾಬರಿಯೇ ಸಲ್ಲದೆಂದು
ಆಗಸಕೆ ಮುಖ ಮಾಡಿದ ಹೆಬ್ಬೆರಳ ಚಿತ್ರ ಒತ್ತಿ ಓದುಗ
ಜೈ ಕಾರ ಹಾಕುತ್ತಾನೆ ನೋಡ!!
“ಕೇಳಿ ಕೇಳಿ” ಲೈಕ್ ಒತ್ತಿಸಿಕೊಳ್ಳುವವರ ಪರಿಪಾಟಲಂತೂ
“ಅಯ್ಯೋ ಪಾಪ” ಏನಕ್ಕೂ ಬೇಡ!!

Apple iPhone X on office desk with icons of social media facebook, instagram, twitter, snapchat application on screen. Social network. Starting social media app.

ಇಲ್ಲಿ ಮಣಗಟ್ಟಲೆ ಪ್ರಶಂಸೆಗಳ ಹೊಳೆ;
ನಾಲ್ಕಾರು ಡಜನ್ ದ್ವೇಷ, ಅರ್ಧ ಕೆಜಿ ಹತಾಶೆ,
ಟನ್ ಗಟ್ಟಲೆ ಹೆಸರು ಮಾಡುವ ಹಪಹಪಿ;
ಗ್ರಾಂಗಟ್ಟಲೆ ಕೆಸರೆರಚಾಟ,
ತಮಾಷೆಯೋಪಾದಿಯಲಿ ಎದೆಗೇ ಒದೆದಂತಿರುವ ತೇಜೋವಧೆ!
ಚೂರು ಪಾರು ಒಳಗೊಳಗೇ ಗುಂಪುಗಾರಿಕೆ
ಮೀಟರ್ ಗಟ್ಟಲೆ ಸಣ್ಣತನಗಳು
ಲೀಟರ್ ಗಟ್ಟಲೆ ಒಳಸುಳಿಗಳು!!
ಮೂಲೆ ಮೂಲೆಯಿಂದ ಹಿನ್ನೆಲೆಯಲಿ ಪಿಸುಗುಡುವ ಕಿಸುರು
ಮನಸಿನ ಒಳಧ್ವನಿಗಳು!!
ಸಂಕಲನ ತಂದವರದೇ ಒಂದು ಪಟಾಲಂ
ತರದೇ ಇರುವವರು ಅಕಟಕಟಾ ಅಕ್ಷರಶಃ ಅಸ್ಪೃಶ್ಯರು!!
ಪ್ರಶಸ್ತಿ, ಫಲಕ, ಹಾರ ತುರಾಯಿ, ಲೋಕಾರ್ಪಣೆಯಾದ ಪುಸ್ತಕಗಳ ಲೆಕ್ಕ!
ಕ್ವಾಲಿಟಿಗಿಂತ ಕ್ವಾಂಟಿಟಿಗೇ ಪ್ರಾಶಸ್ತ್ಯ!!
ಪ್ರಬುದ್ಧ ನೂರು ಗಜಲ್-ಕವನ ಬರೆದವನಿಗಿಂತ ಹಾಳೋ ಮೂಳೋ
ಸಾವಿರ ಸಾವಿರ ಬರೆದವನೇ “ಅಂತೆ” ಗ್ರೇಟು!!
ಹಾಗಂತ ಸಾಹಿತ್ಯದ ಪಡಸಾಲೆಯಲಿ ನೇತುಹಾಕುವ ನೇಮ್ ಪ್ಲೇಟು!!
ಆಸ್ತಿ, ಅಂತಸ್ತುಗಳ ಪಟ್ಟಿಯೂ ಅಕ್ಕ ಪಕ್ಕ!!
ಸಾರಸ್ವತ ಲೋಕದ ತುಂಬ ಬರಿ ರೇಷ್ಮೆ ಶಾಲು ಹೊದ್ದ ಟೊಳ್ಳು
ಬರಹಗಳ ಸದ್ದು!!
ಮುತ್ತು ರತ್ನದಂಥ ಸಾಹಿತ್ಯವೆಲ್ಲ ಮೂಲೆ ಸೇರಿದವೇ ಬೇಸರದಲಿ ಎದ್ದು ಬಿದ್ದು!?
ಕೈ ಚೀಲ ಹಿಡಿದು ಹಲ್ಗಿಂಜಬೇಕು
ವೇದಿಕೆಯ ಮೇಲೂ ರಾರಾಜಿಸಲು!!
“ಅಕ್ಷರ ಮಾಧ್ಯಮಗಳಲೂ” ಇಂಥದಕ್ಕೇ ಕುಮ್ಮಕ್ಕು
ಗೆಲ್ಲಬೇಕೇ- ಮಾಡಲೇಬೇಕು ಅಲ್ಲಿಯೂ ಗಿಮಿಕ್ಕು!!

ಎಷ್ಟು ಬರೆದರೇನು ಬಿಡಿ-
ಈಗ ಮಾಮರದಲ್ಲಿ ಕೋಗಿಲೆಗಳು ಕೂಗುವುದಿಲ್ಲ!!
ಕಾಣಿಸದೇ…
ಬೋಳು ಮರಕೆ ಜೋತು ಬೀಳುವ ಬಾವಲಿಗಳೇ
ಮೆರೆಯುತಿವೆಯಲ್ಲ!?

***********************************

12 thoughts on “ಕಾವ್ಯಯಾನ

  1. ವಿಡಂಬನಾತ್ಮಕ ಕಾವ್ಯ ,ಬಹಳ ಚೆಂದಕ್ಕೆ ಹೇಳಿರುವಿರಿ.

  2. ಅದ್ಭುತ,ಧ್ವನಿಪೂರ್ಣ,ಸಾಮಾಜಿಕ ಜಾಲತಾಣಗಳ ವ್ಯವಹಾರ,ಒಳಸುಳಿಗಳ ಬಿಗಿಯಾಗಿ ಹಿಡಿದು ಕಟ್ಟಿಕೊಟ್ದಂತಿದೆ ಈ ಕವನ.ನಕಲಿ,ವೇಷಧಾರಿಗಳ ಬಣ್ಣ ಬಯಲಾಗಿಸುತ್ತಾ, ಆತ್ಮರತಿ, ಸ್ವಪ್ರತಿಷ್ಠೆಯ ರೋಗವನು ಅನಾವರಣಗೊಳಿಸಿದೆ.ಜಾಲತಾಣಗಳಲ್ಲಿ ಬಹುಪಾಲು ನಡೆವ ಸಂಗತಿಗಳ ನೈಜ ವಿಮರ್ಶೆಯಂತಿದೆ ಮೇಡಮ್..

  3. ನಗ್ನ ಸತ್ಯ! ನಿಷ್ಠುರವಾದರೂ ವಾಸ್ತವಿಕ ವಿಷಯ! ಧೈರ್ಯದಲ್ಲಿ ಹೇಳಿರುವ ಎದೆಗಾರಿಕೆಯನ್ನು ಮೆಚ್ಚಲೇಬೇಕು. ನಮಸ್ಕಾರಗಳು

  4. ಸಾಮಾಜಿಕ ಜಾಲತಾಣಗಳ ಒಳಮರ್ಮ ವನ್ನೇ ಜಾಲಾಡಿದ್ದಿರಿ ಮೇಡಂ ಶುಭಾಶಯಗಳು

  5. ವಾಸ್ತವದ ನೆಲೆಯಲ್ಲಿ ಮನಃಸಾಕ್ಷಿಯನ್ನು ಬಡಿದೆಬ್ಬಿಸುವ ಕವನ ಜೀ ಮೇಡಂ,…

  6. ಪ್ರತಿಕ್ರಿಯಿಸಿದ ಎಲ್ಲರಿಗೂ ತುಂಬು ಧನ್ಯವಾದಗಳು..

  7. ವಾಸ್ತವವನ್ನು ಕಲಾತ್ಮಕ ವಾಗಿ ಸೆರೆ ಹಿಡಿದ ವಿಡಂಬನಾತ್ಮಕ ಕಾವ್ಯ ಸುಂದರವಾಗಿದೆ

Leave a Reply

Back To Top